ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |08-4-2021

>> ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದುಬಾರಿ ದಂಡ >> ಉನ್ನಾವ್‌: ವಕೀಲರ ಪತ್ನಿಗೆ ಪ್ರಾಣ ಬೆದರಿಕೆ ಇಲ್ಲ >> ಅರುಣ್‌ ಪುರಿ ವಿರುದ್ಧ ದೂರು ವಜಾಕ್ಕೆ ನಕಾರ >> ದೆಹಲಿಯಲ್ಲಿ ಇನ್ನು ವರ್ಚುವಲ್‌ ವಿಚಾರಣೆ >> ಲಸಿಕೆ ನಾಗರಿಕ ಸ್ನೇಹಿಯಾಗಿರಲಿ

Bar & Bench

ಸಾರ್ವಜನಿಕ ಸ್ಥಳದಲ್ಲಿ ಉಗುಳುವ ಹವ್ಯಾಸ ನಿಲ್ಲಬೇಕು, ಹೆಚ್ಚು ದಂಡ ವಿಧಿಸಿ: ಮಹಾರಾಷ್ಟ್ರ ಸರ್ಕಾರ, ಪೊಲೀಸ್‌, ಬಿಎಂಸಿಗೆ ಎಚ್ಚರಿಸಿದ ಬಾಂಬೆ ಹೈಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆ ವ್ಯಾಪಿಸುತ್ತಿರುವ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದುಬಾರಿ ದಂಡ ವಿಧಿಸದ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ರೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಜಾರಿಗೊಳಿಸಲಾಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಬೃಹನ್ ‌ಮುಂಬೈ ಮಹಾನಗರ ಪಾಲಿಕೆಯ ಪೊಲೀಸ್‌ ಆಯುಕ್ತರಿಗೆ ಸೂಚಿಸುವಂತೆ ಕೋರಿ ಸ್ಥಳೀಯ ನಿವಾಸಿ ಅರ್ಮಿನ್‌ ವಂದ್ರೇವಾಲಾ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

Bombay High Court

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದುಬಾರಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬ ಅಂಶವನ್ನು ಪೀಠದ ಗಮನಕ್ಕೆ ತರುತ್ತಿದ್ದಂತೆ ಎಚ್ಚೆತ್ತ ನ್ಯಾಯಾಲಯವು ಹಾಗಾದರೆ ಅಧಿಕಾರಿಗಳು ಏಕೆ ಕಡಿಮೆ ದಂಡ ವಿಧಿಸುತ್ತಿದ್ದಾರೆ ಎಂದು ಪ್ರಶ್ನಿಸಿತು. “ಬಾಂಬೆ ಪೊಲೀಸ್‌ ಕಾಯಿದೆಯು 1,200 ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ. ಹಾಗಿದ್ದರೂ ನೀವೇಕೆ ಕೇವಲ 200 ರೂಪಾಯಿ ದಂಡ ವಿಧಿಸುತ್ತಿದ್ದೀರಿ? ಇತ್ತೀಚಿನ ದಿನಗಳಲ್ಲಿ 200 ರೂಪಾಯಿ ಮೌಲ್ಯವೇನು?” ಎಂದು ಪೀಠ ಪ್ರಶ್ನಿಸಿತು. ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪೀಠ ಹೇಳುತ್ತಿದ್ದಂತೆ ಬಿಎಂಸಿಯು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದುತ್ತರಿಸಿತು. ಕೆಲವು ವಾರ್ಡ್‌ಗಳಲ್ಲಿ ದಂಡ ವಸೂಲಿ ಮಾಡಲಾಗುತ್ತಿಲ್ಲ ಎಂದ ಪೀಠವು “ಇದು ಆದಾಯದ ನಷ್ಟವಾಗಿದೆ. ಇದನ್ನು ನೋಡಿದರೆ ನೀವು ದಂಡ ವಸೂಲಿ ಮಾಡುತ್ತಿಲ್ಲ. ಬೀದಿಯಲ್ಲಿ ಉಗಿಯುವ ಹವ್ಯಾಸ ಕೊನೆಗಾಣಬೇಕು” ಎಂದು ನ್ಯಾ. ಕುಲಕರ್ಣಿ ಹೇಳಿದರು.

