ರಾಷ್ಟ್ರದ್ರೋಹದ ಆರೋಪ ಎದುರಿಸುತ್ತಿರುವ ಮಹಿಳೆಯನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವುದಕ್ಕೆ ತನ್ನ ಸಂಘದ ಸದಸ್ಯರನ್ನು ನಿರ್ಬಂಧಿಸಿರುವ ವಕೀಲರ ಸಂಘದ ನಡೆಯನ್ನು ವೃತ್ತಿ ವಿರೋಧಿ ಎಂದಿರುವ ಕರ್ನಾಟಕ ಹೈಕೋರ್ಟ್ ಇಂಥ ನಿರ್ಧಾರ ಮಾಡಿದ ಸಂಘದ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅನ್ನು ಪ್ರಶ್ನಿಸಿದೆ. ತಮ್ಮ ಕರ್ತವ್ಯ ನಿರ್ವಹಿಸದಂತೆ ವಕೀಲರನ್ನು ನಿರ್ಬಂಧಿಸಿದ್ದ ವಕೀಲರ ಸಂಘದ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಕಳೆದ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹೋರಾಟದಲ್ಲಿ “ಕಾಶ್ಮೀರವನ್ನು ಮುಕ್ತಗೊಳಿಸಿ” ಎಂಬ ಭಿತ್ತಪತ್ರವನ್ನು ಹಿಡಿದಿದ್ದ ನಳಿನಿ ಬಾಲಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ಆಕೆಯ ಪರ ನ್ಯಾಯಾಲಯದಲ್ಲಿ ವಾದಿಸದಂತೆ ಮೈಸೂರಿನ ವಕೀಲರ ಸಂಘ ನಿಲುವಳಿ ಮಂಡಿಸಿತ್ತು. “ವಕೀಲರ ದೃಷ್ಟಿಯಲ್ಲಿ ಇಂಥ ನಿಲುವಳಿ ಮಂಡಿಸುವುದು ವೃತ್ತಿ ವಿರೋಧಿ ಎಂದೆನಿಸುವುದಿಲ್ಲವೇ? ಸುಪ್ರೀಂ ಕೋರ್ಟ್ ಇದನ್ನೇ ಹೇಳಿದೆ… ಇಂಥ ವಕೀಲರ ವಿರುದ್ಧ ನೀವು (ಕೆಎಸ್‌ಬಿಸಿ) ಕ್ರಮ ಕೈಗೊಳ್ಳಬೇಕಲ್ಲವೇ. ಆ ನಿಲುವಳಿಯನ್ನು ಒಮ್ಮೆ ನೋಡಿ, ಅದಕ್ಕೆ ಕೆಲವು ವಕೀಲರೂ ಸಹಿ ಹಾಕಿದ್ದಾರೆ… ವಕೀಲರ ಪರಿಷತ್ ಸಕ್ರಿಯವಾಗಿರಬೇಕು. ಇವೆಲ್ಲವೂ ವಕೀಲರ ಸಂಸ್ಥೆಗಳು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ದಲಿತ ಹೋರಾಟಗಾರ್ತಿ ನೌದೀಪ್ ಕೌರ್ ಜೊತೆ ಬಂಧಿಸಲ್ಪಟ್ಟಿದ್ದ ಮತ್ತೊಬ್ಬ ದಲಿತ ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರ ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿ ಅವರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಫರಿದಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ನ್ಯಾಯಾಲಯದ ಹಿಂದಿನ ಆದೇಶದ ಜೊತೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ನಾಲ್ಕು ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿ ಅವನೀಶ್ ಜಿಂಗನ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. “ಸತ್ಯ ಮತ್ತು ಸನ್ನಿವೇಶಗಳನ್ನು ಸಂಪೂರ್ಣವಾಗಿ ಪರಿಗಣಿಸಿ, ಪ್ರಸ್ತುತ ಫರಿದಾಬಾದ್‌ನಲ್ಲಿ ನೇಮಿಸಲ್ಪಟ್ಟಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಶಿವಕುಮಾರ್ ಅವರ ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಿ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯವು ತಡೆ ನೀಡಿಲ್ಲ. ಅಂತಿಮ ವರದಿ ಸಲ್ಲಿಸುವುದಕ್ಕೂ ಮುನ್ನ ನ್ಯಾಯಾಲಯದ ಅನುಮತಿ ಪಡೆಯುವಂತೆ ನ್ಯಾಯಾಲಯ ಎಸ್‌ಐಟಿಗೆ ಸೂಚಿಸಿದೆ.
ಸೌದಿ ಅರೇಬಿಯಾದಲ್ಲಿ ಮರಣವನ್ನಪ್ಪಿದ ಹಿಂದೂ ವ್ಯಕ್ತಿಯ ಕಳೇಬರವನ್ನು ಭಾರತಕ್ಕೆ ವಾಪಸ್ ತರುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಮಂಗಳವಾರ ಹೇಳಿರುವ ದೆಹಲಿ ಹೈಕೋರ್ಟ್, ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿ ದರ್ಜೆಗಿಂತ ಮೇಲಿನ ಮಟ್ಟದ ಅಧಿಕಾರಿ ಮಾರ್ಚ್ 18ರಂದು ವಿಚಾರಣೆಯಲ್ಲಿ ಭಾಗವಹಿಸುವಂತೆ ಆದೇಶಿಸಿದೆ.
ಪತಿಯ ಕಳೇಬರವನ್ನು ಭಾರತಕ್ಕೆ ಮರಳಿ ತರಲು ನೆರವಾಗುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. “ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಕಳೆದ ಜನವರಿಯಿಂದಲೂ ಅರ್ಜಿದಾರರು ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಈ ವೇಳೆಗಾಗಲೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕಿತ್ತು” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಕಳೇಬರವನ್ನು ವಾಪಸ್ ತರುವ ಸಂಬಂಧ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.