ಬಲವಂತದ ಬಾಲಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಸಾಗಣೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಧೋರಣೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದು ಮುಂದಿನ ವಿಚಾರಣೆ ನಿಗದಿಯಾಗಿರುವ ಜೂನ್ 18ರಂದು ಬೆಂಗಳೂರು ಪೊಲೀಸ್ ಕಮಿಷನರ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೆಂದು ಸೂಚನೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ. ನಗರದ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಮಕ್ಕಳು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಿಷೇಧಿಸಲು ಕೋರಿ ʼಲೆಟ್ಜ್‌ಕಿಟ್ʼ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಒಂದು ಹಂತದಲ್ಲಿ ನ್ಯಾಯಾಲಯ, "ಪೊಲೀಸರು ಸಭೆಗಳನ್ನು ಕರೆಯುವುದರಲ್ಲಿಯೇ ಮಗ್ನರಾಗಿರುತ್ತಾರೋ ಅಥವಾ ಎಫ್ಐಆರ್ ದಾಖಲಿಸಿಕೊಳ್ಳುತ್ತಾರೋ?" ಎಂದು ಪ್ರಶ್ನಿಸಿತು.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದರೂ ದೆಹಲಿಯ ಕಡ್‌ಕಡ್‌ಡೂಮಾ ನ್ಯಾಯಾಲಯ ಅವರನ್ನು ತಕ್ಷಣವೇ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಜೂನ್ 16ರಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ದೆಹಲಿ ಪೊಲೀಸರು ಪರಿಶೀಲನಾ ವರದಿ ಸಲ್ಲಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಿವಿಂದರ್ ಬೇಡಿ ತಿಳಿಸಿದ್ದಾರೆ.
ಹೈಕೋರ್ಟ್‌ನಿಂದ ಜಾಮೀನು ದೊರೆತ ಬೆನ್ನಲ್ಲೇ ಇಬ್ಬರೂ ಹೋರಾಟಗಾರರ ಬಿಡುಗಡೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದರು. ಮರುದಿನ ಪರಿಶೀಲನಾ ವರದಿಯನ್ನು ಕೇಳಿರುವುದರಿಂದ ಮಂಗಳವಾರವೇ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿತು.
ಕೋವಿಡ್ ನಿಯಂತ್ರಣ ಕ್ರಮಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇದೇ ಜುಲೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ಬರೆಯಲು ವಿಫಲವಾಗುವ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸಲು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಜುಲೈನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪರೀಕ್ಷೆಯನ್ನು ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ನಾವು ಕೋರುತ್ತಿಲ್ಲ ಎಂದು ಸ್ಪಷ್ಟವಾಗಿ ಸಾರ್ವಜನಿಕ ಹಿತಾಸಕ್ತಿ ಮನವಿಯ ರೂಪದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ವಕೀಲರಾದ ದಿವ್ಯಾಂಶ್ ತಿವಾರಿ ಮತ್ತು ಹಾರ್ದಿಕ್ ಗೌತಮ್ ವಿವರಿಸಿದ್ದಾರೆ.