ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 09-12-2020

>> ಡಿಜಿಟಲ್‌ ಕಂದರ: ಸರ್ಕಾರದಿಂದ ವಿವರಣೆ ಬಯಸಿದ ಅಲಾಹಾಬಾದ್‌ ಹೈಕೋರ್ಟ್‌ >> ಮತ್ತೆ ಲೋಕ್‌ ಅದಾಲತ್‌ >>ಎನ್‌ಸಿಎಲ್‌ಟಿ ಹಂಗಾಮಿ ಅಧ್ಯಕ್ಷರಾಗಿ ಬಿಎಸ್‌ವಿಪಿ ಕುಮಾರ್‌ ಮುಂದುವರಿಕೆ‌ >>ವಕೀಲೆಯರಿಗೆ ತರಬೇತಿ >> ಮರಾಠಾ ಮೀಸಲಾತಿ ಪ್ರಕರಣ

Bar & Bench

ವಿದ್ಯಾರ್ಥಿಗಳಿಗೆ ತರತಮದ ತಂತ್ರಜ್ಞಾನ: ಸರ್ಕಾರದಿಂದ ವಿವರಣೆ ಬಯಸಿದ ಅಲಾಹಾಬಾದ್‌ ಹೈಕೋರ್ಟ್

ಸಮಾಜದಲ್ಲಿ ತಾಂತ್ರಿಕ ಅಸಮತೋಲನ ಉಂಟಾಗಿರುವುದರಿಂದ ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಉಳ್ಳವರು ಮತ್ತು ಉಳ್ಳದವರ ನಡುವೆ ಡಿಜಿಟಲ್‌ ಕಂದರ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅಲಾಹಾಬಾದ್‌ ಹೈಕೋರ್ಟ್‌ ಈ ಅಸಮಾನತೆ ನಿವಾರಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಉತ್ತರಪ್ರದೇಶ ಸರ್ಕಾರದಿಂದ ವಿವರಣೆ ಕೋರಿದೆ.

Class Room

ಕೋವಿಡ್‌ ಸಂದರ್ಭದಲ್ಲಿ ಆಫ್‌ಲೈನ್‌ ಮತ್ತು ಆನ್‌ಲೈನ್‌ ಎಂಬ ತರತಮ ನಿವಾರಿಸಲು ಕೈಗೊಂಡ ಕ್ರಮಗಳು, ಆನ್‌ಲೈನ್‌ ಶಿಕ್ಷಣದ ಅಲಭ್ಯತೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಬಡವರಲ್ಲಿ ಉಂಟಾಗಿರುವ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅದು ಉತ್ತರ ಬಯಸಿದೆ. ಶಾಲೆಗಳನ್ನು ಯಾವಾಗ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಇನ್ನೂ ತಿಳಿಸಿಲ್ಲ ಎಂದು ಕೂಡ ಹೈಕೋರ್ಟ್‌ ಹೇಳಿದೆ. ನ್ಯಾ. ಅಜಿತ್‌ ಕುಮಾರ್‌ ಅವರಿದ್ದ ಪೀಠ "ರಾಜ್ಯದ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಉಂಟಾದ ಗಂಭೀರ ಸವಾಲು ಅರಿತು, ಉತ್ತರ ಪ್ರದೇಶ ಶಿಕ್ಷಣ ಮಹಾನಿರ್ದೇಶಕರು ಮತ್ತು ರಾಜ್ಯ ಮೂಲಭೂತ ಶಿಕ್ಷಣ ಮಂಡಳಿ ಕಾರ್ಯದರ್ಶಿ ಈ ನ್ಯಾಯಾಲಯದ ಮುಂದೆ ಹಾಜರಾಗಿ ಸರ್ಕಾರ ಶೈಕ್ಷಣಿಕ ಕ್ಷೇತ್ರದ ಆರಂಭಕ್ಕೆ ಮತ್ತು ಆಫ್‌ಲೈನ್‌ ಹಾಗೂ ಆನ್‌ಲೈನ್‌ ಮೂಲಕ ತರಗತಿ ಶಿಕ್ಷಣ ನೀಡಲು ಹಮ್ಮಿಕೊಂಡಿರುವ ಕ್ರಮಗಳನ್ನು ತಿಳಿಸಬೇಕು” ಎಂದು ಸೂಚಿಸಿದೆ. ಈ ಸಂಬಂಧ ದಿವ್ಯ ಗೋಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಮುಂದಿನ ತಿಂಗಳ ಮೂರನೇ ತಾರೀಖಿಗೆ ಪ್ರಕರಣವನ್ನು ಮುಂದೂಡಲಾಗಿದೆ.

