ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-12-2020

>>ಮತದಾನದ ಮೊರೆಹೋದ ʼಟೆಂಪಲ್ಟನ್‌ʼ >> ನ್ಯಾಯಮಂಡಳಿಯಲ್ಲಿ ʼಸೆಬಿʼ ದಂಡ ಪ್ರಶ್ನಿಸಲು ಮುಂದಾದ ಎನ್‌ಡಿಟಿವಿ >>ವಿಭಿನ್ನ ಧರ್ಮಕ್ಕೆ ಸೇರಿದ ಯುವಕ, ಯುವತಿ ವಿವಾಹ-ನ್ಯಾಯಾಲಯದ ಮೆಟ್ಟಿಲೇರಿದ ದಂಪತಿ >> ಪತ್ನಿಯ ನಗ್ನ ಚಿತ್ರ ಪ್ರಸರಣ ಪ್ರಕರಣ

Bar & Bench

ಆರು ಸಾಲ ಯೋಜನೆಗಳ ಭವಿಷ್ಯ ನಿರ್ಧರಿಸಲು ಮತದಾನದ ಮೊರೆ ಹೋದ ಫ್ರಾಂಕ್ಲಿನ್‌ ಟೆಂಪಲ್ಟನ್‌

ಭಾರತದ ತನ್ನ ಆರು ಸಾಲ ಯೋಜನೆಗಳನ್ನು ಕಳೆದ ಏಪ್ರಿಲ್‌ನಲ್ಲಿ ನಿಷ್ಕ್ರಿಯಗೊಳಿಸಿ ಸುದ್ದಿ ಮಾಡಿದ್ದ ಅಮೆರಿಕ ಮೂಲದ ಫ್ರಾಂಕ್ಲಿನ್‌ ಟೆಂಪಲ್ಟನ್‌ ಮ್ಯೂಚುವಲ್‌ ಫಂಡ್‌ ಇದೀಗ ಆ ನಿಧಿಗಳ ಭವಿಷ್ಯ ನಿರ್ಧರಿಸುವ ಅವಕಾಶವನ್ನು ಯೂನಿಟ್‌ ಹೋಲ್ಡರ್‌ಗಳಿಗೇ ಬಿಟ್ಟುಕೊಟ್ಟಿದೆ. ಇದಕ್ಕಾಗಿ ಇ- ಮತದಾನ ವ್ಯವಸ್ಥೆ ಕಲ್ಪಿಸಿರುವ ಸಂಸ್ಥೆ ಡಿ. 26ರಿಂದ 28ರವರೆಗೆ ಮತದಾನ ಏರ್ಪಡಿಸಿದೆ. ಫಲಿತಾಂಶದಿಂದಾಗಿ ಈ ಸಾಲನಿಧಿಗಳನ್ನು ಮುಚ್ಚಬೇಕೆ ಅಥವಾ ಬೇಡವೇ ಎಂಬುದು ನಿರ್ಧಾರವಾಗುತ್ತದೆ. ಜೊತೆಗೆ ಯುನಿಟ್‌ ಹೋಲ್ಡರ್‌ಗಳು ಹೇಗೆ ಹಣ ಹಿಂಪಡೆಯಬೇಕು ಎಂಬ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.

Franklin Templeton

ಮತದಾನ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ನ್ಯಾಯಾಲಯ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸೂಚಿಸಿದೆ. ಫಲಿತಾಂಶದ ಮಾಹಿತಿ ಮತ್ತು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಆ ಅಧಿಕಾರಿ ಸಲ್ಲಿಸಬೇಕಿದೆ. ಭಾರತದ ಒಂಬತ್ತನೇ ಅತಿದೊಡ್ಡ ಹೂಡಿಕೆ ಸಂಸ್ಥೆಯಾದ ಫ್ರಾಂಕ್ಲಿನ್ ಟೆಂಪಲ್ಟನ್ ಸುಮಾರು ರೂ 28,000 ಕೋಟಿ ಮೊತ್ತದ ಫ್ರಾಂಕ್ಲಿನ್‌ ಇಂಡಿಯಾದ ಆರು ಹೂಡಿಕೆ ಯೋಜನೆಗಳಾದ ಅಲ್ಪಾವಧಿ ನಿಧಿ, ಡೈನಾಮಿಕ್‌ ಸಂಚಯ ನಿಧಿ, ಕ್ರೆಡಿಟ್‌ ರಿಸ್ಕ್‌ ಫಂಡ್‌, ಅಲ್ಪಾವಧಿ ಆದಾಯ ಯೋಜನೆ, ಅತಿಚಿಕ್ಕ ಬಾಂಡ್‌ ನಿಧಿಯನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು.

