ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |18-4-2021

>> ತುರ್ತು ಪ್ರಕರಣಗಳ ವಿಚಾರಣೆಗೆ ಸೀಮಿತವಾದ ದೆಹಲಿ ಹೈಕೋರ್ಟ್‌ >> ದೆಹಲಿಯ ನ್ಯಾಯಮೂರ್ತಿಗಳಿಗೆ ಕೋವಿಡ್‌ ಸೋಂಕು >> ʼವಾಟ್ಸಾಪ್ ಮೂಲಕ ಆರ್‌ಟಿ- ಪಿಸಿಆರ್‌ ವರದಿ ನೀಡಿʼ >> ವರ್ಚುವಲ್‌ ವಿಚಾರಣೆ ಅವಧಿ ವಿಸ್ತರಿಸಿದ ಕಾಶ್ಮೀರ ಹೈಕೋರ್ಟ್‌

Bar & Bench

ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವ ದೆಹಲಿ ಹೈಕೋರ್ಟ್‌

ದೇಶದ ರಾಜಧಾನಿ ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ದೆಹಲಿ ಹೈಕೋರ್ಟ್‌ ನಿರ್ಧರಿಸಿದೆ. ದೈನಂದಿನ/ ತುರ್ತು ಅಲ್ಲದ ಹಾಗೆಯೇ 2020ರ ಮಾರ್ಚ್ 22ರಿಂದ ಡಿಸೆಂಬರ್‌ 31ರ ನಡುವೆ ಸಲ್ಲಿಸಿದ ಅಥವಾ ಪಟ್ಟಿ ಮಾಡಲಾದ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದಿಲ್ಲಅವುಗಳನ್ನು ಸಾಮೂಹಿಕವಾಗಿ ಮುಂದೂಡಲಾಗಿದೆ ಎಂದು ಅದು ತನ್ನ ಆದೇಶದಲ್ಲಿ ತಿಳಿಸಿದೆ.

ಈ ಸಂಬಂಧ ಭಾನುವಾರ ಸುತ್ತೋಲೆ ಹೊರಡಿಸಿರುವ ದೆಹಲಿ ಹೈಕೋರ್ಟ್‌ ನಾಳೆಯಿಂದ (ಏಪ್ರಿಲ್ 19) ಇದು ಜಾರಿಗೆ ಬರಲಿದೆ. ತುರ್ತು ವಿಚಾರಣೆ ನಡೆಯಬೇಕಿರುವ ಪ್ರಕರಣಗಳನ್ನು ಈಗಾಗಲೇ ಸೂಚಿಸಲಾದ ಲಿಂಕ್‌ ಮೂಲಕ ಸಲ್ಲಿಸಬಹುದು ಎಂದು ಅದು ಹೇಳಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ. ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಕೋವಿಡ್‌ ದೃಢ

ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರಿಗೆ ಕೋವಿಡ್‌ ಸೋಂಕು ತಗುಲಿದೆ. ನ್ಯಾ. ಪಟೇಲ್‌ ಅವರು ಸ್ಥಿತಿ ಸುಧಾರಿಸಿದ್ದು ರೋಗಲಕ್ಷಣರಹಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿಗೆ ಕೋವಿಡ್‌ ದೃಢಪಟ್ಟಿತ್ತು.

ಒಂದು ವರ್ಷದ ಬಳಿಕ ಕಳೆದ ಮಾರ್ಚ್ 15 ರಿಂದ ದೆಹಲಿ ಹೈಕೋರ್ಟ್‌ ಸಂಪೂರ್ಣವಾಗಿ ಭೌತಿಕ ಕಲಾಪಗಳನ್ನು ಆರಂಭಿಸಿತ್ತು. ವರ್ಚುವಲ್‌ ಕಲಾಪವನ್ನು ಒಂದು ಆಯ್ಕೆಯಾಗಿ ಇರಿಸಿಕೊಂಡಿತ್ತು. ಆದರೆ ಭೌತಿಕ ಕಲಾಪ ಆರಂಭಿಸಿದ ಒಂದು ವಾರದೊಳಗೆ ಭೌತಿಕ ಮತ್ತು ವರ್ಚುವಲ್‌ ವಿಚಾರಣೆಗಳೆರಡಕ್ಕೂ ಅವಕಾಶ ನೀಡುವ ಹೈಬ್ರಿಡ್‌ ವಿಧಾನಕ್ಕೆ ಅನುಮತಿ ನೀಡಿತ್ತು.

