ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 30-1-2021

Bar & Bench

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಮೇಲೆ ಕೇಂದ್ರದ ಸವಾರಿ: ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಕಾಳಜಿ, ದೃಷ್ಟಿಕೋನವನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಪ್ರಶ್ನಾತೀತ ಅಧಿಕಾರ ಚಲಾಯಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರದ ಈ ಧೋರಣೆಯು ಅಂತಿಮವಾಗಿ “ ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಯ ಸಂರಚನೆಗೆ ಧಕ್ಕೆ ಉಂಟುಮಾಡುತ್ತದೆ" ಎಂದು ಪಶ್ಚಿಮ ಬಂಗಾಳ ಮೂಲದ ವಕೀಲ ಅಬು ಸೊಹೇಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಅಖಿಲ ಭಾರತ ಸೇವಾ ಕಾಯಿದೆಯಡಿಯಲ್ಲಿ ಜಾರಿಯಲ್ಲಿರುವ 1954ರ ಐಪಿಎಸ್ (ಕೇಡರ್‌) ನಿಯಮ 6 (1) ರ ಸಾಂವಿಧಾನಿಕತೆಯನ್ನು ಅರ್ಜಿ ಪ್ರಶ್ನಿಸಿದ್ದು ಅದನ್ನು ತೆಗೆದುಹಾಕುವಂತೆ ಪ್ರಾರ್ಥಿಸಿದೆ. ಈ ನಿಯಮ ಘೋಷಿಸುವಾಗ ಶಾಸಕಾಂಗದ ಉದ್ದೇಶವು ಸಾಂವಿಧಾನಿಕ ಆದೇಶಕ್ಕೆ ಅನುಗುಣವಾಗಿರಬಹುದು. ಆದರೆ ಕಾಲಕ್ರಮೇಣ ನಿಯಮದ ಅನಿಯಂತ್ರಿತ ಬಳಕೆಯಿಂದಾಗಿ ಕೇಂದ್ರ ಮತ್ತು ರಾಜ್ಯದ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಹಲವು ನಿದರ್ಶನಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬೆದರಿಕೆ ಕರೆ ಆರೋಪ: ಟ್ರಕ್‌ ಚಾಲಕನಿಗೆ ಅಲಾಹಾಬಾದ್‌ ಹೈಕೋರ್ಟ್‌ ಜಾಮೀನು

ಅಪರಿಚಿತ ವ್ಯಕ್ತಿಯೊಬ್ಬ ತನ್ನ ಫೋನ್‌ ದುರ್ಬಳಕೆ ಮಾಡಿಕೊಂಡಿರುವುದಾಗಿ ತಿಳಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಲ್ಲಿ ಕ್ಷಮೆ ಯಾಚಿಸಿದ ಬಳಿಕ ಟ್ರಕ್‌ ಚಾಲಕನಿಗೆ ಅಲಾಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದೆ. ನಾನು ಊಟ ಮಾಡುತ್ತಿದ್ದಾಗ ಅಪರಿಚಿತನೊಬ್ಬ ಕರೆ ಮಾಡುವ ನೆಪದಲ್ಲಿ ನನ್ನ ಫೋನ್‌ ಪಡೆದ. ಆದರೆ ಆತ ವಾಟ್ಸಾಪ್‌ ಸಂದೇಶ ಕಳಿಸಿ ಫೋನ್‌ ಮರಳಿಸಿದ. ಪೊಲೀಸರು ಬಂಧಿಸುವವರೆಗೆ ತನಗೆ ಈ ಬಗ್ಗೆ ಅರಿವಿರಲಿಲ್ಲ ಎಂದು ಆರೋಪಿತ ವ್ಯಕ್ತಿ ಹೇಳಿದ್ದಾರೆ.

Allahabad HC and Yogi Adityanath

ಆರೋಪಿ ಅಮರ್ ಪಾಲ್ ಯಾದವ್ ಅವರ ಕಳೆದ ಸೆಪ್ಟೆಂಬರ್‌ನಿಂದ ಜೈಲಿನಲ್ಲಿದ್ದು ‌ ಕ್ಷಮೆ ಯಾಚಿಸಿದ ಬಳಿಕ ನ್ಯಾಯಮೂರ್ತಿ ಡಿ ಕೆ ಸಿಂಗ್ ಅವರಿದ್ದ ಪೀಠ ಜಾಮೀನಿಗೆ ಅವಕಾಶ ಕಲ್ಪಿಸಿತು. "ಆರೋಪಿತ ಅರ್ಜಿದಾರರ ನಿಲುವುಗಳನ್ನು ಪರಿಗಣಿಸಿ ಮತ್ತು ಅವರ ಫೋನ್ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಸ್ಪಷ್ಟವಾಗಿ ಅವರು ಕ್ಷಮೆ ಯಾಚಿಸಿದ್ದಾರೆ ಮತ್ತು ಮುಖ್ಯಮಂತ್ರಿಗೆ ಅವರು ಗೌರವಾದರ ತೋರಿದ್ದಾರೆ. ಇದು ಜಾಮೀನು ನೀಡಲು ಸೂಕ್ತವಾದ ಪ್ರಕರಣವೆಂದು ನಾನು ಕಂಡುಕೊಂಡಿದ್ದೇನೆ," ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಅಸಭ್ಯ ಪದಪ್ರಯೋಗ ಮಾಡಲಾಗಿತ್ತು ಮತ್ತು ರೌಡಿ ಮುಖ್ತಾರ್‌ ಅನ್ಸಾರಿಯನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡದಿದ್ದರೆ, ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಚಾಲಕನ ಫೋನ್‌ನಿಂದ ಸಂದೇಶ ಕಳುಹಿಸಲಾಗಿತ್ತು. ಆದರೆ ಅನ್ಸಾರಿಗೂ ತನಗೂ ಯಾವುದೇ ಸಂಬಂಧ ಇಲ್ಲ ತಾನೊಬ್ಬ ಟ್ರಕ್‌ ಚಾಲಕ. ಡಾಬಾವೊಂದರಲ್ಲಿ ಊಟ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಫೋನ್‌ ಎರವಲು ಪಡೆದಿದ್ದ ಎಂದು ಯಾದವ್‌ ತಿಳಿಸಿದ್ದರು.