ಸೆಬಿ ವಿಧಿಸಿದ್ದ ರೂ 27 ಕೋಟಿ ಮೊತ್ತದ ದಂಡವನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಎನ್‌ಡಿಟಿವಿ ಪ್ರವರ್ತಕರ ಚಿಂತನೆ

ಎನ್‌ಡಿಟಿವಿಯ ಷೇರುದಾರರಿಗೆ ದರ ಸಂವೇದಿ ಮಾಹಿತಿ ಬಹಿರಂಗಪಡಿಸದೇ ಇರುವ ಕಾರಣಕ್ಕೆ ತಮ್ಮ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ರೂ ₹27 ಕೋಟಿ ದಂಡ ವಿಧಿಸಿರುವುದನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದಾಗಿ ವಾಹಿನಿಯ ಮೂವರು ಪ್ರವರ್ತಕರಾದ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ಮತ್ತು ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೆಕ್ಯುರಿಟೀಸ್‌ ಮೇಲ್ಮನವಿ ನ್ಯಾಯಮಂಡಳಿಗೆ ಅವರು ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಗುರುವಾರ ಎಲ್ಲಾ ಮೂವರು ಪ್ರವರ್ತಕರಿಗೆ ಸೆಬಿ ಒಟ್ಟಾಗಿ ₹25 ಕೋಟಿ ದಂಡ ವಿಧಿಸಿತ್ತು, ಪ್ರಣಯ್‌ ಮತ್ತು ರಾಧಿಕಾ ರಾಯ್‌ ಅವರಿಗೆ ಹೆಚ್ಚುವರಿಯಾಗಿ ಪ್ರತ್ಯೇಕವಾಗಿ ತಲಾ ಒಂದು ಕೋಟಿ ರೂಪಾಯಿ ದಂಡ ನೀಡುವಂತೆ ಸೂಚಿಸಲಾಗಿತ್ತು. ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌ (ವಿಸಿಪಿಎಲ್‌) ಮತ್ತು ಐಸಿಐಸಿಐ ಬ್ಯಾಂಕ್‌ ಜೊತೆ ಅವರು ಮಾಡಿಕೊಂಡಿರುವ ಮೂರು ಸಾಲದ ಒಪ್ಪಂದ ಮಾಹಿತಿಯನ್ನು ಬಹಿರಂಗಪಡಿಸಿದೇ ಸೆಬಿ ಕಾಯಿದೆಯ ಸೆಕ್ಷನ್ 12ಎ ಹಾಗೂ ಸಂಬಂಧಿತ ಸೆಬಿ ನಿಯಂತ್ರಣ ನಿಯಮಗಳು (ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಂಚನೆ ವಹಿವಾಟು ಅಭ್ಯಾಸಗಳ ನಿಷೇಧ)- 2003 ಅನ್ನು (ಪಿಎಫ್‌ಯುಟಿಪಿ ನಿಯಂತ್ರಣಗಳು) ರಾಯ್‌ ದಂಪತಿ ಉಲ್ಲಂಘಿಸಿದ್ದಾರೆ ಎಂದು ಸೆಬಿ ಹೇಳಿತ್ತು.

ಹಿಂದೂ ಪುರುಷನ ವರಿಸಲು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮಹಿಳೆ ಮತಾಂತರ: ದಂಪತಿಗೆ ಭದ್ರತೆ ಕಲ್ಪಿಸಲು ಉತ್ತರಾಖಂಡ ಹೈಕೋರ್ಟ್‌ ಆದೇಶ

ವಿಭಿನ್ನ ಧರ್ಮಕ್ಕೆ ಸೇರಿದ ಯುವಕ-ಯುವತಿ ಸಪ್ತಪದಿ ತುಳಿದಿದ್ದು, ದಂಪತಿಯ ನೆರವಿಗೆ ಈಚೆಗೆ ಉತ್ತರಾಖಂಡ ಹೈಕೋರ್ಟ್‌ ಧಾವಿಸಿದೆ. ಹಿಂದೂ ಪುರುಷನನ್ನು ವಿವಾಹವಾಗಲು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮುಸ್ಲಿಂ ಮಹಿಳೆ ಮತಾಂತರಗೊಂಡಿದ್ದಾರೆ. ಮಹಿಳೆಯ ಸಹೋದರರು ದಂಪತಿಯ ಮೇಲೆ ದೈಹಿಕ ಹಲ್ಲೆ ನಡೆಸಬಹುದು ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿವಾಹದ ಬಗ್ಗೆಯಾಗಲಿ ಅಥವಾ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮಹಿಳೆ ಮತಾಂತರವಾಗಿರುವುದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ರವೀಂದ್ರ ಮೈಥಾನಿ ಅವರಿದ್ದ ಪೀಠ ಸ್ಪಷ್ಟಪಡಿಸಿದ್ದು, ಇದು ಮೇಲ್ನೋಟಕ್ಕೆ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ -2018ರ ಉಲ್ಲಂಘನೆಯಾಗಿದೆ ಎಂದಿದೆ.