ಕೇಂದ್ರೀಯ ಭದ್ರತಾ ಪಡೆ ವರದಿ ಪ್ರಕಾರ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ವಕೀಲರ ಪತ್ನಿಗೆ ಪ್ರಾಣ ಬೆದರಿಕೆ ಇಲ್ಲ: ಸುಪ್ರೀಂಗೆ ಗೃಹ ಇಲಾಖೆ ವಿವರಣೆ

ಕೇಂದ್ರೀಯ ಭದ್ರತಾ ಪಡೆಯ ಗೌಪ್ಯ ವರದಿಯ ಪ್ರಕಾರ 2017ರ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯನ್ನು ಪ್ರತಿನಿಧಿಸುತ್ತಿದ್ದ ದಿವಂಗತ ವಕೀಲರ ಪತ್ನಿ ಹಾಗೂ ಆಕೆಯ ಮೈದುನನಿಗೆ ಯಾವುದೇ ತೆರನಾದ ನಿರ್ದಿಷ್ಟ ಪ್ರಾಣ ಬೆದರಿಕೆ ಇಲ್ಲ ಎಂದು ಕೇಂದ್ರ ಗೃಹ ಇಲಾಖೆಯು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ದೆಹಲಿ ಅಥವಾ ಲಖನೌಗೆ ಪ್ರಯಾಣಿಸುವಾಗ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಿಂದ (ಸಿಆರ್‌ಪಿಎಫ್‌) ರಕ್ಷಣೆ ಒದಗಿಸುವಂತೆ ದಿವಂಗತ ವಕೀಲ ಮಹೇಂದ್ರ ಸಿಂಗ್‌ ಅವರ ಪತ್ನಿ ಸೀಮಾ ಸಿಂಗ್‌ ಹಾಗೂ ಆಕೆಯ ಮೈದುನ ಧರ್ಮೇಂದ್ರ ಸಿಂಗ್‌ ಮನವಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯು ಪ್ರತಿಕ್ರಿಯೆ ದಾಖಲಿಸಿದೆ.

Unnao rape

ಅರ್ಜಿದಾರರು ಮತ್ತು ಕುಟುಂಬದ ಅರ್ಜಿದಾರರು ಮನೆಯಿಂದ ಹೊರಗೆ ತೆರಳಿದಾಗ ಬೆಂಬಲಿಗರು ಮತ್ತು ಗೂಂಡಾಗಳಿಂದ ಹಲ್ಲೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಸಿಆರ್‌ಪಿಎಫ್‌ ಭದ್ರತೆ ಒದಗಿಸುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ. ದೇಶಾದ್ಯಂತ ಆತಂಕವಾಗುವ ರೀತಿಯಲ್ಲಿ ಹೆಚ್ಚುತ್ತಿರುವ ಮಕ್ಕಳ ಅತ್ಯಾಚಾರ ಪ್ರಕರಣಗಳ ಕುರಿತಾಗಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿರುವಾಗ ಸದರಿ ಪ್ರತಿಕ್ರಿಯೆ ಸಲ್ಲಿಸಲಾಗಿದೆ. “ಅರ್ಜಿದಾರರಾದ ಸೀಮಾ ಸಿಂಗ್‌ ಮತ್ತು ಧರ್ಮೇಂದ್ರ ಸಿಂಗ್‌ ಅವರಿಗೆ ನಿರ್ದಿಷ್ಟವಾದ ಪ್ರಾಣ ಬೆದರಿಕೆಯ ಕುರಿತು ಯಾವುದೇ ಮಾಹಿತಿ ಇಲ್ಲ” ಎಂದು ಗೃಹ ಇಲಾಖೆ ಹೇಳಿದೆ. ಸ್ಥಳೀಯ ಬೆದರಿಕೆಗಳನ್ನು ಪರಿಶೀಲಿಸಿ ಅವರಿಗೆ ಭದ್ರತೆ ಕಲ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರಲಾಗಿದೆ ಎಂದು ಕೇಂದ್ರ ಹೇಳಿದೆ.

