ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |11-3-2021

>> ಸಂಸ್ಥೆ ನಾಶಕ್ಕೆ ಒಳಗಿನಿಂದಲೇ ಸಂಚು - ಮದ್ರಾಸ್ ಹೈಕೋರ್ಟ್ ಕಳವಳ >> ರೈಲ್ವೆ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ರಾಜ್ಯಗಳ ಅನುಮತಿ ಬೇಕಿಲ್ಲ ಎಂದ ಸಿಬಿಐ >> ಟಿಎಂಸಿ ಅಭ್ಯರ್ಥಿ ನಾಮಪತ್ರ ಸಿಂಧುಗೊಳಿಸಿದ ಕೋಲ್ಕತ್ತಾ ನ್ಯಾಯಾಲಯ

Bar & Bench

“ನ್ಯಾಯಿಕ ಅಧಿಕಾರಿಗಳು, ಸಿಬ್ಬಂದಿ, ವಕೀಲರು ಒಳಗಿನಿಂದಲೇ ಒಟ್ಟಾಗಿ ಸೇರಿ ಸಂಸ್ಥೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ:” ಪೊಲೀಸ್‌ ತನಿಖೆಗೆ ನಿರ್ದೇಶಿಸಿದ ಮದ್ರಾಸ್‌ ಹೈಕೋರ್ಟ್‌

ಮದ್ರಾಸ್‌ ಹೈಕೋರ್ಟ್‌ಗೆ ರಿಜಿಸ್ಟ್ರಾರ್‌ (ವಿಚಕ್ಷಣೆ) ನೇಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ ಮನವಿಯೊಂದಿಗೆ ಆರಂಭವಾದ ಪ್ರಕರಣವು ಒಳಗಿನಿಂದ “ಸಂಸ್ಥೆಯನ್ನು ನಾಶಮಾಡಲು” ಕೆಲಸ ಮಾಡುವ ವ್ಯಕ್ತಿಗಳಿದ್ದಾರೆ ಎಂಬ ಗಂಭೀರ ಕಳವಳವನ್ನು ನ್ಯಾಯಾಲಯ ವ್ಯಕ್ತಪಡಿಸುವವರೆಗೆ ರೂಪಾಂತರವನ್ನು ಪಡೆದಿರುವ ಪ್ರಕರಣದ ವಿವರವಿದು. ಇಷ್ಟೇ ಅಲ್ಲ, ಪ್ರಕರಣದಲ್ಲಿ ಹಲವರ ಕೈವಾಡವಿದೆ ಎಂಬ ಗುಮಾನಿಯನ್ನು ನ್ಯಾಯಾಲಯವು ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಉಪ ಪೊಲೀಸ್‌ ಆಯುಕ್ತರಿಗೆ ಇತ್ತೀಚೆಗೆ ಆದೇಶಿಸಿದೆ. ಹೈಕೋರ್ಟ್‌ ವಿಚಕ್ಷಣಾ ದಳ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಪಿ ಎನ್‌ ಪ್ರಕಾಶ್‌ ಮತ್ತು ಟಿ ಎನ್‌ ಶಿವಜ್ಞಾನಂ ಅವರು ನ್ಯಾಯಿಕ ಅಧಿಕಾರಿಗಳು, ಸಿಬ್ಬಂದಿ ಮತ್ತು ವಕೀಲರು ಎಲ್ಲರೂ ಒಟ್ಟಾಗಿ ಸೇರಿ ಸಂಸ್ಥೆಯನ್ನು ನಾಶಪಡಿಸಲು ಕೆಲಸ ಮಾಡುತ್ತಿದ್ದಾರೆ ಎಂಬುದು ನಮಗೆ ಮೇಲ್ನೋಟಕ್ಕೆ ತಿಳಿದುಬಂದಿದೆ. ಹಾಗಾಗಿ, ಇದನ್ನು ಅಷ್ಟು ಸುಲಭವಾಗಿ ನಾವು ಬದಿಗೆ ಸರಿಸಲು ಬಿಡುವುದಿಲ್ಲ” ಎಂದಿದ್ದಾರೆ.

