ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-5-2021

>> ವಿಶೇಷ ಅನುದಾನಕ್ಕೆ ಕೆಎಸ್‌ಬಿಸಿ ಮನವಿ >> ಪಂಜಾಬ್‌ ಪೊಲೀಸರ ವಿರುದ್ಧ ವಿಧವೆ ಅತ್ಯಾಚಾರ ಆರೋಪ >> ʼಕಪ್ಪು ಶಿಲೀಂಧ್ರ ಔಷಧ ಆಮದು ಸುಂಕ ರಹಿತವಾಗಿರಬೇಕುʼ >> ಪೂನಾವಾಲಾಗೆ ಝಡ್ ಪ್ಲಸ್ ಭದ್ರತೆ ಪ್ರಕರಣ >> ಸಲ್ಮಾನ್ ಖಾನ್ ಮಾನಹಾನಿ ದಾವೆ

Bar & Bench

ಕೋವಿಡ್: ರಾಜ್ಯ ಸರ್ಕಾರಕ್ಕೆ ರೂ. 25 ಕೋಟಿ ವಿಶೇಷ ಅನುದಾನಕ್ಕೆ ಕೆಎಸ್‌ಬಿಸಿ ಮನವಿ

ಕೊರೊನಾ ವೈರಸ್‌ನಿಂದಾಗಿ ವಕೀಲರ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಮಹಿಳಾ ಮತ್ತು ಗ್ರಾಮೀಣ ವಲಯದಲ್ಲಿ ನೆಲೆಸಿರುವ ವಕೀಲರು ಜೀವನ ನಡೆಸಲು ಯಾತನೆ ಪಡುತ್ತಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ರೂ.25 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ರಾಜ್ಯ ವಕೀಲರ ಪರಿಷತ್‌ ಮನವಿ ಮಾಡಿದೆ.

KSBC

ಈ ಕುರಿತು ಕೆಎಸ್‌ಬಿಸಿ ಅಧ್ಯಕ್ಷ ಎಲ್‌ ಶ್ರೀನಿವಾಸ್‌ ಬಾಬು ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಕೀಲರ ಪರಿಷತ್‌, ದೆಹಲಿ ವಕೀಲರ ಪರಿಷತ್‌ನಂತೆಯೇ ಕೆಎಸ್‌ಬಿಸಿಯು ವಕೀಲರಿಗೆ ನೆರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ವಕೀಲರಿಗೆ ನೆರವಾಗುವ ಉದ್ದೇಶದಿಂದ ಕೆಎಸ್‌ಬಿಸಿಗೆ ರಾಜ್ಯ ಸರ್ಕಾರವು ಐದು ಕೋಟಿ ರೂಪಾಯಿ ನೀಡಿದ್ದು, ಈ ಬಾರಿಯ ಸಂಕಷ್ಟದ ತೀವ್ರತೆಯ ಹಿನ್ನೆಲೆಯಲ್ಲಿ ರೂ.25 ಕೋಟಿ ನೆರವು ನೀಡುವಂತೆ ಕೋರಿದ್ದಾರೆ.

ವಿಧವೆ ಮೇಲೆ ಅತ್ಯಾಚಾರ: ಮಹಿಳಾ ಅಧಿಕಾರಿಗಳೇ ಇರುವ ವಿಶೇಷ ತನಿಖಾ ತಂಡ ರಚಿಸಿದ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌

38 ವರ್ಷದ ವಿಧವೆಯ ಮೇಲೆ ಪೊಲೀಸ್‌ ಅಧಿಕಾರಿಗಳು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಕುರಿತಂತೆ ತನಿಖೆ ನಡೆಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ವಿಶೇಷ ತನಿಖಾ ತಂಡವೊಂದನ್ನು ಮಂಗಳವಾರ ರಚಿಸಿದೆ. “ಆರೋಪಗಳು ಘೋರ ಮತ್ತು ಭಯಾನಕವಾಗಿವೆ. ಇದು ನಿಜವಾಗಿದ್ದೇ ಆದರೆ ಪಂಜಾಬ್‌ ಪೊಲೀಸರು ಅದರಲ್ಲಿಯೂ ವಿಶೇಷವಾಗಿ ಬಟಿಂಡಾದ ಅಪರಾಧ ತನಿಖಾ ದಳದ ಹೀನ ಕೃತ್ಯ ಎಂದು ಎನಿಸಿಕೊಳ್ಳುತ್ತದೆ” ಎಂದು ನ್ಯಾಯಾಲಯ ಎಚ್ಚರಿಸಿದೆ.