Marriage

ಮತಾಂತರಕ್ಕೆ ಸಂಬಂಧಿಸಿದಂತೆ ಮಹಿಳೆ ಸಲ್ಲಿಸಿದ ಮನವಿಯ ಬಗ್ಗೆ ಇನ್ನೂ ಏಕೆ ಕ್ರಮಕೈಗೊಂಡಿಲ್ಲ ಎಂಬುದರ ತನಿಖೆ ನಡೆಸುವಂತೆ ಹರಿದ್ವಾರದ ಜಿಲ್ಲಾಧಿಕಾರಿಗೆ ಮೊದಲಿಗೆ ನ್ಯಾಯಾಲಯ ನೋಟಿಸ್‌ ಜಾರಿಮಾಡಿದೆ. ಅರ್ಜಿಯನ್ನು ಪ್ರಕ್ರಿಯೆಗೊಳಪಡಿಸಿದ್ದರೆ ಯಾವಾಗ ಒಳಪಡಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಲತಾ ಸಿಂಗ್‌ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಮತ್ತು ಖುಷ್ಬೂ ವರ್ಸಸ್‌ ಕನ್ನಿಅಮ್ಮಾಳ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಮಧ್ಯಂತರ ಕ್ರಮದ ಭಾಗವಾಗಿ ದಂಪತಿಗೆ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

ವಾಟ್ಸಪ್‌ನಲ್ಲಿ ಪತ್ನಿಯ ನಗ್ನ ಚಿತ್ರ ಪ್ರಸರಣ: ಪತಿಯ ವಿರುದ್ಧ ಎಫ್‌ಐಆರ್‌ ವಜಾಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಪತ್ನಿಯ ನಗ್ನ ಚಿತ್ರಗಳನ್ನು ವಾಟ್ಸಪ್‌ನಲ್ಲಿ ಹಂಚಿಕೊಂಡಿದ್ದ ಪತಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಜಾಗೊಳಿಸಲು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ. ಭಾರತ ದಂಡ ಸಂಹಿತೆಯ ಸೆಕ್ಷನ್‌ಗಳಾದ 270, 313, 323, 376 ಡಿ ಮತ್ತು 34 ಹಾಗೂ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯಿದೆ – 2008ರ ಸೆಕ್ಷನ್‌ 67ರ ಅಡಿ ಪತಿಯ ವಿರುದ್ಧ ದಾಖಲಾಗಿರುವ ದೂರುಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಂಕಜ್‌ ನಖ್ವಿ ಮತ್ತು ವಿವೇಕ್‌ ಅಗರ್ವಾಲ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

WhatsApp

ದೂರುದಾರೆಯು ಅರ್ಜಿದಾರರ ಪತ್ನಿಯಾಗಿದ್ದು, ಇದು ಆಕೆಯ ಎರಡನೇ ವಿವಾಹವಾಗಿದೆ. ಪತ್ನಿಯು ತನಗಿಂತ ಆರು ವರ್ಷಕ್ಕೆ ದೊಡ್ಡವಳಾಗಿದ್ದು, ಸುಳ್ಳು ಮತ್ತು ಕಟ್ಟುಕತೆಗಳಿಂದ ಕೂಡಿದ ಆರೋಪವನ್ನು ತನ್ನ ವಿರುದ್ಧ ಮಾಡಲಾಗಿದೆ. ಇವುಗಳನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದಿರುವ ಅರ್ಜಿದಾರರಾದ ಪತಿಯು ಎಫ್‌ಐಆರ್‌ ವಜಾಗೊಳಿಸುವಂತೆ ಕೋರಿದ್ದರು. ತನಿಖೆಯ ವೇಳೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರಾದ ಪತಿಯಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ದೂರುದಾರೆಯಾದ ಪತ್ನಿಯು ಪ್ರಕರಣ ದಾಖಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಜತಾ ಶಂಖರ್‌ ಪಾಂಡೆ ವಾದಿಸಿದರು. ಅರ್ಜಿದಾರರು ಮಾಹಿತಿದಾರರ ಪತ್ನಿ ಎಂಬುದು ಎಫ್‌ಐಆರ್‌ ವಜಾಕ್ಕೆ ಆಧಾರವಲ್ಲ ಎಂದು ಹೆಚ್ಚುವರಿ ಸರ್ಕಾರಿ ವಕೀಲ ಗಂಭೀರ್‌ ಸಿಂಗ್‌ ನ್ಯಾಯಾಲಯಕ್ಕೆ ವಿವರಿಸಿದರು.