ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 24-2-2021

Bar & Bench

ರೈತರ ಪ್ರತಿಭಟನೆಯಲ್ಲಿ ಭಾಗಿ: ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿವೃತ್ತ ಯೋಧರು

ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದಕ್ಕಾಗಿ ತಮ್ಮನ್ನು ಬಂಧಿಸಬಹುದು ಎಂದು ಹೆದರಿದ ಇಬ್ಬರು ಮಾಜಿ ಯೋಧರು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ಮತ್ತು ನಿವೃತ್ತ ಗ್ರೂಪ್ ಕ್ಯಾಪ್ಟನ್ ವಿ.ಕೆ.ಗಾಂಧಿ ವಿ.ಎಸ್.ಎಂ ಅರ್ಜಿ ಸಲ್ಲಿಸಿರುವ ಯೋಧರು.

Farmer Protest, Delhi High Court

ಇಬ್ಬರೂ ಕ್ರಮವಾಗಿ ಭಾರತೀಯ ಮಾಜಿ ಸೈನಿಕರ ಆಂದೋಲನ (ಐಎಎಸ್‌ಎಂ) ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದು 'ಒಂದು ರ್ಯಾಂಕ್‌ ಒಂದು ಪಿಂಚಣಿ' ಚಳವಳಿಯಲ್ಲಿ ಸಿಂಗ್‌ ಭಾಗಿಯಾಗಿದ್ದರು. ತಮ್ಮ ಸಂಘಟನೆ ರೈತ ಚಳವಳಿಗೆ ಬೆಂಬಲ ನೀಡಿದ್ದು ಅದರಲ್ಲಿ ಭಾಗಿಯಾಗಲು ತಮ್ಮ ಸಂಘಟನೆಯ ಸದಸ್ಯರಿಗೆ ಸ್ಪಷ್ಟ ಕರೆ ನೀಡಿದ್ದರು. ದೆಹಲಿ ಪೊಲೀಸರು ಈ ಬಗ್ಗೆ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ತಮ್ಮನ್ನು ಬಂಧಿಸಬಹುದು ಎಂಬ ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಕತೆಗಳಲ್ಲಿ ಮಾತ್ರ ಕೇಳಿದ್ದೆವು; ತಿಹಾರ್‌ ಜೈಲಿನಲ್ಲಿ ನಡೆದ ಕೈದಿ ಕೊಲೆ ಕುರಿತು ದೆಹಲಿ ಹೈಕೋರ್ಟ್‌ ಪ್ರತಿಕ್ರಿಯೆ

ಕಳೆದ ನವೆಂಬರ್‌ನಲ್ಲಿ ತಿಹಾರ್‌ ಜೈಲಿನಲ್ಲಿ ನಡೆದ ವಿಚಾರಣಾಧೀನ ಕೈದಿಯ ಕೊಲೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದೊಂದು ಗಂಭೀರ ವಿಷಯ ಎಂದಿರುವ ಅದು ಘಟನೆಯ ಬಗ್ಗೆ ದೆಹಲಿ ಸರ್ಕಾರ ಸ್ಥಿತಿಗತಿ ವರದಿ ಕೊಡುವಂತೆ ಸೂಚಿಸಿದೆ. ಅಲ್ಲದೆ ತನಿಖೆಯ ಗತಿ ಮತ್ತು ಆರೋಪಪಟ್ಟಿ ಸಲ್ಲಿಸಲಾಗಿದ್ದರೆ ಅದರ ವಿವರವನ್ನು ಕೂಡ ನೀಡುವಂತೆ ತಿಳಿಸಿದೆ.

Tihar Jail

2019ರಲ್ಲಿ ಸೆರೆವಾಸಿಯಾಗಿದ್ದ ವ್ಯಕ್ತಿಯನ್ನು ನವೆಂಬರ್‌ನಲ್ಲಿ ಒಂಬತ್ತು ಬಾರಿ ಇರಿದು ಕೊಲೆ ಮಾಡಲಾಗಿತ್ತು. ಇಂತಹ ಘಟನೆಗಳನ್ನು ಕತೆಗಳಲ್ಲಿ ಮಾತ್ರ ಕೇಳಿದ್ದೆವು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. ಜೈಲುಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆಯುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಜೈಲು ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ರೂ 5 ಕೋಟಿ ಪರಿಹಾರ ನೀಡಲು ದೆಹಲಿ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಹೈಕೋರ್ಟ್‌ ಮೊರೆ ಹೋಗಿದ್ದರು.