ದೆಹಲಿಯ ವಿವಿಧೆಡೆ ಜನವರಿ 31ರ ವರೆಗೆ ಇಂಟರ್ನೆಟ್‌ ನಿರ್ಬಂಧ

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಸಿಂಘು, ಗಾಜಿಪುರ್, ಟಿಕ್ರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜನವರಿ 29ರ ರಾತ್ರಿ 11ರಿಂದ ಜನವರಿ 31ರ ರಾತ್ರಿ 11ರ ವರೆಗೆ ಇಂಟರ್ನೆಟ್‌ ಸೌಲಭ್ಯವನ್ನು ಕೇಂದ್ರ ಗೃಹ ಇಲಾಖೆಯು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಟೆಲಿಕಾಂ ಸೇವೆಗಳ (ಸಾರ್ವಜನಿಕ ತುರ್ತಪರಿಸ್ಥಿತಿ ಅಥವಾ ಸಾರ್ವಜನಿಕ ಭದ್ರತೆ) ತಾತ್ಕಾಲಿಕ ನಿಷೇಧ ನಿಯಮಗಳು 2017ರ 2(1) ನಿಯಮಗಳ ಅಡಿ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಶೈಲೇಂದ್ರ ವಿಕ್ರಮ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

Delhi, Internet

ಸಾರ್ವಜನಿಕ ಸುರಕ್ಷತೆ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವ ದೃಷ್ಟಿಯಿಂದ ಸಿಂಘು, ಗಾಜಿಪುರ ಮತ್ತು ಟಿಕ್ರಿ ಮತ್ತು ದೆಹಲಿ ಎನ್‌ಸಿಟಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಇಂಟರ್‌ನೆಟ್‌ ಸೇವೆ ನಿಷೇಧಿಸುವ ಆದೇಶ ಹೊರಡಿಸುವ ಅಗತ್ಯವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಮೋತಿಲಾಲ್‌ ವೋರಾ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ಕೈಬಿಟ್ಟ ದೆಹಲಿ ನ್ಯಾಯಾಲಯ

ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕ್ರಿಮಿನಲ್‌ ಪ್ರಕ್ರಿಯೆ ಎದುರಿಸುತ್ತಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಮೋತಿಲಾಲ್‌ ವೋರಾ ಅವರ ವಿರುದ್ಧದ ಆರೋಪಗಳನ್ನು ದೆಹಲಿ ನ್ಯಾಯಾಲಯವು ಕೈಬಿಟ್ಟಿದೆ. ಈ ಸಂಬಂಧ ರೋಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಚಿನ್‌ ಗುಪ್ತಾ ಅವರು ಆದೇಶ ಹೊರಡಿಸಿದ್ದಾರೆ. ವೋರಾ ಅವರ ಮರಣ ಪ್ರಮಾಣ ಪತ್ರ ಸಲ್ಲಿಸಿದ ಅವರ ಪರ ವಕೀಲರು ಅವರ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿದರು. ಇದನ್ನು ಪರಿಗಣಿಸಿದ ಪೀಠವು “ಪ್ರಕರಣದಲ್ಲಿನ ಮೂರನೇ ಆರೋಪಿಯಾದ ಮೋತಿಲಾಲ್‌ ವೋರಾ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ” ಎಂದು ಹೇಳಿತು.

Motilal Vora

ಅಸೋಸಿಯೇಟೆಡ್‌ ಪ್ರೆಸ್‌ ಲಿಮಿಟೆಡ್‌ ಮಾಲೀಕತ್ವದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಯಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮೂಲಕ ಕೇವಲ 50 ಲಕ್ಷ ರೂಪಾಯಿಗೆ ಖರೀದಿಸಿ, ನಿಧಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮೋತಿಲಾಲ್‌ ವೋರಾ, ಆಸ್ಕರ್‌ ಫರ್ನಾಂಡೀಸ್‌, ಸುಮನ್‌ ದುಬೆ, ಸ್ಯಾಮ್‌ ಪಿತ್ರೋಡಾ ಮತ್ತಿತರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ. ಪ್ರಕರಣವು ಸಮನ್ಸ್‌ ನಂತರದ ಸಾಕ್ಷ್ಯದ ಹಂತದಲ್ಲಿದೆ. ವೋರಾ ಅವರನ್ನು ಹಿರಿಯ ವಕೀಲರಾದ ಆರ್‌ ಎಸ್‌ ಚೀಮಾ ಮತ್ತು ವಕೀಲರಾದ ತರನುಮ್‌ ಚೀಮಾ ಪ್ರತಿನಿಧಿಸಿದ್ದರು.