ಡೊಮಿನೊಸ್ ಪಿಜ್ಜಾ ಗ್ರಾಹಕರ ಮಾಹಿತಿಯನ್ನು ಹ್ಯಾಕರ್‌ಗಳು ಅಂತರ್ಜಾಲದಲ್ಲಿ ಅಕ್ರಮವಾಗಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಅಂತಹ ಯುಆರ್‌ಎಲ್‌ಗಳನ್ನು ತಕ್ಷಣ ತೆಗೆದುಹಾಕಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅನುಮತಿಸಿದೆ. ಭಾರಿ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ಜುಬಿಲೆಂಟ್ ಫುಡ್ ವರ್ಕ್ಸ್ ಲಿಮಿಟೆಡ್ ಮಾಲೀಕತ್ವದ ಪಿಜ್ಜಾ ತಿನಿಸಿನ ಮಾರಾಟ ಸರಪಳಿಯಾದ ʼಡೊಮಿನೊಸ್ ಪಿಜ್ಜಾʼ ಹ್ಯಾಕಿಂಗ್‌ನಂತಹ ಘಟನೆಗಳ ಬಗ್ಗೆ ತನಿಖಾ ಸಂಸ್ಥೆಗೆ ಲಿಖಿತ ದೂರು ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಯೋಗೇಶ್ ಖನ್ನಾ ತಿಳಿಸಿದ್ದಾರೆ. ಡೊಮಿನೊಸ್ ಪಿಜ್ಜಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹ್ಯಾಕ್ ಮಾಡಿರುವುದರಿಂದಾಗಿ ಗ್ರಾಹಕರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು.
ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಾಕಿ ಇರುವ ಪರೀಕ್ಷೆಗಳನ್ನು ರದ್ದುಗೊಳಿಸಿ ಅಸೈನ್ಮೆಂಟ್ ಆಧಾರದಲ್ಲಿ ಅಂಕ ನೀಡಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ಕೇಂದ್ರ ʼಫ್ಯಾಕಲ್ಟಿ ಆಫ್ ಲಾʼದ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳು ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ಹಾಗೂ ಅದು ಇತ್ತೀಚೆಗೆ ರೂಪಿಸಿರುವ ತಜ್ಞರ ಸಮಿತಿಗೆ ಪತ್ರ ಬರೆದಿದ್ದಾರೆ.
ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿ ಇರುವ ಪತ್ರದಲ್ಲಿ ಅಸೈನ್ಮೆಂಟ್ ಆಧಾರಿತ ಮೌಲ್ಯಮಾಪನ (ಎಬಿಇ) ನಡೆಸಬೇಕೆಂದು ಕೋರಲಾಗಿದೆ. ಇಂತಹ ವಿಧಾನವನ್ನು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಹಾಗೂ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಅಳವಡಿಸಿಕೊಂಡಿವೆ ಎಂದು ತಿಳಿಸಲಾಗಿದೆ. ದೇಶದ ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ವಕೀಲರ ಪರಿಷತ್ತುಗಳ ಜೊತೆ ಸಮಾಲೋಚಿಸಿ ಕಾನೂನು ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಮಾನದಂಡ ರೂಪಿಸುವ ಶಾಸನಬದ್ಧ ಸಂಸ್ಥೆ ಬಿಸಿಐ ಆಗಿದೆ.
ಕೋವಿಡ್ ಸಾಂಕ್ರಾಮಿಕ ಕಡಿಮೆ ಮಾಡಿದ ಶ್ರೇಯಸ್ಸು ಯೇಸುಕ್ರಿಸ್ತನಿಗೆ ಸಲ್ಲುತ್ತದೆ ಎಂಬ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಜಾನ್‌ರೋಸ್ ಆಸ್ಟಿನ್ ಜಯಲಾಲ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ʼಕ್ರಿಶ್ಚಿಯಾನಿಟಿ ಟುಡೆ’ ಪತ್ರಿಕೆ ಸಂದರ್ಶನದಲ್ಲಿ ಜಯಲಾಲ್ ನೀಡಿದ್ದ ಹೇಳಿಕೆ ಪ್ರಶ್ನಿಸಿ ರೋಹಿತ್ ಝಾ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು.
ವೈಯಕ್ತಿಕ ಧಾರ್ಮಿಕ ದೃಷ್ಟಿಕೋನದ ಬಗ್ಗೆ ಪ್ರಚಾರ ಮಾಡಲು ಐಎಂಎ ವೇದಿಕೆ ಬಳಸಬಾರದು ಎಂದು ದ್ವಾರಕಾ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಜಯ್ ಗೋಯಲ್ ಸೂಚಿಸದ್ದಾರೆ. ಐಎಂಎ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಅದರ ಉದ್ದೇಶ ಮತ್ತು ಗುರಿ ವೈದ್ಯರ ಕಲ್ಯಾಣ ಮತ್ತಿತರ ಸಂಬಂಧಿತ ಅಂಶಗಳಾಗಿವೆ. ಅಂತಹ ವೇದಿಕೆಯನ್ನು ವೈಯಕ್ತಿಕ ಅಭಿಪ್ರಾಯ ಪ್ರಚಾರಕ್ಕೆ ಬಳಸಬಾರದು ಎಂದಿತು.