ನೂತನ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಮತ್ತು ತಪ್ಪಾಗಿ ಅನ್ವಯಿಸಿ ತನ್ನನ್ನು ಸಾಮಾಜಿಕ ಮಾಧ್ಯಮ ಮಧ್ಯಸ್ಥ ಎಂದು ಕರೆದಿರುವ ಏಕ ಸದಸ್ಯ ನ್ಯಾಯಪೀಠದ ತೀರ್ಪನ್ನು ಗೂಗಲ್ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಿಂದ ಪ್ರತಿಕ್ರಿಯೆ ಕೇಳಿದೆ.
ಆದರೂ ಏಕಸದಸ್ಯ ಪೀಠದ ಆದೇಶದನ್ವಯ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಗೂಗಲ್‌ಗೆ ರಕ್ಷಣೆಗೆ ನೀಡಲು ಮಧ್ಯಂತರ ಆದೇಶ ಹೊರಡಿಸಬೇಕು ಎಂಬ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಈ ಕುರಿತು ಪರಿಶೀಲಿಸುವುದಾಗಿ ಕೋರ್ಟ್ ಹೇಳಿದ್ದು ಜುಲೈ ಕೊನೆಗೆ ಪ್ರಕರಣವನ್ನು ಮುಂದೂಡಿದೆ. ಏಕಸದಸ್ಯ ಪೀಠ 2021ರ ಐಟಿ ನಿಯಮಾವಳಿಯ ಅನ್ವಯ ಗೂಗಲ್ ವೆಬ್ ಸರ್ಚ್ ಅನ್ನು "ಸಾಮಾಜಿಕ ಮಾಧ್ಯಮ ಮಧ್ಯಸ್ಥ" ಅಥವಾ "ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯಸ್ಥ" ಎಂದು ತಪ್ಪಾಗಿ ನಿರೂಪಿಸಿದೆ. ಆದರೆ ತಾನೊಬ್ಬ ಸಂಗ್ರಾಹಕ. ಮಧ್ಯಸ್ಥ ಕೂಡ ಹೌದು. ಆದರೆ ಸಾಮಾಜಿಕ ಮಾಧ್ಯಮ ಮಧ್ಯಸ್ಥನಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದೊಂದು ಗಂಭೀರ ಸಾರ್ವಜನಿಕ ಆರೋಗ್ಯ ಕಾಳಜಿಯ ವಿಚಾರ. ಸೆಂಟ್ರಲ್ ವಿಸ್ಟಾ ಒಂದು ಪ್ರಮುಖ ಹಾಗೂ ಅಗತ್ಯ ರಾಷ್ಟ್ರೀಯ ಯೋಜನೆ ಎಂದು ಹೈಕೋರ್ಟ್ ನೀಡಿರುವ ತೀರ್ಪು ಸಮರ್ಥನೀಯವಲ್ಲ ಎಂದು ಅರ್ಜಿದಾರ ಪ್ರದೀಪ್ ಕುಮಾರ್ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.
ಲಾಕ್‌ಡೌನ್ ವೇಳೆ ಇಡೀ ದೇಶ ಅಗತ್ಯ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿರುವಾಗ ಅದನ್ನು ಅಗತ್ಯ ರಾಷ್ಟ್ರೀಯ ಯೋಜನೆ ಎನ್ನುವುದು ಸರಿಯಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ತೀರ್ಪಿನ ವೇಳೆ ಹೈಕೋರ್ಟ್ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.