ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 22-2-2021

>> ಸುಪ್ರೀಂಕೋರ್ಟ್‌ನಲ್ಲಿ 58 ಹೇಬಿಯಸ್ ಕಾರ್ಪಸ್ ಅರ್ಜಿಗಳು ಬಾಕಿ >> ಅಮರಾವತಿ ಭೂ ಹಗರಣ ಪ್ರಕರಣ >> ಜೀವನಾಂಶ ಕುರಿತು ಮದ್ರಾಸ್‌ ಹೈಕೋರ್ಟ್‌ ತೀರ್ಪು >> ವಕೀಲರ ದಾಖಲಾತಿಗೆ ಸಂಬಂಧಿಸಿದ ಸೂಚನೆ

Bar & Bench

58 ಹೇಬಿಯಸ್ ಕಾರ್ಪಸ್ ಅರ್ಜಿಗಳು ಬಾಕಿ, ಅತಿ ಹಳೆಯ ಅರ್ಜಿ 2005ರಷ್ಟು ಹಿಂದಿನದು: ಆರ್‌ಟಿಐ ಅಡಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸಿದ ಸುಪ್ರೀಂಕೋರ್ಟ್‌

ಪತ್ರಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸೌರವ್‌ ದಾಸ್‌ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್‌ 58 ಹೇಬಿಯಸ್ ಕಾರ್ಪಸ್ ಅರ್ಜಿಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು ಅತಿ ಹಳೆಯ ಅರ್ಜಿ 2005ನೇ ಇಸವಿಯಷ್ಟು ಹಿಂದಿನದು ಎಂದು ವಿವರಿಸಿದೆ. ಕಳೆದ 3 ತಿಂಗಳು, 6 ತಿಂಗಳು, 1 ವರ್ಷ, 2 ವರ್ಷ, 3 ವರ್ಷ, 4 ವರ್ಷ, 5 ವರ್ಷ ಮತ್ತು 10 ವರ್ಷಗಳಲ್ಲಿ ವಿಚಾರಣೆಗೆ ಪಟ್ಟಿ ಮಾಡದ ಒಟ್ಟು ಪ್ರಕರಣಗಳ ವಿವರ ಮತ್ತು ವರ್ಗವಾರು ವಿವರಗಳನ್ನು ಕೂಡ ದಾಸ್ ಕೋರಿದ್ದರು. ಆದರೆ ಅರ್ಜಿದಾರರು ಬಯಸಿದ ರೀತಿಯಲ್ಲಿ ಅಂತಹ ಮಾಹಿತಿಯನ್ನು ನಿರ್ವಹಣೆ ಮಾಡಿಲ್ಲದ ಕಾರಣ ಅದನ್ನು ನೀಡಲಾಗುತ್ತಿಲ್ಲ ಎಂದು ಕೋರ್ಟ್‌ ಹೇಳಿದೆ.

Supreme Court

ತಮ್ಮ 21 ವರ್ಷದ ಲಿವ್‌- ಇನ್‌ ಸಂಗಾತಿಯನ್ನು ಪೋಷಕರಿಂದ ಬಿಡುಗಡೆ ಮಾಡುವಂತೆ 42 ವರ್ಷದ ಆಧ್ಯಾತ್ಮಿಕ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ಹಾಗೂ ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ಹೋಗಿ ಉತ್ತರಪ್ರದೇಶ ಪೊಲೀಸರಿಂದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಪರವಾಗಿ ಸಲ್ಲಿಸಿದ ಮನವಿಗಳು ಬಾಕಿ ಉಳಿದಿರುವ ಇತ್ತೀಚಿನ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳಾಗಿವೆ. ಹೇಬಿಯಸ್‌ ಕಾರ್ಪಸ್‌ ಅರ್ಜಿಗಳ ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್‌ ಉದಾರವಾಗಿರಬೇಕು ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ವೆಬಿನಾರ್‌ ಒಂದರಲ್ಲಿ ಅಭಿಪ್ರಾಯಪಟ್ಟಿದ್ದರು.