ಡಿ. 19ರಂದು ರಾಜ್ಯದೆಲ್ಲೆಡೆ ನಡೆಯಲಿದೆ ಮೆಗಾ ಲೋಕ ಅದಾಲತ್‌

ಇದೇ ಡಿ. 19ರಂದು ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್‌ ನಡೆಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್/ವಿಡಿಯೋ ಕಾನ್ಫರೆನ್ಸ್/ಇ-ಮೇಲ್/ಎಸ್ಎಂಎಸ್ /ವಾಟ್ಸಾಪ್‌/ಎಲೆಕ್ಟ್ರಾನಿಕ್ ಮೋಡ್ /ಖುದ್ದಾಗಿ ಹಾಜರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದೆಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಜೊತೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಉಚ್ಛನ್ಯಾಯಾಲಯಗಳ ಕಾನೂನು ಸೇವಾ ಸಮಿತಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳನ್ನು ಅಥವಾ ಖಾಯಂ ಜನತಾ ನ್ಯಾಯಾಲಯಗಳನ್ನು ಆನ್‍ಲೈನ್/ವಿಡಿಯೋ ಕಾನ್ಫರೆನ್ಸ್/ಇ-ಮೇಲ್/ಎಸ್ಎಂಎಸ್ /ವಾಟ್ಸಾಪ್‌/ಎಲೆಕ್ಟ್ರಾನಿಕ್ ಮೋಡ್ /ಖುದ್ದಾಗಿ ಹಾಜರಾಗುವ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

LOk Adalat

ಹೆಚ್ಚಿನ ಮಾಹಿತಿಗೆ: ನ್ಯಾಯ ಸಂಯೋಗ, ಕಾನೂನು ನೆರವು ಘಟಕ (ಬಹುವಿಧ ಸೇವೆಗಳು - ಒಂದೇ ಸೂರಿನ ಅಡಿಯಲ್ಲಿ) ʼನ್ಯಾಯ ದೇಗುಲʼ, ಮೊದಲನೆ ಮಹಡಿ, ಹೆಚ್ ಸಿದ್ಧಯ್ಯ ರಸ್ತೆ, ಬೆಂಗಳೂರು-560027, ದೂರವಾಣಿ ಸಂಖ್ಯೆ: 080-22111730 : website : www.kslsa.kar.nic.in ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಸಹಾಯವಾಣಿ ಸಂಖ್ಯೆ: 1800-425-90900.

ಎನ್‌ಸಿಎಲ್‌ಟಿ ಹಂಗಾಮಿ ಅಧ್ಯಕ್ಷರಾಗಿ ಬಿ ಎಸ್ ‌ವಿ ಪ್ರಕಾಶ್‌ ಕುಮಾರ್‌ ಅವರನ್ನು ಮುಂದುವರೆಸುವಂತೆ ಸೂಚಿಸಿದ ಸುಪ್ರೀಂಕೋರ್ಟ್‌

ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸಾಮಾನ್ಯ ಅಧ್ಯಕ್ಷರು ನೇಮಕವಾಗುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಬಿ ಎಸ್‌ ವಿ ಪ್ರಕಾಶ್‌ ಕುಮಾರ್‌ ಮುಂದುವರೆಯಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಅವರ ಅವಧಿ ವಿಸ್ತರಣೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದಾಗಿ ಎನ್‌ಸಿಎಲ್‌ಟಿಯ ಕಾರ್ಯಗಳಿಗೆ ತೊಂದರೆಯಾಗಿದೆ ಎಂಬ ದೂರುಗಳು ಬಂದ ನಂತರ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಹಂಗಾಮಿ ಅಧ್ಯಕ್ಷರಾಗಿ ಕುಮಾರ್‌ ಅವರ ಕಾರ್ಯಾವಧಿ ಏಪ್ರಿಲ್‌ 5ಕ್ಕೆ ಮುಕ್ತಾಯಗೊಂಡಿತ್ತು. ನಂತರ ಕಾಲಕಾಲಕ್ಕೆ ಅವರ ಅಧಿಕಾರವನ್ನು ಸೀಮಿತ ಸಮಯಾವಕಾಶದವರೆಗೆ ವಿಸ್ತರಿಸಲಾಗಿತ್ತು.

NCLT

“ಹೀಗೆ ಮಾಡುವುದರಿಂದ ದಾವೆದಾರರ ಹಕ್ಕು ಮತ್ತು ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ. ವಿಳಂಬಿತ ಪ್ರಕ್ರಿಯೆ ನ್ಯಾಯ ವಿತರಣಾ ವ್ಯವಸ್ಥೆ ಮತ್ತು ಎನ್‌ಸಿಎಲ್‌ಟಿಯ ಸುಗಮ ಕಾರ್ಯ ನಿರ್ವಹಣೆಗೆ ತೊಂದರೆಯಾಗಲಿದೆ” ಎಂದು ನ್ಯಾಯಮಂಡಳಿಯ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಸಾಮಾನ್ಯ ಅಧ್ಯಕ್ಷರನ್ನು ಶಾಶ್ವತ ಆಧಾರದ ಮೇಲೆ ನೇಮಕ ಮಾಡಬೇಕು ಇಲ್ಲವೇ ಹಂಗಾಮಿ ಅಧ್ಯಕ್ಷರ ಕಾರ್ಯಾವಧಿಯ್ನು ಸಮಂಜಸ ಸಮಯದವರೆಗೆ ವಿಸ್ತರಿಸಬೇಕೆಂದು ಕೋರಲಾಗಿತ್ತು.

2015ರ ಮಕ್ಕಳ ನ್ಯಾಯ ಕಾಯಿದೆ ಕುರಿತು ಮಹಿಳಾ ವಕೀಲರಿಗೆ ತರಬೇತಿ

ಬೆಂಗಳೂರಿನಲ್ಲಿ ವಾಸವಾಗಿದ್ದು, ಉಚಿತ ಸೇವೆ ಮಾಡಲು ಮನಸ್ಸಿರುವ, ಕೆಲವೊಮ್ಮೆ ತೀರಾ ಕಡಿಮೆ ಶುಲ್ಕ ಪಡೆದು ಕೆಲಸ ಮಾಡಲು ಸಿದ್ಧ ಇರುವ, ಕನಿಷ್ಠ 5 ವರ್ಷ ಅನುಭವ ಇದ್ದು ಈಗಲೂ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ, ಮಹಿಳಾ ವಕೀಲರಿಗೆ 2015ರ ಮಕ್ಕಳ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯಿದೆ ಕುರಿತಂತೆ ತರಬೇತಿ ನೀಡಲು ಅಸ್ತಿತ್ವ ಲೀಗಲ್‌ ಸಂಸ್ಥೆ ಮುಂದಾಗಿದೆ.

Women advocate

ತರಬೇತಿ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅಸ್ತಿತ್ವ ಲೀಗಲ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ತರಬೇತಿ ಅವಧಿ ಒಂದು ದಿನ. ನೋಂದಣಿ ಶುಲ್ಕ: 200 ರೂಪಾಯಿ. ಆಸಕ್ತರು ಚಿಕ್ಕದಾದ ಪ್ರೊಫೈಲ್ ಅನ್ನು, ಮೊಬೈಲ್ ಸಂಖ್ಯೆ ಸಹಿತ astitvalegal@gmail.comಗೆ ಕಳಿಸಿಕೊಡಲು ಕೋರಲಾಗಿದೆ.

ಮರಾಠ ಮೀಸಲಾತಿ ಪ್ರಶ್ನಿಸಿ ಸಲ್ಲಿಸಿದ್ದ ಮನವಿಗಳನ್ನು ಜನವರಿ 25ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ಮರಾಠಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 2021ರ ಜನವರಿ 25ಕ್ಕೆ ಮುಂದೂಡಿದೆ.

Maratha Reservation, Supreme Court

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ್‌ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತಾ ಮತ್ತು ರವೀಂದ್ರ ಭಟ್‌ ಅವರಿದ್ದ ಸಾಂವಿಧಾನಿಕ ಪೀಠವು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಸಲಹೆ-ಸೂಚನೆ ನೀಡುವಂತೆ ಸೂಚಿಸಿತು. ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಜೆ ಲಕ್ಷ್ಮಣ ರಾವ್‌ ಪಾಟೀಲ್‌ ಸೇರಿದಂತೆ ಮತ್ತೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸಾಂವಿಧಾನಿಕ ಪೀಠ ನಡೆಸಿತು.