ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 3-3-2021

>>ಹರಿಯಾಣ ಖೈದಿಯಿಂದ ಸ್ಪೂರ್ತಿ ಪಡೆದ ಸುಪ್ರೀಂ >> ದೆಹಲಿ ನ್ಯಾಯಾಲಯಕ್ಕೆ ಬಂದ ʼದಾಸ್ತೋವ್‌ಸ್ಕಿʼ >> ಗೌತಮ್‌ ನವಲಾಖ ಪ್ರಕರಣ >> ಒತ್ತುವರಿ ಸಹಿಸೆವು ಎಂದ ಮದ್ರಾಸ್‌ ಹೈಕೋರ್ಟ್‌ >> ವಕೀಲರ ಮುಷ್ಕರಕ್ಕೆ ಅಲಹಾಬಾದ್‌ ಹೈಕೋರ್ಟ್‌ ಅಸಮಾಧಾನ

Bar & Bench

ಶಿಕ್ಷೆಯ ಕಡಿತ ಕೋರಿರುವ ಅಪರಾಧಿಗಳ ಬಿಡುಗಡೆಗೆ ದೇಶದೆಲ್ಲೆಡೆ ಏಕರೂಪದ ಅರ್ಜಿ: ಮಾರ್ಗಸೂಚಿ ರೂಪಿಸುವಂತೆ ಕಾನೂನು ಪ್ರಾಧಿಕಾರಕ್ಕೆ ಸುಪ್ರೀಂ ಸೂಚನೆ

ಆಯಾ ರಾಜ್ಯ ನೀತಿಗಳಿಗೆ ಅನುಗುಣವಾಗಿ ಶಿಕ್ಷೆಯ ಕಡಿತವನ್ನು ಕೋರಿರುವ ಕನಿಷ್ಠ ಶಿಕ್ಷೆ ಅನುಭವಿಸಿದ ಅಪರಾಧಿಗಳ ಬಿಡುಗಡೆಗಾಗಿ ಮಾಡಿದ ಮನವಿಗಳನ್ನು ನಿರ್ವಹಿಸಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಎನ್‌ಎಎಲ್‌ಎಸ್‌ಎ) ಸುಪ್ರೀಂಕೋರ್ಟ್‌ ಸೂಚಿಸಿದೆ. ಮಾದಕವಸ್ತು ಪ್ರಕರಣಗಳಿಗೆ ನಿಯಮಗಳನ್ನು ಅನ್ವಯಿಸಬಹುದೇ ಮತ್ತು ಕಡಿಮೆ ಶಿಕ್ಷೆ ವಿಧಿಸಿದ ಪ್ರಕರಣಗಳಲ್ಲಿ ತಕ್ಷಣ ಹೇಗೆ ಕಾನೂನು ನೆರವು ಒದಗಿಸಬಹುದು ಎಂಬ ಬಗ್ಗೆಯೂ ಕರಡು ಮಾರ್ಗಸೂಚಿ ಗಮನಹರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಹೇಮಂತ್‌ ಗುಪ್ತ ಅವರಿದ್ದ ಪೀಠ ಹೇಳಿತು.

ಪ್ರಾಧಿಕಾರ ಈ ಕುರಿತು ಸಮಗ್ರ ವರದಿ ಸಲ್ಲಿಸಿದ ಬಳಿಕ ದೇಶದೆಲ್ಲೆಡೆ ಏಕರೂಪದ ಅರ್ಜಿಗೆ ನ್ಯಾಯಾಲಯ ಅನುಮೋದನೆ ನೀಡಬಹುದು ಎಂದು ಹೇಳಿದೆ. ಹರಿಯಾಣದ ಅಮಿತ್‌ ಮಿಶ್ರಾ ಎಂಬ ಅಪರಾಧಿ ಈ ಕುರಿತು ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದು ಅದನ್ನು ಅಲ್ಲಿನ ಸರ್ಕಾರ ಅಳವಡಿಸಲು ಮುಂದಾಗಿರುವುದನ್ನು ಗಮನಿಸಿರುವ ನ್ಯಾಯಾಲಯ ಈ ಸೂಚನೆ ನೀಡಿದೆ.

ನೂರು ಮೊಲಗಳಿಂದ ಒಂದು ಕುದುರೆ ಮಾಡಲಾರಿರಿ: ದಾಸ್ತೋವ್‌ಸ್ಕಿಯ ಮಾತು ಹೇಳುತ್ತಾ ದೆಹಲಿ ಗಲಭೆ ಆರೋಪಿಗಳನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕೊಲೆ ಯತ್ನದ ಇಬ್ಬರು ಆರೋಪಿಗಳನ್ನು ದೆಹಲಿ ನ್ಯಾಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿದೆ. ಆರೋಪಿಗಳು ಗಲಭೆಯ ಭಾಗವಾಗಿದ್ದರಿಂದ, ಅವರು ಸೆಕ್ಷನ್ 307 ಐಪಿಸಿ ಅಡಿಯಲ್ಲಿ ಈ ಅಪರಾಧ ಮಾಡಿದ್ದಾರೆಂದು ಭಾವಿಸಬೇಕು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

Crime and Punishment, Delhi Riots

ವಿಚಾರಣೆ ವೇಳೆ ಖ್ಯಾತ ಸಾಹಿತಿ ರಷ್ಯಾದ, ಫ್ಯುದೋರ್‌ ದಾಸ್ತೋವ್‌ಸ್ಕಿ ಅವರ ʼಕ್ರೈಂ ಅಂಡ್‌ ಪನಿಷ್ಮೆಂಟ್‌ʼ ಕೃತಿಯಲ್ಲಿ ಉಲ್ಲೇಖವಿರುವ “ನೂರು ಮೊಲಗಳಿಂದ ನೀವು ಒಂದು ಕುದುರೆ ಮಾಡಲು ಸಾಧ್ಯವಿಲ್ಲ. ನೂರು ಸಂಶಯಗಳಿಂದ ಒಂದು ಪುರಾವೆಯನ್ನು ರೂಪಿಸಲಾಗದು,” ಎಂಬ ಮಾತನ್ನು ದೆಹಲಿಯ ಕಡ್‌ಕಡ್‌ಡೂಮ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್‌ ರಾವತ್‌ ಉಲ್ಲೇಖಿಸಿದರು. ಬಾಬು ಮತ್ತು ಇಮ್ರಾನ್‌ ಎಂಬುವವರ ವಿರುದ್ಧ ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಲಾಗಿತ್ತು.

[ಭೀಮಾ ಕೋರೆಗಾಂವ್] ಪೂರ್ವಾನ್ವಯ ಜಾಮೀನು ಕೋರಿ ಗೌತಮ್ ನವಲಾಖ ಅರ್ಜಿ: ಎನ್ಐಎ ಪ್ರತಿಕ್ರಿಯೆ ಕೋರಿದ ಸುಪ್ರೀಂಕೋರ್ಟ್‌

ಪೂರ್ವಾನ್ವಯ (ಡಿಫಾಲ್ಟ್) ಜಾಮೀನು ನೀಡುವಂತೆ ಕೋರಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್‌ ಬುಧವಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸೂಚಿಸಿದೆ. ಸಿಆರ್‌ಪಿಸಿ ಸೆಕ್ಷನ್ 167(2)ರ ಪ್ರಕಾರ ಗರಿಷ್ಠ 90 ದಿನದ ಒಳಗೆ ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ದಳ ವಿಫಲವಾಗಿರುವ ಹಿನ್ನೆಲೆಯಲ್ಲಿ ತಮಗೆ ಪೂರ್ವಾನ್ವಯ ಜಾಮೀನು ನೀಡಬೇಕೆಂದು ನವಲಾಖ ಕೋರಿದ್ದರು.

Gautam Navlakha, Supreme Court

ಪೂರ್ವಾನ್ವಯ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ನವಲಾಖ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಕೆ ಎಂ ಜೋಸೆಫ್ ಅವರಿದ್ದ ಪೀಠ ಎನ್‌ಐಎಗೆ ನೋಟಿಸ್‌ ನೀಡಿತು.

ಜಲಮೂಲಗಳ ಒತ್ತುವರಿ: ಬುಲ್ಡೋಜರ್‌ಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದ ಮದ್ರಾಸ್‌ ಹೈಕೋರ್ಟ್‌

ತಮಿಳುನಾಡಿನ ಜಲಮೂಲಗಳ ಒತ್ತುವರಿ ತಡೆಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ನೀರಿನ ಮೂಲಗಳ ಜಿಪಿಎಸ್‌/ ಉಪಗ್ರಹ ಚಿತ್ರಗಳನ್ನು ಮಾರ್ಚ್ 15, 2021 ರಂದು ಅಸ್ತಿತ್ವದಲ್ಲಿರುವಂತೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈರೋಡ್‌ನಲ್ಲಿ ಜಲಮೂಲಗಳನ್ನು ಒತ್ತುವರಿ ಮಾಡಿಕೊಂಡು 112 ಕೋಟಿ ರೂಪಾಯಿ ಮೊತ್ತದ, ನಗರ ಸುಂದರೀಕರಣ ಯೋಜನೆ ಕೈಗೆತ್ತಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ಪೀಠ ವಿಚಾರಣೆ ನಡೆಸಿತು.

Chief Justice Sanjib Banerjee and Justice Senthilkumar Ramamoorthy

“ಇಂದಿನಿಂದ ಅನ್ವಯವಾಗುವಂತೆ ಜಲಮೂಲಗಳು ಎಲ್ಲಿವೆ ಎಂದು ಸೂಚಿಸುವ ಜಿಪಿಎಸ್ ನಕ್ಷೆಗಳನ್ನು ಪಡೆಯಲು ನಾವು ಬಯಸುತ್ತೇವೆ. ಮಹಾಭಾರತದ ಕಾಲದಿಂದಲೂ ಯಾವುದೇ ಜಲಮೂಲಗಳಿರಲಿಲ್ಲ ಎಂದು ನೀವು ಹೇಳಲು ಮುಂದಾದರೆ ಸಿಕ್ಕಿ ಹಾಕಿಕೊಳ್ಳುವಿರಿ” ಎಂದು ನ್ಯಾ. ಬ್ಯಾನರ್ಜಿ ಎಚ್ಚರಿಸಿದರು. ಅಲ್ಲದೆ ನ್ಯಾಯಾಲಯ “ಯೋಜನೆಯ ಭಾಗವಾಗಿ ಯಾವುದೇ ಜಲಮೂಲವನ್ನು ಅತಿಕ್ರಮಿಸಿರುವುದು ಕಂಡುಬಂದಲ್ಲಿ ಅದು 112 ಕೋಟಿಯದ್ದಾಗಿರಲಿ ಅಥವಾ 1000 ಕೋಟಿಯದ್ದೇ ಆಗಿರಲಿ ಅದನ್ನು ನಾಶಪಡಿಸಲಾಗುತ್ತದೆ. ಬುಲ್ಡೋಜರ್‌ಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ” ಎಂದು ಮೌಖಿಕವಾಗಿ ತಿಳಿಸಿತು.

‌ ವಕೀಲರ ಪ್ರತಿಭಟನೆ: ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್‌

2021ರ ಉತ್ತರಪ್ರದೇಶ ಶಿಕ್ಷಣ ಸೇವೆಗಳ ನ್ಯಾಯಮಂಡಳಿ ಮಸೂದೆಯನ್ನು ರಾಜ್ಯ ವಿಧಾನಸಭೆ ಜಾರಿಗೆ ತಂದರೂ ಅದಕ್ಕೆ ನ್ಯಾಯಾಲಯದ ಒಪ್ಪಿಗೆ ಅಗತ್ಯ ಎಂದು ಅಲಹಾಬಾದ್‌ ಹೈಕೋರ್ಟ್‌ ಬುಧವಾರ ಹೇಳಿದೆ. ಇದೇ ವೇಳೆ ನ್ಯಾಯಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಅಲಾಹಾಬಾದ್‌ ಮತ್ತು ಅವಧ್‌ ಹೈಕೋರ್ಟ್‌ ವಕೀಲರ ಸಂಘಗಳು ನಡೆಸುತ್ತಿರುವ ಮುಷ್ಕರ ಕುರಿತಂತೆ ಅದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

CJ Mathur

ಎರಡೂ ನಗರಗಳಲ್ಲಿ ನ್ಯಾಯಾಲಯದ ಬಹಿಷ್ಕಾರಕ್ಕೆ ಕಾರಣವಾದ ಅಂಶಗಳ ಕುರಿತು ಅಲಾಹಾಬಾದ್‌ ಮತ್ತು ಲಕ್ನೋ ವಕೀಲರ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಎಸ್ ಎಸ್ ಶಂಶೇರಿ ಅವರಿದ್ದ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದೇಶದ ಅತಿದೊಡ್ಡ ನ್ಯಾಯಾಲಯ ಇಂತಹ ಕಾರ್ಯ ವಿಮುಖತೆಯನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಅದು ಕಿಡಿಕಾರಿದೆ.