ಸರ್ವೋಚ್ಚ ನ್ಯಾಯಾಲಯವು ಸೆಪ್ಟೆಂಬರ್ 1ರಿಂದ ಸೀಮಿತವಾಗಿ ಭೌತಿಕ ವಿಚಾರಣೆ ನಡೆಸಿಲಿದೆ. ಇತರೆ ಪ್ರಕರಣಗಳ ವಿಚಾರಣೆಗೆ ಮೀಸಲಾಗಿರುವ ಸೋಮವಾರ ಮತ್ತು ಶುಕ್ರವಾರಗಳಂದು ನ್ಯಾಯಾಲಯವು ಹೈಬ್ರಿಡ್ ಮಾದರಿಯ ಅಡಿ ವರ್ಚುವಲ್ ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‌ನಿಂದ ನ್ಯಾಯಾಲಯವು ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸುತ್ತಿದೆ.
ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಭೌತಿಕ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಆದರೆ, ಕೋವಿಡ್ ಎರಡನೇ ಅಲೆ ಅಪ್ಪಳಿಸಿದ್ದರಿಂದ ಭೌತಿಕ ವಿಚಾರಣೆ ಆರಂಭಿಸುವುದನ್ನು ಮುಂದೂಡಲಾಗಿತ್ತು. ಕೋವಿಡ್ ಪರಿಸ್ಥಿತಿ ಸುಧಾರಿಸುವ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಹಲವು ಹೈಕೋರ್ಟ್‌ಗಳು ಭೌತಿಕ ವಿಚಾರಣೆ ಆರಂಭಿಸಿವೆ.
ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಲು ಸಿಸ್ಕೊ ವೆಬೆಕ್ಸ್ ವೇದಿಕೆಯನ್ನು ಸುಪ್ರೀಂಕೋರ್ಟ್ ಮೊದಲ ಬಾರಿಗೆ ಬಳಸಿಕೊಂಡಿದೆ. ಕೋವಿಡ್‌ನಿಂದಾಗಿ ಮಾರ್ಚ್ 2020 ರಲ್ಲಿ ವರ್ಚುವಲ್ ವಿಚಾರಣೆಗಳು ಆರಂಭವಾದಾಗಿನಿಂದ, ಸರ್ವೋಚ್ಚ ನ್ಯಾಯಾಲಯ ವಿಡ್ಯೋ ವೇದಿಕೆಯನ್ನು ವರ್ಚುವಲ್ ವಿಚಾರಣೆಗಾಗಿ ಬಳಸುತ್ತಿತ್ತು. ವಿಡ್ಯೊ ಎಂಬುದು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್‌ನ ಒಂದು ಆನ್‌ಲೈನ್ ವೇದಿಕೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಸೇರಿದಂತೆ ಅನೇಕ ವಕೀಲರು ಮತ್ತು ನ್ಯಾಯಮೂರ್ತಿಗಳು ವಿಡ್ಯೊದ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸ್ಕೋ ವೆಬೆಕ್ಸ್ ಬಳಸಲು ನಿರ್ಧರಿಸಲಾಗಿತ್ತು. ಗುರುವಾರ ಊಟದ ನಂತರದ ಅವಧಿಯಲ್ಲಿ ಇದರ ಬಳಕೆ ಆರಂಭವಾಯಿತು. ಅದಕ್ಕೂ ಮೊದಲಿನ ಅವಧಿಯಲ್ಲಿ ತಾಂತ್ರಿಕ ಅಡಚಣೆ ಕಂಡುಬಂದಿತ್ತು.
ಪತಿಯ ವಿರುದ್ಧ ಪತ್ನಿಯು ಅತ್ಯಾಚಾರದ ಆರೋಪ ಹೊರಿಸಿರುವ ಪ್ರಕರಣದ ಸಂಬಂಧ ದಾಖಲಿಸಲಾಗಿರುವ ಪ್ರಥಮ ವರ್ತಮಾನ ವರದಿಯ (ಎಫ್‌ಐಆರ್) ಕಾನೂನು ಸಿಂಧುತ್ವದ ಬಗ್ಗೆ ತೀರ್ಮಾನಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಮುಂದಾಗಿದೆ. ಈ ಸಂಬಂಧ ಈವರೆಗೆ ಕಾನೂನು ಏನು ಹೇಳಿದೆ ಎಂಬುದರ ಕುರಿತಾದ ವಾದಗಳನ್ನು ನ್ಯಾಯಾಲಯದ ಮುಂದೆ ಉದ್ದೇಶಿಸುವಂತೆ ಪಕ್ಷಕಾರರಿಗೆ ನ್ಯಾಯಮೂರ್ತಿ ಅಮೋಲ್ ರತ್ತನ್ ಸಿಂಗ್ ಹೇಳಿದ್ದಾರೆ.
ಪತಿಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೂರುದಾರೆ ಮಹಿಳೆಯು ಕುಡಿದ ಮತ್ತಿನಲ್ಲಿ ಪತಿಯು ತನ್ನ ಸಮ್ಮತಿಯಿಲ್ಲದೆಯೇ ಬಲವಂತವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾರೆ ಹಾಗೂ ದೈಹಿಕವಾಗಿ ಘಾಸಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅರ್ಜಿದಾರ ಪತಿಯ ಪರ ವಕೀಲರು, ಒಂದೊಮ್ಮೆ ಎಫ್‌ಐಆರ್‌ನಲ್ಲಿರುವ ಸಂಗತಿಗಳು ನಿಜವೇ ಆದರೂ ಸೆಕ್ಷನ್ 376ರ ಅಡಿ ಯಾವುದೇ ಆರೋಪಗಳನ್ನು ಮಾಡಲಾಗದು. ಏಕೆಂದರೆ ಪ್ರತಿವಾದಿಯು ಅರ್ಜಿದಾರರ ಕಾನೂನುಬದ್ಧ ಪತ್ನಿಯಾಗಿದ್ದಾರೆ. ಪತಿಯ ವಿರುದ್ಧ ಆಕೆ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ದೂರು ದಾಖಲಿಸಬಹುದೇ ಹೊರತು ಯಾವುದೇ ನಿಟ್ಟಿನಿಂದಲೂ ಅತ್ಯಾಚಾರದ ದೂರನ್ನು ದಾಖಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಹದಿನೈದು ವಯೋಮಾನಕ್ಕಿಂತ ದೊಡ್ಡವಳಾದ ಪತ್ನಿಯು ಪತಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲಾಗದು ಎನ್ನುವುದು ಇದಾಗಲೇ ಕಾನೂನಾತ್ಮಕವಾಗಿ ಸಿದ್ಧಗೊಂಡಿರುವ ನಿಲುವಾಗಿದೆ ಎಂದಿದ್ದಾರೆ. ಈ ಕುರಿತು ಭಜನ್‌ಲಾಲ್ ವರ್ಸಸ್ ಹರಿಯಾಣ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸಹ ಉಲ್ಲೇಖಿಸಲಾಗಿದೆ.