ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 9-2-2021

>> ರೆಹಾನಾಗೆ ಮಾಹಿತಿ ಪ್ರಸರಣ ನಿಷೇಧ ವಿಧಿಸಿದ್ದ ಆದೇಶಕ್ಕೆ ತಡೆ >> ಐಪಿಸಿ ಸೆಕ್ಷನ್‌ 124ಎ ಸಿಂಧುತ್ವ ಪ್ರಶ್ನೆ ಅರ್ಜಿ ವಜಾ >> 20 ವರ್ಷ ಜೈಲಲ್ಲಿ ಕಳೆದ ಅಪರಾಧಿ ಬಿಡುಗಡೆ >> ಭೂಸ್ವಾಧೀನ ಪರಿಹಾರ ವಿಳಂಬ; ಮದ್ರಾಸ್‌ ಹೈಕೋರ್ಟ್‌ ಕಿಡಿ

Bar & Bench

ದೃಶ್ಯ, ವಿದ್ಯುನ್ಮಾನ ಮಾಧ್ಯಮದಲ್ಲಿ ಮಾಹಿತಿ ಹಂಚಿಕೆ ಮಾಡದಂತೆ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿಷೇಧ ವಿಧಿಸಿದ್ದ ಕೇರಳ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ದೃಶ್ಯ, ವಿದ್ಯುನ್ಮಾನ ಮಾಧ್ಯಮದಲ್ಲಿ ಮಾಹಿತಿ ಹಂಚಿಕೆ, ಪ್ರಕಟ ಅಥವಾ ಪ್ರಸಾರ ಮಾಡದಂತೆ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿಷೇಧ ವಿಧಿಸಿದ್ದ ಕೇರಳ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ. ಕೇರಳ ಹೈಕೋರ್ಟ್‌ ಕಳೆದ ವರ್ಷದ ನವೆಂಬರ್‌ 23ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಫಾತಿಮಾ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ನೇತೃತ್ವದ ಪೀಠವು ನೋಟಿಸ್‌ ಜಾರಿ ಮಾಡಿದೆ.

Rehana Fathima

“ಗೋಮಾತಾ ಉಲರ್ತು” ಎಂಬ ಹೆಸರಿನ ಅಡುಗೆ ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ಫಾತಿಮಾ ಅವರು ಗೋಮಾಂಸದಿಂದ ಖಾದ್ಯ ತಯಾರಿಸುವ ಸಂದರ್ಭದಲ್ಲಿ ಮಾಂಸದ ಬದಲಿಗೆ ಗೋಮಾತಾ ಎಂಬ ಪದ ಬಳಸಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಅಡುಗೆ ಕಾರ್ಯಕ್ರಮದಲ್ಲಿ ಮಾಂಸಕ್ಕೆ ಬದಲಾಗಿ ಗೋಮಾತಾ ಎಂದು ಹೇಳುವ ಮೂಲಕ ಗೋವನ್ನು ದೇವರು ಎಂದು ಪೂಜಿಸುವ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಸಾಧ್ಯತೆ ಇದೆ ಎಂದು ಕೇರಳ ಹೈಕೋರ್ಟ್‌ ಹೇಳಿತ್ತು. ಶಬರಿಮಲೆಯ ಅಯ್ಯಪ್ಪನ ಕುರಿತಾಗಿ ಅವಹೇಳನಕಾರಿ ವಿಚಾರ ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ 2018ರಲ್ಲಿ ವಿವಿಧ ಷರತ್ತುಗಳನ್ನು ವಿಧಿಸಿ ಫಾತಿಮಾಗೆ ಜಾಮೀನು ನೀಡಲಾಗಿತ್ತು. ಇದು ಹಿಂದೆ ವಿಧಿಸಿದ್ದ ಜಾಮೀನು ಷರತ್ತಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಸುನಿಲ್‌ ಥಾಮಸ್‌ ಅವರಿದ್ದ ಏಕಸದಸ್ಯ ಪೀಠ ಹೇಳಿತ್ತು.

