ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ಕಿಟ್ ಪ್ರಕರಣದಲ್ಲಿ ಶಂತನು ಮುಲುಕ್ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಆಧರಿಸಿ ಅವರನ್ನು ಬಂಧಿಸದಂತೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ವಿಸ್ತರಿಸಿ ದೆಹಲಿ ನ್ಯಾಯಾಲಯವು ಗುರುವಾರ ಆದೇಶಿಸಿದೆ.
“ಅರ್ಜಿದಾರರ ವಿರುದ್ಧ ಯಾವುದೇ ತೆರನಾದ ದುರುದ್ದೇಶ ಪೂರಿತ ಕ್ರಮಕೈಗೊಳ್ಳಬಾರದು” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಆದೇಶಿಸಿದ್ದು, ಮುಲುಕ್ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ಸಂಖ್ಯೆ ಹೆಚ್ಚಾಗಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಕೆಲವು ಸಂದರ್ಭದಲ್ಲಿ ಕಾರಣ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ನೇತೃತ್ವದ ಪೀಠವು ಗುರುವಾರ ಹೇಳಿದೆ.
ನ್ಯಾಯಾಂಗದ ಸೂಚನೆ ಪಾಲಿಸಿಲ್ಲ ಎಂದು ನಿಂದನಾ ಮನವಿಗಳಿಗೆ ನಾವು ಚಾಲನೆ ನೀಡುವುದರಿಂದ ಸರ್ವೋಚ್ಚ ನ್ಯಾಯಾಲಯದ ಮೇಲಿನ ಹೊರೆ ಹೆಚ್ಚಾಗುತ್ತದೆ ಎಂದು ಚಂದ್ರಚೂಡ್ ವಿಚಾರಣೆಯ ವೇಳೆ ಅಭಿಪ್ರಾಯಪಟ್ಟರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ದ್ವಿಸದಸ್ಯ ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ಶಾ ಅವರು “ಸುಪ್ರೀಂ ಕೋರ್ಟ್ ಮೇಲಿನ ಕಾರ್ಯಭಾರ ಹೆಚ್ಚಾಗಲು ಕೆಲವು ಸಂದರ್ಭಗಳಲ್ಲಿ ನಾವು ನ್ಯಾಯಮೂರ್ತಿಗಳೇ ಕಾರಣ” ಎಂದರು. 2003ರಲ್ಲಿ 11 ತಿಂಗಳ ಗುತ್ತಿಗೆ ಕರಾರು ಮುಗಿದ ಹಿನ್ನೆಲೆಯಲ್ಲಿ ಬಾಡಿಗೆದಾರರನ್ನು ಜಾಗ ಖಾಲಿ ಮಾಡಿಸುವುದರ ಕುರಿತಾದ ಪ್ರಕರಣ ಇದಾಗಿತ್ತು.
ತಾಂಡವ್ ವೆಬ್ ಸೀರಿಸ್ ಕುರಿತಂತೆ ಅಮೆಜಾನ್ ಪ್ರೈಮ್ ವಿಡಿಯೋ ಭಾರತದ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರು ಸಲ್ಲಿಸಿದ್ದ ಜಾಮೀನು ಮನವಿಯನ್ನು ಅಲಾಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
“ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಅವರ ನಂಬಿಕೆಯ ಪಾತ್ರಗಳನ್ನು ಅಗೌರವದಿಂದ ತೋರ್ಪಡಿಸುವ ಮೂಲಕ ನೋಯಿಸಲಾಗಿದೆ. ವಿಭಿನ್ನ ಜಾತಿಗಳು ಮತ್ತು ಸಮುದಾಯಗಳ ನಡುವಿನ ಅಂತರ ತಗ್ಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿರುವಾಗ ಮೇಲ್ಜಾತಿಗಳು ಮತ್ತು ಪರಿಶಿಷ್ಟ ಜಾತಿಗಳ ನಡುವಿನ ಅಂತರ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ,” ಎಂದು ಹೇಳಿ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿದೆ. ಶಿವನಿಗೆ ಸಂಬೋಧಿಸಲಾಗುವ ಪದ ತಾಂಡವ್ ಅನ್ನು ವೆಬ್ ಸರಣಿಗೆ ಇರಿಸುವ ಮೂಲಕ ದೇಶದ ಬಹುಸಂಖ್ಯಾತರಿಗೆ ಅವಹೇಳನಕಾರಿಯಾಗಿ ಕಂಡಿದೆ ಎಂದಿದೆ ಎಂದು ನ್ಯಾಯಾಲಯ ಹೇಳಿದೆ.