ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-10-2021

Bar & Bench

ಉಚಿತ ಕಾನೂನು ನೆರವು ನೀಡುವ ವಕೀಲರ ಮಾಹಿತಿಕೋಶ ಸೃಷ್ಟಿಸಿ: ನ್ಯಾ. ಡಿ ವೈ ಚಂದ್ರಚೂಡ್‌ ಕರೆ

ಕಾನೂನಿನ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ನೆರವು ನೀಡಲು ಬಯಸುವ ವಕೀಲರ ಮಾಹಿತಿಕೋಶ ಸೃಷ್ಟಿಸವಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕರೆ ನೀಡಿದರು. 2018ರಲ್ಲಿ ಮಿಟೂ ಚಳವಳಿ ವೇಳೆ ಲೈಂಗಿಕ ಸಂತ್ರಸ್ತರಿಗೆ ಸಹಾಯ ಮಾಡಲೆಂದು ಸೃಷ್ಟಿಸಲಾಗಿದ್ದ ವಕೀಲರ ಡೇಟಾಬೇಸ್‌ ಮಾದರಿಯಲ್ಲಿ ಇದು ಇರಬೇಕು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಕಾನೂನು ಅರಿವು ಅಭಿಯಾನ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Justice DY Chandrachud

ಕೇಸ್‌ ವಿಧವನ್ನು ವಿವರಿಸುವ ನಿರ್ದಿಷ್ಟ ಡೇಟಾಬೇಸ್‌ ಸೃಷ್ಟಿಸುವುದು ಇಂದಿನ ಅಗತ್ಯ. ಒಂದು ನಿರ್ದಿಷ್ಟ ಪ್ರಕರಣಕ್ಕೆ ಮೀಸಲಾದ ವಕೀಲರು ಆ ಪ್ರಕರಣಗಳಿಗೆ ಮಾತ್ರ ಹೊಣೆಗಾರರಾದರೆ ಕಾನೂನು ನೆರವು ಒದಗಿಸುವುದು ಹೆಚ್ಚುತ್ತದೆ ಎಂದರು. ಅಲ್ಲದೆ ಇಂತಹ ಕೆಲಸಗಳು ಸಾಂಸ್ಥಿಕ ಮಟ್ಟದಲ್ಲಿ ನಡೆಯಬೇಕು. ಕಾನೂನಿನ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಯುವ ವಕೀಲರನ್ನು ಕಾನೂನು ಸೇವಾ ಪ್ರಾಧಿಕಾರಗಳು ಸಂಪರ್ಕಿಸಬೇಕು. ಇದರಿಂದ ಕಿರುಕುಳ ಅನುಭವಿಸುತ್ತಿರುವ ಸಮಾಜದ ಅಂಚಿನಲ್ಲಿರುವ ಜನರಿಗೆ ಸಹಾಯವಾಗುತ್ತದೆ ಎಂದರು.

ಹೈಕೋರ್ಟ್‌ ಮಧ್ಯಪ್ರವೇಶ: ಪೊಲೀಸ್‌ ಪರೀಕ್ಷೆ ಬರೆಯಲು ತೃತೀಯ ಲಿಂಗಿಗೆ ಅವಕಾಶ ನೀಡಿದ ಪ.ಬಂಗಾಳ ಸರ್ಕಾರ

ಪೋಲಿಸ್ ಸಬ್ ಇನ್ಸ್‌ಪೆಕ್ಟರ್/ಲೇಡಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ತೃತೀಯ ಲಿಂಗಿ ವ್ಯಕ್ತಿಯೊಬ್ಬರಿಗೆ ಅವಕಾಶ ನೀಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್‌ಗೆ ಇತ್ತೀಚೆಗೆ ತಿಳಿಸಿದೆ. ಸೆಪ್ಟೆಂಬರ್ 6ರಂದು ತೃತೀಯಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.

ಸರ್ಕಾರದ ಪರ ವಕೀಲರ ಮಧ್ಯಸ್ಥಿಕೆ ಮತ್ತು ಸರ್ಕಾರ ತೆಗೆದುಕೊಂಡ ತ್ವರಿತ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ನ್ಯಾಯಾಲಯ ಶ್ಲಾಘಿಸಿತು. ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಸಮಸ್ಯೆಯನ್ನು ಪರಿಹರಿಸಿದ ಹಿನ್ನೆಲೆಯಲ್ಲಿ, ಕಲ್ಕತ್ತಾ ಹೈಕೋರ್ಟ್ ರಿಟ್ ಅರ್ಜಿ ವಿಲೇವಾರಿ ಮಾಡಿತು.