ಐಪಿಸಿ ಸೆಕ್ಷನ್‌ 124ಎ ಅಡಿ ರಾಷ್ಟ್ರದ್ರೋಹದ ಸಿಂಧುತ್ವ ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ರಾಷ್ಟ್ರದ್ರೋಹವನ್ನು ಅಪರಾಧೀಕರಣಗೊಳಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಅರ್ಜಿದಾರರು ಸದರಿ ಕಾನೂನಿನ ಅಡಿ ನೋವು ಅನುಭವಿಸಿದವರಲ್ಲ. ಈ ಹಿನ್ನೆಲೆಯಲ್ಲಿ ವಿವಾದಾತ್ಮಕ ನಿಬಂಧನೆಯನ್ನು ಪ್ರಶ್ನಿಸುವ ಯಾವುದೇ ಕಾರಣಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠವು ಹೇಳಿದೆ.

SEDITION, Supreme Court

ರಾಷ್ಟ್ರದ್ರೋಹದ ಕಾನೂನು ವಸಾಹತುಶಾಹಿ ಕಾಲದ ಕಾನೂನಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ ಮತ್ತು ಬಾಲ್‌ ಗಂಗಾಧರ್‌ ತಿಲಕ್‌ರಂಥವರನ್ನು ಮಣಿಸಲು ಅದನ್ನು ಬ್ರಿಟಿಷರು ಬಳಸುತ್ತಿದ್ದರು ಎಂದು ಅರ್ಜಿದಾರ ವಕೀಲರಾದ ಆದಿತ್ಯ ರಂಜನ್‌, ವರುಣ್‌ ಠಾಕೂರ್‌ ಮತ್ತು ವಿ ಎಳನ್‌ಚೆಳಿಯನ್‌ ಅವರು ತಗಾದೆ ಎತ್ತಿದ್ದರು. ಸದ್ಯ ಅಧಿಕಾರದಲ್ಲಿರುವ ಸರ್ಕಾರದ ಕಾನೂನು ಪ್ರಶ್ನಿಸಿ, ವಿರೋಧ ದಾಖಲಿಸಿದವ ವಾಕ್‌ ಮತ್ತು ಅಭಿವ್ಯಕ್ತಿ ಹಾಗೂ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಲು ಆ ಕಾನೂನುಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅತ್ಯಾಚಾರ ಆರೋಪ: 20 ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌

ಅತ್ಯಾಚಾರ, ಕ್ರಿಮಿನಲ್‌ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ-1989ರ ಅಡಿ ಅಪರಾಧಿ ಎಂದು ಘೋಷಿಸಲ್ಪಟ್ಟು ಕಳೆದ 20 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯ ಶಿಕ್ಷೆಯನ್ನು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಬದಿಗೆ ಸರಿಸಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಎಸ್‌) ಸೆಕ್ಷನ್‌ಗಳಾದ 432-434ರ ಅಡಿ ವ್ಯಕ್ತಿಯ ಸುದೀರ್ಘ ಜೈಲಿನ ಕುರಿತ ಸ್ಥಿತಿ ಮತ್ತು ಶಿಕ್ಷೆಯ ಪ್ರಮಾಣ ಕಡಿತ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಮೇಲ್ಮನವಿ ಸಲ್ಲಿಸದಿರುವುದಕ್ಕೂ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. 2000ರ ಸೆಪ್ಟೆಂಬರ್‌ 16ರಿಂದ ಜೈಲಿನಲ್ಲಿದ್ದ ಮೇಲ್ಮನವಿದಾರರಾದ ವಿಷ್ಣು ಎಂಬಾತ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. 2021ರ ಜನವರಿ 28ರಂದು 2003ರಂದು ಸೆಷನ್ಸ್‌ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

