ಕೊಲಿಜಿಯಂ ಪ್ರಸ್ತಾವನೆಗೆ ಅನುಗುಣವಾಗಿ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಆಂಧ್ರಪ್ರದೇಶ ಮತ್ತು ಕರ್ನಾಟಕ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಗುರುವಾರ ಹೊರಡಿಸಲಾದ ಮೊದಲ ಅಧಿಸೂಚನೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನು ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.
ಎರಡನೇ ಅಧಿಸೂಚನೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾ. ಸತೀಶ್ ಚಂದ್ರಶರ್ಮ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಡಿಸೆಂಬರ್ 14ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸಿನ ಅನ್ವಯ ಗುರುವಾರ ಈ ಎರಡು ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಮುರುಳೀಧರ್, ದೆಹಲಿ ಹೈಕೋರ್ಟ್ ನ್ಯಾ. ಹಿಮಾ ಕೊಹ್ಲಿ, ಕಲ್ಕತ್ತಾ ಹೈಕೋರ್ಟ್ ನ್ಯಾ. ಸಂಜೀಬ್ ಬ್ಯಾನರ್ಜಿ ಮತ್ತು ಅಲಾಹಾಬಾದ್ ಹೈಕೋರ್ಟ್ ನ್ಯಾ. ಪಂಕಜ್ ಮಿಥಲ್ ಅವರನ್ನು ಕ್ರಮವಾಗಿ ಒಡಿಶಾ, ತೆಲಂಗಾಣ, ಮದ್ರಾಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ನ್ಯಾ. ಮುರುಳೀಧರ್ ಅವರು ಮೂಲತಃ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ. ಆಂಧ್ರ ಪ್ರದೇಶದ ಮುಖ್ಯ ನ್ಯಾ. ಜಿತೇಂದ್ರ ಕುಮಾರ್ ಮಹೇಶ್ವರಿ ಅವರನ್ನು ಸಿಕ್ಕಿಂ ಹಾಗೂ ಸಿಕ್ಕಿಂ ಸಿಜೆ ಅರೂಪ್ ಕುಮಾರ್ ಗೋಸ್ವಾಮಿ ಅವರನ್ನು ಆಂಧ್ರಪ್ರದೇಶದ ಸಿಜೆಯಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಮಧ್ಯಪ್ರದೇಶದ ಹಂಗಾಮಿ ಸಿಜೆ ಸಂಜಯ್ ಯಾದವ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಜಮ್ಮು ಮತ್ತು ಕಾಶ್ಮೀರದ ಹಂಗಾಮಿ ಸಿಜೆ ರಾಜೇಶ್ ಬಿಂದಾಲ್ ಅವರನ್ನು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಮದ್ರಾಸ್ ಹೈಕೋರ್ಟ್ ನ್ಯಾ. ವಿನೀತ್ ಕೊಠಾರಿ ಅವರನ್ನು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಉತ್ತರಾಖಂಡ ಹೈಕೋರ್ಟ್ ನ್ಯಾಯಮೂರ್ತಿ ರವಿ ವಿಜಯಕುಮಾರ್ ಮಳಿಮಠ ಅವರನ್ನು ಹಿಮಾಚಲ ಪ್ರದೇಶ ನ್ಯಾಯಮೂರ್ತಿಯಾಗಿ ನೇಮಕ ಮಾಡಿರುವುದನ್ನು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಥಕ್ ಕಲಾವಿದ ಬಿರ್ಜು ಮಹಾರಾಜ್‌ಗೆ ಸರ್ಕಾರ ನೀಡಿದ್ದ ವಸತಿ ಖಾಲಿ ಮಾಡುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ತಮಗೆ ಹಂಚಿಕೆ ಮಾಡಲಾಗಿರುವ ವಸತಿಯು ವಜಾಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಒಳಗೆ ವಸತಿ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ತೆರವು ನೋಟಿಸ್ ಜಾರಿಗೊಳಿಸಿತ್ತು.
