ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-6-2021

>> ಡಿಸಿಪಿ ಸಲಹೆಗೆ ಹೈಕೋರ್ಟ್‌ ದಿಗಿಲು >> ಇ ಕಾಮರ್ಸ್‌ ದೈತ್ಯರ ಅರ್ಜಿ ನಾಳೆ ವಿಚಾರಣೆ >> ʼಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ಕೊಡಿಸಿʼ >> ನಟ ಕಮಲ್‌ ವಿರುದ್ಧದ ಪ್ರಕರಣ ವಜಾ >> ನೇರ ಕಲಾಪ ಪ್ರಕರಣ >> ಆನ್‌ಲೈನ್‌ ಜೂಜು ನಿಷೇಧಕ್ಕೆ ಮನವಿ

Bar & Bench

ಶಬ್ದ ಮಾಲಿನ್ಯ ನಿಮಯಗಳ ಮರುಪರಿಶೀಲನೆ ಅಗತ್ಯ ಎಂದ ಡಿಸಿಪಿ ಸಲಹೆಗೆ ಕರ್ನಾಟಕ ಹೈಕೋರ್ಟ್‌ ದಿಗಿಲು

ಶಬ್ದಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿರುವ ಧಾರ್ಮಿಕ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಸರ್ಕಾರದ ವಿರುದ್ಧ ಕಿಡಿಕಾರಿದೆ. ಅನುಮತಿ ಪಡೆದು ಅಥವಾ ಪಡೆಯದೇ ಶಬ್ದಮಾಲಿನ್ಯ ಉಂಟು ಮಾಡುವ ಸಾಧನ ಬಳಸುತ್ತಿರುವ ಬಗ್ಗೆ ಸರ್ಕಾರ ಯಾವುದೇ ಪರಿಶೀಲನೆ ನಡೆಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

High Court of Karnataka

“ಶಬ್ದ ಮಾಲಿನ್ಯ ನಿಯಮಗಳ ಅಡಿ ಧಾರ್ಮಿಕ ಕೇಂದ್ರಗಳಲ್ಲಿ ಕಾನೂನುಬಾಹಿರವಾಗಿ ಅಪಾರ ಶಬ್ದ ಉಂಟುಮಾಡುವ ಸಾಧನಗಳನ್ನು ಬಳಸುತ್ತಿರುವ ಬಗ್ಗೆ ದೂರು ಸ್ವೀಕಾರವಾಗಿದ್ದರೂ ಅದನ್ನು ಅನುಮತಿ ಪಡೆದು ಅಥವಾ ಪಡೆಯದೆ ಬಳಸಲಾಗಿದೆಯೇ ಎಂಬದನ್ನು ಪರಿಶೀಲಿಸಿಲ್ಲ. ಕಾನೂನುಬಾಹಿರವಾಗಿ ಶಬ್ದಕಾರಕ ಉಪಕರಣಗಳನ್ನು ಬಳಸಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದರೂ ಅವರ ವಿರುದ್ಧ ಪರಿಸರ ಸಂರಕ್ಷಣೆ ಕಾಯಿದೆ ಸೆಕ್ಷನ್‌ 15ರ ಅಡಿ ಶಿಕ್ಷಾರ್ಹ ಅಪರಾಧ ದಾಖಲಿಸದೆ ಕೈಬಿಡಲಾಗಿದೆ” ಎಂದು ಪೀಠ ಹೇಳಿದೆ. ಇದೇ ವೇಳೆ ಪೊಲೀಸರು ಕ್ರಮಕೈಗೊಳ್ಳದೆ ಇರುವುದರಲ್ಲಿ ಯಾವುದೇ ತಪ್ಪಿಲ್ಲ, ಶಬ್ದ ಮಾಲಿನ್ಯ ನಿಯಮಗಳನ್ನು ಮರುಪರಿಶೀಲಿಸಬೇಕಿದೆ ಎಂದು ಡಿಸಿಪಿಯೊಬ್ಬರು ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವುದಕ್ಕೆ ಅದು ಆಘಾತ ವ್ಯಕ್ತಪಡಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಾಳೆ

‌ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಮೆಜಾನ್, ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮೇಲ್ಮನವಿ ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ತನಿಖೆ ಪ್ರಶ್ನಿಸಿ ತಾವು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಏಕಸದಸ್ಯ ಪೀಠದ ಆದೇಶದ ವಿರುದ್ಧ ಇ ಕಾಮರ್ಸ್‌ ದೈತ್ಯ ಸಂಸ್ಥೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಎರಡು ಮೇಲ್ಮನವಿ ಸಲ್ಲಿಸಿವೆ. ಈ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮಾ ಮತ್ತು ನಟರಾಜ್‌ ರಂಗಸ್ವಾಮಿ ನೇತೃತ್ವದ ವಿಭಾಗೀಯ ಪೀಠ ನಡೆಸುವ ಸಾಧ್ಯತೆ ಇದೆ.

Amazon, Flipkart and Karnataka HC

“ಏಕಸದಸ್ಯ ಪೀಠದ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಯಾವುದೇ ಸಕಾರಣಗಳನ್ನು ನೀಡಿಲ್ಲ. ರಿಟ್‌ ಮನವಿಯಲ್ಲಿ ಮೇಲ್ಮನವಿದಾರರು ಎತ್ತಿದ ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪಿಸಿಲ್ಲ” ಎಂಬಂತಹ ಅಂಶಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.

ನಟ ಕಮಲ್‌ ಹಾಸನ್‌ ವಿರುದ್ಧದ ಪ್ರಕರಣ ವಜಾ ಮಾಡಿದ ಮದ್ರಾಸ್‌ ಹೈಕೋರ್ಟ್‌

ಸಂದರ್ಶನವೊಂದರಲ್ಲಿ ʼಮಹಾಭಾರತʼವನ್ನು ಉದಾಹರಿಸಿದ್ದಕ್ಕೆ ಸಂಬಂಧಿಸಿದಂತೆ ಪಂಚ ಭಾಷಾ ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ. ಕಮಲ್‌ ಹಾಸನ್‌ ಹೇಳಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಅಂಶಗಳಿಲ್ಲ. ವಿಮರ್ಶೆಯು ಮುಕ್ತ ಸಮಾಜದ ಭಾಗವಾಗಿದೆ ಎಂದು ನ್ಯಾಯಮೂರ್ತಿ ಜಿ ಇಳಂಗೋವನ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅದರಲ್ಲಿಯೂ ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗ ಕಮಲ್‌ ದೇಶದ ಮಹಾಕಾವ್ಯವನ್ನು ಉಲ್ಲೇಖಿಸಿದ್ದರು.

Kamal Haasan

“...ಸಾರ್ವಜನಿಕ ವೇದಿಕೆಗಳಲ್ಲಿ, ಮನೆಗಳಲ್ಲಿ ಪ್ರತಿನಿತ್ಯ, ಸಾಹಿತ್ಯ, ಮಹಾಕಾವ್ಯಗಳ ಘಟನೆಗಳ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ಕಾಣುತ್ತೇವೆ. ಇದರಲ್ಲಿ ಹೋಲಿಕೆಗಳನ್ನು ನೀಡುವುದು ಬಹುತೇಕ ಸಾಮಾನ್ಯವಾಗಿದೆ. ಹೋಲಿಕೆಗಳನ್ನು ಗುರುತಿಸುವುದು ಮತ್ತು ಪ್ರತಿಕ್ರಿಯಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಹೀಗಾಗಿಯೇ, ಕಲೆ, ಸಾಹಿತ್ಯ, ಲಲಿತ ಕಲೆ ವಿಕಸಿತವಾಗಿವೆ. ಒಬ್ಬರಿಗೆ ತಪ್ಪಾಗಿ ಕಂಡ ಮಾತ್ರಕ್ಕೆ ಮತ್ತೊಬ್ಬರ ಆಲೋಚನಾ ಪ್ರಕ್ರಿಯೆ ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ. ಒಬ್ಬರ ದೃಷ್ಟಿಯಲ್ಲಿ ತಪ್ಪಾಗಿ ಕಂಡಿದ್ದು, ಮತ್ತೊಬ್ಬರ ದೃಷ್ಟಿಯಲ್ಲಿ ಸರಿ ಇರಬಹುದು. ಆದರೆ, ಅದಕ್ಕಾಗಿ ಇನ್ನೊಬ್ಬರು ಕ್ರಮ ಕೈಗೊಳ್ಳುವ ಯಾವುದೇ ಹಕ್ಕನ್ನು ಅದು ನೀಡುವುದಿಲ್ಲ. ಅದರಲ್ಲೂ ಕ್ರಿಮಿನಲ್‌ ವಿಚಾರಣೆಗೆ ಅವಕಾಶ ಒದಗಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ಒದಗಿಸುವಂತೆ ಕೋರಿ ಕೇರಳ ಹೈಕೋರ್ಟ್ ಮೊರೆ ಹೋದ ಕಾಂಗ್ರೆಸ್‌ ಸಂಸದರು

ಲಕ್ಷದ್ವೀಪ ಪ್ರವೇಶಿಸಲು ತಮಗೆ ಅನುಮತಿ ನೀಡುವಂತೆ ದ್ವೀಪದ ಆಡಳಿತಕ್ಕೆ ನಿರ್ದೇಶಿಸಬೇಕೆಂದು ಕೋರಿ ಕೇರಳದ ಇಬ್ಬರು ಸಂಸದರಾದ ಟಿ ಎನ್‌ ಪ್ರತಾಪನ್‌ ಮತ್ತು ಹಿಬಿ ಈಡನ್‌ ಅವರು ರಾಜ್ಯ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಕೇಂದ್ರ ಸರ್ಕಾರ ಈಚೆಗೆ ಕೈಗೊಂಡಿರುವ ಆಡಳಿತಾತ್ಮಕ ಕ್ರಮದಿಂದಾಗಿ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ದ್ವೀಪಕ್ಕೆ ಭೇಟಿ ನೀಡಲು ನಿರ್ಧರಿಸಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

Kerala high court with TN Prathapan and Hibi Eden

ದ್ವೀಪ ಪ್ರವೇಶಿಸಿದರೆ ಏಳು ದಿನಗಳ ಕಾಲ ಕ್ವಾರೆಂಟೈನ್‌ ಅಗತ್ಯಗಳನ್ನು ಪೂರೈಸಬೇಕು ಜೊತೆಗೆ ಕೋವಿಡ್‌ ಸೋಂಕು ಇಳಿಕೆಯಾದ ನಂತರ ಇಲ್ಲಿಗೆ ಬರಬಹುದೆಂದು ಲಕ್ಷದ್ವೀಪದ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಾವು ಲಸಿಕೆ ಹಾಕಿಸಿಕೊಂಡಿರುವುದಾಗಿ ಮತ್ತು ಕ್ವಾರಂಟೈನ್‌ ನಿರ್ಬಂಧ ಪಾಲಿಸುವುದಾಗಿ ಹೇಳಿದ್ದರೂ ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸಂಸದರು ಅಹವಾಲು ತೋಡಿಕೊಂಡಿದ್ದಾರೆ. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ದ್ವೀಪದ ಪರ ವಕೀಲರಿಗೆ ಅಲ್ಲಿನ ಆಡಳಿತದಿಂದ ಸೂಚನೆ ಪಡೆಯಲು ಏಳು ದಿನಗಳ ಸಮಯಾವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಜೂನ್ 23ಕ್ಕೆ ನಿಗದಿಯಾಗಿದೆ.

ನ್ಯಾಯಾಲಯದ ನೇರ ಕಲಾಪ ಪ್ರಕ್ರಿಯೆ ವರದಿಗಾರಿಕೆಗೆ ಅನುಮತಿಸಿದ ಮಧ್ಯಪ್ರದೇಶ ಹೈಕೋರ್ಟ್‌; ವಸ್ತುನಿಷ್ಠತೆ ಪಾಲಿಸಲು ಸೂಚನೆ

"ನ್ಯಾಯಾಲಯ ಕಲಾಪಗಳ ನೇರ ವರದಿಗಾರಿಕೆಗೆ ಅನುಮತಿಸಲಾಗಿದ್ದು, ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್‌ಗಳ ಮೂಲಕ ಕಲಾಪ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ" ಎಂದು ಗುರುವಾರ ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ. ರಾಜ್ಯ ಹೈಕೋರ್ಟ್‌ನ ವಿಡಿಯೊ ಕಾನ್ಫರೆನ್ಸಿಂಗ್‌ ಮತ್ತು ದೃಶ್ಯ-ಶ್ರಾವ್ಯ ಎಲೆಕ್ಟ್ರಾನಿಕ್‌ ಸಂಪರ್ಕ ನಿಯಮಗಳನ್ನು ಪ್ರಶ್ನಿಸಿ ʼಬಾರ್‌ ಅಂಡ್‌ ಬೆಂಚ್‌ʼ ಪತ್ರಕರ್ತ ಸೇರಿದಂತೆ ನಾಲ್ವರು ಕಾನೂನು ವರದಿಗಾರರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಕಾಶ್‌ ಶ್ರೀವಾಸ್ತವ ಮತ್ತು ವೀರೇಂದ್ರ ಸಿಂಗ್‌ ಅವರಿದ್ದ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿತು.

Madhya Pradesh High Court, Media

ವರದಿಗಾರಿಕೆಗಾಗಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಿಂಕ್‌ ನೀಡಲಾಗುತ್ತಿದ್ದು, ಅರ್ಜಿದಾರರ ಕೋರಿಕೆಗೆ ಅನುಮತಿಸಲಾಗಿದೆ ಎಂದು ಪೀಠ ಹೇಳಿದೆ. “ನೀವು ಏನು ಬಯಸಿದ್ದೀರೋ ಅದನ್ನು ನಾವು ನೀಡಿದ್ದೇವೆ. ಸ್ವಪ್ನಿಲ್‌ ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಕೆಲವನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ನಾವು ಅವಕಾಶ ಮಾಡಿಕೊಟ್ಟಿದ್ದೇವೆ. ವರದಿಗಾರಿಕೆ ವಸ್ತುನಿಷ್ಠವಾಗಿರಬೇಕು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ರವಾನೆಯಾಗಬೇಕು” ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.

ಆನ್‌ಲೈನ್‌ ಜೂಜು, ಗೇಮ್ ನಿಷೇಧಕ್ಕೆ ವಿಶೇಷ ಕಾಯಿದೆ ರೂಪಿಸಲು ಸರ್ಕಾರವನ್ನು ಕೋರಿದ ಕೊಪ್ಪಳ ಜಿಲ್ಲಾ ವಕೀಲರ ಸಂಘ

ಆನ್‌ಲೈನ್‌ ಜೂಜು ನಿಷೇಧ ಹಾಗೂ ಆನ್‌ಲೈನ್‌ ಗೇಮ್ ನಿಯಂತ್ರಣ ಕುರಿತ ವಿಶೇಷ ಕಾಯಿದೆ ಜಾರಿಗೊಳಿಸುವಂತೆ ಕೋರಿ ಕೊಪ್ಪಳ ಜಿಲ್ಲಾ ವಕೀಲರ ಸಂಘ ಗುರುವಾರ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿತು. ಕೊಪ್ಪಳ ಜಿಲ್ಲಾಧಿಕಾರಿ ಸುರಲಕರ್ ವಿಕಾಸ್ ಕಿಶೋರ್ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ನೀಡಿದರು.

ದೇಶ ಹಾಗೂ ರಾಜ್ಯದಲ್ಲಿ ಜೂಜಾಟಕ್ಕೆ ನಿಷೇಧ ಇಲ್ಲದಿರುವುದು ಹಾಗೂ ಬೇರೆ ಹೆಸರಿನಲ್ಲಿ ಚಾಲ್ತಿಯಲ್ಲಿರುವ ನಿಷೇಧಿತ ಆನ್‌ಲೈನ್‌ ಗೇಮ್‌ಗಳನ್ನು ನಿಯಂತ್ರಿಸುವ ಕಾನೂನು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಪ್ರತ್ಯೇಕ ಕಾನೂನಿನ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹನುಮೇಶ್‌ ಹೆಚ್‌ ಮುರಡಿ, ಉಪಾಧ್ಯಕ್ಷರಾದ ಜಿ ಸಿ ಹಮ್ಮಿಗಿ, ಕಾರ್ಯದರ್ಶಿ ಬಿ ವಿ ಸಜ್ಜನ್‌, ಜಂಟಿ ಕಾರ್ಯದರ್ಶಿ ಎಸ್‌ ಬಿ ಪಾಟೀಲ್‌, ಸಲಹಾ ಸಮಿತಿ ಸದಸ್ಯರಾದ ರವಿ ಎನ್‌ ಬಿಸ್ನಹಳ್ಳಿ, ಮಂಜುನಾಥ್‌ ಮತ್ತಿತರರು ಹಾಜರಿದ್ದರು.