ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 5-3-2021

>> ಅಮರಾವತಿ ಭೂಹಗರಣ: ಸುಪ್ರೀಂ ಮುಂದೆ ವರಲಾ ರಾಮಯ್ಯ ನಿವೇದನೆ >> 23 ವರ್ಷಗಳಿಂದ ನಾಪತ್ತೆಯಾಗಿರುವ ಸೈನಿಕ ಪುತ್ರನ ಬಿಡುಗಡೆಗೆ ಸುಪ್ರೀಂ ಮೊರೆಹೋದ ತಾಯಿ >> ಫಾರೂಕ್‌ ಅಬ್ದುಲ್ಲಾ ಮನವಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

Bar & Bench

[ಅಮರಾವತಿ ಭೂಹಗರಣ] ಪ್ರತೀಕಾರ ತೀರಿಸಿಕೊಳ್ಳಲು ಟಿಡಿಪಿ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಯತ್ನ: ಸುಪ್ರೀಂಗೆ ವರ್ಲಾ ರಾಮಯ್ಯ ವಿವರಣೆ

ಅಮರಾವತಿ ಭೂಹಗರಣದಲ್ಲಿ ಹಿಂದಿನ ಸರ್ಕಾರದ ನೇತೃತ್ವ ವಹಿಸಿದ್ದ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸದಸ್ಯರಾಗಿದ್ದವರನ್ನು ಸಿಲುಕಿಸುವ ಮೂಲಕ ಹಿಂದೆ ತಮ್ಮನ್ನು 16 ತಿಂಗಳು ಜೈಲಿಗಟ್ಟಿದ್ದರ ಪ್ರತೀಕಾರಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ಮುಂದಾಗಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಮುಖಂಡ ವರ್ಲಾ ರಾಮಯ್ಯ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

Jaganmohan Reddy and Supreme Court

ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಗನ್‌ 16 ತಿಂಗಳು ಜೈಲಿನಲ್ಲಿದ್ದರು. “ತನ್ನ ವಿರುದ್ಧ ಪ್ರಕರಣ ದಾಖಲಿಸಿ ಹಾಗೂ ತನ್ನನ್ನು ಜೈಲಿಗೆ ಕಳುಹಿಸುವುದಕ್ಕೆ ಕಾರಣ ಎಂದು ಅವರು ನಂಬಿರುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು 2019ರ ಮೇ 30ರಂದು ಮುಖ್ಯಮಂತ್ರಿಯಾದ ದಿನದಿಂದಲೂ ಅವರು ಮುಂದಾಗಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಮರಾವತಿ ಭೂಹಗರಣದ ತನಿಖೆ ನಡೆಸಲು ರೆಡ್ಡಿ ಸರ್ಕಾರ ರಚಿಸಿರುವ ಉಪ-ಸಮಿತಿಯ ವಿಚಾರಣಾ ನಿಬಂಧನೆಗಳನ್ನು ಪರಿಶೀಲಿಸಿದರೆ ಅಲ್ಲಿ ಸ್ಪಷ್ಟವಾಗುವುದೇನೆಂದರೆ “ಉಪ ಸಮಿತಿ ರಚಿಸಿರುವ ಉದ್ದೇಶವು ಯಾವುದೇ ಸಕಾರಣವಿಲ್ಲದೇ ರಾಜಕೀಯ ಕಾರಣಕ್ಕಾಗಿ ಹಿಂದಿನ ಸರ್ಕಾರದ ಪ್ರತಿಯೊಂದು ನಡೆಯನ್ನು ಪತ್ತೆ ಮಾಡುವುದು ಹಾಗೂ ಪರಿಶೀಲನೆ ನಡೆಸುವುದಾಗಿದೆ” ಎಂದಿದ್ದಾರೆ.

23 ವರ್ಷಗಳಿಂದ ನಾಪತ್ತೆಯಾಗಿದ್ದ ಸೈನಿಕ ಪುತ್ರನನ್ನು ಪಾಕಿಸ್ತಾನ ಜೈಲಿನಿಂದ ಬಿಡುಗಡೆ ಮಾಡಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ತಾಯಿ

