ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |28-4-2021

>> ಸಂಕಷ್ಟದಲ್ಲಿರುವ ವಕೀಲರಿಗೆ ಕೆಎಸ್‌ಬಿಸಿ ಅಭಯ >> ವಕೀಲರ ಸಂಚಾರಕ್ಕೆ ಅನುಮತಿಯಿದೆ ಎಂದ ಎಎಬಿ >> ಆಂಧ್ರ ಶಾಲಾ ಪರೀಕ್ಷೆಗಳಿಗೆ ಆಕ್ಷೇಪ

Bar & Bench

ಸಂಕಷ್ಟದಲ್ಲಿರುವ ವಕೀಲರಿಗೆ ಕೆಎಸ್‌ಬಿಸಿ ಅಭಯ

ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನ್ಯಾಯವಾದಿಗಳಿಗಾಗಿ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನಿರ್ಧರಿಸಿದೆ. ಪರಿಷತ್‌ ಅಧ್ಯಕ್ಷ ಶ್ರೀನಿವಾಸ್‌ ಬಾಬು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಎಸ್‌ಬಿಸಿಯ ಪ್ರಕಟಣೆ ತಿಳಿಸಿದೆ.

KSBC PDF.pdf
Preview

ಕೋವಿಡ್‌ ಕಠಿಣ ಕ್ರಮಗಳು ರಾಜ್ಯದಲ್ಲಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಕೀಲರ ಕಲ್ಯಾಣ ನಿಧಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಷತ್‌ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲು ನಿರ್ಧರಿಸಲಾಗಿದೆ. ಮರಣ ಪರಿಹಾರ, ವೈದ್ಯಕೀಯ ಪರಿಹಾರ, ನಿವೃತ್ತಿ ಸೌಲಭ್ಯ, ಹಾಗೂ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಇಮೇಲ್‌ ಮೂಲಕ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನಿತ್ಯದ ವ್ಯವಹಾರಗಳ ಮಾಹಿತಿ ಹಂಚಿಕೊಳ್ಳಲು ವಾಟ್ಸಾಪ್‌ ಗ್ರೂಪ್‌ ರಚಿಸಲಾಗಿದೆ. ಇದೇ ವೇಳೆ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಇನ್ನು ಎರಡು ವಾರಗಳ ಕಾಲ ಪರಿಷತ್‌ ಕಚೇರಿ ತೆರೆಯದಿರಲು ನಿರ್ಧರಿಸಲಾಗಿದೆ.

ಗುರುತಿನ ಚೀಟಿ ತೋರಿಸಿ ನ್ಯಾಯವಾದಿಗಳು ಸಂಚರಿಸಲು ನಗರ ಪೊಲೀಸ್‌ ಕಮಿಷನರ್‌ ಒಪ್ಪಿಗೆ: ಬೆಂಗಳೂರು ವಕೀಲರ ಸಂಘ

ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ತಮ್ಮ ಗುರುತಿನ ಚೀಟಿ ತೋರಿಸಿ ವಕೀಲರು ನ್ಯಾಯಾಲಯ ಮತ್ತು ಕಚೇರಿಗೆ ತೆರಳಲು ನಗರ ಪೊಲೀಸ್‌ ಕಮಿಷನರ್‌ ಅನುಮತಿ ನೀಡಲು ಸಮ್ಮತಿಸಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಬುಧವಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಅವರು ತುರ್ತು ಅಗತ್ಯದ ಸಂದರ್ಭದಲ್ಲಿ ಈ ಅನುಮತಿಯ ಸದುಪಯೋಗ ಪಡೆಯಬೇಕು. ಅನಗತ್ಯವಾಗಿ ವಕೀಲರು ಹೊರಗೆ ಸಂಚರಿಸಬಾರದು. ಮನೆಯಲ್ಲಿಯೇ ಇದ್ದು ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ನ್ಯಾಯವಾದಿ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಸಂಘ ಮಾಡಿದ್ದ ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ, ರಾಜ್ಯ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್, ಪೊಲೀಸ್ ಆಯುಕ್ತರು ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

10 ಮತ್ತು 12ನೇ ತರಗತಿಗಳ ಪರೀಕ್ಷೆ ಮುಂದೂಡುವಂತೆ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಅರ್ಜಿ

10 ಮತ್ತು 12ನೇ ತರಗತಿಗಳ ಪರೀಕ್ಷೆ ಮುಂದೂಡುವಂತೆ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಪರೀಕ್ಷೆ ನಡೆಸಿದರೆ ಸುಮಾರು 12 ಲಕ್ಷ ಮಕ್ಕಳನ್ನು ಕೋವಿಡ್‌ ಸೋಂಕಿಗೆ ಒಡ್ಡಿದಂತೆ ಆಗುತ್ತದೆ ಮತ್ತು ಕುಂಭ ಮೇಳಕ್ಕೆ ಹೋಲಿಸಬಹುದಾದ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಗ್ಲೋಬಲ್‌ ಪೀಸ್‌ ಇನಿಷಿಯೇಟಿವ್‌ ಸಂಘಟನೆ ಅರ್ಜಿ ಸಲ್ಲಿಸಿದ್ದು ಅರ್ಜಿದಾರರನ್ನು ಪ್ರತಿನಿಧಿಸಿರುವ ವಕೀಲ ಕೆ ಪಿ ಕೌಲ್‌ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರು, ಶಾಲಾ ಸಿಬ್ಬಂದಿ, ಸಾರಿಗೆ ನೌಕರರಿಗೂ ಹರಡಿ ಸೋಂಕು ದ್ವಿಗುಣವಾಗಬಹುದು. ಕೋವಿಡ್‌ ಅಪಾಯಕಾರಿ ಮಟ್ಟದಲ್ಲಿದ್ದು ಈಗ ಪರೀಕ್ಷೆ ನಡೆಸುವುದು ಲಕ್ಷಾಂತರ ಯುವಜನರ ಪ್ರಾಣವನ್ನು ಅಪಾಯಕ್ಕೀಡು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.