ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |11-4-2021

>> ಆನ್‌ಲೈನ್‌ ವ್ಯಾಜ್ಯ ಪರಿಹಾರ ವ್ಯವಸ್ಥೆ ಕುರಿತ ಕೈಪಿಡಿ ಬಿಡುಗಡೆ >> ಮಹಾರಾಷ್ಟ್ರದಿಂದ ಬರುವವರಿಗೆ ದೆಹಲಿಯಲ್ಲಿ ನಿರ್ಬಂಧ

Bar & Bench

ನ್ಯಾಯಾಲಯಗಳಿಗೆ ಹೊರೆ ತಪ್ಪಿಸಲು ಆನ್‌ಲೈನ್‌ ವ್ಯಾಜ್ಯ ಪರಿಹಾರ ವ್ಯವಸ್ಥೆ ಸಮರ್ಥ: ನ್ಯಾ. ಡಿ ವೈ ಚಂದ್ರಚೂಡ್‌

ನ್ಯಾಯಾಲಯಗಳ ಮೇಲಿರುವ ಹೊರೆ ತಪ್ಪಿಸಲು ಮತ್ತು ನಾಗರಿಕ ನ್ಯಾಯ ದೊರೆಯುವಂತೆ ಮಾಡಲು ಆನ್‌ಲೈನ್‌ ವ್ಯಾಜ್ಯ ಪರಿಹಾರ ವ್ಯವಸ್ಥೆ (ಒಡಿಆರ್) ಸಮರ್ಥವಾಗಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್‌ ತಿಳಿಸಿದರು. ದೇಶದ ಜನತೆಗಾಗಿ ನ್ಯಾಯ ವಿತರಣಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವ ವೈವಿಧ್ಯಗೊಳಿಸುವ, ಪ್ರಜಾಸತ್ತಾತ್ಮಕವಾಗಿಸುವ ಹಾಗೂ ಮುಕ್ತವಾಗಿಡುವ ಸಾಧ್ಯತೆಗಳು ಆನ್‌ಲೈನ್‌ ವ್ಯಾಜ್ಯ ಪರಿಹಾರ ವ್ಯವಸ್ಥೆಗೆ ಇವೆ ಎಂದು ಅವರು ಹೇಳಿದರು.

Justice DY Chandrachud

ನೀತಿ ಆಯೋಗ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ 'ಆಗಮಿ' ಸಂಸ್ಥೆ ಶನಿವಾರ ಆಯೋಜಿಸಿದ್ದ ʼಆನ್‌ಲೈನ್‌ ಡಿಸ್ಪ್ಯೂಟ್‌ ರೆಸಲ್ಯೂಷನ್‌ ಹ್ಯಾಂಡ್‌ಬುಕ್‌ ಇನ್‌ ಇಂಡಿಯಾʼ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್‌ ಕಾಂತ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಗಮಿ ಸಂಸ್ಥೆ ಚರ್ಚೆಯನ್ನು ವಿಸ್ತರಿಸುವ ಉದ್ದೇಶದಿಂದ ಏಪ್ರಿಲ್‌ 12ರಿಂದ 16ರವರೆಗೆ ಒಡಿಆರ್‌ ಸಪ್ತಾಹ ಆಚರಿಸುತ್ತಿದೆ. ಒಡಿಆರ್‌ ಸಪ್ತಾಹದಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ.

ಕೊರೊನಾ ತಡೆಯಲು ದೆಹಲಿ ಸರ್ಕಾರ ಹೊಸ ನಿರ್ಬಂಧ: ಮಹಾರಾಷ್ಟ್ರದಿಂದ ಬರುವವರಿಗೆ ರೋಗ ಪರೀಕ್ಷೆ ಕಡ್ಡಾಯ

ಕೋವಿಡ್‌ ತಡೆಯುವ ಸಲುವಾಗಿ ದೆಹಲಿ ಸರ್ಕಾರ ಕೆಲ ಚಟುವಟಿಕೆಗಳನ್ನು ನಿಷೇಧಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶನಿವಾರ ಹೊರಡಿಸಲಾದ ನೋಟಿಸ್‌ನಲ್ಲಿ ಮಹಾರಾಷ್ಟ್ರದಿಂದ ಬರುವವರು 72 ಗಂಟೆಗಳಿಗಿಂತ ಹಳೆಯದಾದ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅಲ್ಲದೆ ಸಾಮಾಜಿಕ / ರಾಜಕೀಯ / ಕ್ರೀಡೆ/ ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ / ಉತ್ಸವ ಮತ್ತಿತರ ಸಭೆ ಸಮಾರಂಭಗಳಿಗೆ ನಿರ್ಬಂಧಿಸಲಾಗಿದೆ. ಆದರೆ ಅಂತ್ಯಕ್ರಿಯೆ, 50 ವ್ಯಕ್ತಿಗಳಿಗಿಂತ ಕಡಿಮೆ ಜನರಿರುವ ಮದುವೆ, ಶೇ 50 ರಷ್ಟು ಆಸನ ಮಿತಿ ಇರುವ ರೆಸ್ಟೋರೆಂಟ್‌ಗಳು, ಮೆಟ್ರೊ ಸಂಚಾರ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.