Madras High Court

ಹಿನ್ನೆಲೆ: ವಕೀಲ ಬಿ ಸತೀಶ್‌ ಕುಮಾರ್‌ 2020ರಲ್ಲಿ ಸಲ್ಲಿಸಿದ್ದ ಮನವಿಯನ್ನು ಅನಧಿಕೃತವಾಗಿ ಅಧಿಕಾರ ಸ್ಥಾನ ಆಕ್ರಮಿಸಲು ಯತ್ನಿಸುವ ವ್ಯಕ್ತಿಯನ್ನು ತಡೆಗಟ್ಟುವುದಕ್ಕಾಗಿ ನ್ಯಾಯಾಲಯ ನೀಡುವ ಆದೇಶದೊಂದಿಗೆ ಸೇರಿಸಲಾಗಿತ್ತು. ಈ ಮನವಿಯಲ್ಲಿ ಅರ್ಜಿದಾರ ವಕೀಲರು ಹೈಕೋರ್ಟ್‌ ರಿಜಿಸ್ಟ್ರಾರ್‌ (ವಿಚಕ್ಷಣೆ) ಸದರಿ ಹುದ್ದೆ ಬಯಸುವ ಶೈಕ್ಷಣಿಕ ಅರ್ಹತೆ ಹೊಂದಿಲ್ಲ ಎಂದು ದೂರಿದ್ದರು. ಆದರೆ, ನ್ಯಾಯಮೂರ್ತಿಗಳಾದ ಪ್ರಕಾಶ್‌ ಮತ್ತು ಟಿ ಎನ್‌ ಶಿವಜ್ಞಾನಂ ಈ ಪ್ರಕರಣವನ್ನು ಭಿನ್ನವಾಗಿ ನೋಡಿದ್ದು, “ಕಳೆದ ಎರಡೂವರೆ ವರ್ಷಗಳಿಂದ ಕರ್ತವ್ಯ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಆರ್‌ ಪೂರ್ಣಿಮಾ ಅವರ ನೇತೃತ್ವದ ವಿಚಕ್ಷಣಾ ದಳವು ಸಮರ ಸಾರಿದೆ. ಇದನ್ನು ಸಹಿಸದ ಸ್ಥಾಪಿತ ಹಿತಾಸಕ್ತಿಗಳು ಅವರನ್ನು ಬಲಿಪಶು ಮಾಡಲು ಯತ್ನಿಸುತ್ತಿವೆ” ಎಂದು ಹೇಳಿದ್ದಾರೆ. ಪ್ರಕರಣದ ವಿಚಾರಣಾ ವರದಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗಿದ್ದು, ಇದನ್ನು ನ್ಯಾಯಮೂರ್ತಿಗಳಾದ ಪ್ರಕಾಶ್ ಮತ್ತು ಶಿವಜ್ಞಾನಂ ಅವರ ನ್ಯಾಯಪೀಠದ ಮುಂದೆ ಮಂಡಿಸುವಂತೆ ಅವರು ಆದೇಶಿಸಿದ್ದರು. ಸದರಿ ಪ್ರಕರಣವು ಅರ್ಜಿದಾರ ವಕೀಲ ಸತೀಶ್‌ಕುಮಾರ್‌ ವಿರುದ್ಧದ ನ್ಯಾಯಾಂಗ ನಿಂದನೆಯನ್ನೂ ಒಳಗೊಂಡಿದೆ. ಕಳೆದ ವರ್ಷ ಹಿಂದಿನ ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಮತ್ತು ನ್ಯಾ. ಸೆಂಥಿಲ್‌ಕುಮಾರ್‌ ಅವರಿದ್ದ‌ ವಿಭಾಗೀಯ ಪೀಠವು ಅರ್ಜಿದಾರರಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿ ರಿಟ್‌ ಮನವಿಯನ್ನು ವಜಾಗೊಳಿಸಿತ್ತು. ಅಲ್ಲದೇ ಸಂಸ್ಥೆಯ ವಿರುದ್ಧ ದಾಳಿ ನಡೆಸುವವರ ವಿರುದ್ಧ ಆಡಳಿತಾತ್ಮಕವಾಗಿ ಕಠಿಣ ಕ್ರಮಕೈಗೊಳ್ಳುವಂತೆ ಆದೇಶಿಸಿತ್ತು.

ರಾಜ್ಯಗಳು ಒಪ್ಪಿಗೆ ಹಿಂಪಡೆವುದು "ರೈಲ್ವೆ ಪ್ರದೇಶಗಳಲ್ಲಿನ" ಅಪರಾಧಗಳ ಮೇಲಿನ ತನ್ನ ಅಧಿಕಾರ ವ್ಯಾಪ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂಗೆ ಸಿಬಿಐ ವಿವರಣೆ

ಪಶ್ಚಿಮ ಬಂಗಾಳ ಸರ್ಕಾರವು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆಯ (ಡಿಎಸ್‌ಪಿಇ) ಸೆಕ್ಷನ್‌ 5ರ ಅಡಿ ಕೇಂದ್ರೀಯ ತನಿಖಾ ದಳಕ್ಕೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದ ಮಾತ್ರಕ್ಕೆ ರಾಜ್ಯದ ರೈಲ್ವೆ ವ್ಯಾಪ್ತಿಯಲ್ಲಿ ತನಿಖೆ ನಡೆಸುವುದರಿಂದ ಸಿಬಿಐ ಅನ್ನು ಹೊರಗಿಡಲಾಗದು ಎಂದು ತನಿಖಾ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರೈಲ್ವೆ ಪ್ರದೇಶದಲ್ಲಿ ನಡೆಯುವ ಅಪರಾಧಗಳ ತನಿಖೆ ನಡೆಸಲು ಸಂಬಂಧಪಟ್ಟ ರಾಜ್ಯ ಸರ್ಕಾರದ ಅನುಮತಿಯ ಅಗತ್ಯವೇನೂ ಇಲ್ಲ. ಡಿಎಸ್‌ಪಿಇ ಕಾಯಿದೆಯು ಅಂಥ ಸಂದರ್ಭದಲ್ಲಿ ನಿರ್ದಿಷ್ಟ ಪ್ರಕರಣಗಳ ತನಿಖೆ ನಡೆಸಲು ನಿಸ್ಸಂದೇಹವಾಗಿ ಅನುಮತಿಸುತ್ತದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದೆ.