ಫೋನ್‌ ಸಂಭಾಷಣೆ ತನಿಖೆ ಪ್ರಶ್ನಿಸಿ ಆಂಧ್ರ ಹೈಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ವಿ ಈಶ್ವರಯ್ಯ ಸಲ್ಲಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ

ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ ಈಶ್ವರಯ್ಯ ಮತ್ತು ಅಮಾನತಾದ ಜಿಲ್ಲಾ ಮುನ್ಸಿಫ್‌ ಮ್ಯಾಜಿಸ್ಟ್ರೇಟ್‌ ಒಬ್ಬರ ನಡುವೆ ನಡೆದ ದೂರವಾಣಿ ಮಾತುಕತೆಯ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂಕೋರ್ಟ್‌ ಸೋಮವಾರ ಕಾಯ್ದಿರಿಸಿದೆ. ಮಾತುಕತೆ ಕುರಿತಂತೆ ತನಿಖೆ ನಡೆಸಲು ಆಂಧ್ರಪ್ರದೇಶ ಹೈಕೋರ್ಟ್‌ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ಅವರನ್ನು ಕೋರಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈಶ್ವರನ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್ ಆದೇಶ ತಡೆಹಿಡಿಯಬೇಕೆಂದು ಈಶ್ವರಯ್ಯ ಅವರ ಪರ ನ್ಯಾಯವಾದಿ ಪ್ರಶಾಂತ್‌ ಭೂಷಣ್ ಒತ್ತಾಯಿಸಿದಾಗ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಅದನ್ನು ಸ್ಪಷ್ಟಪಡಿಸುವುದಾಗಿ ಹೇಳಿ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಆರ್‌ ಸುಭಾಷ್‌ ರೆಡ್ಡಿ ಅವರಿದ್ದ ಪೀಠ ತೀರ್ಪನ್ನು ಕಾಯ್ದಿರಿಸಿತು. "ಮಾತುಕತೆಯನ್ನು ಸಂಕಲಿಸಲಾಗಿದೆ. ತನಿಖೆ ನಡೆಸುವುದಾದರೆ ಇಡೀ ಸಂಗತಿ ಕುರಿತು ತನಿಖೆ ನಡೆಸಬೇಕು. ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿಯೊಬ್ಬರ ಭೂ ವ್ಯವಹಾರಗಳ ಬಗ್ಗೆ ಮಾತನಾಡಿದ್ದೇನೆ. ಅದರ ಬಗ್ಗೆಯೂ ತನಿಖೆಯಾಗಬೇಕು" ಎಂಬುದು ಈಶ್ವರಯ್ಯ ಅವರ ವಾದವಾಗಿತ್ತು. ಅಮಾನತುಗೊಂಡ ನ್ಯಾಯಾಧೀಶರ ಪರವಾಗಿ ಕಪಿಲ್‌ ಸಿಬಲ್‌, ಆಂಧ್ರಪ್ರದೇಶದ ವಕೀಲರೊಬ್ಬರ ಪರವಾಗಿ ಹರೀಶ್‌ ಸಾಳ್ವೆ, ವಾದ ಮಂಡಿಸಿದರು.

ಅರ್ಜಿ ಸಲ್ಲಿಸಿದ ದಿನದಿಂದಲೇ ಜೀವನಾಂಶ ನೀಡಬೇಕು, ನ್ಯಾಯಾಲಯ ಆದೇಶದ ದಿನದಿಂದ ಅಲ್ಲ: ಮದ್ರಾಸ್‌ ಹೈಕೋರ್ಟ್‌

ಜೀವನಾಂಶಕ್ಕೆ ಸಂಬಂಧಿಸಿದ ವಿಚಾರಣೆ ಎಷ್ಟು ದಿನಗಳ ಕಾಲ ನಡೆಯುತ್ತದೆ ಎಂಬುದು ಅರ್ಜಿದಾರರಿಗೆ ತಿಳಿದಿರುವುದಿಲ್ಲವಾದ ಕಾರಣ ವೈವಾಹಿಕ ವ್ಯಾಜ್ಯಗಳಲ್ಲಿ ಅರ್ಜಿ ಸಲ್ಲಿಸಿದ ದಿನದಿಂದಲೇ ಜೀವನಾಂಶ ನೀಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ತಿಳಿಸಿದೆ. ಸಾಕಷ್ಟು ಪೂರಕ ಅಂಶಗಳಿದ್ದಲ್ಲಿ ಮಾತ್ರ ಆದೇಶದ ದಿನಾಂಕದಿಂದ ಪರಿಹಾರ ನೀಡಬಹುದು ಎಂದು ನ್ಯಾಯಮೂರ್ತಿ ಕೆ ಮುರಳಿ ಶಂಕರ್ ತೀರ್ಪು ನೀಡಿದ್ದಾರೆ. (ಮೊಹಮ್ಮದ್ ನಿಶಾ ಬಾನು ಮತ್ತು ಮೊಹಮ್ಮದ್ ರಫಿ ಮತ್ತಿತರರ ನಡುವಣ ಪ್ರಕರಣ).

