ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-1-2021

Bar & Bench

ಏಳು ವರ್ಷಗಳಿಂದ ಪತ್ತೆಯಾಗದ ಸೈನಿಕರು ಸೇನೆ ತೊರೆದವರಲ್ಲ, ನಿಧನರಾದವರು ಎಂದು ಭಾವಿಸಲಾಗುವುದು: ಕಾಶ್ಮೀರ ಹೈಕೋರ್ಟ್‌

ತೊರೆಯವುದು ಎಂಬುದು ಕಾನೂನುಬಾಹಿರವಾಗಿ ವ್ಯಕ್ತಿಯು ಸೇನೆಯ ಸೇವೆಯಿಂದ ಓಡಿ ಹೋಗುವುದು ಎನ್ನುವುದಾಗುತ್ತದೆ. ಆದರೆ, ಕಳೆದ 10 ವರ್ಷಗಳಿಂದ ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬರು ಪತ್ತೆ ಇಲ್ಲದಿರುವುದು ಹಾಗೂ ಅವರ ಬಗ್ಗೆ ಮಾಹಿತಿ ಇಲ್ಲದಿರುವುದನ್ನು ಅವರು ಕಾನೂನುಬಾಹಿರವಾಗಿ ಸೇನೆಯ ಸೇವೆಯಿಂದ ಓಡಿ ಹೋಗಿದ್ದಾರೆ ಎಂದು ಹೇಳಲು ಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಹೇಳಿದೆ.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 108ರ ಅನ್ವಯ ಏಳು ವರ್ಷಗಳಿಂದ ನಾಪತ್ತೆಯಾಗಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗುತ್ತದೆ ಎಂದು ನ್ಯಾ. ಸಂಜಯ್‌ ಧರ್‌ ಅವರಿದ್ದ ಏಕಸದಸ್ಯ ಪೀಠವು ಹೇಳಿದ್ದು, ನಾಪತ್ತೆಯಾದ ವ್ಯಕ್ತಿಯ ಕುಟುಂಬಕ್ಕೆ ಎಲ್ಲಾ ಸೌಲಭ್ಯ ಕಲ್ಪಿಸುವಂತೆ ಸಿಆರ್‌ಪಿಎಫ್‌ ಪಡೆಗೆ ನಿರ್ದೇಶಿಸಿದೆ. ಅರ್ಜಿದಾರೆ ಮಧು ದೇವಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಪೀಠವು, ಮಧು ದೇವಿ ಅವರು ತಮ್ಮ ಪತಿ ಆಶಾರಾಮ್‌ ಅವರು ಸೆಕ್ಷನ್‌ 108ರ ಅನ್ವಯ ಸಾವನ್ನಪ್ಪಿದ್ದಾರೆ. ಹಾಗಾಗಿ, ಪ್ರತಿವಾದಿಗಳ ತೊರೆದಿದ್ದಾರೆ ಎಂಬ ಆದೇಶವನ್ನು ವಜಾಗೊಳಿಸುವಂತೆ ಕೋರಿದ್ದರು.

ಭೂಸ್ವಾಧೀನ: ಸಾರ್ವಜನಿಕ ಹಿತಾಸಕ್ತಿಗೆ ವೈಯಕ್ತಿಕ ಹಿತಾಸಕ್ತಿ ಹಾದಿ ಮಾಡಿಕೊಡಬೇಕು ಎಂದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿಗೆ ವೈಯಕ್ತಿಕ ಹಿತಾಸಕ್ತಿ ಹಾದಿ ಮಾಡಿಕೊಡಬೇಕು ಎಂದು ಹೇಳಿದೆ. ಖಾಸಗಿ ಹಿತಾಸಕ್ತಿ ಮತ್ತು ದೊಡ್ಡ ಸಾರ್ವಜನಿಕ ಹಿತಾಸಕ್ತಿಗಳ ನಡುವೆ ಎಲ್ಲೆಲ್ಲಿ ಸಂಘರ್ಷ ಇದೆಯೋ ಅಲ್ಲೆಲ್ಲಾ ಸಾರ್ವಜನಿಕ ಹಿತಾಸಕ್ತಿಯೇ ಮೇಲುಗೈ ಸಾಧಿಸಿದೆ ಎಂದು ಅದು ಅಭಿಪ್ರಾಯಪಟ್ಟಿದೆ. (ಒಮೆಶ್ ಸಿಂಗ್ ಮತ್ತು ಇತರರು ವಿ & ಸ್ಟೇಟ್ ಆಫ್ ಜೆ & ಕೆ ಮತ್ತು ಇತರರು).

