ಕಳೆದ ವರ್ಷ ರಾಜ್ಯ ಸರ್ಕಾರವು ಅವಧಿಪೂರ್ವವಾಗಿ ತಮ್ಮನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ ಶರತ್ ಅವರು ಶುಕ್ರವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ವೇಳೆ, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಸರ್ಕಾರವೂ ಕೂಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠವು ಶರತ್ ಅವರ ಅರ್ಜಿಯ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ಹಾಗೂ ಎಲ್ಲಾ ಅಧಿಕಾರಿಗಳು ಕೋವಿಡ್ ನಿರ್ವಹಣೆಯಲ್ಲಿ ತೊಡಗಿರುವುದರಿಂದ ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶಬೇಕಿದೆ ಎಂದು ಸರ್ಕಾರ ಪೀಠಕ್ಕೆ ಮನವಿ ಮಾಡಿತು. ಇದಕ್ಕೆ ಒಪ್ಪದ ನ್ಯಾಯಾಲಯವು ಜೂನ್ ೭ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದ ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ 1,128 ವಕೀಲರಿಗೆ ರೂ. 1.69 ಕೋಟಿ ಪರಿಹಾರವನ್ನು ಮೂರು ಹಂತಗಳಲ್ಲಿ ರಾಜ್ಯ ವಕೀಲರ ಪರಿಷತ್ ಬಿಡುಗಡೆ ಮಾಡಿದೆ (ಕೆಎಸ್‌ಬಿಸಿ) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೊನಾ ಸೋಂಕಿಗೆ ತುತ್ತಾಗಿ ಪ್ರತ್ಯೇಕವಾಸಕ್ಕೆ ಒಳಗಾಗಿದ್ದ 755 ವಕೀಲರಿಗೆ ತಲಾ ರೂ. 10 ಸಾವಿರದಂತೆ 75.5 ಲಕ್ಷ ಹಂಚಿಕೆ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ವಕೀಲರಿಗೆ ತಲಾ ರೂ. 25 ಸಾವಿರದಂತೆ 373 ಮಂದಿಗೆ ರೂ. 93.25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಕೆಎಸ್‌ಬಿಸಿ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಇ-ಪಾಸ್ ಸೇವೆಯ ಮೂಲಕ ಹಿಮಾಚಲ ಪ್ರದೇಶಕ್ಕೆ ಪ್ರವೇಶಿಸಲು ಅಲ್ಲಿನ ಸರ್ಕಾರ ವ್ಯವಸ್ಥೆ ಮಾಡಿತ್ತು. ಈ ಸೇವೆಯಲ್ಲಿನ ಅಕ್ರಮವನ್ನು ಬಯಲುಗೊಳಿಸಿದ್ದ ಪತ್ರಕರ್ತ ಅಮನ್‌ಕುಮಾರ್ ಭಾರದ್ವಾಜ್ ಅವರ ಬಂಧನಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸುದ್ದಿ ಪ್ರಸಾರವಾದ ಸಂಜೆಯೇ ಭಾರದ್ವಾಜ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಜಯ್ ಮೋಹನ್ ಗೋಯೆಲ್ ನೇತೃತ್ವದ ಏಕಸದಸ್ಯ ಪೀಠವು ತಡೆ ನೀಡಿ ಆದೇಶಿಸಿದೆ
ತನ್ನದೇ ಆಧಾರ್ ಕಾರ್ಡ್ ಬಳಸಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಇ-ಪಾಸ್‌ಗಳನ್ನು ಪತ್ರಕರ್ತ ಭಾರದ್ವಾಜ್ ಪಡೆದಿದ್ದರು. ಯಾವುದೇ ತೆರನಾದ ಪರಿಶೀಲನೆ ನಡೆಸದೇ ಭಾರದ್ವಾಜ್‌ಗೆ ಪಾಸ್ ನೀಡಿದ್ದು, ಅವರಲ್ಲಿ ಆಶ್ವರ್ಯ ಉಂಟು ಮಾಡಿತ್ತು.
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಳಿಕ ಯಾರಿಗೆ ಪುನಾ ತಮ್ಮ ಮನೆಗೆ ತೆರಳದಂತೆ ತಡೆಯಲಾಗುತ್ತಿದೆಯೋ ಅವರು ಪಶ್ಚಿಮ ಬಂಗಾಳ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ (ಡಬ್ಲುಬಿಎಲ್‌ಎಸ್‌ಎ) ದೂರು ದಾಖಲಿಸಲು ಸ್ವತಂತ್ರರಾಗಿದ್ದಾರೆ ಎಂದು ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಹೇಳಿದೆ.
ಇಮೇಲ್ ಮೂಲಕ ದೂರು ನೀಡಬಹುದಾಗಿದ್ದು, ಅದನ್ನು ಆಧರಿಸಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಲಿದ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ, ಹರೀಶ್ ಟಂಡನ್, ಸೌಮೇನ ಸೇನ್ ಮತ್ತು ಸುಬ್ರತಾ ತಾಲೂಕ್ದಾರ್ ಅವರಿದ್ದ ಪಂಚ ಸದಸ್ಯರ ಪೀಠ ಆದೇಶಿಸಿದೆ.