Justice K Murali Shankar, Madras High Court

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅವಲಂಬಿಸಿ ಕೋರ್ಟ್‌ ಈ ಆದೇಶ ಹೊರಡಿಸಿದೆ. ತಮಗೆ ನೀಡಲಾಗಿದ್ದ ರೂ 5,000 ಜೀವನಾಂಶ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಿ ವಿಚ್ಛೇದಿತ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ದಿನಾಂಕದಿಂದ ಜೀವನಾಂಶ ನೀಡದಿರಲು ಅಥವಾ ಆದೇಶದ ದಿನಾಂಕದಿಂದ ಮಾತ್ರ ಪರಿಹಾರ ನೀಡಲು ಕೆಳ ನ್ಯಾಯಾಲಯ ಯಾವುದೇ ಕಾರಣ ತಿಳಿಸಿಲ್ಲ ಎಂದು ಹೈಕೋರ್ಟ್‌ ಹೇಳಿತು. 2014ರಲ್ಲೇ ಅರ್ಜಿ ಸಲ್ಲಿಸಿದ್ದರೂ 2017ರ ಆದೇಶದ ದಿನದಿಂದ ಪರಿಹಾರ ನೀಡುವಂತೆ ಕೆಳ ಹಂತದ ನ್ಯಾಯಾಲಯ ಸೂಚಿಸಿತ್ತು.

ವಕೀಲರ ದಾಖಲಾತಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ ಮಾಡುವ ಕುರಿತು ನಿರ್ಧಾರ ಕೈಗೊಳ್ಳುವಂತೆ ಬಿಸಿಡಿಗೆ ಸೂಚಿಸಿದ ದೆಹಲಿ ಹೈಕೋರ್ಟ್‌

ವಕೀಲರ ಸಂಪೂರ್ಣ ಆನ್‌ಲೈನ್ ದಾಖಲಾತಿ (ಎನ್‌ರೋಲ್ಮೆಂಟ್‌) ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ದೆಹಲಿ ಹೈಕೋರ್ಟ್ ಸೋಮವಾರ ದೆಹಲಿ ವಕೀಲರ ಪರಿಷತ್ತಿಗೆ (ಬಿಸಿಡಿ) ಸೂಚಿಸಿದೆ. ಆದರೆ ದಾಖಲಾತಿಗಾಗಿ ದೆಹಲಿ ಅಥವಾ ಎನ್‌ಸಿಆರ್‌ ಪ್ರದೇಶದಲ್ಲಿ ವಾಸವಿರಬೇಕು ಎಂಬ ಬಿಸಿಡಿ ನಿಯಮವನ್ನು ಪ್ರಶ್ನಿಸಲು ನ್ಯಾಯಾಲಯ ಇದೇ ಸಂದರ್ಭದಲ್ಲಿ ನಿರಾಕರಿಸಿದೆ.

ಅದೇ ಆದೇಶದ ಪ್ರಕಾರ, ಅಭ್ಯರ್ಥಿಯು ದೆಹಲಿ ಅಥವಾ ಎನ್‌ಸಿಆರ್ ಪ್ರದೇಶದಲ್ಲಿ ದಾಖಲಾತಿಗಾಗಿ ವಾಸಿಸುತ್ತಿದ್ದಾನೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿರುವ ಬಿಸಿಡಿ ನಿಯಮಗಳನ್ನು ಪ್ರಶ್ನಿಸಲು ನ್ಯಾಯಾಲಯ ನಿರಾಕರಿಸಿತು. ಆದರೂ ಕೋವಿಡ್‌ ಕಾರಣದಿಂದಾಗಿ ಅಭ್ಯರ್ಥಿ ತೊಂದರೆ ಎದುರಿಸುತ್ತಿದ್ದರೆ ಅಥವಾ ಅಸಾಮಾನ್ಯ ಸಂದರ್ಭಗಳು ಎದುರಾಗಿದ್ದಲ್ಲಿ ಪ್ರಕರಣವನ್ನು ಆಧರಿಸಿ ಷರತ್ತನ್ನು ಸಡಿಲಗೊಳಿಸುವಂತೆ ನ್ಯಾಯಾಲಯ ಬಿಸಿಡಿಯನ್ನು ಕೇಳಿದೆ. ಕೋವಿಡ್‌ ಸಂದರ್ಭದಲ್ಲಿ ವಕೀಲರ ದಾಖಲಾತಿ ಸಕ್ರಿಯಗೊಳಿಸಲು ಬಿಸಿಡಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಇದೇ ಸಂದರ್ಭದಲ್ಲಿ ತಿಳಿಸಿದರು.