ವರ್ಚುವಲ್ ಕಲಾಪಗಳಿಗೆ ಅವಕಾಶ ನೀಡದೆ ಭೌತಿಕ ವಿಚಾರಣೆ ಪುನರಾರಂಭಿಸುವ ದೆಹಲಿ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಐವರು ಮಹಿಳಾ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಭೌತಿಕ ಕಲಾಪ ಕಡ್ಡಾಯಗೊಳಿಸಿರುವ ಆದೇಶವನ್ನು ಬದಿಗೆ ಸರಿಸಿ ವರ್ಚುವಲ್ ಕಲಾಪಗಳಿಗೂ ಅವಕಾಶ ನೀಡುವ ಹೊಸ ಆದೇಶ ರವಾನಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ದೆಹಲಿ ಹೈಕೋರ್ಟ್‌ನ ರೆಜಿಸ್ಟ್ರಾರ್ ಜನರಲ್ ಹೊರಡಿಸಿರುವ ಕಚೇರಿ ಆದೇಶಗಳನ್ನು ವಕೀಲರಾದ ಅಮೃತ ಶರ್ಮಾ, ಸೌಮ್ಯಾ ಟಂಡನ್, ಪದ್ಮಪ್ರಿಯಾ, ಅಶ್ಮಿತಾ ನರುಲಾ ಮತ್ತು ಶಿವಾನಿ ಲುತ್ರಾ ಅವರು ಪ್ರಶ್ನಿಸಿದ್ದಾರೆ.
ಅರ್ಜಿದಾರರನ್ನೂ ಒಳಗೊಂಡಂತೆ ಅನೇಕ ಪುರುಷ ಮತ್ತು ಮಹಿಳಾ ನ್ಯಾಯವಾದಿಗಳಿಗೆ ಎಳೆಯ ಮಕ್ಕಳಿದ್ದು ಅವರು ಮನೆಯಲ್ಲೇ ಕಲಿಯುತ್ತಿದ್ದಾರೆ ಇಲ್ಲವೇ ವರ್ಚುವಲ್ ಕಲಿಕೆಯಲ್ಲಿ ತೊಡಗಿದ್ದಾರೆ. ಈಗಿನ ವರ್ಚುವಲ್ ಕಲಾಪ ವ್ಯವಸ್ಥೆಯಿಂದಾಗಿ ಮಕ್ಕಳು/ ಅಪ್ರಾಪ್ತರ ಪಾಲನೆ ಮಾಡುತ್ತಲೇ ವೃತ್ತಿಪರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಜಾಲ ಕಲಾಪಕ್ಕೆ ಅವಕಾಶ ಮಾಡಿಕೊಡದ ದೋಷಪೂರಿತ ಕಚೇರಿ ಆದೇಶ ಜಾರಿಯಾದರೆ ಬೇರೆ ದಾರಿಯಿಲ್ಲದೆ ಮಕ್ಕಳ ಪಾಲನೆ ಕಷ್ಟವಾಗುತ್ತದೆ. ಅಥವಾ ತಾವು, ತಮ್ಮ ಮಕ್ಕಳು ಇಲ್ಲವೇ ಕುಟುಂಬದ ದುರ್ಬಲ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿವೆ” ಎಂದು ಅರ್ಜಿಯಲ್ಲಿ ಅಳಲು ತೋಡಿಕೊಳ್ಳಲಾಗಿದೆ. ಅದರಲ್ಲಿಯೂ ಮಹಿಳಾ ವಕೀಲರ ಮೇಲೆ ದೆಹಲಿ ಹೈಕೋರ್ಟ್ ಆದೇಶ ಕೆಟ್ಟ ಪರಿಣಾಮ ಬೀರುತ್ತದೆ. ಏಕಕಾಲಕ್ಕೆ ಭೌತಿಕ ವಿಚಾರಣೆಗೆ ಹಾಜರಾಗಬೇಕಾದ ವಕೀಲರು ವರ್ಚುವಲ್ ಕಲಾಪಗಳ ಸಂದರ್ಭದಲ್ಲಿ ತಮ್ಮ ಕಕ್ಷೀದಾರರನ್ನು ಸೂಕ್ತ ರೀತಿಯಲ್ಲಿ ಪ್ರತಿನಿಧಿಸಲು ಆಗುವುದಿಲ್ಲ ಎನ್ನಲಾಗಿದೆ. ಅಲ್ಲದೆ ಐವತ್ತಕ್ಕೂ ಹೆಚ್ಚು ವರ್ಷ ವಯಸ್ಸಾದ ವಕೀಲರು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಭೌತಿಕ ಕಲಾಪದಿಂದ ತೊಂದರೆಗಳುಂಟಾಗುತ್ತವೆ. ಆದೇಶದಿಂದಾಗಿ ದಾವೆದಾರರು, ವಕೀಲರು, ಗುಮಾಸ್ತರು, ನ್ಯಾಯಾಲಯ ಸಿಬ್ಬಂದಿ, ಸಹಾಯಕ ಸಿಬ್ಬಂದಿ, ನ್ಯಾಯಾಧೀಶರು ಹಾಗೂ ಅವರ ಕುಟುಂಬಗಳ ಆರೋಗ್ಯ, ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮಕ್ಕೆ ಮಾರಕ ಪರಿಣಾಮ ಉಂಟಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಇಂಥದ್ದೇ ಆತಂಕ ವ್ಯಕ್ತಪಡಿಸಿ ಈ ಹಿಂದೆಯೂ ಅನೇಕ ವಕೀಲರು ಸುಪ್ರೀಂಕೋರ್ಟ್ ಕದ ತಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.
