ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು 2016ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ದೆಹಲಿಯ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪನ್ನು ದೆಹಲಿ ನ್ಯಾಯಾಲಯ ಮಂಗಳವಾರ ಎತ್ತಿ ಹಿಡಿದಿದೆ. ತಮ್ಮ ವಿರುದ್ಧದ ಅಪರಾಧ ಮತ್ತು ಶಿಕ್ಷೆಯ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ (ಶಾಸಕ/ಸಂಸದರ ಪ್ರಕರಣ) ವಿಕಾಸ್ ಧುಲ್ ಅವರು ಆದೇಶ ಹೊರಡಿಸಿದ್ದಾರೆ.
“ಭಾರ್ತಿ ಅವರು ತಮ್ಮ ವಿರುದ್ಧದ ಐಪಿಸಿ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಕ್ಕೆ ಶಿಕ್ಷೆ), 353 (ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ), 149 (ಒಂದು ಸಾಮಾನ್ಯ ಉದ್ದೇಶಕ್ಕಾಗಿ ಅಪರಾಧಿಗಳೆಲ್ಲರೂ ಕಾನೂನುಬಾಹಿರವಾಗಿ ಒಂದು ಕಡೆ ನೆರೆಯುವುದು), ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ಸೆಕ್ಷನ್ 3 (ಸಾರ್ವಜನಿಕ ಆಸ್ತಿಗೆ ಹಾನಿ), ಮತ್ತು ಐಪಿಸಿ ಸೆಕ್ಷನ್ 147ಕ್ಕೆ (ದೊಂಬಿಗೆ ಶಿಕ್ಷೆ) ಪೂರಕವಾದ ಸೆಕ್ಷನ್ 149ರ ಅಡಿ ಎತ್ತಿಹಿಡಿದಿರುವ ತೀರ್ಪಿನ ಮೇಲ್ಮನವಿಯನ್ನು ಬದಿಗೆ ಸರಿಸಿಲಾಗಿದೆ” ಎಂದು ಪೀಠ ಹೇಳಿದೆ. ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆ (ಪಿಡಿಪಿಪಿ ಕಾಯಿದೆ) ಸೆಕ್ಷನ್ 3 (1)ರಡಿ ಭಾರ್ತಿ ಅವರಿಗೆ ಎರಡು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಮಹಿಳೆಯರು ಮತ್ತು ನ್ಯಾಯಾಂಗವನ್ನು ಅವಹೇಳನ ಮಾಡುವಂತಹ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರಿಗೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಳೆದ ತಿಂಗಳು ಕರ್ಣನ್ ಅವರ ಮೊದಲ ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ಕರ್ಣನ್ ಅವರು ಸಲ್ಲಿಸಿದ ಎರಡನೇ ಮನವಿಯನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಿದೆ. ಇಬ್ಬರ ಭದ್ರತೆ ಮತ್ತು ಐವತ್ತು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಪಡೆದು ನ್ಯಾಯಮೂರ್ತಿ ವಿ ಭಾರತಿದಸನ್ ಜಾಮೀನು ಮಂಜೂರು ಮಾಡಿದ್ದಾರೆ. ಮಹಿಳಾ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳ ಪತ್ನಿಯರ ವಿರುದ್ಧ ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಆರೋಪದಲ್ಲಿ ಕಳೆದ ವರ್ಷ ಕರ್ಣನ್ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದವು.
ಓವರ್ ದಿ ಟಾಪ್ (ಒಟಿಟಿ) ತಾಣಗಳ ನಿಯಂತ್ರಣದ ಕುರಿತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿನ ವಿಚಾರಣೆಗೆ ಮಂಗಳವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಒಟಿಟಿ ತಾಣಗಳಲ್ಲಿ ಪ್ರಸಾರ/ಪ್ರಚಾರ/ಪ್ರಕಟ ಮಾಡುವ ಮಾಹಿತಿಯ ಮೇಲೆ ನಿಗಾ ಇಡಲು ಕೇಂದ್ರ ಘಟಕ ಸ್ಥಾಪಿಸುವಂತೆ ವಕೀಲ ಶಶಾಂಕ್ ಶೇಖರ್ ಝಾ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಂ ಆರ್ ಶಾ ಮತ್ತು ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಂಬಂಧ ಎಲ್ಲಾ ಮನವಿಗಳನ್ನು ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರವು ವರ್ಗಾವಣೆ ಮನವಿ ಸಲ್ಲಿಸಿತ್ತು. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವರ್ಗಾವಣೆ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಸರ್ವೋಚ್ಚ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದರೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅರ್ಹತೆ ಆಧರಿಸಿ ವಿಚಾರಣೆ ನಡೆಸುತ್ತಿದೆ ಎಂದು ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ವರ್ಗಾವಣೆ ಮನವಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದರೆ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ವಿಚಾರಣೆಗೆ ತಡೆ ನೀಡಲಾಗಿದೆ ಎಂದರ್ಥ ಎಂದು ನ್ಯಾ. ಡಿ ವೈ ಚಂದ್ರಚೂಡ್ ಹೇಳಿದರು.
ಛತ್ತೀಸಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೀಡಿರುವ ಹೊಸ ಜವಾಬ್ದಾರಿಗೆ ಅನುಮತಿ ನೀಡಿದ ಬೆನ್ನಿಗೇ ಛತ್ತೀಸಗಢ ಹೈಕೋರ್ಟ್ ನ್ಯಾಯಮೂರ್ತಿ ಶರದ್ ಕುಮಾರ್ ಗುಪ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ಛತ್ತೀಸಗಢ ಸರ್ಕಾರ ನೀಡಲಿರುವ ಹೊಸ ಜವಾಬ್ದಾರಿಗೆ ನನ್ನ ಒಪ್ಪಿಗೆ ನೀಡಿರುವುದರಿಂದ ಮಾರ್ಚ್ 31ರಂದು ಮಧ್ಯಾಹ್ನ ಪದತ್ಯಾಗ ಮಾಡಲಿದ್ದೇನೆ. ಈ ಕಾರಣಕ್ಕಾಗಿ ತಾವು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಗೌರವ ಪೂರ್ವಕವಾಗಿ ಕೋರುತ್ತೇನೆ” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಗುಪ್ತ ವಿವರಣೆ ನೀಡಿದ್ದಾರೆ.
ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪುತ್ರರಾದ ನ್ಯಾ. ಗುಪ್ತ ಅವರು 1985ರಲ್ಲಿ ಮಧ್ಯಪ್ರದೇಶ ನ್ಯಾಯಿಕ ಸೇವೆಯಲ್ಲಿ ಸಿವಿಲ್ ನ್ಯಾಯಾಧೀಶರಾಗುವ ಮೂಲಕ ವೃತ್ತಿ ಬದುಕು ಆರಂಭಿಸಿದ್ದರು. 2017ರಲ್ಲಿ ಅವರು ಛತ್ತೀಸಗಢ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಏಪ್ರಿಲ್ 14ರಂದು ನ್ಯಾ. ಗುಪ್ತ ನಿವೃತ್ತಿ ಹೊಂದಲಿದ್ದರು.