High Court of Jammu & Kashmir

ಭೂಸ್ವಾಧೀನ ಪ್ರಕರಣಗಳಲ್ಲಿ ಸ್ವಾಧೀನ ಪ್ರಕ್ರಿಯೆಯು ದುರುದ್ದೇಶಗಳಿಂದ ಕಳಂಕಿತವಾಗದ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಸಾಂವಿಧಾನಿಕ ನ್ಯಾಯಾಲಯಗಳ ಸ್ಥಿರ ದೃಷ್ಟಿಕೋನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ರಾಜೇಶ್‌ ಬಿಂದಾಲ್‌ ಮತ್ತು ಜಾವೇದ್‌ ಇಕ್ಬಾಲ್‌ ವನಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪಿಎಂಜಿಎಸ್‌ವೈ ಯೋಜನೆಯಡಿ ಹೆವಾಗನ್- ಧನಮಾಸ್ತಾ ರಸ್ತೆ ನಿರ್ಮಾಣಕ್ಕಾಗಿ 2016ರಲ್ಲಿ ಭೂಸ್ವಾಧೀನ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ಅಪ್ರಜ್ಞಾಪೂರ್ವಕವಾಗಿ ಆಯುಧ ಹೊಂದುವುದು ಶಸ್ತ್ರಾಸ್ತ್ರ ಕಾಯಿದೆಗೆ ಒಳಪಡುವುದಿಲ್ಲ: ವಿದ್ಯಾರ್ಥಿ ವಿರುದ್ಧ ಪ್ರಕರಣ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ಇಪ್ಪತ್ತೈದು ಜೀವಂತ ಗುಂಡುಗಳನ್ನು‌ ಇಟ್ಟುಕೊಂಡು ಅಹ್ಮದಾಬಾದ್‌ ವಿಮಾನ ಏರಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿದ್ದ ಎಫ್‌ಐಆರ್‌ ಅನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಅಪ್ರಜ್ಞಾಪೂರ್ವಕವಾಗಿ ಆಯುಧಗಳನ್ನು ಹೊಂದುವುದು ಶಸ್ತ್ರಾಸ್ತ್ರ ಕಾಯಿದೆಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ವಾಯುಪಡೆಯ ನೇಮಕಾತಿಯ ಸಂದರ್ಶನದಲ್ಲಿ ಭಾಗಿಯಾಗಲು ಅರ್ಜಿದಾರರು ಅಹ್ಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ತಮ್ಮ ಮನೆಮಾಲೀಕರ ಪತ್ನಿಯಿಂದ ಲಗೇಜ್ ಬ್ಯಾಗ್ ಅನ್ನು ಅರ್ಜಿದಾರರು ಪಡೆದಿದ್ದರು. ಮನೆಮಾಲೀಕರು ನಿರ್ದಿಷ್ಟ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, ಲಗೇಜ್‌ ಬ್ಯಾಗ್‌ನಲ್ಲಿ ಇಟ್ಟಿದ್ದ ಗುಂಡುಗಳನ್ನು ಮರೆತಿದ್ದರು, ಈ ಬಗ್ಗೆ ವಿದ್ಯಾರ್ಥಿಗೆ ಮಾಹಿತಿ ಇರಲಿಲ್ಲ.