ಇಂಡಿಯಾ ಟುಡೇಯಲ್ಲಿ ಮಾನಹಾನಿ ಸುದ್ದಿ ಪ್ರಕಟಣೆ ಆರೋಪ: ಅರುಣ್‌ ಪುರಿ ವಿರುದ್ಧ ಕ್ರಿಮಿನಲ್‌ ದೂರು ವಜಾಗೊಳಿಸಲು ದೆಹಲಿ ಹೈಕೋರ್ಟ್‌ ನಕಾರ

ಇಂಡಿಯಾ ಟುಡೇ ಮ್ಯಾಗಜೀನ್‌ನಲ್ಲಿ 2007ರಲ್ಲಿ ಪ್ರಕಟಿಸಲಾದ ಸುದ್ದಿಗೆ ಸಂಬಂಧಿಸಿದಂತೆ ಅರುಣ್‌ ಪುರಿ ವಿರುದ್ಧದ ಕ್ರಿಮಿನಲ್‌ ಮಾನಹಾನಿ ಪ್ರಕರಣ ಮತ್ತು ಅವರ ವಿರುದ್ಧ ಹೊರಡಿಸಲಾಗಿರುವ ಸಮನ್ಸ್‌ ವಜಾಗೊಳಿಸಲು ಬುಧವಾರ ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಈ ಸಂಬಂಧದ ಆದೇಶವನ್ನು ನ್ಯಾಯಮೂರ್ತಿ ಯೋಗೇಶ್‌ ಖನ್ನಾ ಅವರಿದ್ದ ಏಕಸದಸ್ಯ ಪೀಠವು ಹೊರಡಿಸಿದೆ. 2007ರ ಏಪ್ರಿಲ್‌ 30ರ ಸಂಚಿಕೆಯಲ್ಲಿ ʼಮಿಷನ್‌ ಮಿಸ್‌ಕಂಡಕ್ಟ್‌ʼ ತಲೆಬರಹದಡಿ ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ ಪುರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಸುದ್ದಿ ಪ್ರಕಟಣೆಯ ವೇಳೆಗಾಗಲೇ ದೂರುದಾರರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಣಕಾಸು ಅಕ್ರಮದ ಆರೋಪ ಮಾಡಲಾಗಿದ್ದು, ಈ ಸಂಬಂಧ ಶಿಸ್ತುಕ್ರಮವನ್ನು ಕೈಗೊಳ್ಳಲಾಗಿತ್ತು. ಸುದ್ದಿಯ ತುಣುಕಿನಲ್ಲಿ ಸಾರ್ವಜನಿಕವಾಗಿರುವ ದಾಖಲೆಯನ್ನು ಆಧರಿಸಿ ವಸ್ತುಸ್ಥಿತಿಯನ್ನು ವರದಿ ಮಾಡಲಾಗಿತ್ತು ಎಂದು ಪುರಿ ಪರ ವಾದಮಂಡನೆಯಾಗಿತ್ತು.