CBI

ರೈಲ್ವೆ ಅಥವಾ ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ಉಳಿದೆಡೆ ತನಿಖೆ ನಡೆಸಲು ಡಿಎಸ್‌ಪಿಇ ಕಾಯಿದೆಯ ಸೆಕ್ಷನ್‌ 6ರ ಅಡಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಅನುಮತಿ ಅಗತ್ಯ ಎಂದು ಸಿಬಿಐ ಅಫಿಡವಿಟ್‌ನಲ್ಲಿ ತಿಳಿಸಿದೆ. ಅಕ್ರಮ ಕಲ್ಲಿದ್ದಲು ವಹಿವಾಟು ಪ್ರಕರಣದಲ್ಲಿ ಆರೋಪಿಯಾಗಿರುವ ಮನವಿದಾರ ಅನೂಪ್‌ ಮಜೀ ಎಂಬವರು ಫೆಬ್ರವರಿ 12ರಂದು ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸಲು ಸಿಬಿಐಗೆ ಅನುಮತಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಬಿಜೆಪಿಯೇತರ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದಿರುವುದರಿಂದ ಸಿಬಿಐ ವಾದವು ಮಹತ್ವ ಪಡೆದಿದೆ.

ಚುನಾವಣಾಧಿಕಾರಿ ಕಿವಿಹಿಂಡಿ,  ಟಿಎಂಸಿ ಅಭ್ಯರ್ಥಿ ಉಜ್ವಲ್‌ ಕುಮಾರ್‌ ನಾಮಪತ್ರ ಸಿಂಧುಗೊಳಿಸಿದ ಕೋಲ್ಕತ್ತಾ ಹೈಕೋರ್ಟ್‌

ಪಶ್ಚಿಮ ಬಂಗಾಳದ ಜೋಯ್‌ಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಉಜ್ವಲ್‌ ಕುಮಾರ್‌ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದ ಚುನಾವಣಾಧಿಕಾರಿಯ ಆದೇಶವನ್ನು ಗುರುವಾರ ಕೋಲ್ಕತ್ತಾ ಹೈಕೋರ್ಟ್‌ ಬದಿಗೆ ಸರಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿಸಿದೆ. ತನ್ನ ಉಮೇದುವಾರಿಕೆ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕುಮಾರ್‌ ಅವರು ಮಾರ್ಚ್‌ 10ರಂದು ಕೋಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

West Bengal Elections, Election Commission

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರು ಚುನಾವಣಾಧಿಕಾರಿ ನಿರ್ಧಾರವನ್ನು ಬದಿಗೆ ಸರಿಸಿದ್ದು, ಹಿಂದೆ ಸಲ್ಲಿಸಿದ್ದ ನಾಮಪತ್ರದ ಆಧಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಉಜ್ವಲ್‌ ಕುಮಾರ್‌ ಹೈಕೋರ್ಟ್‌ ಅನುಮತಿಸಿದೆ. ಕುಮಾರ್ ಸಲ್ಲಿಸಿದ ನಾಮಪತ್ರಗಳು ಮಾನ್ಯ ಮತ್ತು ಕಾನೂನಿನ ಪ್ರಕಾರ ಸರಿಯಾಗಿವೆ ಎಂದು ಪೀಠ ಹೇಳಿದೆ. ಉಮೇದುವಾರಿಕೆಯಲ್ಲಿ ಚುನಾವಣಾಧಿಕಾರಿ ಗುರುತಿಸಿರುವ ದೋಷಗಳು 'ಅತ್ಯಂತ‌ ತಾಂತ್ರಿಕ'ವಾಗಿದ್ದು, ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರ್‌ ನಾಮಪತ್ರವನ್ನು ಆ ಕಾರಣಗಳನ್ನು ನೀಡಿ ವಜಾಗೊಳಿಸುವುದು ಅಸಮರ್ಥನೀಯ ಎಂದು ಪೀಠ ಹೇಳಿದೆ. ಮಾರ್ಚ್‌ 27ರಿಂದ ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ.