ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 10-3-2021

>> ಪ್ರಾಚಾ ವಿರುದ್ಧದ ಶೋಧಾಜ್ಞೆ ಕಾರ್ಯಾಚರಣೆಗೆ ತಡೆ >> ಮಲಹೊರುವ ಪದ್ಧತಿಯ ಬಗ್ಗೆ ಮದ್ರಾಸ್‌ ಕಿಡಿನುಡಿ >> ಕಂಗನಾ ವಿರುದ್ಧ ಎಫ್‌ಐಆರ್‌ಗೆ ಕೋರಿಕೆ >> ನಿವೃತ್ತ ನ್ಯಾ. ಆರ್ ಸಿ ಚೌಹಾಣ್‌ ನೇತೃತ್ವದ ಸಮಿತಿ ರಚನೆ

Bar & Bench

ವಕೀಲ ಮೆಹಮೂದ್‌ ಪ್ರಾಚಾ ವಿರುದ್ಧದ ಶೋಧಾಜ್ಞೆ ಕಾರ್ಯಾಚರಣೆಗೆ ತಡೆ ನೀಡಿದ ದೆಹಲಿ ನ್ಯಾಯಾಲಯ

ವಕೀಲ ಮೆಹಮೂದ್ ಪ್ರಾಚಾ ಅವರ ವಿರುದ್ಧದ ಶೋಧಾಜ್ಞೆಗೆ ಬುಧವಾರ ದೆಹಲಿ ನ್ಯಾಯಾಲಯ ತಡೆ ನೀಡಿದೆ. ಪ್ರಾಚಾ ಅವರ ಕಚೇರಿಯಲ್ಲಿ ಈಚೆಗೆ ದೆಹಲಿ ಪೊಲೀಸರು ಶೋಧನೆ ನಡೆಸಿದ್ದರು. ಪಟಿಯಾಲ ಹೌಸ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪಂಕಜ್‌ ಶರ್ಮಾ ಅವರು ಮಾರ್ಚ್‌ 12ರಂದು ಪ್ರಾಚಾ ಅವರ ಅರ್ಜಿಯ ಸಂಬಂಧ ಆದೇಶ ಹೊರಡಿಸಲಿದ್ದಾರೆ.

Mehmood Pracha

ಮಾರ್ಚ್‌ 9ರಂದು ಪ್ರಾಚಾ ಅವರ ಕಚೇರಿಯಲ್ಲಿ ದೆಹಲಿ ಪೊಲೀಸರು ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆ. ಸಾಕ್ಷಿಯೊಬ್ಬರಿಗೆ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಲು ಪ್ರೇರೇಪಿಸಿದ್ದಾರೆ ಎಂದು ದಾಖಲಿಸಿದ್ದ ಎಫ್‌ಐಆರ್‌ ಸಂಬಂಧ ದೆಹಲಿ ಪೊಲೀಸರು ಶೋಧ ಕೈಗೊಂಡಿದ್ದರು. ತಮ್ಮ ಕಚೇರಿಗೆ ಸಂಬಂಧಿಸಿದ ಹಾರ್ಡ್‌ಡಿಸ್ಕ್‌ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಕ್ಕೆ ಬದಲಾಗಿ ಮ್ಯಾಜಿಸ್ಟ್ರೇಟ್‌ ಮುಂದೆ ಸಂಬಂಧಪಟ್ಟ ದಾಖಲೆಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸುವಂತೆ ಪ್ರಾಚಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಭೌತಿಕ ಪ್ರತಿಯಷ್ಟೇ ಮಹತ್ವ ಸಾಫ್ಟ್‌ ಪ್ರತಿಗೂ ಇದೆ ಎಂದು ಪ್ರಾಚಾ ವಾದಿಸಿದ್ದಾರೆ.