ಕೋವಿಡ್‌ ರೋಗಿಗಳಿಗೆ ವಾಟ್ಸಾಪ್‌ ಮೂಲಕ ತಕ್ಷಣವೇ ಆರ್‌ಟಿ-ಪಿಸಿಆರ್ ಪರೀಕ್ಷೆ ಫಲಿತಾಂಶ ನೀಡಿ: ಬಾಂಬೆ ಹೈಕೋರ್ಟ್‌

ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವ ವೈದ್ಯಕೀಯ ಪ್ರಯೋಗಾಲಯಗಳಿಗೆ ಗುರುವಾರ ನಿರ್ದೇಶನ ನೀಡಿರುವ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ವಾಟ್ಸಾಪ್‌ ಮೂಲಕ ತಕ್ಷಣವೇ ಕೋವಿಡ್‌ ಪರೀಕ್ಷೆ ಫಲಿತಾಂಶವನ್ನು ರೋಗಿಗಳಿಗೆ ಒದಗಿಸುವಂತೆ ಸೂಚಿಸಿದೆ.

Nagpur Bench, Bombay High Court

ನ್ಯಾಯಮೂರ್ತಿಗಳಾದ ಜಡ್‌ ಎ ಹಕ್‌ ಮತ್ತು ಅಮಿತ್‌ ಬಿ ಬೋರ್ಕರ್‌ ಅವರಿದ್ದ ಪೀಠ ವಾಟ್ಸಾಪ್‌ ಮೂಲಕ ವರದಿ ನೀಡಿದ ಬಳಿಕ ಐಸಿಎಂಆರ್ ಪೋರ್ಟಲ್‌ಗಳಲ್ಲಿ ಕೋವಿಡ್‌ ದೃಢಪಟ್ಟ ವರದಿಗಳನ್ನು 24 ಗಂಟೆಗಳ ಒಳಗೆ ಮತ್ತು ನಕಾರಾತ್ಮಕ ವರದಿಗಳನ್ನು ಏಳು ದಿನಗಳಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿದೆ. ನಾಗಪುರ ನಗರ ಮತ್ತು ತನ್ನ ನ್ಯಾಯವ್ಯಾಪ್ತಿಗೆ ಬರುವ ಇತರೆ ನಗರಗಳಲ್ಲಿ ಕೋವಿಡ್‌ ನಿರ್ವಹಣೆ ಕುರಿತಂತೆ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಏಪ್ರಿಲ್ 30 ರವರೆಗೆ ವರ್ಚುವಲ್‌ ವಿಚಾರಣೆ ಅವಧಿ ವಿಸ್ತರಿಸಿದ ಜಮ್ಮು ಕಾಶ್ಮೀರ ಹೈಕೋರ್ಟ್‌

ಕೊರೊನಾ ರೋಗ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ನ್ಯಾಯಾಲಯಗಳಲ್ಲಿ ಏಪ್ರಿಲ್ 30 ರವರೆಗೆ ವರ್ಚುವಲ್‌ ವಿಚಾರಣೆ ವಿಸ್ತರಿಸಿ ರಾಜ್ಯ ಹೈಕೋರ್ಟ್‌ ಆದೇಶ ಹೊರಡಿಸಿದೆ. ಈ ಸಂಬಂಧ ಜೆ & ಕೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಜವಾದ್ ಅಹ್ಮದ್ ಅವರು ಏಪ್ರಿಲ್ 16 ರಂದು ಆದೇಶ ಹೊರಡಿಸಿದ್ದಾರೆ. ಭೌತಿಕ ಕಲಾಪ ಆರಂಭಿಸುವುದಾಗಿ ನ್ಯಾಯಾಲಯ ಏಪ್ರಿಲ್‌ ಐದರಂದು ಘೋಷಿಸಿತ್ತು.

High Court of Jammu Kashmir, Srinagar

ಈ ಮಧ್ಯೆ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಅಲಿ ಮೊಹಮ್ಮದ್ ಮ್ಯಾಗ್ರೆ ಅವರ ಮಾರ್ಗದರ್ಶನದಲ್ಲಿ ಕೇಂದ್ರಾಡಳಿತ ಪ್ರದೇಶದ ಹಲವೆಡೆ ರಾಷ್ಟ್ರೀಯ ಲೋಕ್‌ ಅದಾಲತ್‌ ನಡೆಸಿ ವಿವಿಧ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ.