ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |11-07-2021

>> ಟ್ವಿಟರ್ ಇಂಡಿಯಾಗೆ ಸ್ಥಾನಿಕ ಕುಂದುಕೊರತೆ ಅಧಿಕಾರಿ ನೇಮಕ >> ಎನ್ಎಎಲ್ಎಸ್ಎ ನೇತೃತ್ವದಲ್ಲಿ ನಡೆದ ಲೋಕ ಅದಾಲತ್ >> ನ್ಯಾ. ಸುಜಾತಾ ಮನೋಹರ್‌ಗೆ ʼಗಿನ್ಸ್‌ಬರ್ಗ್‌ʼ ಗೌರವ

Bar & Bench

ಟ್ವಿಟರ್ ಇಂಡಿಯಾದ ಮಧ್ಯಂತರ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ

ತನ್ನ ಮಧ್ಯಂತರ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ಅವರನ್ನು ಟ್ವಿಟರ್ ಇಂಡಿಯಾ ನೇಮಕ ಮಾಡಿದೆ. ಐಟಿ ನಿಯಮ 2021ರ ಅಡಿ ಟ್ವಿಟರ್‌ ನೇಮಕ ಮಾಡಿದ ಮಧ್ಯಂತರ ಅಧಿಕಾರಿಗಳು ಯಾವುದೇ ಕೊರತೆ ಎದುರಿಸಲು ಜವಾಬ್ದಾರರಾಗಿರುತ್ತಾರೆ ಎಂದು ಅಫಿಡವಿಟ್‌ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸೂಚಿಸಿದ ಕೆಲವೇ ದಿನಗಳಲ್ಲಿ ಈ ನೇಮಕಾತಿ ನಡೆದಿದೆ.

Twitter

ಸ್ಥಾನಿಕ ಕುಂದುಕೊರತೆ ಅಧಿಕಾರಿ, ಮುಖ್ಯ ಅನುಸರಣಾಧಿಕಾರಿ ಹಾಗೂ ಹಾಗೂ ನೋಡಲ್‌ ಸಂಪರ್ಕ ವ್ಯಕ್ತಿಯನ್ನು ಖಾಯಂ ಆಗಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಟ್ವಿಟರ್‌ನ ಮಧ್ಯಂತರ ಕುಂದುಕೊರತೆ ಅಧಿಕಾರಿಯಾಗಿದ್ದ ಧರ್ಮೇಂದ್ರ ಚತುರ್ ಜೂನ್ 21 ರಂದು ತಮ್ಮ ಸ್ಥಾನದಿಂದ ಹಿಂದೆ ಸರಿದಿದ್ದರು. ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಉತ್ತರದಲ್ಲಿ ಟ್ವಿಟರ್‌ ಜೂನ್‌ 11 ರೊಳಗೆ ಹೊಸ ಮಧ್ಯಂತರ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಗಾಜಿಯಾಬಾದ್‌ ದಾಳಿ ವಿಡಿಯೋ ಟ್ವೀಟ್‌ಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಟ್ವಿಟರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಸಲ್ಲಿಸಿದ್ದ ಅಮಿತ್‌ ಆಚಾರ್ಯ ಎಂಬುವವರು ಐಟಿ ನಿಯಮಾವಳಿಯ 4ನೇ ನಿಯಮದ ಪ್ರಕಾರ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವಂತೆ ಕೋರಿದ್ದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶನಿವಾರ ರಾಷ್ಟ್ರಮಟ್ಟದಲ್ಲಿ ಲೋಕ ಅದಾಲತ್‌ ಆಯೋಜನೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ಆಶ್ರಯದಲ್ಲಿ ಮತ್ತು ನ್ಯಾಯಮೂರ್ತಿ ಯು ಯು ಲಲಿತ್ ಅವರ ಮಾರ್ಗದರ್ಶನದಲ್ಲಿ ದೇಶದ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಶನಿವಾರ ದೇಶಾದ್ಯಂತ ನಡೆಯಿತು. ಒಟ್ಟು 35,53,717 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಇದರಲ್ಲಿ ಒಂದೇ ದಿನ 11,42,415 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು.

