ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಸುಗ್ರೀವಾಜ್ಞೆ- 2020 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಎಸ್ ಎಸ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ. ರೈತರು ಉಳುಮೆಗಾಗಿ ತಮ್ಮ ಜಾನುವಾರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋದರೂ ದಂಡ ವಿಧಿಸುವ ನಿಬಂಧನೆಯನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಲಾಗಿದೆ ಎಂದು ಅರ್ಜಿದಾರ ಮೊಹಮ್ಮದ್ ಆರೀಫ್ ಜಮೀಲ್ ಅವರು ಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡುವಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೀಠವನ್ನು ಕೋರಿದರು.
“ಆಹಾರವನ್ನು (ಶಾಖಾಹಾರ ಅಥವಾ ಮಾಂಸಾಹಾರ) ಆಯ್ಕೆ ಮಾಡಿಕೊಳ್ಳುವ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ, ಆತ್ಮಸಾಕ್ಷಿ ಮತ್ತು ಖಾಸಗಿತನದ ಹಕ್ಕಿನ ಭಾಗವಾಗಿದೆ. ಪ್ರಾಣಿವಧೆಗೆ ನಿಷೇಧ ಹೇರುವ ಮೂಲಕ ಆಹಾರಕ್ಕೆ ಅದನ್ನು ಉಪಯೋಗಿಸದಂತೆ ನಾಗರಿಕರನ್ನು ತಡೆಯುವುದು ಸಂವಿಧಾನದ 21ನೇ ವಿಧಿಯಡಿ ಕಲ್ಪಿಸಲಾಗಿರುವ ಆಹಾರ, ಖಾಸಗಿತನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಲಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ. ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಸುಗ್ರೀವಾಜ್ಞೆಗೆ ರಾಜ್ಯಪಾಲರು ಜನವರಿ 5ರಂದು ಅಂಕಿತ ಹಾಕಿದ್ದರು.
ಬೇರೆ ಸ್ಥಳದಲ್ಲಿ ನೆಲೆಸಿರುವ ಸಹೋದ್ಯೋಗಿಗೆ ಕಚೇರಿ ಅವಧಿಯ ನಂತರ ಡಿಜಿಟಲ್ ವೇದಿಕೆಯ ಮೂಲಕ ಅಸಮಂಜಸ ಸಂದೇಶ ಕಳುಹಿಸುವುದೂ ಸಹ ಲೈಂಗಿಕ ಕಿರುಕುಳಕ್ಕೆ ಸಮ ಎಂದು ಸೋಮವಾರ ರಾಜಸ್ಥಾನ ಹೈಕೋರ್ಟ್ ಹೇಳಿದೆ. ದೂರುದಾರರು ಮತ್ತು ಆರೋಪಿಯು ಬೇರೆಬೇರೆ ರಾಜ್ಯಗಳಲ್ಲಿರುವುದರಿಂದ ಇದು ಕಿರುಕುಳವಲ್ಲ ಎಂದು ಆರೋಪವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರ ನೇತೃತ್ವದ ಪೀಠ ವಜಾಗೊಳಿಸಿದೆ.
ಬೇರೆ ರಾಜ್ಯದಲ್ಲಿ ಉದ್ಯೋಗದಲ್ಲಿರುವ ಮಹಿಳೆಗೆ ಕರ್ತವ್ಯದ ಅವಧಿಯ ಬಳಿಕವೂ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪ ಬಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿಯ ಮೇಲಿತ್ತು. ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು - ಉದ್ಯೋಗಿಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಂತ್ರಣ – 1976 ರ ಪ್ರಕಾರ ಕಿರುಕುಳವು ಕರ್ತವ್ಯದ ಸ್ಥಳದಲ್ಲಿ ಸಂಭವಿಸಿದ್ದರೆ ಮಾತ್ರ ತನಿಖೆ ನಡೆಸಬಹುದಾಗಿದೆ. ಕರ್ತವ್ಯದ ಸ್ಥಳದಲ್ಲಿ ಅಂಥ ಘಟನೆ ನಡೆದಿಲ್ಲ ಎಂದು ಆರೋಪಿ ವಾದಿಸಿದ್ದರು. ಆದರೆ, ಆರೋಪಿಯ ವಾದವನ್ನು ವಜಾಗೊಳಿಸಿರುವ ಪೀಠವು “ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಈ ಹಿಂದೆ ಒಂದೇ ಶಾಖೆಯಲ್ಲಿ ಕೆಲಸ ಮಾಡಿ, ಬಳಿಕ ಬೇರೆ ರಾಜ್ಯದಲ್ಲಿರುವ ಶಾಖೆಗೆ ವರ್ಗಾವಣೆಗೊಂಡಿದ್ದರೂ ಅದನ್ನು ಡಿಜಿಟಲ್ ವೇದಿಕೆಯಲ್ಲಿ ಒಂದೇ ಕರ್ತವ್ಯದ ಸ್ಥಳ ಎಂದು ಪರಿಗಣಿಸಬೇಕು. ಸಿಬ್ಬಂದಿಯೊಬ್ಬರು ಜೈಪುರದಲ್ಲಿ ನಿಯೋಜನೆಗೊಂಡಿದ್ದರೂ ಡಿಜಿಟಲ್ ವೇದಿಕೆಯ ಮೂಲಕ ಬೇರೊಂದು ರಾಜ್ಯದಲ್ಲಿ ನಿಯೋಜನೆಗೊಂಡಿರುವ ಮಹಿಳೆಗೆ ಕಿರುಕುಳ ನೀಡುವುದು ಕೂಡ ಒಂದೇ ಸಾಮಾನ್ಯ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ ವ್ಯಾಪ್ತಿಗೇ ಬರುತ್ತದೆ” ಎಂದು ಹೇಳಿದೆ.