ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 9-1-2021

>> ಮಧ್ಯಂತರ ಆದೇಶಗಳ ಅವಧಿ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್ >> ಹಿಂದುಳಿದ ವರ್ಗಗಳ ಆಯೋಗದಿಂದ ಬಹಿರಂಗ ವಿಚಾರಣೆ >> ಗಂಗಾಸಾಗರ ಮೇಳ - ಪಿಐಎಲ್‌ ಸಲ್ಲಿಕೆ >> ಅಪರಾಧಿಗೆ ಕಿರುಕುಳ - ಪೋಷಕರಿಂದ ರಿಟ್‌ ಅರ್ಜಿ ಸಲ್ಲಿಕೆ

Bar & Bench

ಎಲ್ಲಾ ಮಧ್ಯಂತರ ಆದೇಶಗಳನ್ನು ಜನವರಿ 31ರ ವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌, ಕೆಳಹಂತದ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳು ಹೊರಡಿಸಿರುವ ಎಲ್ಲಾ ಮಧ್ಯಂತರ ಆದೇಶಗಳನ್ನು ಜನವರಿ 31ರ ವರೆಗೆ ವಿಸ್ತರಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸಿತ್ತು.

High Court of Karnataka

ಕಳೆದ ನವೆಂಬರ್‌ನಲ್ಲಿ ಎಲ್ಲಾ ಮಧ್ಯಂತರ ಆದೇಶಗಳನ್ನು ಜನವರಿ 7ರವರೆಗೆ ಮುಂದೂಡಿತ್ತು. ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೂರನೇ ಬಾರಿಗೆ ಎಲ್ಲಾ ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸುವ ಮೂಲಕ ಕಕ್ಷಿದಾರರ ಹಿತಕ್ಕೆ ಮುಂದಾಗಿದೆ.

ಜ. 12ರಂದು ಹಿಂದುಳಿದ ವರ್ಗಗಳ ಆಯೋಗದಿಂದ ಉಡುಪಿಯಲ್ಲಿ ಬಹಿರಂಗ ವಿಚಾರಣೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ವಿವಿಧ ಜಾತಿ/ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು ಪ್ರವರ್ಗ ಬದಲಾಯಿಸಲು, ಪರ್ಯಾಯ ಪದ ಸೇರ್ಪಡೆ ಮಾಡಲು ಹಾಗೂ ಕಾಗುಣಿತ ದೋಷ ತಿದ್ದುಪಡಿ ಮತ್ತಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಆಯೋಗವು ಉಡುಪಿಯಲ್ಲಿ ಬಹಿರಂಗ ವಿಚಾರಣೆ ನಡೆಸಲಿದೆ. ಜನವರಿ 12ರಂದು ಬೆಳಿಗ್ಗೆ 11-00 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

Jayapraksh Hegde

ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹೊಸದಾಗಿ ಮನವಿ ಸಲ್ಲಿಸಬಹುದಾಗಿದೆ. ಬಹಿರಂಗ ವಿಚಾರಣೆ ಮುಗಿದ ಬಳಿಕ ಮನವಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.

ಧಾರ್ಮಿಕ ಆಚರಣೆಗಳಿಗಿಂತ ಜೀವ ದೊಡ್ಡದು: ಗಂಗೆಯಲ್ಲಿ ಮಿಂದೇಳುವುದಕ್ಕೆ ಬದಲಾಗಿ ಇ-ಸ್ನಾನ ಉತ್ತೇಜಿಸುವಂತೆ ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ ಸೂಚನೆ

ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಶ್ರದ್ಧೆಗಿಂತ ಜೀವ ದೊಡ್ಡದು ಎಂದು ಶುಕ್ರವಾರ ಒತ್ತಿ ಹೇಳಿರುವ ಕಲ್ಕತ್ತಾ ಹೈಕೋರ್ಟ್‌, ಈ ವರ್ಷ ನಡೆಯಲಿರುವ ಗಂಗಾಸಾಗರ ಮೇಳದಲ್ಲಿ ಗಂಗಾ ನದಿಯಲ್ಲಿ ಮಿಂದೇಳುವುದಕ್ಕೆ ಬದಲಾಗಿ ಇ-ಸ್ನಾನವನ್ನು ಉತ್ತೇಜಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ. ಗಂಗಾ ನದಿಯಲ್ಲಿ ಜನರು ಮಿಂದೇಳುವುದನ್ನು ತಡೆಯಲು ಇ-ಸ್ನಾನ ಜಾರಿಗೆ ತರಲಾಗಿದ್ದು, ಅಗತ್ಯವಿರುವವರು ತಮ್ಮ ಮನೆ ಬಾಗಿಲಿಗೆ ಪವಿತ್ರ ಜಲವನ್ನು ತರಿಸಿಕೊಳ್ಳಬಹುದಾಗಿದೆ ಎಂದು ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

