ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅಂಥವರು ತಮ್ಮ ಬೆಂಬಲಿಗರನ್ನು ಪ್ರಭಾವಿಸುವ ಮೂಲಕ ಸರಣಿ ಪ್ರತಿಕ್ರಿಯೆಗಳನ್ನು ಸೃಷ್ಟಿಸಬಲ್ಲರು ಎಂದು ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದೂರು ದಾಖಲಿಸಿರುವ ಕಾನೂನು ವಿದ್ಯಾರ್ಥಿ ತಮ್ಮ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಔರಂಗಬಾದ್ ಮೂಲದ 22 ವರ್ಷದ ಕಾನೂನು ವಿದ್ಯಾರ್ಥಿ ಶ್ರೀರಂಗ ಕಟ್ನೇಶ್ವರಕರ್ ಅವರು ಕಮ್ರಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮನವಿ ಹೂಡಿರುವವರ ಪೈಕಿ ಒಬ್ಬರಾಗಿದ್ದು, ಸುಪ್ರೀಂ ವಿರುದ್ಧದ ಕಮ್ರಾ ಟ್ವೀಟ್‌ಗಳು ಆಕ್ಷೇಪಣೀಯವಾಗಿದ್ದು, ಅವರ ವಿರುದ್ಧ ಪ್ರಕರಣ ಹೂಡಿದ್ದು ಸರಿಯಾಗಿದೆ ಎಂದಿದ್ದಾರೆ.
“ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕಮ್ರಾ ಅವರಂಥ ಕೀಬೋರ್ಡ್ (ಕಂಪ್ಯೂಟರ್ ಕೀಲಿಮಣೆ) ವಾರಿಯರ್‌ಗಳು ತಮ್ಮ ಬೆಂಬಲಿಗರ ಮನಸ್ಸನ್ನು ಪ್ರಭಾವಿಸುವ ಮೂಲಕ ಸರಣಿ ಪ್ರತಿಕ್ರಿಯೆಗಳನ್ನು ಸೃಷ್ಟಿಸಬಲ್ಲರು” ಎಂದು ತಮ್ಮ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. “ಕಮ್ರಾರ ಟ್ವೀಟ್‌ಗಳು ಆಕ್ಷೇಪಾರ್ಹ ಎಂಬುದನ್ನು ಸಾಮಾನ್ಯ ಮನುಷ್ಯನೂ ಹೇಳುತ್ತಾನೆ. ನ್ಯಾಯಾಂಗ ನಿಂದನೆ ದಾವೆ ಹೂಡಿರುವ ಅರ್ಜಿದಾರರೆಲ್ಲರೂ ಜವಾಬ್ದಾರಿಯುತ ಮತ್ತು ದೇಶದ ಕಾನೂನು ಪರಿಪಾಲಿಸುವ ನಾಗರಿಕರಾಗಿದ್ದು, ಅವರು ಕ್ರಿಮಿನಲ್ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಿರುವುದು ಸರಿಯಾಗಿದೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ಕಮ್ರಾ ನ್ಯಾಯಾಂಗವನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಕ್ಕೆ ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿದೆ.
ದುರುದ್ದೇಶದಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354 ಮತ್ತು 354ಎ ಹಾಗೂ ಇತರೆ ಕಾನೂನಿನ ಅಡಿ ಕ್ಷುಲ್ಲಕ ದೂರು ದಾಖಲಿಸಿ, ಸಂಧಾನದ ನಂತರ ಆ ದೂರುಗಳನ್ನು ಹಿಂಪಡೆಯಲು ಮುಂದಾದ ಅರ್ಜಿದಾರರ ವಿರುದ್ಧ ಕೆಂಡಾಮಂಡಲವಾಗಿರುವ ದೆಹಲಿ ಹೈಕೋರ್ಟ್ ಈಚೆಗೆ ಮನವಿದಾರರಿಗೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಇಂಥ ಸುಳ್ಳೂ ದೂರುಗಳ ವಿರುದ್ಧ ಕ್ರಮಕೈಗೊಳ್ಳುವ ಕಾಲ ಕೂಡಿ ಬಂದಿದೆ ಎಂದು ಖಾರವಾಗಿ ಹೇಳಿದೆ.
ಸುಳ್ಳು ಆರೋಪಗಳು ವ್ಯಕ್ತಿಯ ಘನತೆಯನ್ನು ನಾಶಪಡಿಸುವ ಸಾಧ್ಯತೆ ಇದ್ದು, ಅಂಥ ದೂರುದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. “ಐಪಿಸಿಯ ಸೆಕ್ಷನ್‌ಗಳಾದ 354, 354ಎ, 354ಬಿ, 354ಸಿ, 354ಡಿ ದೂರುಗಳು ಗಂಭೀರವಾದವು. ಇವುಗಳ ಅಡಿ ದೂರು ದಾಖಲಿಸಿದರೆ ಆರೋಪಿತನ ವರ್ಚಸ್ಸನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ. ಇದು ಕಾನೂನಿನ ದುರುಪಯೋಗವಾಗಿದೆ. ಐಪಿಸಿಯ ಸೆಕ್ಷನ್‌ಗಳಾದ 354, 354ಎ, 354ಬಿ, 354ಸಿ, 354ಡಿ ಅಡಿ ಕ್ಷುಲ್ಲಕ ದೂರು ದಾಖಲಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಸಮಯ ಬಂದಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಉದ್ಯಮಿ ಮನ್‌ಸುಖ್ ಹಿರನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆಯಲ್ಲಿ ಭಯೋತ್ಪಾದಕ ನಿಗ್ರಹ ದಳ ಎಫ್‌ಐಆರ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಸಲ್ಲಿಸಿದ್ದ ಮಧ್ಯಂತರ ರಕ್ಷಣೆ ಮನವಿಯನ್ನು ಥಾಣೆಯಲ್ಲಿರುವ ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದೆ. ಮುಂಬೈನ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಮುಂದೆ ಪತ್ತೆಯಾಗಿರುವ ಸ್ಫೋಟಕ ಹೊಂದಿದ್ದ ಎಸ್‌ಯುವಿಯು ಹಿರನ್ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.
ಅನಾಮಿಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 302, 201, 34 ಮತ್ತು 120ಬಿ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ತಮ್ಮ ವಿರುದ್ಧ ಪ್ರತಿಕಾರದ ನಡೆ ಅನುಸರಿಸಲಾಗುತ್ತಿದೆ. ಈ ಕುರಿತಾದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದರಲ್ಲಿ ವಾಜ್ ಭಾಗಿಯಾಗಿರುವ ಕುರಿತು ಮಾತುಗಳು ಹೊರಬರುತ್ತಿವೆ. ವಾಜ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ತಾವು ಅಪರಾಧಿ ಅಥವಾ ಮುಗ್ಧ ಎಂದು ನಿರ್ಧರಿಸುವುದು ತನಿಖಾ ಸಂಸ್ಥೆಗಳ ನಿರ್ಧಾರದ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎಂದು ವಾಜ್ ವಾದಿಸಿದ್ದಾರೆ. ಸಂವಿಧಾನದ 21ನೇ ವಿಧಿಯಡಿ ತಮಗೆ ದೊರೆತಿರುವ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿರುವುದಾಗಿ ಅವರು ತಿಳಿಸಿದ್ದರು. ಪ್ರಕರಣದ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಲಾಗಿದೆ.
ಸೌದಿ ಅರೇಬಿಯಾದಲ್ಲಿರುವ ಸಾವನ್ನಪ್ಪಿದ ತನ್ನ ಹಿಂದೂ ವಲಸಿಗ ಪತಿಯ ಕಳೇಬರ ಕೊಡಿಸುವಂತೆ ಕೋರಿ ಮೃತ ವ್ಯಕ್ತಿಯ ಪತ್ನಿಯೊಬ್ಬರು ದೆಹಲಿ ಹೈಕೋರ್ಟ್ ಕದ ತಟ್ಟಿದ್ದಾರೆ. ಪತಿಯು ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಾಘಾತದಿಂದ ಸಾವನ್ನಪ್ಪಿದ್ದರಿಂದ ಅವರ ಕಳೇಬರವನ್ನು ಸೌದಿ ಅರೇಬಿಯಾದ ಜಿಜಾನ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಪತಿಯ ಕಳೇಬರವನ್ನು ಭಾರತಕ್ಕೆ ಮರಳಿ ತರುವ ಸಂಬಂಧ ಎಲ್ಲಾ ರೀತಿಯ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿತ್ತು. ಆದರೆ, ಈ ವೇಳೆ ಅವರಿಗೆ ತನ್ನ ಪತಿಯ ಕಳೇಬರದ ಅಂತ್ಯಸಂಸ್ಕಾರವಾಗಿದೆ ಎಂಬ ವಿಚಾರ ತಿಳಿಯಿತು.
ಅಧಿಕೃತ ಭಾಷಾಂತರಕಾರರು ಸಾವನ್ನಪ್ಪಿದ ವ್ಯಕ್ತಿಯು ಮುಸ್ಲಿಂ ಸಮುದಾಯದವರು ಎಂದು ಮರಣ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದರಿಂದ ಪ್ರಮಾದವಾಗಿದೆ ಎಂದು ಭಾರತೀಯ ದೂತವಾಸದ ಅಧಿಕಾರಿಗಳು ಅರ್ಜಿದಾರೆಯಾದ ಮಹಿಳೆಗೆ ತಿಳಿಸಿದ್ದಾರೆ. ಇದಾದ ಬಳಿಕ ಅರ್ಜಿದಾರರು ಕನಿಷ್ಠ ಪಕ್ಷ ಪತಿಯ ಹೂಳಲಾದ ಕಳೇಬರದ ಅವಶೇಷಗಳನ್ನು ಕೊಡಿಸುವಂತೆ ಸ್ಥಳೀಯ ಆಡಳಿತವನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ವ್ಯಕ್ತಿ ಸಾವನ್ನಪ್ಪಿದ ಏಳು ವಾರಗಳು ಕಳೆದರೂ ಅಂತ್ಯಕ್ರಿಯೆ ವಿಧಿವಿಧಾನ ಪೂರ್ಣಗೊಳಿಸುವ ಸಂಬಂಧ ಭಾರತೀಯ ದೂತವಾಸ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ಆಕೆ ತಿಳಿಸಿದ್ದಾರೆ. ಅಧಿಕಾರಿಗಳ ನಿಷ್ಕ್ರಿಯತೆಯು ಕಾನೂನುಬಾಹಿರವಾಗಿದೆ ಎಂದು ಅವರು ವಾದಿಸಿದ್ದು, ಮೃತ ದೇಹ ಮರಳಿ ತರಲು ನಿರ್ದೇಶನ ನೀಡುವಂತೆ ಕೋರಿದ್ದಾರೆ. ಇದು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ. ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವ ಸಂಬಂಧ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದಾರೆ.