ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 20-2-2021

>> ದೆಹಲಿ ಹೈಕೋರ್ಟ್‌ನಲ್ಲಿ ಮಾರ್ಚ್‌ 15ರಿಂದ ಭೌತಿಕ ವಿಚಾರಣೆ ಆರಂಭ >> ಸಂಜಯ್‌ ದತ್‌ ಬಿಡುಗಡೆಯ ವಿವರಣೆ ಕೋರಿದ ರಾಜೀವ್‌ ಹತ್ಯೆ ಅಪರಾಧಿ ಪೆರಾರಿವಾಲನ್‌ >> ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾನೂನು ಪ್ರಶ್ನಿಸಿರುವ ಮನವಿ

Bar & Bench

ಮಾರ್ಚ್‌ 15ರಿಂದ ಸಂಪೂರ್ಣವಾಗಿ ಭೌತಿಕ ವಿಚಾರಣೆ ಆರಂಭಿಸಲಿರುವ ದೆಹಲಿ ಹೈಕೋರ್ಟ್‌

ಸುಮಾರು ಒಂದು ವರ್ಷದ ಬಳಿಕ ಮಾರ್ಚ್‌ 15ರಿಂದ ಸಂಪೂರ್ಣವಾಗಿ ಭೌತಿಕ ವಿಚಾರಣೆ ಆರಂಭಿಸಲಾಗುವುದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಮಾರ್ಚ್‌ 12ರ ವರೆಗೆ ಹಿಂದಿನ ವ್ಯವಸ್ಥೆ ಇರಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ವರ್ಚುವಲ್‌ ವ್ಯವಸ್ಥೆಯ ಮೂಲಕ ಮಾತ್ರ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್‌ ಸೀಮಿತ ಅವಧಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಭೌತಿಕ ವಿಚಾರಣೆ ಆರಂಭಿಸಿತ್ತು.

High court of Delhi

ಪ್ರಸಕ್ತ ವರ್ಷದ ಜನವರಿ 18ರಿಂದ ಹೈಕೋರ್ಟ್‌ನ ಹನ್ನೊಂದು ಪೀಠಗಳು ಕಾರ್ಯಾರಂಭ ಮಾಡಿದ್ದು, ಇದರಲ್ಲಿ ಎರಡು ವಿಭಾಗೀಯ ಪೀಠಗಳು, ತಲಾ ಮೂರು ಸಿವಿಲ್ ಮತ್ತು ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ಏಕಸದಸ್ಯ ಪೀಠಗಳು ‌, ಮೂರು ಪ್ರಮುಖ ವ್ಯಾಪ್ತಿಯ ನ್ಯಾಯಾಲಯಗಳು ಭೌತಿಕ ವಿಚಾರಣೆ ನಡೆಸುತ್ತಿವೆ. ಕೆಲವು ಪೀಠಗಳು ಹೈಬ್ರಿಡ್‌ ವಿಧಾನದ ಮೂಲಕ ಕಲಾಪ ನಡೆಸುತ್ತಿವೆ. ಶೀಘ್ರದಲ್ಲೇ ಭೌತಿಕ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಅವರಿಗೆ ಮನವಿ ಮಾಡಿದ್ದ ದೆಹಲಿ ವಕೀಲರ ಪರಿಷತ್ತು ನಿಲುವಳಿಗೆ ಒಪ್ಪಿಗೆ ನೀಡಿತ್ತು.

ಸಂಜಯ್‌ ದತ್‌ ಶೀಘ್ರ ಬಿಡುಗಡೆ ಮಾಡಿದ್ದ ವಿವರಣೆ ಕೋರಿದ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಎ ಜಿ ಪೆರಾರಿವಾಲನ್‌ : ಎಸ್‌ಐಸಿಗೆ ನೋಟಿಸ್‌ ನೀಡಿದ ಬಾಂಬೆ ಹೈಕೋರ್ಟ್‌

1993ರಲ್ಲಿ ನಡೆದಿದ್ದ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಸಂಜಯ್‌ ದತ್‌ ಅವರನ್ನು ಮುಂಚಿತವಾಗಿ ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನ ಮಂತ್ರಿ ರಾಜೀವ್‌ ಗಾಂಧಿ ಅವರ ಹತ್ಯೆಯಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಎ ಜಿ ಪೆರಾರಿವಾಲನ್‌ ಕೋರಿರುವ ಮಾಹಿತಿಯನ್ನು ನೀಡುವಂತೆ ರಾಜ್ಯ ಮಾಹಿತಿ ಆಯೋಗಕ್ಕೆ (ಎಸ್‌ಐಸಿ) ಬಾಂಬೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Sanjay Dutt, AG Perarivalan