Delhi High Court

ಸಿಆರ್‌ಪಿಸಿ ಸೆಕ್ಷನ್‌ 202 ಮತ್ತು ಸೆಕ್ಷನ್‌ 196(2) ಮತ್ತು 197 ಅನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಮನ್ಸ್‌ ಆದೇಶ ವಜಾಕ್ಕೆ ಅರ್ಹವಾಗಿದೆ ಎಂದು ವಾದಿಸಲಾಗಿದೆ. ಆಧಾರರಹಿತ ಮತ್ತು ಪರಿಶೀಲಿಸದ ಮಾನಹಾನಿ ವರದಿಯನ್ನು ಇಂಡಿಯಾ ಟುಡೇ ಪ್ರಕಟಿಸಿದೆ. ಅಲ್ಲದೇ ಅದನ್ನು ಆಧಾರರಹಿತವಾಗಿ ಇಂಟರ್‌ನೆಟ್‌ನಲ್ಲಿ ಬಿತ್ತರಿಸಿದ್ದರಿಂದ ಅದು ಇಡೀ ಜಗತ್ತಿಗೆ ತಲುಪಿದೆ ಎಂದು ಪ್ರತಿವಾದಿ ವಾದಿಸಿದರು. ದುರ್ನಡತೆ ಆರೋಪಕ್ಕೆ ಸಂಬಂಧಿಸಿದಂತೆ ಷೋಕಾಸ್‌ ನೋಟಿಸ್‌ ನೀಡುವುದಕ್ಕೂ ಮುನ್ನವೇ ವರದಿ ಪ್ರಕಟಿಸಲಾಗಿದೆ. ಇಂದಿನವರೆಗೂ, ನಿವೃತ್ತಿ ಬದುಕಿನಲ್ಲೂ ಮಾನಹಾನಿ ಲೇಖನದಲ್ಲಿನ ಅಂಶಗಳು ದೂರುದಾರರ ನಿದ್ರೆಗೆಡಿಸಿವೆ ಎಂದು ವಾದಿಸಲಾಗಿದೆ.

ಲಸಿಕೆ ನೀಡಿಕೆ ಹಿರಿಯ ನಾಗರಿಕರ ಸ್ನೇಹಿಯಾಗಿರಬೇಕು: ಬಾಂಬೆ ಹೈಕೋರ್ಟ್‌

ಮನೆಬಾಗಿಲಿಗೆ ಕೋವಿಡ್‌ ಲಸಿಕೆ ತಲುಪಿಸಬೇಕು ಎಂಬ ಮನವಿ ವಿಚಾರಣೆಯ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್‌ ಬುಧವಾರ ನ್ಯಾಯಿಕ ಪರಿಶೀಲನೆಯ ವ್ಯಾಪ್ತಿಯ ಮಿತಿಯನ್ನು ಒಪ್ಪಿಕೊಂಡಿದೆ. “ ನಾವೊಂದು ನ್ಯಾಯಿಕ ಪರಿಶೀಲನೆಯ ನ್ಯಾಯಾಲಯವಾಗಿ ಪಿಂಗಾಣಿ ಅಂಗಡಿಗೆ ನುಗ್ಗಿದ ಗೂಳಿಯಂತೆ ಅನಾಹುತಕಾರಿಯಾಗಿ ವರ್ತಿಸಲಾಗದು. ಕೇಂದ್ರ ಸರ್ಕಾರ ಏನನ್ನಾದರೂ ಹೇಳಿದರೆ ನಾವು ಅದನ್ನು ಪಾಲಿಸಬೇಕಾಗುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿತು.