Punjab & Haryana High Court

ಪ್ರಕರಣದ ಬಗ್ಗೆ ತನಿಖೆ ನಡೆಸಲು ಕೇವಲ ಪುರುಷರ ತಂಡವನ್ನಷ್ಟೇ ನೇಮಿಸಿದ ಜಿಲ್ಲಾ ಪೊಲೀಸ್‌ ಅಧಿಕಾರಿಗಳ ಕ್ರಮವನ್ನು ನ್ಯಾಯಾಲಯ ಕಟುವಾಗಿ ಟೀಕಿಸಿದ ನ್ಯಾಯಮೂರ್ತಿ ಅರುಣ್‌ ಮೊಂಗಾ ಮಹಿಳಾ ಅಧಿಕಾರಿಯೊಬ್ಬರು ನೂತನ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸಿಐಎ ಅಧಿಕಾರಿಗಳು ಮಹಿಳೆಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಡ ಹೇರಿದ್ದರು. ಬೇಡಿಕೆಗೆ ಸ್ಪಂದಿಸದೇ ಇದ್ದಾಗ ಆಕೆಯ ಮಗನ ಮೇಲೆ ಮಾದಕ ದ್ರವ್ಯ ಸಾಗಾಟದ ಆರೋಪ ಹೊರಿಸಿದ್ದರು. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಮಗನನ್ನು ಮನೆಯಿಂದ ಎಳೆದೊಯ್ಯಲಾಗಿತ್ತು. ತಮ್ಮ ಮಗನನ್ನು ಬಿಡುಗಡೆಗೊಳಿಸುವ ಸಲುವಾಗಿ ಆಕೆ ಕಡೆಗೆ ಸಿಐಎ ಅಧಿಕಾರಿಗಳ ಲೈಂಗಿಕ ಬೇಡಿಕೆಯನ್ನು ಒಪ್ಪಿದ್ದಳು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.

ಕಪ್ಪು ಶಿಲೀಂಧ್ರ ರೋಗದ ಔಷಧದ ಆಮದು ಸುಂಕ ರಹಿತವಾಗಿರಲಿ: ದೆಹಲಿ ಹೈಕೋರ್ಟ್‌

ಮ್ಯುಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸೆಗಾಗಿ ಬಳಸಲಾಗುವ ಆಂಫೊಟೆರಿಸಿನ್ ಬಿ ಔಷಧ ತೆರಿಗೆಯಿಂದ ಮುಕ್ತವಾಗಿರಬೇಕು ಎಂದು ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸುಂಕ ಮನ್ನಾ ಮಾಡದೇ ಇರಲು ನಿರ್ಧರಿಸಿದ ಪಕ್ಷದಲ್ಲಿ ಆಗ ಅದನ್ನು ಪಾವತಿಸುವುದಾಗಿ ಸದ್ಯಕ್ಕೆ ಆಮದುದಾರರು ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಸೂಚಿಸಿದೆ.

Delhi High Court

ಔಷಧ ಕೊರತೆ ನೀಗುವವರೆಗೆ, ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆಯ ಅಗತ್ಯ ಇರುವವರೆಗೆ ಕೇಂದ್ರವು ಸುಂಕ ಮತ್ತಿತರ ತೆರಿಗೆಗಳನ್ನು ಮನ್ನಾ ಮಾಡುವ ವಿಚಾರವಾಗಿ ಗಂಭಿರವಾಗಿ ಪರಿಗಣಿಸಬೇಕು ಎಂದು ಪೀಠವು ಸೂಚಿಸಿದೆ. ಇದೇ ವೇಳೆ ಕೋವಿಡ್‌ ಚಿಕಿತ್ಸೆಗಾಗಿ ಸುಂಕ ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ಔಷಧಗಳನ್ನು ತೆರವುಗೊಳಿಸಲಿದ್ದಾರೆ ಎಂಬ ಕೇಂದ್ರ ಸರ್ಕಾರದ ಭರವಸೆಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ದಾಖಲಿಸಿಕೊಂಡಿತು.

 ಆಧಾರ್‌ ಪೂನಾವಾಲಾಗೆ ಝಡ್‌ ಪ್ಲಸ್‌ ಭದ್ರತೆ ಕೋರಿದ್ದ ಮನವಿಗೆ ಸರ್ಕಾರದ ಪ್ರತಿಕ್ರಿಯೆ ಬಯಸಿದ ಬಾಂಬೆ ಹೈಕೋರ್ಟ್‌

ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸಿ, ಪೂರೈಸುತ್ತಿರುವ ಸಿರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್‌ ಪೂನಾವಾಲಾಗೆ ಝಡ್‌ ಪ್ಲಸ್‌ ಭದ್ರತೆ ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರಕ್ಕೆ ಗುರುವಾರ ನೋಟಿಸ್‌ ಜಾರಿ ಮಾಡಿದೆ.