ಹಲವು ಪ್ರಮುಖ ಕಲಾವಿದರಿಗೂ ಇದೇ ತೆರನಾದ ನೋಟಿಸ್‌ಗಳನ್ನು ನೀಡಲಾಗಿದ್ದು, ಅವುಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಅವುಗಳು ಬಾಕಿ ಉಳಿದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. “09.10.2020ರ ಪ್ರಶ್ನಾರ್ಹವಾದ ನೋಟಿಸ್‌ಗೆ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ” ಎಂದು ಪೀಠ ಹೇಳಿದೆ. ಕಲಾ ಕ್ಷೇತ್ರದಲ್ಲಿ ಬಿರ್ಜು ಮಹಾರಾಜ್ ಮಾಡಿರುವ ಅಪ್ರತಿಮ ಸಾಧನೆ ಗುರುತಿಸಿ ಅವರಿಗೆ ವಸತಿ ಹಂಚಿಕೆ ಮಾಡಲಾಗಿದೆ. ಬಿರ್ಜು ಅವರ ಸಾಧನೆಯನ್ನು ಗುರುತಿಸಿ ಭಾರತದಲ್ಲಿ ನೀಡಲಾಗುವ ಎರಡನೇ ಅತ್ಯುತ್ತಮ ಪ್ರಶಸ್ತಿ ಪದ್ಮ ವಿಭೂಷಣವನ್ನೂ ನೀಡಲಾಗಿದೆ. ಈಚೆಗೆ ಪದ್ಮಶ್ರೀ ಪುರಸ್ಕೃತರಾದ ಭಾರತಿ ಶಿವಾಜಿ ಮತ್ತು ವಿ ಜಯರಾಂ ರಾವ್ ಅವರಿಗೆ ನೀಡಲಾಗಿದ್ದ ನೋಟಿಸ್‌ಗಳಿಗೆ ನ್ಯಾಯಾಲಯ ತಡೆ ನೀಡಿತ್ತು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ ಶಿವಶಂಕರ್ ಅವರಿಗೆ ಎರ್ನಾಕುಲಂನಲ್ಲಿರುವ ಆರ್ಥಿಕ ಅಪರಾಧಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬುಧವಾರ ಜಾಮೀನು ನಿರಾಕರಿಸಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಆಭರಣ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸುಂಕ ಇಲಾಖೆಯು ಅವರನ್ನು ಆರೋಪಿಯಾಗಿಸಿದೆ.
ಹವಾಲಾ ಹಣದ ಮೂಲಕ ಅಕ್ರಮವಾಗಿ ಆಭರಣ ಸಾಗಣೆ ಮಾಡುತ್ತಿದ್ದ ಆರೋಪ ಮತ್ತು ಲೈಫ್ ಮಿಷನ್ ಪ್ರಾಜೆಕ್ಟ್‌ನಲ್ಲಿ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಅಕೋಬರ್ 28ರಿಂದ ಶಿವಶಂಕರ್ ಅವರು ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿದ್ದಾರೆ. ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಶಿವಶಂಕರ್ ಅವರ ಜಾಮೀನು ಅರ್ಜಿಯು ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಗುಡುಗಿ ತೀರ್ಪು ಬರೆದಿದ್ದ ಹಾಗೂ ತೀರ್ಪಿನಲ್ಲಿ ಕೊಲಿಜಿಯಂ ವ್ಯವಸ್ಥೆಯ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ರಾಕೇಶ್ ಕುಮಾರ್ ಗುರುವಾರ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.
ನ್ಯಾಯಮೂರ್ತಿ ರಾಕೇಶ್ ಕುಮಾರ್ ಅವರು ತಮ್ಮ ತೀರ್ಪಿನಲ್ಲಿ ಕೊಲಿಜಿಯಂ ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ಪಾರದರ್ಶಕತೆಯ ಅವಶ್ಯಕತೆ ಇದೆ. ನ್ಯಾಯಮೂರ್ತಿಗಳ ವರ್ಗಾವಣೆಯು ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಉಲ್ಲೇಖಿಸಿದ್ದರು.