Bombay High Court, COVID-19 vaccination

ಔಷಧಿ ಕ್ಷೇತ್ರದಲ್ಲಿ ನಾವು ತಜ್ಞರಲ್ಲ ಎಂಬ ವಿಚಾರವನ್ನು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದರು. ಆದರೆ ಮುಂದುವರೆದು, ವೈಯಕ್ತಿಕ ಅನುಭವದಿಂದ ಲಸಿಕೆ ಪಡೆಯುವ ಪ್ರಕ್ರಿಯೆಯನ್ನು ಬಳಕೆದಾರರ ಸ್ನೇಹಿಯನ್ನಾಗಿಸಬೇಕು ಎಂದು ಅವರು ಹೇಳಿದರು. ನಾಗರಿಕರಿಗೆ ಲಸಿಕೆ ನೀಡುವಾಗ ಶಿಷ್ಟಾಚಾರಗಳನ್ನು ಪಾಲಿಸಬೇಕಾದ ಕುರಿತೂ ಪೀಠವು ಸ್ಪಷ್ಟೀಕರಣ ಬಯಸಿದೆ. 75 ವರ್ಷ ಮೀರಿದವರು, ವಿಶೇಷ ಚೇತನರು ಮತ್ತು ಹಾಸಿಗೆ ಹಿಡಿದಿರುವವರಿಗೆ ಮನಬಾಗಿಲಿಗೆ ಲಸಿಕೆ ಪೂರೈಸುವಂತೆ ನಿರ್ದೇಶಿಸಲು ಕೋರಿದ್ದ ಮನವಿಯ ವಿಚಾರಣೆ ವೇಳೆ ಈ ಜಿಜ್ಞಾಸೆಗಳನ್ನು ನ್ಯಾಯಾಲಯ ಎತ್ತಿದೆ. “ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಪ್ರಕ್ರಿಯೆಯು ಮತ್ತಷ್ಟು ಬಳಕೆದಾರ ಸ್ನೇಹಿಯಾಗಿರಬೇಕು. ಹಾಸಿಗೆ ಹಿಡಿದಿರುವವರಿಗೆ ನೀವೇನು ಮಾಡುತ್ತೀರಿ? ಇದಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆ ಅಗತ್ಯವಿದೆ” ಎಂದು ನ್ಯಾ. ಜಿ ಎಸ್‌ ಕುಲಕರ್ಣಿ ಹೇಳಿದ್ದಾರೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ: ಏಪ್ರಿಲ್‌ 23ರ ವರೆಗೆ ವರ್ಚುವಲ್‌ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಮತ್ತೊಮ್ಮೆ ಏಪ್ರಿಲ್‌ 23ರ ವರೆಗೆ ವರ್ಚುವಲ್‌ ವಿಚಾರಣೆ ನಡೆಸಲು ನಿರ್ಧರಿಸಿದೆ. ಶುಕ್ರವಾರ, ಏಪ್ರಿಲ್‌ 9ರಿಂದ ವರ್ಚುವಲ್‌ ವಿಚಾರಣೆ ಆರಂಭವಾಗಲಿದೆ. ಹೈಕೋರ್ಟ್‌ ಜೊತೆಗೆ ಎಲ್ಲಾ ಜಿಲ್ಲಾ ಹಾಗೂ ಕೆಳಹಂತದ ನ್ಯಾಯಾಲಯಗಳಲ್ಲೂ ವರ್ಚುವಲ್‌ ವಿಚಾರಣೆ ಮಾತ್ರ ನಡೆಯಲಿದೆ.

Delhi High Court

ಹೈಕೋರ್ಟ್‌ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ನಿಗದಿಗೊಳಿಸಲಾಗಿರುವ ಸಾಕ್ಷಿ ನುಡಿಯುವ ಪ್ರಕರಣಗಳನ್ನು ಮುಂದೂಡಲಾಗಿದೆ. ಕಕ್ಷಿದಾರರ ಅಥವಾ ವಕೀಲರು ಭಾಗಿಯಾಗದಿದ್ದರೆ ಯಾವುದೇ ಕ್ರಮ ಕೈಗೊಳ್ಳದಂತೆಯೂ ಆದೇಶಿಸಲಾಗಿದೆ. ವಿಚಾರಣಾಧೀನ ಕೈದಿಗಳ ಕಸ್ಟಡಿ ವಿಸ್ತರಣೆಗೆ ಅಗತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಅವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆಯೂ ಹೈಕೋರ್ಟ್‌ ಆದೇಶಿಸಿದೆ. ಇಂದು ಹೈಕೋರ್ಟ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.