ಒಳಾಂಗಣ ವಿನ್ಯಾಸಕರರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಮನವಿಯ ವಿಚಾರಣೆಯನ್ನು 'ಆದ್ಯತೆʼಯ ಅರ್ಜಿಯಾಗಿ ಪಟ್ಟಿ ಮಾಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಈ ಹಿಂದೆ ರಜೆ ದಿನವಾದ ಶನಿವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡದ್ದಕ್ಕೆ ಸಮಾಜದ ವಿವಿಧ ವರ್ಗಗಳಿಂದ ಟೀಕೆಗಳು ವ್ಯಕ್ತವಾದವು ಎಂದು ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ತಿಳಿಸಿದೆ.
ಅರ್ನಾಬ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಲು ನ್ಯಾಯಾಲಯ ಸಮ್ಮತಿಸಿತಾದರೂ ಇದನ್ನು ʼಆದ್ಯತೆʼಯ ಪ್ರಕರಣವಾಗಿ ಪರಿಗಣಿಸಲು ನಿರಾಕರಿಸಿತು. ʼ ಈ ಹಿಂದೆ ಶನಿವಾರ ಈ ಪ್ರಕರಣದ ವಿಚಾರಣೆ ನಡೆಸಿದ್ದನ್ನು ಟೀಕಿಸಿ ನನಗೆ 500 ಕ್ಕೂ ಹೆಚ್ಚು ಸಂದೇಶಗಳು ಬಂದವು. ಹೀಗಾಗಿ ನಾವು ಯಾವುದೇ ಪ್ರಕರಣಕ್ಕೂ ಹೆಚ್ಚಿನ ಆದ್ಯತೆ ಅಥವಾ ಕಡಿಮೆ ಆದ್ಯತೆ ನೀಡುವುದನ್ನು ನಿಲ್ಲಿಸಿದ್ದೇವೆ,” ಎಂದು ನ್ಯಾ. ಶಿಂಧೆ ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಜಾಮೀನು ನೀಡಲು ಈ ಹಿಂದೆ ಹೈಕೋರ್ಟ್ ನಿರಾಕರಿಸಿತ್ತು. ನಂತರ ಅರ್ನಾಬ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿ ಪ್ರಸಕ್ತ ವಿಚಾರಣೆ ಕೊನೆಗೊಳ್ಳುವ ಅವಧಿಯವರೆಗೆ ಜಾಮೀನು ಪಡೆದುಕೊಂಡಿದ್ದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್ ಅವರ ಪುತ್ರ ಜಸ್ತಿ ನಾಗಭೂಷಣ್ ಅವರನ್ನು ಆಂಧ್ರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸರ್ಕಾರ ನೇಮಿಸಿದೆ. ಈ ಸಂಬಂಧ ಡಿಸೆಂಬರ್ 9ರಂದು ಕಾನೂನು ಇಲಾಖೆಯು ಅಧಿಸೂಚನೆ ಹೊರಡಿಸಿತ್ತು.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅಮರಾವತಿ ಭೂ ಹಗರಣ ಮತ್ತು ಹಲವು ವಿವಾದಾತ್ಮಕ ಪ್ರಕರಣಗಳನ್ನು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿರುವ ಸಂದರ್ಭದಲ್ಲಿ ನಾಗಭೂಷಣ್ ಅವರ ನೇಮಕಾತಿಯಾಗಿದೆ. ಆಂಧ್ರ ಪ್ರದೇಶದ ಹೈಕೋರ್ಟ್‌ನಲ್ಲಿ ನ್ಯಾಯಿಕ ಚಟುವಟಿಕೆಗಳನ್ನು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಎನ್ ವಿ ರಮಣ ಪ್ರಭಾವಿಸುತ್ತಿದ್ದಾರೆ ಎಂದು ಆರೋಪಿಸಿ ಜಗನ್ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು.
ರೋಶ್ನಿ ಭೂಹಗರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9ರಂದು ಸಲ್ಲಿಸಲಾಗಿರುವ ತೀರ್ಪು ಮರುಪರಿಶೀಲನಾ ಮನವಿಯ ಕುರಿತು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತೀರ್ಪು ನೀಡುವವರೆಗೆ ಮೇಲ್ಮನವಿಯ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ರೋಶ್ನಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಚಾರಣೆಗೆ ಆದೇಶಿಸಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.
ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಕಾನೂನು ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿರುವ ನಡುವೆಯೇ ಸ್ಪೈಸ್ ರೂಟ್ ಲೀಗಲ್ 2021ನೇ ಸಾಲಿನ ವಾರ್ಷಿಕ ವೇತನ ಪರಿಷ್ಕರಣೆ ಘೋಷಣೆ ಮಾಡಿದೆ. ಪರಿಷ್ಕೃತ ವೇತನ ಶ್ರೇಣಿಯ ಅನ್ವಯ ಹೊಸಬರಿಗೆ ವಾರ್ಷಿಕ 9.72 ಲಕ್ಷ ರೂಪಾಯಿ (ಅಸೋಸಿಯೇಟ್ 1), ಅನುಭವಿ ಮತ್ತು ಹಿರಿಯ ಅಸೋಸಿಯೇಟ್‌ಗಳಿಗೆ 50 ಲಕ್ಷ ರೂಪಾಯಿ (ವಾರ್ಷಿಕ ಬೋನಸ್ ಸೇರಿದಂತೆ) ವೇತನ ನಿಗದಿಯಾಗಿದೆ.
“ವೇತನ ಶ್ರೇಣಿಯಲ್ಲಿ ಇದು ಭಾರಿ ಸುಧಾರಣೆಯೇನಲ್ಲ, ಬದಲಿಗೆ ಇದು ವಾರ್ಷಿಕ ಪರಿಷ್ಕರಣೆಯಾಗಿದೆ. ದಕ್ಷಿಣ ಭಾಗದಲ್ಲಿ ಉದ್ಯಮ ವಿಸ್ತಾರಕ್ಕೆ ಒತ್ತು ನೀಡಿದ್ದು, ಅದರಲ್ಲಿ ನಾವು ನಿರೀಕ್ಷಿತ ಸಾಧನೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಕೀಲರೊಂದಿಗೆ ನಮಗೆ ದೊರೆತಿದ್ದನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಸ್ಪೈಸ್ ಲೀಗಲ್ ಸಹ ಸಂಸ್ಥಾಪಕ ಪ್ರವೀಣ್ ರಾಜು ಮತ್ತು ಮ್ಯಾಥ್ಯೂ ಚಾಕೊ ಹೇಳಿದ್ದಾರೆ. ಕೈತನ್ ಅಂಡ್ ಕಂಪನಿ ಈಚೆಗೆ ತನ್ನೆಲ್ಲಾ ವಕೀಲರಿಗೆ ಬೋನಸ್ ಘೋಷಿಸಿತ್ತು. ಇದಕ್ಕೂ ಮುನ್ನ ಸಿರಿಲ್ ಅಮರಚಂದ್ ಮಂಗಳದಾಸ್ ಮತ್ತು ಶಾರ್ದೂಲ್ ಅಮರಚಂದ್ ಮಂಗಳದಾಸ್ ತಮ್ಮೆಲ್ಲಾ ವಕೀಲರಿಗೆ ಬೋನಸ್ ಹಂಚಿಕೆ ಮಾಡಿತ್ತು.