Adar Poonawalla

ಲಸಿಕೆ ಪೂರೈಸುವುದಕ್ಕೆ ಸಂಬಂಧಿಸಿದಂತೆ ಪೂನಾವಾಲಾಗೆ ಬೆದರಿಕೆ ಹಾಕಿದವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಮುಂಬೈನ ವಕೀಲ ದತ್ತ ಮಾನೆ ಕೋರಿದ್ದರು. ಇಂಥ ಮನವಿ ಸಲ್ಲಿಸುವ ಅಧಿಕಾರ ವ್ಯಾಪ್ತಿಯ ಕುರಿತು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಆರ್‌ ಬೋರ್ಕರ್‌ ಅವರಿದ್ದ ರಜಾಕಾಲೀನ ಪೀಠವು ಪ್ರಶ್ನಿಸಿತು. ಇಂಥ ಪ್ರಕರಣಗಳ ವಿಚಾರಣೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಉಂಟು ಮಾಡಬಹುದಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಘನತೆಗೆ ಚ್ಯುತಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ವಿಚಾರಣೆ ನಡೆಸುವಾಗ ಜಾಗೃತವಾಗಿರಿ ಎಂದು ಪೀಠ ಮಾನೆಗೆ ಎಚ್ಚರಿಸಿತು.

ಕೆಆರ್‌ಕೆ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ಸಲ್ಮಾನ್‌ ಖಾನ್

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ತಮ್ಮ ವಿರುದ್ಧ ಹೂಡಿರುವ ಮಾನಹಾನಿ ದಾವೆಯ ಮುಂದಿನ ವಿಚಾರಣೆ ನಡೆಯುವವರೆಗೆ ಅವರ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡುವುದಿಲ್ಲ ಎಂದು ಬಾಂಬೆ ಸಿಟಿ ಸಿವಿಲ್‌ ನ್ಯಾಯಾಲಯದ ಮುಂದೆ ನಟ ಕಮಾಲ್‌ ಆರ್‌ ಖಾನ್‌ (ಕೆಆರ್‌ಕೆ) ಹೇಳಿಕೆ ನೀಡಿದ್ದಾರೆ.

Salman Khan, Kamaal R Khan

ತಮ್ಮ ವಿರುದ್ಧ ಮತ್ತು ತಮ್ಮ ಸಂಸ್ಥೆಯಾದ ಸಲ್ಮಾನ್‌ ಖಾನ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವಿರುದ್ಧ ಹಾಗೂ ಇತ್ತೀಚಿನ ರಾಧೆ ಸಿನಿಮಾ ಸೇರಿದಂತೆ ಸಂಸ್ಥೆಯ ಅಡಿ ಮೂಡಿಬರುವ ಸಿನಿಮಾ/ಯೋಜನೆಗಳ ವಿರುದ್ಧ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಿಡಿಯೊ ಸಿದ್ಧಪಡಿಸಿ ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಟ್ವೀಟ್‌ ಅಥವಾ ಮಾನಹಾನಿ ವಿಚಾರಗಳನ್ನು ಕೆಆರ್‌ಕೆ ಪ್ರಕಟಿಸದಂತೆ ಆದೇಶ ನೀಡಲು ಕೋರಿ ಸಲ್ಮಾನ್‌ ಖಾನ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂದಿನ ವಿಚಾರಣೆಯವರೆಗೆ ಸಲ್ಮಾನ್‌ ಖಾನ್‌ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡುವುದಿಲ್ಲ ಎಂದು ಕೆಆರ್‌ಕೆ ಪರ ವಕೀಲ ಮನೋಜ್‌ ಗಡ್ಕರಿ ಪೀಠಕ್ಕೆ ತಿಳಿಸಿದರು. ಗಡ್ಕರಿ ಹೇಳಿಕೆಯನ್ನು ದಾಖಲಿಸಿಕೊಂಡ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಆರ್‌ ಎಂ ಸದ್ರಾನಿ ಅವರು ವಿಚಾರಣೆಯನ್ನು ಜೂನ್‌ 7ಕ್ಕೆ ಮುಂದೂಡಿದರು.