Justice UU Lalit- NALSA

ವರ್ಚುವಲ್‌ ವಿಧಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಲೋಕ್‌ ಅದಾಲತ್‌ನ ಕಾರ್ಯವಿಧಾನವನ್ನು ಖುದ್ದು ಮೇಲ್ವಿಚಾರಣೆ ನಡೆಸಿದ ನ್ಯಾ. ಲಲಿತ್‌ ಅವರು ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿಯುವುದನ್ನು ತಪ್ಪಿಸಲು ಲೋಕ್‌ ಅದಾಲತ್‌ಗಳು ಒಂದು ಅವಕಾಶವಾಗಿ ಪರಿಣಮಿಸಿವೆ ಎಂದರು. ಮುಂದಿನ ಲೋಕ್‌ ಅದಾಲತ್‌ ಸೆಪ್ಟೆಂಬರ್‌ 11ರಂದು ನಡೆಯಲಿದೆ.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಜಾತಾ ಮನೋಹರ್‌ ಅವರಿಗೆ ʼಗಿನ್ಸ್‌ಬರ್ಗ್‌ ಮೆಡಲ್‌ ಆಫ್‌ ಆನರ್‌ʼ ಗೌರವ

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಜಾತಾ ಮನೋಹರ್‌ ಅವರು ʼಗಿನ್ಸ್‌ಬರ್ಗ್‌ ಮೆಡಲ್‌ ಆಫ್‌ ಆನರ್‌ʼ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಪ್ರಶಸ್ತಿಯನ್ನು ವಿಶ್ವ ನ್ಯಾಯಮೂರ್ತಿಗಳ ಸಂಸ್ಥೆ ಮತ್ತು ವಿಶ್ವ ಕಾನೂನು ಸಂಸ್ಥೆ ಕಳೆದ ವಾರ ವರ್ಚುವಲ್‌ ಕಾರ್ಯಕ್ರಮದ ಮೂಲಕ ಪ್ರದಾನ ಮಾಡಲಾಗಿದೆ. ಕಳೆದ ವರ್ಷ ನಿಧನರಾದ ಅಮೆರಿಕಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ರುತ್‌ ಬೆಡರ್‌ ಗಿನ್ಸ್‌ಬರ್ಗ್‌ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ನ್ಯಾ. ಗೀತಾ ಮಿತ್ತಲ್‌ ಅವರ ಬಳಿಕ ಈ ಪುರಸ್ಕಾರಕ್ಕೆ ಭಾಜನರಾದ ಎರಡನೇ ಮಹಿಳಾ ನ್ಯಾಯಮೂರ್ತಿ ಇವರಾಗಿದ್ದಾರೆ.

Justice (Retd) Sujata Manohar

ಈ ಸಂದರ್ಭದಲ್ಲಿ ʼಬಾರ್‌ ಅಂಡ್‌ ಬೆಂಚ್‌ʼಗೆ ಸಂದರ್ಶನ ನೀಡಿದ ನ್ಯಾ. ಸುಜಾತಾ “ಈಗಲೂ ಕೂಡ ನ್ಯಾಯವಾದಿಗಳ ವರ್ಗದಲ್ಲಿ ಮಹಿಳೆ ಗುರುತಿಸಿಕೊಳ್ಳುವುದು ದುಸ್ತರದ ಸಂಗತಿ. ಹೀಗಾಗಿ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು ಪರಿಗಣಿಸಬೇಕಾದ ಮಹಿಳೆಯರ ಗುಂಪು ಸೀಮಿತವಾಗಿ ಮಾತ್ರವೇ ಇದೆ. ಹೈಕೋರ್ಟ್‌ನಲ್ಲಿ ಕಡಿಮೆ ಸಂಖ್ಯೆಯ ಮಹಿಳೆಯರು ಇದ್ದರೆ ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ನ್ಯಾಯಾಧೀಶರನ್ನು ಕಾಣಲು ಸಾಧ್ಯವಿಲ್ಲ. ಮಹಿಳಾ ವಕೀಲರು ಉತ್ತಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದರೆ ನ್ಯಾ. ಇಂದೂ ಮಲ್ಹೋತ್ರಾ ಅವರ ರೀತಿ ನೇರವಾಗಿ ಮಹಿಳೆಯರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬಹುದು ಎಂದರು.