ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |26-6-2021

> ಶಾಸಕರ ವಿರುದ್ಧದ ಪ್ರಕರಣ; ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ > ಚಾರ್‌ಧಾಮ್ ಯಾತ್ರೆ: ಮರುಪರಿಶೀಲಿಸಿ ಎಂದ ಉತ್ತರಾಖಂಡ ಹೈಕೋರ್ಟ್ > ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ: ನಾಲ್ವರು ವಿದ್ಯಾರ್ಥಿಗಳು ಪೊಲೀಸ್‌ ವಶಕ್ಕೆ > ಸಿಜೆಐ ಉಪನ್ಯಾಸ

Bar & Bench

ಶಾಸಕರ ವಿರುದ್ಧದ ಪ್ರಕರಣ ಕೈಬಿಡಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ಕೇರಳ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿ ವಿಧ್ವಂಸಕಾರಿ ಕೃತ್ಯ ಎಸಗಿದ ಆರೋಪದಡಿ ಸಿಪಿಐ(ಎಂ) ನಾಯಕರ ವಿರುದ್ಧ 2015ರಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಪ್ರಸ್ತುತ ಕೇರಳದಲ್ಲಿ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಆ ವೇಳೆ ವಿಪಕ್ಷ ಸ್ಥಾನದಲ್ಲಿತ್ತು. ಮೇಲಿನ ಘಟನೆಯ ಸಂಬಂಧ ಶಾಸಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಕೈಬಿಡುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಕೇರಳ ಹೈಕೋರ್ಟ್‌ ತಿರಸ್ಕರಿಸಿತ್ತು.

Chief Minister of Kerala, Pinarayi Vijayan

“ಸ್ಪೀಕರ್‌ ಒಪ್ಪಿಗೆಯಿಲ್ಲದೆ ವಿಧಾನಸಭೆಯ ಕಾರ್ಯದರ್ಶಿಯವರು ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಅಕ್ರಮವಾಗಿದೆ. ಶಾಸನ ಸಭೆಯ ಸದಸ್ಯರಾಗಿ ಪ್ರತಿಭಟನೆಯನ್ನು ಮಾಡುವ ಕರ್ತವ್ಯವು ಎಫ್‌ಐಆರ್‌ನಲ್ಲಿರುವ ಆರೋಪಿತ ವ್ಯಕ್ತಿಗಳಿಗಿದ್ದು ಅವರು ತಮ್ಮ ಈ ಕೃತ್ಯಕ್ಕೆ ಸಾಂವಿಧಾನಿಕ ರಕ್ಷಣೆ ಪಡೆಯಲು ಅರ್ಹರು,” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ, ಸಂಸತ್‌ ಹಾಗೂ ರಾಜ್ಯ ಶಾಸನಸಭೆಗಳ ಸದಸ್ಯರಿಗೆ ಸಂವಿಧಾನದ 105(3) ಮತ್ತು 194(3) ವಿಧಿಗಳಡಿ ನೀಡಲಾಗಿರುವ ಕೆಲವೊಂದು ವಿಶೇಷ ಹಕ್ಕುಗಳು ಮತ್ತು ರಕ್ಷಣೆಗಳ ಬಗ್ಗೆಯೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಕುಂಭಮೇಳದ ಪರಿಣಾಮ ನೆನಪಿಸಿ ಚಾರ್‌ಧಾಮ್ ಯಾತ್ರೆ ರದ್ದುಗೊಳಿಸಲು ಪರಿಶೀಲಿಸುವ ಬಗ್ಗೆ ಸೂಚಿಸಿದ ಉತ್ತರಾಖಂಡ ಹೈಕೋರ್ಟ್

ಉತ್ತರಾಖಂಡ ಸರ್ಕಾರವು ಜುಲೈ 1ರಿಂದ ನಡೆಸಲು ಉದ್ದೇಶಿಸಿರುವ ಚಾರ್‌ಧಾಮ್‌ ಯಾತ್ರೆಯನ್ನು ಮರುಪರಿಶೀಲಿಸುವಂತೆ ಉತ್ತರಾಖಂಡ ಹೈಕೋರ್ಟ್‌ ಸೂಚಿಸಿದೆ. ಕೋವಿಡ್‌ ಸಾಂಕ್ರಾಮಿಕತೆ ಹಾಗೂ ಮೂರನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಹೈಕೋರ್ಟ್‌ ತಿಳಿಸಿದೆ.

Uttarakhand HC and Char Dham Yatra

ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದ ಕುಂಭಮೇಳದಿಂದಾಗಿ ಕೋವಿಡ್‌ ಸಾಂಕ್ರಾಮಿಕತೆ ವ್ಯಾಪಿಸಿ, ಅದರಿಂದ ಮೇ ತಿಂಗಳಿನಲ್ಲಿ ಸಾವು ನೋವು ಸಂಭವಿಸಿದ್ದನ್ನು ಪೀಠವು ವಿಚಾರಣೆಯ ವೇಳೆ ನೆನಪಿಸಿದೆ. “ಏಪ್ರಿಲ್‌ನಲ್ಲಿ ನಡೆದ ಕುಂಭಮೇಳ ಹಾಗೂ ಮೇನಲ್ಲಿ ಸಂಭವಿಸಿದ ಸಾವುನೋವುಗಳ ನಡುವೆ ಸ್ಪಷ್ಟ ಸಂಬಂಧವಿದೆ” ಎಂದು ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌ ಹಾಗೂ ನ್ಯಾ. ಅಲೋಕ್‌ ವರ್ಮಾ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಮತ್ತೊಮ್ಮೆ ಇಂತಹದ್ದೇ ರೀತಿಯಲ್ಲಿ ವ್ಯಾಪಕವಾಗಿ ಜನರು ಸೇರಲು ಅನುಮತಿಸುವ ಮೂಲಕ ಕೋವಿಡ್‌ಗೆ ಮರಳಿ ಆಹ್ವಾನ ನೀಡಬಾರದು ಎಂದು ಪೀಠವು ಸರ್ಕಾರಕ್ಕೆ ಕಿವಿಮಾತು ಹೇಳಿದೆ.

ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ: ನಾಲ್ವರು ಕಾರ್ಗಿಲ್‌ ವಿದ್ಯಾರ್ಥಿಗಳು ಹತ್ತು ದಿನ ಪೊಲೀಸ್‌ ವಶಕ್ಕೆ

ಇದೇ ವರ್ಷ ಜನವರಿ 29ರಂದು ನವದೆಹಲಿಯ ಇಸ್ರೇಲ್‌ ರಾಜತಾಂತ್ರಿಕ ಕಚೇರಿಯ ಸಮೀಪ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರು ಕಾರ್ಗಿಲ್‌ ಮೂಲದ ವಿದ್ಯಾರ್ಥಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ದೆಹಲಿ ನ್ಯಾಯಾಲಯ ನೀಡಿದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ ಕಾರ್ಗಿಲ್‌ ನಗರದ ವಿದ್ಯಾರ್ಥಿಗಳು ಇವರಾಗಿದ್ದಾರೆ.

Delhi Police

ಪ್ರಕರಣದ ತನಿಖೆಯ ಮುಂದಾಳತ್ವವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿತ್ತು. ಇದಲ್ಲದೆ ದೆಹಲಿ ಪೊಲೀಸ್ ಇಲಾಖೆಯು ಸಹ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. “ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ ಸಂಚಿನ ಆರೋಪದಡಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಟ್ರಾನ್ಸಿಟ್‌ ರಿಮ್ಯಾಂಡ್‌ ಅಡಿ ವಶಕ್ಕೆ ಪಡೆಯಲಾಗಿದ್ದು ಪ್ರಶ್ನಿಸುವ ಸಲುವಾಗಿ ದೆಹಲಿಗೆ ಕರೆತರಲಾಗಿದೆ,” ಎಂದು ದೆಹಲಿ ಪೊಲೀಸ್‌ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ʼನ್ಯಾಯಿಕ ಆಡಳಿತʼ ವಿಷಯವಾಗಿ ಜೂನ್ 30ರಂದು ಸಿಜೆಐ ಎನ್ ವಿ ರಮಣ ಅವರಿಂದ ಉಪನ್ಯಾಸ

ಪಿ ಡಿ ದೇಸಾಯಿ ಸ್ಮೃತಿ 17ನೇ ಉಪನ್ಯಾಸ ಮಾಲೆಯ ಅಂಗವಾಗಿ ʼನ್ಯಾಯಿಕ ಆಡಳಿತʼ ವಿಷಯ ಕುರಿತಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಜೂನ್ 30ರಂದು ಸಂಜೆ ಆರು ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡಲಿದ್ದಾರೆ. ಪಿ ಡಿ ದೇಸಾಯಿ ಟ್ಟಸ್ಟ್‌ ಮತ್ತು ಪ್ರಳೀನ್‌ ಪಬ್ಲಿಕ್‌ ಚಾರಿಟಬಲ್‌ ಟ್ರಸ್ಟ್‌ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮ ಇದು.

CJI N V Ramana

ಹದಿನಾರನೇ ಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು “ನ್ಯಾಯಾಂಗ ವಿಮರ್ಶೆ, ನ್ಯಾಯಾಂಗ ನಿಂದನೆ ವ್ಯಾಪ್ತಿ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಅದರ ಬಳಕೆ” ಎಂಬ ವಿಷಯವಾಗಿ ಮಾತನಾಡಿದ್ದರು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಜಸ್ತಿ ಚಲಮೇಶ್ವರ್‌, ಯು ಯು ಲಲಿತ್‌, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ಅವರು ಈ ಹಿಂದಿನ ಮಾಲಿಕೆಗಳಲ್ಲಿ ಮಾತನಾಡಿದ್ದರು. ಕಾರ್ಯಕ್ರಮದ ಲಿಂಕ್‌ ಅನ್ನು ಜೂನ್‌ 29ರಂದು ಪ್ರಕಟಿಸಲಾಗುತ್ತದೆ.