Justices Kaushal Jayendra Thaker and Gautam Chowdhary

ಅಧಿಕೃತವಾಗಿ ಸಲ್ಲಿಸಲಾದ ಸಾಕ್ಷ್ಯಗಳು ಮತ್ತು ವಾಸ್ತವ ಸಂಗತಿಗಳನ್ನು ಪರಿಶೀಲಿಸಿದಾಗ ಆರೋಪಿಯನ್ನು ತಪ್ಪಾಗಿ ಅಪರಾಧಿ ಎಂದು ಘೋಷಿಸಲಾಗಿದೆ ಎನ್ನುವುದು ಕಂಡುಬರುತ್ತದೆ. ಆಕ್ಷೇಪಾರ್ಹವಾದ ತೀರ್ಪು ಮತ್ತು ಆದೇಶವನ್ನು ರದ್ದು ಮಾಡಲಾಗಿದ್ದು, ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮೇಲ್ಮನವಿದಾರನಾದ ಆರೋಪಿಯು ಬೇರೊಂದು ಪ್ರಕರಣದಲ್ಲಿ ವಾರೆಂಟ್‌ ಎದುರಿಸುತ್ತಿಲ್ಲವಾದರೆ ಅವರನ್ನು ಮುಕ್ತಗೊಳಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಅತ್ಯಾಚಾರ ನಡೆದಿದೆ ಎನ್ನಲಾದ ಸಂದರ್ಭದಲ್ಲಿ 15-16 ವರ್ಷದವರಾಗಿದ್ದ ಸಂತ್ರಸ್ತೆಯು 5 ತಿಂಗಳು ಗರ್ಭಿಣಿಯಾಗಿದ್ದು, ಆಕೆಯ ಗುಪ್ತಾಂಗದಲ್ಲಿ ವೀರ್ಯ ಅಥವಾ ಗಾಯ ಪತ್ತೆಯಾಗಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ಹೇಳಲಾಗಿದೆ. ಆಂತರಿಕ ತಪಾಸಣೆಯ ಸಂದರ್ಭದಲ್ಲಿ ಸಂತ್ರಸ್ತೆಯು ನೋವಾಗುತ್ತದೆ ಎಂದು ದೂರಿದ್ದಾರೆ. ಆದರೆ, ಗುಪ್ತಾಂಗದ ಹೊರಗೆ ಅಥವಾ ಒಳಗೆ ಯಾವುದೇ ತೆರನಾದ ಗಾಯ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಅತ್ಯಾಚಾರದ ಬಗ್ಗೆ ಖಚಿತವಾದ ಅಭಿಪ್ರಾಯವನ್ನು ನೀಡಲಾಗಿಲ್ಲ. ಇದರ ಜೊತೆಗೆ ಮೂರು ದಿನಗಳ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬ ಅಂಶವನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸದೆ ವಜಾಗೊಳಿಸಿದೆ ಎಂದಿರುವ ಅಲಾಹಾಬಾದ್‌ ಹೈಕೋರ್ಟ್‌ ಆರೋಪಿಯನ್ನು ಖುಲಾಸೆಗೊಳಿಸಿದೆ.

“ಇದು ಈ ದೇಶದಲ್ಲಿ ಮಾತ್ರ ನಡೆಯಲು ಸಾಧ್ಯ”: ಭೂಮಿ ವಶಪಡಿಸಿಕೊಂಡಿದ್ದಕ್ಕೆ 54 ವರ್ಷಗಳ ವಿಳಂಬದ ನಂತರವೂ ಪರಿಹಾರ ವಿತರಿಸಿದ್ದಕ್ಕೆ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಛೀಮಾರಿ

1967ರಲ್ಲಿ ವಶಪಡಿಸಿಕೊಂಡ ಭೂಸ್ವಾಧೀನ ಪರಿಹಾರದ ಒಂದು ಭಾಗವನ್ನು ಪಾವತಿಸಲು ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಕಾಲಾವಕಾಶ ಕೇಳಿದ್ದನ್ನು ಉಲ್ಲೇಖಿಸಿ, ಜನರ ಹಕ್ಕುಗಳಿಗೆ ಸಂಬಂಧಿಸಿದಂತೆ ಆಲಸ್ಯ, ಅಸಡ್ಡೆ ಮತ್ತು ಕ್ರೌರ್ಯದ ವಿಧಾನ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಛೀಮಾರಿ ಹಾಕಿದೆ. “ಇಂಥ ಬೆಳವಣಿಗೆ ಈ ದೇಶದಲ್ಲಿ ಮಾತ್ರ ನಡೆಯಲು ಸಾಧ್ಯ”, ಸದರಿ ಪ್ರಕರಣದ ವಿಚಾರವು ತನ್ನ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ನ್ಯಾಯಮೂರ್ತಿ ಆರ್‌ ಸುಬ್ರಮಣಿಯನ್‌ ಹೇಳಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ವಾದವನ್ನು ಬೆಂಬಲಿಸಲು ನೇಮಿಸಲಾಗಿದ್ದ ವಿಶೇಷ ಸರ್ಕಾರಿ ವಕೀಲರನ್ನು ಅತ್ಯಂತ ಕಠಿಣ ಜವಾಬ್ದಾರಿ ನೀಡಲಾಗಿದೆ ಎಂದು ಪೀಠ ಹೇಳಿದೆ. “ಸರ್ಕಾರ ಅಥವಾ ಅದರ ಅಧಿಕಾರಿಗಳು ನಾಗರಿಕರ ಕಲ್ಯಾಣ ಮತ್ತು ಈ ನ್ಯಾಯಾಲಯದ ಆದೇಶಗಳನ್ನು ಗೌರವಿಸುವ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬ ನನ್ನ ತೀರ್ಮಾನವನ್ನು ಸಮರ್ಥಿಸಲು ಇನ್ನೂ ಹೆಚ್ಚಿನ ಸಂಗತಿ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಈ ನ್ಯಾಯಾಲಯದ ಆದೇಶ ಪಾಲಿಸಲು ಸಬೂಬುಗಳನ್ನೇ ನೀಡಲಾಗಿದೆ. 54 ವರ್ಷಗಳ ಹಿಂದೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದು ಈ ದೇಶದಲ್ಲಿ ಮತ್ತು ಈ ಅಧಿಕಾರಿಗಳಿಂದ ಮಾತ್ರ ನಡೆಯಲು ಸಾಧ್ಯ” ಎಂದು ನ್ಯಾಯಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

Madras High Court

ನ್ಯಾಯಾಲಯದ ಆದೇಶ ಜಾರಿಗೊಳಿಸಲು ಮತ್ತೊಂದು ಅವಕಾಶ ನೀಡುವಂತೆ ಸರ್ಕಾರಿ ವಕೀಲರು ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಾರ್ಚ್‌ 25ರ ಗಡುವು ನೀಡಿದೆ. ಆ ದಿನಾಂಕದಂದು ಸರ್ಕಾರವು ಹಣವನ್ನು ಠೇವಣಿ ಇಡಲು ವಿಫಲವಾದರೆ ಅಂದು ದಿಂಡಿಗಲ್‌ ಜಿಲ್ಲಾ ದಂಡಾಧಿಕಾರಿಯು ಸ್ವಯಂ ಹಾಜರಾಗಬೇಕು ಎಂದು ಪೀಠ ಹೇಳಿದೆ. ಬಸ್‌ ನಿಲ್ದಾಣ ನಿರ್ಮಿಸಲು 1967ರಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಒಂದು ಚದರ ಅಡಿಗೆ ಅಂದು ನ್ಯಾಯಾಲಯವು 1.70 ರೂಪಾಯಿ ನಿಗದಿಪಡಿಸಿತ್ತು, 2004ರಲ್ಲಿ ಅದನ್ನು ಬಳಿಕ 7.82 ರೂಪಾಯಿಗೆ ಏರಿಕೆ ಮಾಡಲಾಯಿತು. ಭೂಮಿಯ ಬೆಲೆ ಹೆಚ್ಚಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು 2017ರಲ್ಲಿ ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿತ್ತು. ಬಾಕಿ ಮೊತ್ತವನ್ನು ಪಾವತಿಸಲು ಸರ್ಕಾರಿ ಅಧಿಕಾರಿಗಳಿಗೆ ಸಮಯ ನೀಡುವ ಮೂಲಕ ಪರಿಷ್ಕರಣೆ ಅರ್ಜಿಯನ್ನು 2019ರಲ್ಲಿ ಹೈಕೋರ್ಟ್‌ ವಿಲೇವಾರಿ ಮಾಡಿತ್ತು. ಈ ಮೊತ್ತವನ್ನು ಪಾವತಿಸಲು ಸರ್ಕಾರ ವಿಫಲವಾದ ನಂತರ, ಕಂದಾಯ ವಿಭಾಗೀಯ ಅಧಿಕಾರಿ, ದಿಂಡಿಗಲ್ ಮತ್ತೆ ಹೈಕೋರ್ಟ್ ಮುಂದೆ ಹಾಜರಾಗಿ ಸಮಯ ವಿಸ್ತರಣೆ ಕೋರಿದ್ದರು. ಮಾರ್ಚ್‌ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.