ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |12-07-2021

Bar & Bench

ಆನಂದ್‌ ತೇಲ್ತುಂಬ್ಡೆಗೆ ಜಾಮೀನು ನಿರಾಕರಿಸಿದ ಮುಂಬೈ ಎನ್‌ಐಎ ನ್ಯಾಯಾಲಯ

ಭೀಮಾ ಕೋರೆಗಾಂವ್‌ ಹಿಂಸಾಚಾರದ ಪ್ರಕರಣದಲ್ಲಿ ಪ್ರಸ್ತುತ ಮಹಾರಾಷ್ಟ್ರದ ತಳೋಜಾ ಜೈಲಿನಲ್ಲಿ ಬಂಧಿತರಾಗಿರುವ ದಲಿತ ಚಿಂತಕ, ವಿದ್ವಾಂಸ ಆನಂದ್‌ ತೇಲ್ತುಂಬ್ಡೆ ಅವರಿಗೆ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ.

Anand Teltumbde

ತಮ್ಮ ವಿರುದ್ಧ ಪ್ರಥಮ ವರ್ತಮಾನ ವರದಿ ಹಾಗೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಆರೋಪಗಳನ್ನು ನಿರೂಪಿಸುವಲ್ಲಿ ತನಿಖಾ ಸಂಸ್ಥೆಗಳು ಹಾಗೂ ಎನ್‌ಐಎ ಸೋತಿವೆ. ಅಲ್ಲದೆ, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಎನ್‌ಐಎ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ತೇಲ್ತುಂಬ್ಡೆ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ಲಾಮೋಫೋಬಿಯಾ ವಿಚಾರ: ನೂತನ ಐಟಿ ನಿಯಮಾವಳಿ ನೋಡಿಕೊಳ್ಳುತ್ತದೆ ಎಂದ ಸುಪ್ರೀಂ

ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ಲಾಮ್‌ ವಿರುದ್ಧದ ಭೀತಿ (ಇಸ್ಲಾಮೋಫೋಬಿಯಾ) ಹರಡುವ ವಿಚಾರಗಳನ್ನು ತೆಗೆದುಹಾಕಬೇಕು ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವ ಟ್ವಿಟರ್‌ ಮತ್ತು ಅದರ ಬಳಕೆದಾರರ ವಿರುದ್ಧ ತನಿಖೆ ನಡೆಸುವಂತೆ ಸಿಬಿಐ ಮತ್ತು ಎನ್‌ಐಎಗೆ ನಿರ್ದೇಶಿಸಬೇಕೆಂದು ಕೋರಿ ವಕೀಲ ಖಾಜಾ ಅಜೀಜುದ್ದೀನ್‌ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಂತಹ ವಿಚಾರಗಳನ್ನು 2021ರ ಐಟಿ ನಿಯಮಾವಳಿ ನೋಡಿಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ತಿಳಿಸಿದೆ.

Social Media

ಈ ವೇಳೆ, ಧಾರ್ಮಿಕ ವಿಚಾರಗಳ ಕುರಿತು ಐಟಿ ನಿಯಮಾವಳಿ ಕಾಳಜಿ ವಹಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು. ಕೊರೊನಾ ವೈರಸ್‌ ಹರಡಲು ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್‌ ಕಾರಣ ಎಂದು ದೊಡ್ಡಮಟ್ಟದಲ್ಲಿ ಪ್ರಚಾರ ನಡೆದಿದ್ದ ಹಿನ್ನೆಲೆಯಲ್ಲಿ ಅವರು ಅರ್ಜಿ ಸಲ್ಲಿಸಿದ್ದು ಇಸ್ಲಾಮೋಫೋಬಿಯಾ ಹರಡುವ ವಿಚಾರಗಳಿಗೆ ತಡೆಯೊಡ್ಡಬೇಕೆಂದು ಕೋರಿದ್ದಾರೆ. ಮುಂದಿನವಾರಕ್ಕೆ ಪ್ರಕರಣ ಮುಂದೂಡಲಾಗಿದೆ.

ವಾರದೊಳಗೆ ನೀಟ್‌- ಎಂಡಿಎಸ್‌- 2021 ಕೌನ್ಸೆಲಿಂಗ್ ವೇಳಾಪಟ್ಟಿ ಅಂತಿಮಗೊಳಿಸುವಂತೆ ಸುಪ್ರೀಂ ಸೂಚನೆ

ಪ್ರಸಕ್ತ ಸಾಲಿನ ನೀಟ್‌ ಮತ್ತು ಮಾಸ್ಟರ್ಸ್‌ ಆಫ್‌ ಡೆಂಟಲ್‌ ಸರ್ಜರಿ ಕೋರ್ಸ್‌ಗಳಿಗೆ ವೇಳಾಪಟ್ಟಿ ಅಂತಿಮಗೊಳಿಸುವ ವಿಚಾರದಲ್ಲಿ ಆರೋಗ್ಯ ಸಚಿವಾಲಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದು ವಾರದೊಳಗೆ ವೇಳಾಪಟ್ಟಿ ಅಂತಿಮಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

NEET-MDS 2021

ವೈದ್ಯರು ರೋಗಿಗಳ ಸೇವೆಯಲ್ಲಿ ಇರುತ್ತಾರೆ ಹೀಗಾಗಿ ವಿಳಂಬ ಧೋರಣೆ ಅನುಸರಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎಂ ನಟರಾಜ್‌ ಅವರು ಪ್ರತಿಕ್ರಿಯೆ ನೀಡಲು ಒಂದು ವಾರದ ಸಮಯಾವಕಾಶ ಕೋರಿದರು. ಅದಕ್ಕೆ ಅನುಮತಿಸಿದ ನ್ಯಾಯಾಲಯ ಈ ಒಂದು ವಾರದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕೌನ್ಸೆಲಿಂಗ್‌ ನಡೆಸಲು ಕೇಂದ್ರ ಪ್ರಸ್ತಾವನೆ ಸಲ್ಲಿಸಿದಾಗ ಅದನ್ನು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಪೀಠ ಸೂಚಿಸಿತು.