ಮಾರಾಟಗಾರನ ತಪ್ಪಿನಿಂದಾಗಿ ದೋಷಯುಕ್ತ ಕಾರು ಮಾರಾಟವಾಗಿದ್ದರೆ ಅದಕ್ಕೆ ಕಾರು ತಯಾರಕರು ಹೊಣೆ : ಸುಪ್ರೀಂಕೋರ್ಟ್‌

ಮಾರಾಟಗಾರನ ತಪ್ಪಿನಿಂದಾಗಿ ದೋಷಯುಕ್ತ ಕಾರು ಮಾರಾಟವಾಗಿದ್ದರೆ ಅಂತಹ ದೋಷದ ಬಗ್ಗೆ ಅರಿವಿಗೆ ತಾರದ ಹೊರತು ಕಾರು ತಯಾರಕರನ್ನು ಹೊಣೆಗಾರರನ್ನಾಗಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಎರಡು ವರ್ಷ ಹಳೆಯ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಟಾಟಾ ಮೋಟಾರ್ಸ್‌ ಸಂಸ್ಥೆಯನ್ನು ಹೊಣೆಗಾರನನ್ನಾಗಿ ಮಾಡಿತ್ತು. ಆದರೆ ನ್ಯಾಯಮೂರ್ತಿಗಳಾದ ಯುಯು ಲಲಿತ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಸಂಸ್ಥೆಯನ್ನು ದೋಷಮುಕ್ತಗೊಳಿಸಿದೆ.

Tata Motors, Supreme Court

ದೋಷಯುಕ್ತ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ಗ್ರಾಹಕ ಆಂಟೋನಿಯೊ ಪೌಲೊ ವಾಜ್‌ ಅವರ ಪರವಾಗಿ ಎನ್‌ಸಿಡಿಆರ್‌ಸಿ ಈ ಹಿಂದೆ ತೀರ್ಪು ನೀಡಿತ್ತು. ಹೊಸ ಕಾರಿನ ಬದಲಿಗೆ ಕೆಲ ಕಿಲೋಮೀಟರ್‌ ಓಡಿದ್ದ ಕಾರನ್ನು ಆಂಟೋನಿಯೋ ಅವರಿಗೆ ಮಾರಾಟಗಾರ ನೀಡಿದ್ದರು. ಹೊಸ ಕಾರು ನೀಡುವಂತೆ ಅವರು ಕಾರು ತಯಾರಿಕೆ ಕಂಪೆನಿಯನ್ನು ಒತ್ತಾಯಿಸಿದ್ದರು. ಆದರೆ ಕಾರಿನ ಭೌತಿಕ ಸ್ಥಿತಿಗತಿ ಏನಾಗಿರುತ್ತದೆ ಎಂಬುದು ಕಾರು ತಯಾರಿಕೆ ಕಂಪೆನಿಗೆ ತಿಳಿದಿರುವುದಿಲ್ಲ. ಮಾರಾಟಗಾರರು ಕಾರು ತಯಾರಿಕಾ ಕಂಪೆನಿಯ ಗಮನಕ್ಕೆ ಬಾರದಂತೆ ಕಾರನ್ನು ಬಳಸಿರಬಹುದು ಎಂದು ಅಭಿಪ್ರಾಯಪಟ್ಟು ಆಯೋಗದ ಆದೇಶವನ್ನು ತಿರಸ್ಕರಿಸಿತು.

ಪ್ರಯಾಗರಾಜ್‌ ಜಿಲ್ಲೆಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾದ ಉತ್ತರಪ್ರದೇಶ ಸರ್ಕಾರ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಬಜೆಟ್‌ ಅಧಿವೇಶನದ ವೇಳೆ ರಾಜ್ಯ ಸರ್ಕಾರ ಘೋಷಿಸಿದೆ,. ಜಿಲ್ಲೆಯ ಜಲ್ವಾ ಪ್ರದೇಶದಲ್ಲಿ 25 ಎಕರೆ ಭೂಮಿಯಲ್ಲಿ ವಿವಿ ಸ್ಥಾಪನೆಯಾಗಲಿದೆ. 2003 ರಲ್ಲಿ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಹಲವು ಅಡೆತಡೆಗಳಿಂದಾಗಿ ವಿವಿ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. 2020ರಲ್ಲಿರಾಜ್ಯ ಸರ್ಕಾರ ವಿವಿ ಸ್ಥಾಪನೆಗೆ ಹಸಿರು ನಿಶಾನೆ ತೋರಿತು. ವಿವಿಯಿಂದಾಗಿ ಪ್ರಯಾಗ್‌ರಾಜ್‌ ಸುತ್ತಮುತ್ತಲಿನ ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಉತ್ತರಪ್ರದೇಶ ವಿತ್ತ ಸಚಿವರು ತಿಳಿಸಿದ್ದಾರೆ.

Uttar Pradesh Budget 2021

5,12,860.72 ಕೋಟಿ ರೂಪಾಯಿ ಗಾತ್ರದ ಬಜೆಟ್‌ನಲ್ಲಿ ಕಾನೂನು ಮತ್ತು ನ್ಯಾಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಲಾದ ಪ್ರಮುಖ ವಿವರಗಳು ಇಲ್ಲಿವೆ: ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ 150 ಕೋಟಿ ರೂ. ಅಲಹಾಬಾದ್‌ನ ಮುಖ್ಯ ಕಟ್ಟಡಕ್ಕೆ 450 ಕೋಟಿ ರೂ ಮೀಸಲಿಡಲಾಗಿದೆ.