ಇಪ್ಪತ್ತಮೂರು ವರ್ಷಗಳ ಹಿಂದೆ ಗುಜರಾತಿನಲ್ಲಿರುವ ಕಛ್‌ನ ರಣ್‌‌ ಪ್ರದೇಶದಿಂದ ನಾಪತ್ತೆಯದ ಸೈನಿಕನ ತಾಯಿಯು ಪಾಕಿಸ್ತಾನದ ಜೈಲಿನಲ್ಲಿರುವ ಪುತ್ರನನ್ನು ಬಿಡುಗಡೆ ಮಾಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ತನ್ನ ಮನವಿಗೆ ಸಂಬಂಧಿಸಿದಂತೆ ತಕ್ಷಣ ಕಾರ್ಯಪ್ರವೃತ್ತಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಕ್ಯಾಪ್ಟನ್‌ ಸಂಜಿತ್‌ ಭಟ್ಟಾಚಾರ್ಜಿ ಅವರ ತಾಯಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Army

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠವು ನಾಪತ್ತೆಯಾಗಿರುವ ಎಲ್ಲ ಸೇನಾ ಸಿಬ್ಬಂದಿಯ ಪಟ್ಟಿ ಮಾಡುವಂತೆ ಇದೇ ವೇಳೆ ಅರ್ಜಿದಾರರ ಪರ ವಕೀಲ ಸೌರಭ್‌ ಮಿಶ್ರಾ ಅವರಿಗೆ ಸೂಚಿಸಿತು. ಕಳೆದ ಇಪ್ಪತ್ತಮೂರು ವರ್ಷಗಳಿಂದ ಸಂಬಂಧಿತ ಪ್ರಾಧಿಕಾರದ ಮುಂದೆ ತನ್ನ ಅಹವಾಲು ಹೇಳಿಕೊಳ್ಳಲು ಅಥವಾ ತನ್ನ ಪುತ್ರ ಕುಟುಂಬದ ಜೊತೆ ಸಂವಹನ ನಡೆಸಲು ಯಾವುದೇ ಅವಕಾಶ ನೀಡಿಲ್ಲ ಎಂದು ಅರ್ಜಿದಾರೆಯಾದ ಕಮಲಾ ಭಟ್ಟಾಚಾರ್ಜಿ ಹೇಳಿದ್ದಾರೆ. ಕಛ್‌ನ ರಣ್‌ ಪ್ರದೇಶದಲ್ಲಿ 1997ರ ಏಪ್ರಿಲ್‌ 19ರ ತಡರಾತ್ರಿ ಕ್ಯಾಪ್ಟನ್‌ ಸಂಜಿತ್‌ ಅವರು ಇತರೆ ಸೈನಿಕರೊಂದಿಗೆ ಇಂಡೊ-ಪಾಕ್‌ ಗಡಿಯಲ್ಲಿ ಗಸ್ತಿಗೆ ತೆರಳಿದ್ದರು. ಮಾರನೇಯ ದಿನ ಗಸ್ತಿಗೆ ತೆರಳಿದ್ದ 15 ಮಂದಿ ವಾಪಸಾಗಿದ್ದರು. ಶಂಕಾಸ್ಪದವಾಗಿ ಕ್ಯಾಪ್ಟನ್‌ ಸಂಜಿತ್‌ ಮತ್ತು ಲ್ಯಾನ್ಸ್‌ ನಾಯಕ್‌ ರಾಮ್‌ ಬಹದೂರ್‌ ಥಾಪಾ ನಾಪತ್ತೆಯಾಗಿದ್ದರು. ಬಳಿಕ ಕ್ಯಾಪ್ಟನ್‌ ಸಂಜಿತ್‌ ಅವರು ಪಾಕಿಸ್ತಾನ ಜೈಲಿನಲ್ಲಿರುವುದಾಗಿ ತಿಳಿದು ಬಂದಿತ್ತು.

