ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 31-08-2021

Bar & Bench

ಶಿಕ್ಷೆ ಅಮಾನತು ಕೋರಿ ‘ದೇವ ಮಾನವ’ ಅಸಾರಾಂ ಬಾಪು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ. ಯಾವ ಅಪರಾಧಕ್ಕಾಗಿ ಅಸಾರಾಂ ಬಾಪು ಅವರಿಗೆ ಶಿಕ್ಷೆ ವಿಧಿಸಲಾಗಿದೆಯೋ ಅದು ‘ಸಾಮಾನ್ಯ ಅಪರಾಧವಲ್ಲ’ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿ ರಾಮಸುಬ್ರಮಣಿಯನ್‌ ಹಾಗೂ ಬೇಲಾ ತ್ರಿವೇದಿ ಅವರಿದ್ದ ತ್ರಿಸದಸ್ಯ ಪೀಠವು ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರವಾಗಿ ಮನವಿ ಸಲ್ಲಿಸಿದ ಹಿರಿಯ ವಕೀಲ ಆರ್‌ ಬಸಂತ್‌, ತಮ್ಮ ಕಕ್ಷೀದಾರರ ಆರೋಗ್ಯವು ಹದಗೆಟ್ಟಿದ್ದು ಅಯುರ್ವೇದ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಆರು ವಾರಗಳ ಅವಧಿಗೆ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತ್ತಿನಲಿರಸಬೇಕು. ನ್ಯಾಯಾಲಯವು ‘ದಯೆ’ ತೋರಬೇಕು ಎಂದು ಕೋರಿದರು. ಆದರೆ, ಇದಕ್ಕೆ ಸಮ್ಮತಿಸದ ಪೀಠವು, “ಸಮಗ್ರವಾಗಿ ಪರಿಗಣಿಸಿ ನೋಡುವುದಾದರೆ ಇದು (ಅಸಾರಾಂ ಬಾಪು ಎಸಗಿರುವ ಕೃತ್ಯ) ಸಾಮಾನ್ಯ ಅಪರಾಧವಲ್ಲ. ನಿಮಗೆ ಬೇಕಿರುವ ಎಲ್ಲ ಆಯುರ್ವೇದ ಚಿಕಿತ್ಸೆಯು ಜೈಲಿನಲ್ಲೇ ದೊರೆಯಲಿದೆ” ಎಂದಿತು.

ಫೋನ್‌ ವಿಚಕ್ಷಣೆಗೆ ಬಗ್ಗೆ ಅನುಸರಿಸಲಾಗುತ್ತಿರುವ ವಿಧಾನದ ಕುರಿತು ಕೇಂದ್ರದ ವರದಿ ಕೇಳಿದ ದೆಹಲಿ ಹೈಕೋರ್ಟ್‌

ಫೋನ್‌ಗಳ ಮೇಲೆ ನಿಗಾ ಇರಿಸುವುದು ಮತ್ತು ಪ್ರತಿಬಂಧಿಸುವುದಕ್ಕೆ ಸಂಬಂಧಿಸಿದಂತೆ ಪಾಲಿಸಲಾಗುತ್ತಿರುವ ವಿಧಾನದ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ. ನ್ಯಾಟ್‌ಗ್ರಿಡ್‌, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ ಮತ್ತು ನೇತ್ರಾ ಮೂಲಕ ನಾಗರಿಕರ ಮಾಹಿತಿ ಸಂಗ್ರಹಿಸದಂತೆ ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

CCTV, Surveillance

ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌ (ಸಿಪಿಐಎಲ್‌) ಅರ್ಜಿ ಸಲ್ಲಿಸಿತ್ತು. ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಅವರು ಕೇಂದ್ರ ಸರ್ಕಾರದ ನಡೆ ಕೆ ಎಸ್‌ ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದರು. ಪೆಗಸಸ್‌ ಹಗರಣವನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಗೂಗಲ್‌ನಲ್ಲಿ ಹುಡುಕಾಡುವ ಮೂಲಕವೇ ಹಲವು ಮಾಹಿತಿಗಳನ್ನು ಹೇಗೆ ಪಡೆಯಲಾಗುತ್ತದೆ ಎಂಬದುನ್ನು ವಿವರಿಸಿದರು. ಪ್ರಕರಣದ ಮುಂದಿನ ವಿಚಾರಣೆ ಸೆ. 30ಕ್ಕೆ ನಿಗದಿಯಾಗಿದೆ.

ನಂಬಲು, ಊಹಿಸಲು ಸ್ವಲ್ಪ ಸ್ವಾತಂತ್ರ್ಯ ಇರಲಿ: ಜ್ಯೋತಿಷ್ಯದ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಮದ್ರಾಸ್‌ ಹೈಕೋರ್ಟ್‌

ಜ್ಯೋತಿಷ್ಯ ಅವೈಜ್ಞಾನಿಕ ಎಂದು ಅರಿವು ಮೂಡಿಸಲು ಕರೆ ನೀಡಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವಿಲೇವಾರಿ ಮಾಡಿದ್ದು ಈ ಸಂದರ್ಭದಲ್ಲಿ ನಂಬಲು, ಊಹಿಸಲು ವ್ಯಕ್ತಿಗಳಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ದುಷ್ಟ ಆಚರಣೆಗಳನ್ನು ಕೈಬಿಡುವಂತೆ ನಾಗರಿಕರಿಗೆ ಉತ್ತಮ ಮಾಹಿತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ವ್ಯವಸ್ಥೆಯೊಂದನ್ನು ರೂಪಿಸಬಹುದು ಎಂದು ಕೂಡ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ಪೀಠ ಹೇಳಿದೆ.

Astrology

ವಿಜ್ಞಾನ ಕೂಡ ಪರಿಪೂರ್ಣ ಮತ್ತು ಆತ್ಯಂತಿಕವಲ್ಲ ಎಂದು ಹೇಳಿದ ಪೀಠ, ಈ ಪ್ರಕರಣದಲ್ಲಿ ಯಾವುದೇ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದೆ. ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಬಳಿಕವೂ ಅನೇಕ ಉತ್ತರಿಸಲಾಗದ ಪ್ರಶ್ನೆಗಳು ಉಳಿದುಕೊಂಡಿವೆ. ವಿಶ್ವ ಹುಟ್ಟಿರುವುದಕ್ಕೆ ಯಾವುದೇ ಸುಳಿವು ಈಗಲೂ ದೊರೆತಿಲ್ಲ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ವಿವರಿಸಿದೆ.