Ganga

ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಗಂಗಾಸಾಗರ ಮೇಳ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಹಲವಾರು ಸವಾಲುಗಳು ಉದ್ಭವಾಗುವ ಸಾಧ್ಯತೆ ಊಹಿಸಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂಧ ಕೋವಿಡ್‌ ವ್ಯಾಪಿಸುವ ಸಾಧ್ಯತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ತೊಟ್ಟಥಿಲ್‌ ಬಿ ರಾಧಾಕೃಷ್ಣನ್‌ ಮತ್ತು ನ್ಯಾಯಮೂರ್ತಿ ಅರ್ಜಿತ್‌ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಆತಂಕ ವ್ಯಕ್ತಪಡಿಸಿದೆ.

ಕೇರಳ ಹೈಕೋರ್ಟ್‌ ಮಧ್ಯಪ್ರವೇಶ: ಜೈಲು ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾದ ಕೈದಿಗೆ ವಿಚಾರಣೆ ನಡೆದ ಕೆಲವೇ ಗಂಟೆಗಳಲ್ಲಿ ವೈದ್ಯಕೀಯ ಆರೈಕೆ

ಕೇರಳ ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ಕೆಲವೇ ಗಂಟೆಗಳಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮತ್ತು ಇಬ್ಬರು ವೈದ್ಯಕೀಯ ಅಧಿಕಾರಿಗಳು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬರ ಪರಿಸ್ಥಿತಿಯ ಆರೋಗ್ಯದ ಮಾಹಿತಿ ಪಡೆಯಲು ಖುದ್ದು ಭೇಟಿ ನೀಡಿದ ಘಟನೆ ಶುಕ್ರವಾರ ನಡೆದಿದೆ. ಅರ್ಜಿದಾರರ ಪೋಷಕರು ಸಲ್ಲಿಸಿದ್ದ ರಿಟ್‌ ಮನವಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ಕೆ ವಿನೋದ್‌ ಚಂದ್ರನ್‌ ಮತ್ತು ಎಂ ಆರ್‌ ಅನಿತಾ ಅವರಿದ್ದ ವಿಭಾಗೀಯ ಪೀಠವು ಅಸಾಧಾರಣ ಕ್ರಮ ಕೈಗೊಂಡಿದೆ.

K Vinod Chandran, MR Anitha

ಜೈಲಿನ ಅಧಿಕಾರಿಗಳು ಪುತ್ರ ಟಿಟ್ಟುವಿಗೆ ಲಾಕಪ್‌ನಲ್ಲಿ ಚಿತ್ರಹಿಂಸೆ ನೀಡುತ್ತಿದ್ದು, ಪುತ್ರನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಟಿಟ್ಟು ಪೋಷಕರು ಹಿರಿಯ ವಕೀಲ ಕೆ ಪಿ ಸತೀಶನ್‌ ಮತ್ತು ವಕೀಲ ಎಸ್‌ ಕೆ ಆದಿತ್ಯನ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠವು ತಡ ಮಾಡದೇ ತಿರುವನಂತಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ – IIಗೆ ಪೊಲೀಸ್‌ ಮಹಾನಿರ್ದೇಶಕರು ಮತ್ತು ವೈದ್ಯಕೀಯ ಅಧಿಕಾರಿಗಳ ಜೊತೆಗೆ ಜೈಲಿಗೆ ಭೇಟಿ ಆರೋಪವನ್ನು ಪರಿಶೀಲಿಸುವಂತೆ ಸೂಚಿಸಿತು. ಅಪರಾಧಿಯಿಂದ ವಿಷಯ ಖಚಿತಪಡಿಸಿಕೊಂಡು ತಕ್ಷಣ ವರದಿ ರವಾನಿಸುವಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್‌ ಸೂಚಿಸಿತು. ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಜನವರಿ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.