ರೂ. 35 ಕೋಟಿ ಪರಿಹಾರ ತೀರ್ಪನ್ನು ಜಾರಿಗೆ ತರುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಗಂಗೂಲಿ ಮನವಿ

ತಮ್ಮ ಈ ಹಿಂದಿನ ವ್ಯವಸ್ಥಾಪಕ ಕಂಪೆನಿಗಳಾದ ಪರ್ಸೆಪ್ಟ್‌ ಟ್ಯಾಲೆಂಟ್‌ ಮ್ಯಾನೇಜ್ಮೆಂಟ್‌ ಲಿಮಿಟೆಡ್‌ ಮತ್ತು ಪರ್ಸೆಪ್ಟ್‌ ಡಿ ಮಾರ್ಕ್‌ (ಇಂಡಿಯಾ) ಲಿಮಿಟೆಡ್‌ಗಳು ರೂ 35 ಕೋಟಿ ಪರಿಹಾರ ನೀಡಬೇಕೆಂದು ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಜಾರಿಗೆ ತರುವಂತೆ ಕೋರಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಕಂಪೆನಿಗಳ ಆಸ್ತಿ ಬಹಿರಂಗಪಡಿಸಬೇಕು ಮತ್ತು ವಿಚಾರಣೆ ಮುಗಿಯುವವರೆಗೂ ಅವು ತಮ್ಮ ಆಸ್ತಿ ಆಧರಿಸಿ ವಹಿವಾಟು ನಡೆಸಬಾರದು ಎಂದು ಕೋರಿ ಕ್ರಿಕೆಟ್‌ ದಿಗ್ಗಜ ಗಂಗೂಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.

Sourav Ganguly

ಜುಲೈ 20ರಂದು ಆಸ್ತಿ ಘೋಷಿಸುವುದಾಗಿ ಕಂಪೆನಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಎರಡೂ ಕಂಪೆನಿಗಳಿಂದ ತಲಾ ರೂ 15,000 ಬಳಕೆ ಹೊರತುಪಡಿಸಿ ಸ್ವತ್ತುಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದರು. ಕಂಪೆನಿಗಳ ನಡುವೆ ಏರ್ಪಟ್ಟಿದ್ದ ಆಟಗಾರರ ಪ್ರಾತಿನಿಧ್ಯ ಒಪ್ಪಂದದಿಂದಾಗಿ ವಿವಾದ ಉದ್ಭವಿಸಿದ್ದು ಒಪ್ಪಂದದ ಪ್ರಕಾರ ಗಂಗೂಲಿ ಕಂಪೆನಿಗಳ ವಿಶೇಷ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ವಿವಾದದ ಬಳಿಕ ಒಪ್ಪಂದ ರದ್ದುಗೊಂಡಿತ್ತು. ಗಂಗೂಲಿ ಆಗ ವಿಧಿಸಿದ್ದ ಷರತ್ತನ್ನು ಮಾನ್ಯ ಮಾಡಿದ ಮಧ್ಯಸ್ಥಿಕೆ ನ್ಯಾಯಮಂಡಳಿ ವಾರ್ಷಿಕ ಶೇ 12ರ ಬಡ್ಡಿದರದೊಂದಿಗೆ ರೂ 14,49,91,000 ಪರಿಹಾರ ಒದಗಿಸುವಂತೆ ಸೂಚಿಸಿತು. ತೀರ್ಪಿನ ಅನುಷ್ಠಾನ ಮತ್ತು ಕಾರ್ಯಗತಗೊಳಿಸಲು ಯಾವುದೇ ತಡೆ ಇಲ್ಲ ಎಂದು ಗಂಗೂಲಿ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪನ್ನು ಜಾರಿಗೊಳಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಕಂಪೆನಿ ಸ್ವತ್ತುಗಳು ಕಲ್ಕತ್ತಾ ಹೈಕೋರ್ಟ್‌ ವ್ಯಾಪ್ತಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಗಂಗೂಲಿ ಅವರು ಈ ಕಂಪೆನಿಗಳ ನಿರ್ದೇಶಕರು ವ್ಯವಸ್ಥಿತವಾಗಿ ತಮ್ಮ ಅಕೌಂಟ್‌ಗಳಿಂದ ಇತರೆ ಕಂಪೆನಿಗಳಿಗೆ ಹಣವನ್ನು ಕಾಲಾಂತರದಲ್ಲಿ ವರ್ಗಾಯಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅರ್ಜಿಯ ವಿಚಾರಣೆ ಜುಲೈ 20ಕ್ಕೆ ನಿಗದಿಯಾಗಿದೆ.