ಮುಗ್ಧತೆಯ ಲಾಭ ಪಡೆದು ಮಲ ಹೊರುವವರನ್ನು ಗುಂಡಿಗಿಳಿಸುತ್ತೇವೆ; ನಾಗರಿಕ ಸಮಾಜದಲ್ಲಿ ಇದನ್ನು ಮುಂದುವರಿಸಲಾಗದು: ಮದ್ರಾಸ್‌ ಹೈಕೋರ್ಟ್‌

ಅಮಾನವೀಯವಾದ ಮಲ ಹೊರುವ ಪದ್ಧತಿ ಮುಂದುವರಿಸಲಾಗದು. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಬುಧವಾರ ಹೇಳಿದೆ. “ಇವರು ಅಂತ್ಯಜರಲ್ಲಿಯೇ ಅಂತ್ಯದಲ್ಲಿರುವವರು. ನೀವು ಅಥವಾ ನಮ್ಮಂಥವರು ಇದನ್ನು ಮಾಡುವುದಿಲ್ಲ. ಈ ಜನರ ಮುಗ್ಧತೆಯನ್ನು ಬಳಸಿಕೊಂಡು ನಾವು ಅವರನ್ನು ಗುಂಡಿಗಿಳಿಸುತ್ತೇವೆ. ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಎರಡೂ ಒಂದೇ. ಗಾಂದೀಜಿ ಹೇಳಿದಂತೆ ಹರಿಜನರಿಂದ ಇದನ್ನು ನೀವು ಮಾಡಿಸುತ್ತೀರಿ” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಹೇಳಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮಲ ಸ್ವಚ್ಛ ಮಾಡುವುದನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಹೈಕೋರ್ಟ್‌ ಎರಡೂ ಗುತ್ತಿಗೆದಾರರ ಮೂಲಕ ಕೂಲಿಕಾರ್ಮಿಕರನ್ನು ಕೆಲಸಕ್ಕೆ ಹಚ್ಚುತ್ತವೆ ಎಂದು ಪೀಠವು ಮೌಖಿಕವಾಗಿ ಹೇಳಿದೆ.

Manual Scavenging

ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿ ಮಲ ಸ್ವಚ್ಛಗೊಳಿಸುವಾಗ ಸಂಭವಿಸಿದ ಸಾವುಗಳ ಮಾಹಿತಿಯನ್ನು ಸರ್ಕಾರೇತರ ಸಂಸ್ಥೆಯಾದ ಸಫಾಯಿ ಕರ್ಮಚಾರಿ ಆಂದೋಲವು ನ್ಯಾಯಾಲಯಕ್ಕೆ ಸಲ್ಲಿಸಿತು. ಎನ್‌ಜಿಒ ಪರ ವಕೀಲ ಶ್ರೀನಾಥ್‌ ಶ್ರೀದೇವನ್‌ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ಥಳೀಯ ಸಂಸ್ಥೆಗಳು ಮಲ ಸ್ವಚ್ಛತೆಗೆ ಜನರನ್ನು ಬಳಸುತ್ತಿವೆ. ಈ ಸಂಬಂಧ ಆದೇಶ ಹೊರಡಿಸಬೇಕು ಎಂದು ಕೋರಿದರು. ಇದಕ್ಕೆ “ಈ ಅಮಾನವೀಯ ನಡೆ ಮುಂದುವರಿಸಲಾಗದು… ಯಾವುದೇ ನಾಗರಿಕ ಸಮಾಜದಲ್ಲಿ ಇದನ್ನು ಮುಂದುವರಿಸಲಾಗದು” ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಹೇಳಿದರು.

“ಸಿಖ್‌ ಸಮುದಾಯದ ಭಾವನೆಗಳಿಂದ ಟ್ವೀಟ್‌ಗಳಿಂದ ಧಕ್ಕೆ:” ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಮನವಿ

ಸಿಖ್‌ ಸಮುದಾಯದ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಬುಧವಾರ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

Kangana Ranaut and Patiala House Court

ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಣೀಂದರ್‌ ಸಿಂಗ್‌ ಸಿರ್ಸಾ ಅವರ ದೂರು ಆಧರಿಸಿ ಪಟಿಯಾಲ ಹೌಸ್‌ ನ್ಯಾಯಾಲಯದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅಮರದೀಪ್‌ ಕೌರ್‌ ಅವರು ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಿಖ್‌ ಸಮುದಾಯ ಮತ್ತು ರೈತರ ಹೆಸರಿಗೆ ಕಳಂಕ ತರುವುದರ ಜೊತೆಗೆ ಸಮುದಾಯ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕಂಗನಾ ಟ್ವೀಟ್‌ ಮಾಡಿದ್ದಾರೆ ಎಂದು ಸಿರ್ಸಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗನಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ, 153ಬಿ, 295ಎ, 505(1)(ಬಿ) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ರ ಅಡಿ ಎಫ್‌ಐಆರ್‌ ದಾಖಲಿಸುವಂತೆ ಸಿರ್ಸಾ ಕೋರಿದ್ದಾರೆ.

ಎನ್‌ಐ ಕಾಯಿದೆ ಸೆಕ್ಷನ್‌ 138ರ ಅಡಿ ಪ್ರಕರಣಗಳ ಇತ್ಯರ್ಥವನ್ನು ತ್ವರಿತಗೊಳಿಸಲು ಕ್ರಮ ರೂಪಿಸಲು ನಿವೃತ್ತ ನ್ಯಾ. ಆರ್ ಸಿ ಚೌಹಾಣ್‌ ನೇತೃತ್ವದ ಸುಪ್ರೀಂ ಕೋರ್ಟ್ ಸಮಿತಿ ರಚನೆ

ವರ್ಗಾವಣೆ ಲಿಖಿತಗಳ ಅಧಿನಿಯಮ ಕಾಯಿದೆಯ ಸೆಕ್ಷನ್‌ 138ರ ಅಡಿ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಬುಧವಾರ ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ ಸಿ ಚೌಹಾಣ್‌ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಗಿಂತ ಕೆಳಗಿನ ದರ್ಜೆಯಲ್ಲಿ ಇಲ್ಲದ ಹಣಕಾಸು ಸೇವೆಗಳ ಇಲಾಖೆಯ ಅಧಿಕಾರಿ, ನ್ಯಾಯಾಂಗ ಇಲಾಖೆಯ ಅಧಿಕಾರಿ, ಕಾರ್ಪೊರೇಟ್‌ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ವೆಚ್ಚ ಇಲಾಖೆಯ ಅಧಿಕಾರಿ, ಗೃಹ ಇಲಾಖೆಯ ಸದಸ್ಯರು, ಆರ್‌ಬಿಐ ಗವರ್ನರ್‌ ನಾಮನಿರ್ದೇಶಿತ ಸದಸ್ಯರು, ಐಬಿಎ ಮುಖ್ಯಸ್ಥರು ನಾಮನಿರ್ದೇಶನ ಮಾಡಿದ ಸದಸ್ಯರು, ಎನ್‌ಎಎಲ್‌ಎಸ್‌ಎ ಸದಸ್ಯರನ್ನು ಸಮಿತಿಯು ಒಳಗೊಳ್ಳಲಿದೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಮಾರ್ಚ್‌ 12ರ ವರೆಗೆ ಮೇಲಿನ ಹುದ್ದೆಗಳಿಗೆ ಹೆಸರುಗಳನ್ನು ಸೂಚಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಮೂರು ತಿಂಗಳ ಒಳಗೆ ಸಮಿತಿಯು ಅದರ ವರದಿ ಸಲ್ಲಿಸಬೇಕಿದೆ.

Justice RC Chavan

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌, ಬಿ ಆರ್‌ ಗವಾಯಿ, ಎ ಎಸ್‌ ಬೋಪಣ್ಣ ಮತ್ತು ರವೀಂದ್ರ ಭಟ್‌ ಅವರಿದ್ದ ಪೀಠವು ಈ ಕುರಿತು ಆದೇಶ ಹೊರಡಿಸಿದೆ. ನ್ಯಾಯಾಲಯವು ಎನ್‌ಐ ಕಾಯಿದೆಯ ಸೆಕ್ಷನ್‌ 138ರ ಅಡಿ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣ ಇದಾಗಿದೆ.