ರಾಜಕೀಯ ಪಕ್ಷಗಳು ಭೌತಿಕ ಪ್ರಚಾರಾಂದೋಲನದ ಬದಲು ವರ್ಚುವಲ್ ಪ್ರಚಾರಕ್ಕೆ ಮುಂದಾಗಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಹೈಕೋರ್ಟ್ ಆದೇಶದಿಂದ ಚುನಾವಣಾ ಪ್ರಕ್ರಿಯೆಗೆ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಅಲ್ಲದೆ ಚುನಾವಣೆಗಳನ್ನು ನಡೆಸುವುದು ತನಗೆ ಸಂಬಂಧಿಸಿದ ಕ್ಷೇತ್ರ ಎಂದು ಆಯೋಗ ತಿಳಿಸಿದೆ.
ಈ ನಿರ್ಧಾರ ಚುನಾವಣಾ ಅಭ್ಯರ್ಥಿಗಳ ಸ್ಪರ್ಧಿಸುವಿಕೆ ಮೇಲೆ ಕೂಡ ಪರಿಣಾಮ ಬೀರಲಿದೆ. ಈಗಾಗಲೇ ಕೋವಿಡ್- 19 ಹಿನ್ನೆಲೆಯಲ್ಲಿ ಚುನಾವಣೆ ಹೇಗೆ ನಡೆಸಬೇಕೆಂಬ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ಹೇಳಿದ್ದು ಪ್ರಕರಣವನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದೆ.
2019ರ ಮಾರ್ಚ್‌ನಲ್ಲಿಯೇ ದೂರು ನೀಡಿದ್ದರೂ ಸುದ್ದಿಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್‌ಎ) ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸಂಜುಕ್ತಾ ಬಸು ಆರೋಪಿಸಿದ್ದು ಸುದರ್ಶನ್ ಟಿವಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವಂತೆ ಅವರು ಕೋರಿದ್ದಾರೆ.
ಟೈಮ್ಸ್ ನೌ ವಾಹಿನಿ ತಮ್ಮ ವಿರುದ್ಧ ಮಾನಹಾನಿಕರ ಕಾರ್ಯಕ್ರಮ ಪ್ರಸಾರ ಮಾಡಿದ್ದನ್ನು ವಿರೋಧಿಸಿ ಅವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಆದರೆ ʼಕುಂದುಕೊರತೆ ನಿರ್ವಹಣಾ ಸಂಸ್ಥೆಯಾಗಿ ಎನ್‌ಬಿಎಸ್‌ಎ ಕಾರ್ಯ ನಿರ್ವಹಿಸದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದು ತೀರ್ಪು ನೀಡುವ ಪ್ರಕ್ರಿಯೆ ಆಂತರಿಕ ದೌರ್ಬಲ್ಯಗಳಿಂದ ಕೂಡಿದೆ’ ಎಂದು ಆರೋಪಿಸಿದ್ದಾರೆ. ಸುದರ್ಶನ್ ಟಿವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಸೋಮವಾರದಿಂದ ಮತ್ತೆ ಆರಂಭವಾಗಲಿದೆ.
ಕೋವಿಡ್- 19 ಸೋಂಕು ತಡೆಗಟ್ಟುವಿಕೆಯ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನ. ೨ರಿಂದ ನಿಗದಿತವಾಗಿ ನ್ಯಾಯಾಲಯ ಕಲಾಪಗಳನ್ನು ಆರಂಭಿಸಲು ರಾಜಸ್ಥಾನ ಹೈಕೋರ್ಟ್ ಸೂಚಿಸಿದೆ.
ರಾಜಸ್ಥಾನ ವಕೀಲರ ಮಂಡಳಿ, ರಾಜಸ್ತಾನ ಹೈಕೋರ್ಟ್ ವಕೀಲರ ಪರಿಷತ್, ಜೋಧಪುರ ಮತ್ತು ಜೈಪುರ ವಕೀಲರ ಸಂಘ ಹಾಗೂ ರಿಜಿಸ್ಟ್ರಿಯ ಸಲಹೆ ಪರಿಗಣಿಸಿ ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ಭೌತಿಕ ಮತ್ತು ʼಜಾಲ ಕಲಾಪʼಗಳ ಮೂಲಕ ವಿಚಾರಣೆಗೆ ಅನುಮತಿ ನೀಡಲಾಗುವುದು ಎಂದು ಅದು ತಿಳಿಸಿದೆ.