ಇದೇ 23ರಂದು ನಿವೃತ್ತಿ ಹೊಂದುತ್ತಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ವರ್ಚುವಲ್ ವ್ಯವಸ್ಥೆಯ ಮೂಲಕ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ) ಹೇಳಿದೆ. ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
“ಏಪ್ರಿಲ್ 23ರಂದು ಸಂಜೆ 5 ಗಂಟೆಗೆ ವರ್ಚುವಲ್ ಬೀಳ್ಕೊಡುಗೆ ಕಾರ್ಯಕ್ರಮ ಆರಂಭವಾಗಲಿದೆ. ಸಿಜೆ ಬೊಬ್ಡೆ ಅವರ ಜೊತೆ ಕಾರ್ಯಕಾರಿ ಸಮಿತಿ ಕಡಿಮೆ ಸಮಯ ಕಳೆದಿದ್ದರೂ ನಿಯಮಿತವಾಗಿ ಹೈಕೋರ್ಟ್‌ಗಳಿಗೆ ಎಸ್‌ಸಿಬಿಎ ಸದಸ್ಯರನ್ನು ಪದೋನ್ನತಿಗೊಳಿಸುವುದು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸುವ ವಕಾಲತ್ತುಗಳಲ್ಲಿ ಎಸ್‌ಸಿಬಿಎ ಕಲ್ಯಾಣ ಸ್ಟಾಂಪ್ ಅಂಟಿಸುವ ಸಂಬಂಧ ಅವರು ನೀಡಿರುವ ಭರವಸೆ ಮುಂದಿನ ದಿನಗಳಲ್ಲಿ ಜಾರಿಗೊಳ್ಳುವ ವಿಶ್ವಾಸವನ್ನು ಪರಿಷತ್ ಹೊಂದಿದೆ” ಎಂದು ಸಿಂಗ್ “ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ. ಏಪ್ರಿಲ್ 24ರಂದು ನ್ಯಾಯಮೂರ್ತಿ ಎನ್ ವಿ ರಮಣ ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಭಾರತದಲ್ಲಿ ಹಿಂದುಳಿದ ಮತ್ತು ಬಡ ವರ್ಗಕ್ಕೆ ಸೇರಿದ ವ್ಯಕ್ತಿಗಳನ್ನು ಮಲದಗುಂಡಿ ಶುಚಿಗೊಳಿಸುವ ಅಪಾಯಕಾರಿ ಕಾರ್ಯಕ್ಕೆ ಒಡ್ಡುವ ಮೂಲಕ ನಾಚಿಕೆಗೇಡಿನ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲಾಗುತ್ತಿದೆ ಎಂದು ಸೋಮವಾರ ಒಡಿಶಾ ಹೈಕೋರ್ಟ್ ಕಿಡಿಕಾರಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆ 2013 ಜಾರಿಯಲ್ಲಿದ್ದರೂ ಸದರಿ ಕೆಲಸ ಮುಂದುವರೆಸುತ್ತಿರುವುದು ನ್ಯಾಯಾಂಗದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದ್ದು, ಇದು ಸಮಾಜದ ಒಟ್ಟು ಆತ್ಮಸಾಕ್ಷಿಯನ್ನು ಕಲಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ಮತ್ತು ನ್ಯಾ. ಬಿ ಪಿ ರೌಟ್ರೆ ಅವರಿದ್ದ ಪೀಠ ಹೇಳಿದೆ.
ತಮಿಳುನಾಡಿನ ನದಿ ಪಾತ್ರದಲ್ಲಿ ಆಗುತ್ತಿರುವ ಮಾಲಿನ್ಯ ನಿಯಂತ್ರಿಸಲು ತಜ್ಞರ ಸಮಿತಿ ರಚಿಸಲು ಮದ್ರಾಸ್ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಮರಾವತಿ ನದಿಯಲ್ಲಿ ಆಗುತ್ತಿರುವ ಜಲ ಮಾಲಿನ್ಯವನ್ನು ಉಲ್ಲೇಖಿಸಿ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.
“ನದಿ ತೀರದಲ್ಲಿರುವ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ನಿಯಂತ್ರಣ ಮತ್ತು ಕಾರ್ಖಾನೆಗಳನ್ನು ಸ್ಥಳಾಂತರಿಸುವುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡುವ ಸಂಬಂಧ ಅತ್ಯುತ್ತಮ ಹಿನ್ನೆಲೆ ಹೊಂದಿರುವ ತಜ್ಞರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಬೇಕು. ರಾಜ್ಯದಲ್ಲಿರುವ ಎಲ್ಲಾ ನದಿಗಳು ಕಲುಷಿತವಾಗುವುದಕ್ಕೂ ಮುನ್ನ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿ ಹರಿಯುವ ನದಿಗಳನ್ನು ಸಂರಕ್ಷಿಸುವ ಸಂಬಂಧ ತಜ್ಞರ ಸಲಹೆಗಳನ್ನು ಪಡೆಯಬೇಕಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.