75ನೇ ಸ್ವಾತಂತ್ರ್ಯ ಸಂಭ್ರಮಾಚರಣೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಮಿತಿ ರಚಿಸಿದ್ದು, ಅದರಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಹಿರಿಯ ವಕೀಲರಾದ ಕೆ ಪರಾಸರನ್ ಮತ್ತು ಸೋಲಿ ಸೊರಾಬ್ಜಿ ಸದಸ್ಯರಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ವಿವಿಧ ಪಕ್ಷಗಳ ರಾಜಕೀಯ ನಾಯಕರು ಸೇರಿದಂತೆ 259 ಮಂದಿ ಸಮಿತಿಯ ಸದಸ್ಯರಾಗಿದ್ದಾರೆ. ಕಾನೂನು ಸಚಿವ ಹಾಗೂ ಹಿರಿಯ ವಕೀಲರ ರವಿಶಂಕರ್ ಪ್ರಸಾದ್ ಅವರೂ ಸಮಿತಿಯ ಸದಸ್ಯರಾಗಿದ್ದಾರೆ. “ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಸಕ್ಷಮ ಪ್ರಾಧಿಕಾರವು ರಾಷ್ಟ್ರೀಯ ಸಮಿತಿಯ ರಚನೆಯನ್ನು ಅನುಮೋದಿಸಿದೆ” ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉನ್ನತಾಧಿಕಾರದ ಸಮಿತಿ ಸೂಚಿಸಿರುವ ಹಲವು ಮಾನದಂಡಗಳ ಅಡಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದ 3,499 ವಿಚಾರಣಾಧೀನ ಕೈದಿಗಳು ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಶರಣಾಗುವಂತೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಮಧ್ಯಂತರ ಜಾಮೀನು ಅವಧಿ ವಿಸ್ತರಿಸಲು ನಿರಾಕರಿಸಿರುವ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲವಂತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು “…ಎಲ್ಲಾ 3,499 ವಿಚಾರಣಾಧೀನ ಕೈದಿಗಳಿಗೆ ಉನ್ನತಾಧಿಕಾರ ಸಮಿತಿಯ ವಿವಿಧ ಮಾನದಂಡಗಳ ಅಡಿ ಮಧ್ಯಂತರ ಜಾಮೀನು ನೀಡಲಾಗಿದ್ದು ಅವರು ನಿರ್ದಿಷ್ಟ, ಸಂಬಂಧಪಟ್ಟ ಅಥವಾ ಮೇಲ್ಮಟ್ಟದ ನ್ಯಾಯಾಲಯಗಳಿಂದ ಸಾಮಾನ್ಯ ಜಾಮೀನು ಪಡೆದುಕೊಂಡಿಲ್ಲವಾದ್ದರಿಂದ ಮಧ್ಯಂತರ ಜಾಮೀನು ಮುಗಿದಿರುವ ಕೈದಿಗಳು 07.03.2021ರಿಂದ ಜೈಲು ಅಧಿಕಾರಿಗಳಿಗೆ ಶರಣಾಗಬೇಕು” ಎಂದು ಪೀಠ ಹೇಳಿದೆ. ಕೋವಿಡ್ ಹಿನ್ನೆಲೆಯಲ್ಲಿ ಇವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು.
ತಮಿಳುನಾಡು ಮತ್ತು ಚೆನ್ನೈನ ವಿವಿಧೆಡೆ ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 8ರಿಂದ ಭೌತಿಕ ವಿಚಾರಣೆಯನ್ನು ಮಿತಿಗೊಳಿಸಲಾಗುವುದು ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅಧಿಸೂಚನೆಯಲ್ಲಿ ತಿಳಿಸಿದೆ. ಮದ್ರಾಸ್ ಹೈಕೋರ್ಟ್‌ನ ಪ್ರಧಾನ ಮತ್ತು ಮದುರೈ ಪೀಠದಲ್ಲಿ ವರ್ಚುವಲ್ ಮತ್ತು ಹೈಬ್ರಿಡ್ ಮಾದರಿಯಲ್ಲಿ ಮಾತ್ರ ಮಾರ್ಚ್ 8ರಿಂದ ವಿಚಾರಣೆ ನಡೆಸಲಾಗುವುದು ಎಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ.
ಹೈಬ್ರಿಡ್ ಮಾದರಿಯಲ್ಲಿ ನ್ಯಾಯಮೂರ್ತಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾನೂನು ಅಧಿಕಾರಿಗಳು ಅಥವಾ ಪಿಎಸ್‌ಯುಗಳನ್ನು ಪ್ರತಿನಿಧಿಸುವ ವಕೀಲರು ಭೌತಿಕವಾಗಿ ವಿಚಾರಣೆಯಲ್ಲಿ ಭಾಗವಹಿಸಲಿದ್ದಾರೆ. ಉಳಿದಂತೆ ಎಲ್ಲ ವಕೀಲರು ಹಾಗೂ ಇತರರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಫೆಬ್ರವರಿ 8ರಿಂದ ಹೈಬ್ರಿಡ್ ಮಾದರಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.