ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 22-10-2020

Bar & Bench

ಪ್ರಿಯಾ ರಮಣಿ ವಿರುದ್ಧ ಎಂ ಜೆ ಅಕ್ಬರ್‌ ಮಾನನಷ್ಟ ಮೊಕದ್ದಮೆ ಪ್ರಕರಣ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೇ ವಿಚಾರಣೆ

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್‌ 2018ರಲ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ವರ್ಗಾಯಿಸಲು ನವದೆಹಲಿ ರೋಸ್ ಅವೆನ್ಯೂ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.

Priya Ramani (L) and MJ Akbar (R)

ಸಂಸದರು ಅಥವಾ ಶಾಸಕರ ʼವಿರುದ್ಧʼ ಪ್ರಕರಣ ಇದಲ್ಲವಾದ್ದರಿಂದ ಇದನ್ನು ಜನಪ್ರತಿನಿಧಿಗಳ ನ್ಯಾಯಾಲಯದಿಂದ ವರ್ಗಾಯಿಸುವಂತೆ ಕೋರಲಾಗಿತ್ತು. ಸಂಸದರು ಅಥವಾ ಶಾಸಕರ ʼವಿರುದ್ಧʼದ ಪ್ರಕರಣಗಳನ್ನಷ್ಟೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂಬ ಅಂಶವನ್ನು ಪ್ರಿಯಾ ರಮಣಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ, ಇದಾಗಲೇ ಎರಡು ವರ್ಷಗಳಿಂದ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅಲಿಸುತ್ತಿದ್ದು, ನ್ಯಾಯಾಲಯದ ಸಮಯ ಉಳಿತಾಯವಾಗುವ ದೃಷ್ಟಿಯಿಂದ ಪ್ರಕರಣದ ವಿಚಾರಣೆಯನ್ನು ಅಲ್ಲಿಯೇ ಮುಂದುವರೆಸಬೇಕು ಎಂದು ಅಕ್ಬರ್‌ ಪರ ವಕೀಲರು ಕೋರಿದರು. ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲು ಪ್ರಿಯಾ ರಮಣಿ ಟ್ವಿಟರ್‌ ಬಳಸಿದ್ದರು ಎಂದು ಆರೋಪಿಸಿ ಅಕ್ಬರ್‌ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಏಕಾಂತದ ಸೆರೆವಾಸ ವಿಧಿಸಲಾಗಿತ್ತು ಎಂದ ಉಮರ್‌ ಖಾಲಿದ್: ಜೈಲು ಅಧೀಕ್ಷಕರ ಖುದ್ದು ಹಾಜರಿಗೆ ಕೋರ್ಟ್‌ ಆದೇಶ

ತಿಹಾರ್‌ ಜೈಲಿನ ಕೋಣೆಯಿಂದ ಹೊರಬರದಂತೆ ತಮ್ಮನ್ನು ಒಂದಿಡೀ ದಿನ ತಡೆಹಿಡಿಯಲಾಗಿತ್ತು ಎಂದು ದೆಹಲಿ ಹಿಂಸಾಚಾರದ ಆರೋಪ ಎದುರಿಸುತ್ತಿರುವ ಹೋರಾಟಗಾರ ಉಮರ್‌ ಖಲೀದ್‌ ಗುರುವಾರ ಆರೋಪಿಸಿದ್ದಾರೆ.

Umar Khalid

ʼಕೋಣೆಯಿಂದ ಹೊರಬರಲು ನನಗೆ ಅವಕಾಶ ನೀಡಲಿಲ್ಲ. ಯಾರೊಂದಿಗೂ ಮಾತನಾಡುವಂತಿರಲಿಲ್ಲ. ಇದು ಏಕಾಂತದ ಸೆರೆವಾಸದಂತಿತ್ತು. ಜೈಲು ಅಧೀಕ್ಷಕರು ಬಂದಾಗ ಹತ್ತು ನಿಮಿಷ ನನ್ನನ್ನು ಹೊರಬಿಡಲಾಗಿತ್ತು ಪುನ: ಒಳಗೆ ಕೂಡಿಹಾಕಲಾಯಿತು. ನನಗೆ ಭದ್ರತೆ ಬೇಕು. ಆದರೆ ನಾನು ಕೋಣೆಯಿಂದ ಹೊರಗೆ ಕಾಲಿಡದಷ್ಟು ಭದ್ರತೆ ಬೇಕಿಲ್ಲʼ ಎಂದು ಅವರು ಹೇಳಿದ್ದಾರೆ. ಇದನ್ನು ಗಮನಿಸಿದ ದೆಹಲಿ ನ್ಯಾಯಾಲಯ, ಶುಕ್ರವಾರ ಜೈಲು ಅಧೀಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೆಂದು ಸೂಚಿಸಿದೆ.

ಮುಂಬೈ ಸ್ಥಳೀಯ ರೈಲುಗಳಲ್ಲಿ ವಕೀಲರ ಪ್ರಯಾಣಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ ಮಹಾರಾಷ್ಟ್ರ ಸರ್ಕಾರ

ಕೋವಿಡ್-19 ಹಿನ್ನೆಲೆಯಲ್ಲಿ ವಕೀಲರು ಮತ್ತು ನೋಂದಾಯಿತ ಗುಮಾಸ್ತರ ಸ್ಥಳೀಯ ರೈಲು ಪ್ರಯಾಣಕ್ಕೆ ಅನುಕೂಲ ಕಲ್ಪಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ವಕೀಲರನ್ನು ಕೂಡ ಅಗತ್ಯ ಸೇವಾ ಪೂರೈಕೆದಾರರು ಎಂದು ಪರಿಗಣಿಸಿ ಮುಂಬೈ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಈ ಹಿಂದೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Mumbai Local Train

ಪ್ರಸ್ತುತ ಪ್ರಾಯೋಗಿಕವಾಗಿ ನ. 23ರವರೆಗೆ ಯೋಜನೆ ಚಾಲ್ತಿಯಲ್ಲಿರಲಿದೆ. ಮಹಾರಾಷ್ಟ್ರ ಮತ್ತು ಗೋವಾದ ವಕೀಲ ಸಂಘಗಳಲ್ಲಿ ನೋಂದಣಿಯಾದ ಎಲ್ಲಾ ವಕೀಲರು ಮತ್ತು ಗುಮಾಸ್ತರು ನ. 23 ರವರೆಗೆ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದೇ ವೇಳೆ ಗುರುತಿನಚೀಟಿ ನೀಡಬೇಕು, ಜನದಟ್ಟಣೆ ಇಲ್ಲದ ಅವಧಿಯಲ್ಲಿ ಪ್ರಯಾಣಿಸಬೇಕು ಎಂಬ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.