ಜೆಕೆಸಿಎ ಹವಾಲಾ ಹಣ ಪ್ರಕರಣ: ಜಾರಿ ನಿರ್ದೇಶನಾಲಯ ವ್ಯಾಪ್ತಿ ಪ್ರಶ್ನಿಸಿದ್ದ ಫಾರೂಕ್‌ ಅಬ್ದುಲ್‌ ಮನವಿ ವಿಚಾರಣೆಯಿಂದ ಹಿಂದೆ ಸರಿದ ಜಮ್ಮು ಮತ್ತು ಹೈಕೋರ್ಟ್‌ ನ್ಯಾಯಮೂರ್ತಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ವಿರುದ್ಧ ಪ್ರಕ್ರಿಯೆ ಆರಂಭಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಫಾರೂಕ್‌ ಅಬ್ದುಲ್‌ ಸಲ್ಲಿಸಿರುವ ಮನವಿ ವಿಚಾರಣೆ ನಡೆಸುವುದರಿಂದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನ್ಯಾಯಮೂರ್ತಿ ಅಲಿ ಮೊಹಮ್ಮದ್‌ ಮ್ಯಾಗ್ರೆ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವು ಮತ್ತೊಂದು ಪೀಠದ ಮುಂದೆ ವಿಚಾರಣೆಗೆ ಒಳಪಡಲಿದೆ. 2012ರಲ್ಲಿ ಹೊರಬಿದ್ದಿದ್ದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಸಂಸ್ಥೆಗೆ (ಜೆಕೆಸಿಎ) ಸಂಬಂಧಿಸಿದ ಹಣ ದುರ್ಬಳಕೆಗೆ ಆರೋಪದಿಂದ ಉದ್ಭವಿಸಿದ ಪ್ರಕರಣ ಇದಾಗಿದೆ.

Farooq Abdullah, ED

ಹಣ ದುರ್ಬಳಕೆ ಆರೋಪ ಕೇಳಿಬರುತ್ತಿದ್ದಂತೆ ಆಗ ಜೆಕೆಸಿಎ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಅವರು ಪದಾಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಇದರ ಬೆನ್ನಿಗೇ ರಣಬೀರ್‌ ದಂಡ ಸಂಹಿತೆಯ ಸೆಕ್ಷನ್‌ಗಳಾದ 409, 406 ಮತ್ತು 120ಬಿ ಅಡಿ ಕ್ರಿಮಿನಲ್‌ ನಂಬಿಕೆ ದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಗಳಾದ ಸಲೀಮ್‌ ಖಾನ್‌ ಮತ್ತು ಅಹ್ಸಾನ್‌ ಮಿರ್ಜಾ ಅವರನ್ನು ಆರೋಪಿಗಳು ಎಂದು ಹೇಳಲಾಗಿತ್ತು. ಎಚ್ಚೆತ್ತುಕೊಂಡಿದ್ದ ಅಬ್ದುಲ್ಲಾ ಅವರು ಪ್ರಕರಣದ ತನಿಖೆಗಾಗಿ ಆಂತರಿಕ ಸಮಿತಿ ರಚಿಸಿದ್ದರು. ಮಧ್ಯಂತರ ವರದಿ ಸಲ್ಲಿಸಿದ್ದ ಸಮಿತಿಯು ಜೆಕೆಸಿಎನ ಕೆಲವು ಪದಾಧಿಕಾರಿಗಳು ಹಣ ದುರುಪಯೋಗ ಮಾಡಿಕೊಂಡಿರುವುದಾಗಿ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸಿಬಿಐ ಪ್ರಕರಣ ವರ್ಗಾಯಿಸುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನಿರ್ದೇಶಿಸಿತ್ತು. ಜೆಕೆಸಿಎ ನಿಯಮಗಳನ್ನು ಉಲ್ಲಂಘಿಸಿ ಅಬ್ದುಲ್ಲಾ ಅವರು ಅಹ್ಸಾನ್‌ ಅಹ್ಮದ್‌ ಮಿರ್ಜಾ ಅವರನ್ನು ಖಜಾಂಚಿಯಾಗಿ ನೇಮಿಸಿದ್ದರು ಎಂದಿದ್ದ ಸಿಬಿಐ ಅಬ್ದುಲ್ಲಾ ಅವರನ್ನು ಆರೋಪಿ ಎಂದಿತ್ತು. ಅಬ್ದುಲ್ಲಾ ಅವರು ಮಿರ್ಜಾಗೆ ಕಾನೂನುಬಾಹಿರವಾಗಿ ಬ್ಯಾಂಕ್‌ ಖಾತೆ ನಿರ್ವಹಿಸಲು ಮತ್ತು 1.9 ಕೋಟಿ ರೂಪಾಯಿ ಸಾಲ ಮರುಪಾವತಿಸಲು ಅನುಮತಿ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನು ಆಧರಿಸಿ 2018ರಲ್ಲಿ ಜಾರಿ ನಿರ್ದೇಶನಾಲಯವು ಅಬ್ದುಲ್ಲಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಬ್ದುಲ್ಲಾ ಅವರು ದೂರು ದಾಖಲಿಸಿಕೊಳ್ಳಲು ಇದು ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ತಕರಾರು ತೆಗೆದಿದ್ದಾರೆ.