ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 23-10-2020

>>ಟೈಮ್ಸ್‌ ನೌಗೆ ಮಧ್ಯಂತರ ಪರಿಹಾರ >>ಎನ್‌ಆರ್‌ಐಗಳಿಗೆ ಮೀಸಲಾತಿ ಅಸಾಂವಿಧಾನಿಕ >>ಹೂಡಿಕೆ ಹಿಂತೆಗೆತ ಪ್ರಕರಣ

Bar & Bench

ರಿಪಬ್ಲಿಕ್‌ ಟಿವಿ “ನ್ಯೂಸ್‌ ಅವರ್”‌ ಬಳಸದಂತೆ ಪ್ರತಿಬಂಧಕಾದೇಶ ನೀಡಿದ ದೆಹಲಿ ಹೈಕೋರ್ಟ್‌

ಟ್ರೇಡ್‌ಮಾರ್ಕ್‌ ಆದ ʼನ್ಯೂಸ್‌ ಅವರ್‌ʼ ಅಥವಾ ತಪ್ಪು ಹಾದಿಗೆ ಎಳೆಯುವಂಥ ಇನ್ನಾವುದೇ ಮಾರ್ಕ್‌ ಬಳಸದಂತೆ ರಿಪಬ್ಲಿಕ್‌ ಟಿವಿಯನ್ನು ತಡೆಯುವ ಮೂಲಕ ಟೈಮ್ಸ್‌ ನೌ ವಾಹಿನಿಗೆ ಮಧ್ಯಂತರ ಪರಿಹಾರವನ್ನು ಶುಕ್ರವಾರ ದೆಹಲಿ ಹೈಕೋರ್ಟ್‌ ನೀಡಿದೆ.

Times Now vs Republic TV

“ದೇಶ ತಿಳಿಯಲು ಬಯಸುತ್ತದೆ” (ನೇಷನ್ ವಾಂಟ್ಸ್ ಟು ನೋ) ಎಂಬ ಟ್ಯಾಗ್‌ ಲೈನ್‌ಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ನೀಡಲಾಗದು ಎಂದಿರುವ ಪೀಠವು ಈ ಸಂಬಂಧ ಆಳವಾದ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದೆ. ಟೈಮ್ಸ್‌ ನೌ ಮಾತೃ ಸಂಸ್ಥೆಯಾದ ಬೆನೆಟ್‌ ಕೋಲ್ಮನ್‌ ಅಂಡ್‌ ಕಂಪೆನಿಯು ಸಲ್ಲಿಸಿದ್ದ ಅರ್ಜಿಯ ಸಂಬಂಧ ನ್ಯಾಯಮೂರ್ತಿ ಜಯಂತ್‌ ನಾಥ್‌ ಅವರಿದ್ದ ಏಕಸದಸ್ಯ ಪೀಠವು ಭಾಗಶಃ ಪರಿಹಾರ ನೀಡಿದೆ.

ಎನ್‌ಎಲ್‌ಯುಗಳಲ್ಲಿ ಎನ್‌ಆರ್‌ಐಗಳಿಗೆ ಮೀಸಲಾತಿ ಅಸಾಂವಿಧಾನಿಕ: ಒಡಿಶಾ ಹೈಕೋರ್ಟ್‌

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಅನಿವಾಸಿ ಭಾರತೀಯರಿಗೆ ಮೀಸಲಿಟ್ಟಿರುವ ಸೀಟುಗಳು ಅಸ್ಪಷ್ಟ ಮೀಸಲಾತಿ ಮತ್ತು ಅಸಾಂವಿಧಾನಿಕ ಎಂದು ಒಡಿಶಾ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

NLUs, Orissa High Court

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ಆಕಾಂಕ್ಷಿಯೊಬ್ಬರು ಅನಿವಾಸಿ ಭಾರತೀಯರಿಗೆ ಮೀಸಲಾಗಿದ್ದ ವಿಭಾಗದಲ್ಲಿ ಅರ್ಜಿ ಸಲ್ಲಿಸಲಾಗದಿದ್ದನ್ನು ಉಲ್ಲೇಖಿಸಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಪಾಂಡಾ ಮತ್ತು ಎಸ್‌ ಕೆ ಪಾಣಿಗ್ರಹಿ ಅವರಿದ್ದ ವಿಭಾಗೀಯ ಪೀಠವು ಮೇಲಿನ ವಿಚಾರಗಳನ್ನು ಗಮನಿಸಿತು. “ಇದು ಗಣ್ಯವರ್ಗದ ಮೀಸಲಾತಿಯಂತಿದೆ. ಈ ಸಂಶಯಾಸ್ಪದ ವರ್ಗದ ಕೋಟಾ ಅಸಾಂವಿಧಾನಿಕವಾಗಿದೆ” ಎಂದು ನ್ಯಾಯಪೀಠ ಹೇಳಿದೆ. ಈ ಮೀಸಲಾತಿಯ ಬಗ್ಗೆ ಮರುಚಿಂತನೆ ನಡೆಸುವಂತೆ ಸಂಬಂಧಪಟ್ಟ ಎಲ್ಲ ಭಾಗೀದಾರರಿಗೆ ಸೂಚಿಸಿದೆ.

ಲಕ್ಷ್ಮಿ ವಿಲಾಸ್‌ ಪ್ಯಾಲೇಸ್‌ ಹೋಟೆಲ್:‌ ಅರುಣ್‌ ಶೌರಿ ಮತ್ತಿತರರ ವಿರುದ್ಧದ ಪ್ರಕ್ರಿಯೆಗೆ ತಡೆ ನೀಡಿದ ರಾಜಸ್ಥಾನ ಹೈಕೋರ್ಟ್‌

ವಿಶೇಷ ಸಿಬಿಐ ನ್ಯಾಯಾಲಯದ ಮುಂದಿರುವ ಲಕ್ಷ್ಮಿ ವಿಲಾಸ್‌ ಪ್ಯಾಲೇಸ್‌ ಹೋಟೆಲ್‌ ಹೂಡಿಕೆ ಹಿಂತೆಗೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಅರುಣ್‌ ಶೌರಿ ಮತ್ತಿತರರ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ರಾಜಸ್ಥಾನ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Arun Shourie

ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ ಅವರಿದ್ದ ಏಕಸದಸ್ಯ ಪೀಠವು ಮುಂದಿನ ಆದೇಶದವರೆಗೆ ಶೌರಿ, ಆಶೀಶ್‌ ಗುಹಾ, ಪ್ರದೀಪ್‌ ಬೈಜಾಲ್‌ ಮತ್ತು ಕಾಂತಿಲಾಲ್‌ ವಿಕಾಮ್ಸೆ, ಜ್ಯೋತ್ಸ್ನಾ ಸೂರಿ ವಿರುದ್ಧದ ಪ್ರಕ್ರಿಯೆ ಮುಂದುವರೆಸದಂತೆ ವಿಶೇಷ ಸಿಬಿಐ ನ್ಯಾಯಾಧೀಶರಿಗೆ ಅಕ್ಟೋಬರ್‌ 21ರ ಆದೇಶದಲ್ಲಿ ನಿರ್ದೇಶಿಸಿದೆ.