ವಾಟ್ಸಪ್ ದತ್ತಾಂಶದ ಜೊತೆ ರಾಜಿ ಮಾಡಿಕೊಳ್ಳುತ್ತದೆ ಎಂದಾದರೆ ಅದನ್ನು ತೆಗೆದು ಹಾಕಿ ಎಂದು ದೆಹಲಿ ಹೈಕೋರ್ಟ್ ಸೋಮವಾರ ಅರ್ಜಿದಾರರಿಗೆ ಹೇಳಿದೆ. ಮೆಸೇಜಿಂಗ್ ವೇದಿಕೆಯ ನೂತನ ಖಾಸಗಿ ನೀತಿಯ ಬಗೆಗಿನ ಅರ್ಜಿದಾರರ ಅಹವಾಲು ತನಗೆ ಅರ್ಥವಾಗುತ್ತಿಲ್ಲ ಎಂದ ನ್ಯಾಯಾಲಯವು, "ಅದೊಂದು ಖಾಸಗಿ ಆಪ್. ಬೇಡವೆನಿಸಿದರೆ ಬಳಸಬೇಡಿ" ಎಂದಿತು. ಸಂವಿಧಾನದ ಮೂರನೇ ಭಾಗದಲ್ಲಿ ಖಾತರಿಪಡಿಸಲಾಗಿರುವ ಖಾಸಗಿ ಹಕ್ಕನ್ನು ವಾಟ್ಸಾಪ್‌ನ ನೂತನ ನೀತಿಯು ಉಲ್ಲಂಘಿಸುತ್ತದೆ ಎಂದು ವಕೀಲರಾದ ಚೈತನ್ಯ ರೊಹಿಲ್ಲಾ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಲಾಗಿದೆ.
“ಇದೊಂದು ಖಾಸಗಿ ಅಪ್ಲಿಕೇಶನ್. ಅದನ್ನು ಬಳಸಬೇಡಿ. ನಿಮ್ಮ ಸಮಸ್ಯೆಯಾದರೂ ಏನು?... ನಿಮ್ಮ ಆತಂಕ ನನಗೆ ಅರ್ಥವಾಗುತ್ತಿಲ್ಲ. ವಾಟ್ಸಾಪ್ ನಿಮ್ಮ ದತ್ತಾಂಶದ ಜೊತೆ ರಾಜಿ ಮಾಡಿಕೊಳ್ಳುತ್ತದೆ ಎಂದಾದರೆ ಅದನ್ನು ತೆಗೆದುಹಾಕಿ,” ಎಂದು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಫೇಸ್‌ಬುಕ್ ಒಡೆತನದ ಸಾಮಾಜಿಕ ಅಪ್ಲಿಕೇಶನ್‌ನಲ್ಲಿ ನಡೆಸಲಾದ ಎಲ್ಲವನ್ನೂ ಅದು ವಿಶ್ಲೇಷಣೆ ಮಾಡುತ್ತದೆ. ವಾಟ್ಸಾಪ್ ಮಾತ್ರವಲ್ಲ ಹಲವು ಸಾಮಾಜಿಕ ಮಾಧ್ಯಮಗಳು ಇದನ್ನೇ ಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲ ಮನೋಹರ್ ಲಾಲ್ ಹೇಳಿದರು. “ವಾಟ್ಸಾಪ್ ಮಾತ್ರವಲ್ಲ ಎಲ್ಲ ಸಾಮಾಜಿಕ ಮಾಧ್ಯಮಗಳು ಅದನ್ನೇ ಮಾಡುತ್ತವೆ. ಗೂಗಲ್ ಮ್ಯಾಪ್ ಸಹ ದತ್ತಾಂಶ ಹಂಚಿಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತೇ? ನೀವು ಅದರ ನಿಯಮ ಮತ್ತು ಷರತ್ತು ಓದಿರುವುದರ ಬಗ್ಗೆ ನನಗೆ ಅನುಮಾನಗಳಿವೆ," ಎಂದು ಅರ್ಜಿದಾರರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು.
ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಹರಡಿದ, ಹಿಂದೂ ಧರ್ಮವನ್ನು ಲೇವಡಿ ಮಾಡಿದ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡ ಆರೋಪದಲ್ಲಿ ತಾಂಡವ್ ವೆಬ್‌ಸೀರಿಸ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಹಿಂದೂ ಸೇನೆಯ ಸ್ಥಾಪಕ ಸದಸ್ಯ ವಿಷ್ಣು ಗುಪ್ತಾ ಅವರು ವೆಬ್ ಸಿರೀಸ್ ನಿರ್ದೇಶಕ ಅಬ್ಬಾಸ್ ಜಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಬರಹಗಾರ ಗೌರವ್ ಸೋಲಂಕಿ ಮತ್ತು ನಟರಾದ ಸೈಫ್ ಅಲಿ ಖಾನ್, ಮೊಹಮ್ಮದ್ ಜೀಶಾನ್ ಆಯೂಬ್ ಮತ್ತು ಗೌಹರ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಭಾರತದ ಅಮೆಜಾನ್ ಒರಿಜನಲ್ ಕಂಟೆಂಟ್ ಮುಖ್ಯಸ್ಥ ಅಪರ್ಣ ಪುರೋಹಿತ್ ವಿರುದ್ಧವೂ ದೂರು ದಾಖಲಿಸುವಂತೆ ಕೋರಲಾಗಿದೆ. ವಕೀಲ ಶಶಿ ರಂಜನ್ ಕುಮಾರ್ ಸಿಂಗ್ ಅವರ ಮೂಲಕ ದೂರು ದಾಖಲಿಸಲಾಗಿದೆ.