ಪೆರಾರಿವಾಲನ್ ಅವರ ಕ್ಷಮಾದಾನ ಮತ್ತು ಬಿಡುಗಡೆ ಕುರಿತು ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡುವಂತೆ ಗೃಹ ಸಚಿವಾಲಯದ ಅಫಿಡವಿಟ್‌ನಲ್ಲಿ ದಾಖಲೆ ವಿವರಗಳನ್ನು ಸಲ್ಲಿಸಲು ನ್ಯಾಯಮೂರ್ತಿಗಳಾದ ಕೆ ಕೆ ತಾಟೇಡ್‌ ಮತ್ತು ಆರ್ ‌ಐ ಚಾಗ್ಲಾ ಅವರು ಅನುಮತಿಸಿದ್ದಾರೆ. ರಾಜೀವ್‌ ಗಾಂಧಿ ಅವರನ್ನು ಹತ್ಯೆ ಸಂಚಿನಲ್ಲಿ ಭಾಗಿಯಾದ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪೆರಾರಿವಾಲನ್‌ಗೆ 19 ವರ್ಷವಾಗಿದ್ದಾಗ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಚೆನ್ನೈನ ಪುಗಳ್‌ ಕೇಂದ್ರ ಕಾರಾಗೃಹದಲ್ಲಿ ಪೆರಾರಿವಾಲನ್‌ ಇದ್ದಾರೆ. 2016ರಲ್ಲಿ ದತ್‌ ಅವರನ್ನು ಮುಂಚಿತವಾಗಿ ಜೈಲಿನಿಂದ ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯ ಕೋರಲಾಗಿತ್ತೇ ಎಂಬುದನ್ನು ಅರಿಯುವ ಕುರಿತು ಪೆರಾರಿವಾಲ್‌ ಅವರು ಮಾಹಿತಿ ಹಕ್ಕು ಕಾಯಿದೆಯ ಮೂಲಕ ಯೆರವಾಡ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಿದ್ದರು.

ವೈಯಕ್ತಿಕ ಹಿತಾಸಕ್ತಿ ಈಡೇರಿಸಿಕೊಳ್ಳಲು ಅರ್ಜಿದಾರರು ಕಸಾಯಿಖಾನೆ ನಡೆಸುತ್ತಿದ್ದಾರೆ: ಸುಪ್ರೀಂ ಮೆಟ್ಟಿಲೇರಿದ ಕೃಷಿ ಗೋಸೇವಾ ಸಂಘ

ವೈಯಕ್ತಿಕ ಹಿತಾಸಕ್ತಿ ಈಡೇರಿಸಿಕೊಳ್ಳಲು ಎಮ್ಮೆ ವ್ಯಾಪಾರಸ್ಥರ ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ಕಸಾಯಿಖಾನೆ ನಡೆಸುತ್ತಿದ್ದಾರೆ ಎಂದು ಅಖಿಲ ಭಾರತ ಕೃಷಿ ಗೋಸೇವಾ ಸಂಘವು ಆರೋಪಿಸಿದ್ದು, ಪ್ರಾಣಿಗಳ ಮೇಲೆ ಕ್ರೌರ್ಯ ತಡೆ (ಆಸ್ತಿ ಪ್ರಾಣಿಗಳ ಉಪಚಾರ ಮತ್ತು ನಿರ್ವಹಣೆ) ನಿಯಮಗಳು- 2017 ಅನ್ನು ಪ್ರಶ್ನಿಸಿರುವ ಪ್ರಕರಣದಲ್ಲಿ ತಮ್ಮನ್ನೂ ಪ್ರತಿವಾದಿಗಳನ್ನಾಗಿಸುವಂತೆ ಕೋರಿದೆ.

Cattle

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿ ಆರೋಪಿತ ಶಿಕ್ಷೆ ಅನುಭವಿಸುವ ಮೊದಲೇ ಜಾನುವಾರು ಮತ್ತು ದನಗಳನ್ನು ಸಾಗಿಸಲು ಬಳಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು 2017ರ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾನುವಾರುಗಳನ್ನು ಬಲವಂತವಾಗಿ ಅವರಿಂದ ವಶಪಡಿಸಿಕೊಂಡು ಆ ಬಳಿಕ ಅವರಿಗೆ ಮರಳಿಸಲು ನಿರಾಕರಿಸಲಾಗುತಿದ್ದು, ಅವುಗಳನ್ನು ಗೋಶಾಲೆಗಳಿಗೆ ರವಾನಿಸಲಾಗುತ್ತಿದೆ ಎಂದು ಎಮ್ಮೆ ವ್ಯಾಪಾರಸ್ಥರ ಕಲ್ಯಾಣ ಸಂಸ್ಥೆ ಮನವಿಯಲ್ಲಿ ಆರೋಪಿಸಿದೆ. ಸಮಾಜದಲ್ಲಿನ ದುರ್ಬಲರ ಹಿತಾಸಕ್ತಿ ಕಾಯುವ ಉದ್ದೇಶದಿಂದ ಪಿಐಎಲ್‌ ಸಲ್ಲಿಸಲಾಗಿದೆ ಎಂದು ಹೇಳಿಕೊಂಡು ಪ್ರಾಣಿಗಳ ಮೂಲಕ ವೈಯಕ್ತಿಕ ಲಾಭ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದು ಅಖಿಲ ಭಾರತ ಕೃಷಿ ಗೋಸೇವಾ ಸಂಘ ದೂರಿದೆ.