ಹಸಿರು ಪಟಾಕಿ ಯಾವುದೆಂದು ವ್ಯಾಖ್ಯಾನಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು ಅವುಗಳನ್ನು ಹೊರತುಪಡಿಸಿ ಉಳಿದ ಸುಡುಮದ್ದುಗಳನ್ನು ಸಿಡಿಸಲು ಮತ್ತು ಮಾರಾಟ ಮಾಡಲು ನಿಷೇಧ ಹೇರಿರುವುದು ನಿಷ್ಪರಿಣಾಮಕಾರಿ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ʼಸರ್ಕಾರದ ಆದೇಶಗಳು ಹಸಿರು ಪಟಾಕಿ ಯಾವುದೆಂದು ವ್ಯಾಖ್ಯಾನಿಸುವುದಿಲ್ಲ. ಯಾವುದು ಹಸಿರು ಪಟಾಕಿ ಎಂದು ನಿರ್ಧರಿಸಲು ರಾಜ್ಯ ಸರ್ಕಾರ ಎಲ್ಲರಿಗೂ ಪರವಾನಗಿ ನೀಡಿದೆ. ಇದನ್ನು ಹೇಗೆ ಜಾರಿಗೊಳಿಸಲಿದ್ದೀರಿ?ʼ ಎಂದು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರಶ್ನಿಸಿದರು.
ವಿಚಾರಣೆಯನ್ನು ಶುಕ್ರವಾರಕ್ಕೆ (ನ. 13) ಮುಂದೂಡಲಾಗಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ವಿಷ್ಣು ಬಿ ಆಲಂಪಳ್ಳಿ ಪರವಾಗಿ ವಕೀಲ ಬಿ ಕೆ ನರೇಂದ್ರಬಾಬು ಅವರು ವಾದ ಮಂಡಿಸಿದರು.
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ತಲೋಜಾ ಜೈಲಿನಲ್ಲಿರುವ ಕ್ರಾಂತಿಕಾರಿ ಕವಿ, ಸಾಮಾಜಿಕ ಹೋರಾಟಗಾರ ಡಾ. ವರವರ ರಾವ್ ಅವರ ಆರೋಗ್ಯ ಸ್ಥಿತಿ ವಿಡಿಯೋ ಮುಖೇನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಬಾಂಬೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಹಿಂದೆ ವರವರ ರಾವ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದ ನಾನಾವತಿ ಆಸ್ಪತ್ರೆಯ ವೈದ್ಯರನ್ನು ಸಾಧ್ಯವಾದರೆ ಒಳಗೊಳ್ಳುವಂತೆ ಸೂಚಿಸಿದ್ದು, ವಿಡಿಯೋ ಮೂಲಕ ಇಂದೇ ಅವರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. “ವಿಡಿಯೋ ಮೂಲಕ ಆರೋಗ್ಯ ತಪಾಸಣೆ ನಡೆಸಲು ಆಗುವುದಿಲ್ಲ ಎಂದು ವೈದ್ಯರ ತಂಡ ಹೇಳಿದರೆ ಜೈಲು ಅಧಿಕಾರಿಗಳ ಜೊತೆ ಸಮಾಲೋಚಿಸಿ ತಲೋಜಾ ಜೈಲಿಗೆ ಭೇಟಿ ನೀಡಿ ಅವರ ಆರೋಗ್ಯ ಪರೀಕ್ಷೆ ನಡೆಸಬೇಕು” ಎಂದು ಪೀಠ ಹೇಳಿದೆ.
ಹದಿನೆಂಟು ವಿಷಯಗಳನ್ನು ಬಾಕಿ ಉಳಿಸಿ ಕೊಂಡಿದ್ದ ವಿದ್ಯಾರ್ಥಿಗಾಗಿ ವಿಶೇಷ ಮರು ಪರೀಕ್ಷೆ ನಡೆಸುವಂತೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಐಯು) ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.
ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು “…ಅಷ್ಟಕ್ಕೂ ನಮ್ಮ ದೇಶದಲ್ಲಿ ಬಡತನ ಪಾಪವಲ್ಲ ಎಂದ ಮೇಲೆ ಕಡಿಮೆ ಬುದ್ದಿವಂತಿಕೆ ಹೊಂದಿರುವುದೂ ಪಾಪವಾಗದು; ಇತರರಿಗೆ ಸಂದರ್ಭೋಚಿತವಾಗಿ ಅನುಕೂಲ ಕಲ್ಪಿಸಲು ಸೃಷ್ಟಿಸಲಾಗಿರುವ ಅವಕಾಶವನ್ನು ನಿರಾಕರಿಸುವುದು ತಾರತಮ್ಯ ಮತ್ತು ನಿರಂಕುಶದ ನಡೆಯಾಗಿದೆ; ಇದು ನ್ಯಾಯದಾನ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವುದಲ್ಲದೇ ತುಳಿತಕ್ಕೊಳಗಾದವರಿಗೆ ನೋವುಂಟು ಮಾಡುತ್ತದೆ” ಎಂದಿದೆ. ಹಲವು ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಬಿಎ ಎಲ್‌ಎಲ್‌ಬಿ ಕೋರ್ಸ್‌ನ ಮೂರನೇ ವರ್ಷದಲ್ಲಿ ಉಳಿಸಲು ಎನ್‌ಎಲ್‌ಎಸ್‌ಐಯು ತೀರ್ಮಾನಿಸಿತ್ತು, ಇದನ್ನು ಪ್ರಶ್ನಿಸಿ 2016ರ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಯಾದ ಅರ್ಜಿದಾರ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
ರಾಷ್ಟ್ರೀಯ ಕೆಡೆಟ್ ಕೋರ್ ಗೆ ಮಹಿಳೆ ಮತ್ತು ಪುರುಷರು ಮಾತ್ರ ಅರ್ಹರು, ತೃತೀಯ ಲಿಂಗದ ವ್ಯಕ್ತಿ ಅರ್ಹರಲ್ಲ ಎಂಬ ನಿಲುವು ತಳೆದಿದ್ದ ಕೇಂದ್ರ ಸರ್ಕಾರದ ನಿಲುವಿಗೆ ಕೇರಳ ಹೈಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ನಿಲುವನ್ನು ಕೇರಳ ತೃತೀಯ ಲಿಂಗಿಗಳ ಕುರಿತಾದ ನೀತಿ ಹಾಗೂ ಸಂಬಂಧಿತ ನಿಯಮಗಳಡಿ ಒಪ್ಪಲಾಗದು ಎಂದು ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ರಾಷ್ಟ್ರೀಯ ಕೆಡೆಟ್ ಕೋರ್ ಕಾಯಿದೆ-1948ರ ಸೆಕ್ಷನ್ 6ರಲ್ಲಿ ಕೇವಲ ಮಹಿಳೆ ಮತ್ತು ಪುರುಷರು ಎನ್‌ಸಿಸಿ ಕೆಡೆಟ್‌ಗಳಾಗಿ ನೋಂದಣಿ ಮಾಡಿಸಿಕೊಳ್ಳಲು ಮಾತ್ರ ಅವಕಾಶ ಮಾಡಿಕೊಟ್ಟಿರುವುದನ್ನು ತೃತೀಯ ಲಿಂಗಿ ಮಹಿಳೆಯೊಬ್ಬರು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಪೀಠವು “ವ್ಯಕ್ತಿಯೊಬ್ಬರು ತೃತೀಯ ಲಿಂಗಿ ಎಂದ ಮಾತ್ರಕ್ಕೆ ಆಕೆಗೆ ಶಾಸನಬದ್ಧವಾದ ಹಕ್ಕನ್ನು ನಿರಾಕರಿಸಲಾಗದು” ಎಂದು ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದ್ದು, ಎಲ್ಲಾ ಎಚ್ಚರಿಕೆಗಳನ್ನೂ ಎಎಪಿ ನೇತೃತ್ವದ ಸರ್ಕಾರ ಗಾಳಿಗೆ ತೂರಿದೆ ಎಂದು ದೆಹಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಜನರ ಓಡಾಟಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಸಡಿಲತೆ ನೀಡಿರುವುದನ್ನು ಪರಿಗಣಿಸಿರುವ ನ್ಯಾಯಾಲಯವು ವಿವಾಹ ಕಾರ್ಯಕ್ರಮದಲ್ಲಿ 200 ಮಂದಿಗೆ ಭಾಗವಹಿಸಲು ಅವಕಾಶ ನೀಡಿರುವುದು, ಸಾರ್ವಜನಿಕ ಸಾರಿಗೆಯಲ್ಲಿ ಜನರನ್ನು ಭರ್ತಿಯಾಗಿ ತುಂಬಿಕೊಳ್ಳುವುದನ್ನು ಗಮನಿಸಿದೆ. “..ಇಂಥ ಗಂಭೀರ ಸ್ಥಿತಿಯಲ್ಲಿಯೂ ಸಾರ್ವಜನಿಕರ ಓಡಾಟಕ್ಕೆ ಸಂಬಂಧಿಸದಂತೆ ದೆಹಲಿ ಸರ್ಕಾರವು ನಿಯಮಗಳ ಸಡಿಲಿಕೆಯನ್ನು ಮುಂದುವರಿಸಿದೆ… ಹಬ್ಬದ ಸಂದರ್ಭದಲ್ಲಿ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿರುವುದು ಗಂಭೀರ ಸಂಗತಿಯಾಗಿದೆ. ನಿರ್ಬಂಧಿಸಲಾಗದಷ್ಟು ಜನರು ಹೊರಗಿದ್ದಾರೆ. ಇದು ಸಾಂಕ್ರಾಮಿಕ ರೋಗ ಹರಡುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ” ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.