ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |15-3-2021

Bar & Bench

ವಕೀಲರು, ನ್ಯಾಯಮೂರ್ತಿಗಳಿಗೆ ಕೋವಿಡ್‌ ಲಸಿಕೆ ನೀಡುವಲ್ಲಿ ಪ್ರಾಮುಖ್ಯತೆ ನೀಡುವುದು ಇತರೆ ವ್ಯಾಪಾರ/ವೃತ್ತಿಗೆ ತಾರತಮ್ಯ ಮಾಡಿದಂತೆ: ಸುಪ್ರೀಂಗೆ ಕೇಂದ್ರದ ವಿವರಣೆ

ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಇತರೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ವಕೀಲರು ಮತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪ್ರತ್ಯೇಕ ವರ್ಗ ಸೃಷ್ಟಿಸುವುದು ಇತರೆ ಉದ್ಯಮ ಅಥವಾ ವೃತ್ತಿಯಲ್ಲಿರುವ ಮಂದಿಗೆ ತಾರತಮ್ಯ ಮಾಡಿದಂತಾಗುತ್ತದೆ. ಹೀಗಾಗಿ ಆ ರೀತಿ ಮಾಡಲಾಗದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಹರ್‌ ಅಗ್ನಾನಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

COVID-19 preparation in Supreme Court

ಕೋವಿಡ್‌ ಲಸಿಕೆ ಪಡೆಯುವವರ ಪ್ರಮುಖ ಪಟ್ಟಿಯಲ್ಲಿ ನ್ಯಾಯಮೂರ್ತಿಗಳು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಸೇರಿಸುವಂತೆ ಕೋರಿ ಅರವಿಂದ್‌ ಸಿಂಗ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದರು. ಮೊದಲ ಹಂತದ ಲಸಿಕೆ ಹಾಕುವ ಪಟ್ಟಿಯಲ್ಲಿ ನ್ಯಾಯಮೂರ್ತಿಗಳು, ನ್ಯಾಯಿಕ ಸಿಬ್ಬಂದಿ, ವಕೀಲರು, ಕ್ಲರ್ಕ್‌ಗಳು ಮತ್ತು ಇತರೆ ಕಾನೂನು ಸಮುದಾಯದ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಈ ಹಿಂದೆ ಸಲ್ಲಿಕೆಯಾಗಿದ್ದ ಪಿಐಎಲ್‌ ಅನ್ನು ಫೆಬ್ರವರಿ 4ರಂದು ದೆಹಲಿ ಹೈಕೋರ್ಟ್‌ ವಜಾಗೊಳಿಸಿತ್ತು.

ಅಂತರಧರ್ಮೀಯ ಪ್ರೇಯಸಿಗೆ ಬಲವಂತದ ವಿವಾಹ: ರಕ್ಷಣೆಗೆ ನಿರ್ದೇಶಿಸುವಂತೆ ಕೋರಿದ್ದ ಪ್ರಿಯಕರನ ಮನವಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

ತಾನು ಪ್ರೇಮಿಸಿರುವ ಮುಸ್ಲಿಮ್‌ ಯುವತಿಯನ್ನು ಮತ್ತೊಬ್ಬರ ಜೊತೆ ವಿವಾಹ ಮಾಡಲು ಆಕೆಯ ಪೋಷಕರು ಮುಂದಾಗಿದ್ದು ಇದರಿಂದ ಆಕೆಗೆ ರಕ್ಷಣೆ ಒದಗಿಸುವಂತೆ ಕೋರಿ ಹಿಂದೂ ಯುವಕ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಲು ಸೋಮವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಬದಲಿಗೆ ಅಲಾಹಾಬಾದ್‌ ಹೈಕೋರ್ಟ್‌ ಸಂಪರ್ಕಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಸಲಹೆ ನೀಡಿದೆ.

Marriage

ಯುವತಿಯ ಪೋಷಕರು ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿದ್ದು, ಆಕೆಯನ್ನು ಅಕ್ರಮವಾಗಿ ವಶದಲ್ಲಿರಿಸಿದ್ದಾರೆ. ಇದರ ಮಧ್ಯೆ, ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ಉತ್ತರ ಪ್ರದೇಶ ಸರ್ಕಾರ ಅನುಸರಿಸಿರಲಿಲ್ಲ ಎಂದು ಅರ್ಜಿದಾರರು ಹೇಳಿದ್ದರು. 2015ರಿಂದಲೂ ಶಹೀಮನ್‌ ನಿಷಾ ಹಾಗೂ ರಾಜೇಶ್‌ ಕುಮಾರ್‌ ಗುಪ್ತಾ ಅವರು ಪ್ರೀತಿಸುತ್ತಿದ್ದರು. ವಿವಾಹವಾಗಲು ಇಬ್ಬರೂ ತಮ್ಮ ತಮ್ಮ ಪೋಷಕರನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಇದಕ್ಕೆ ಯುವತಿಯ ಪೋಷಕರು ಒಪ್ಪಿರಲಿಲ್ಲ. ಬದಲಿಗೆ ಯುವ ಜೋಡಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದರು ಎಂದು ಸರ್ಕಾರೇತರ ಸಂಸ್ಥೆ ಧನಕ್‌ ಆಫ್‌ ಹ್ಯುಮ್ಯಾನಿಟಿ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಲಾಗಿತ್ತು.

ಟೂಲ್‌ಕಿಟ್‌ ಪ್ರಕರಣ: ಬಂಧನಕ್ಕೆ 7 ದಿನ ಮುಂಚಿತವಾಗಿ ಜೇಕಬ್‌, ಶಂತನು, ಕರ್‌ಗೆ ದೆಹಲಿ ಪೊಲೀಸರು ನೋಟಿಸ್‌ ನೀಡಬೇಕು

ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ನಿಕಿತಾ ಜೇಕಬ್‌, ಶಂತನು ಮುಲುಕ್‌ ಮತ್ತು ಶುಭಂ ಕರ್‌ ಚೌಧರಿ ಅವರ ನಿರೀಕ್ಷಣಾ ಜಾಮೀನು ಮನವಿಯನ್ನು ದೆಹಲಿ ನ್ಯಾಯಾಲಯವು ಸೋಮವಾರ ವಿಲೇವಾರಿ ಮಾಡಿದೆ. ಮೂವರು ಆರೋಪಿತರನ್ನು ಬಂಧಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅವರಿಗೆ ಏಳು ದಿನ ಮುಂಚಿತವಾಗಿ ದೆಹಲಿ ಪೊಲೀಸರು ನೋಟಿಸ್‌ ನೀಡಬೇಕು. ಈ ಸಂದರ್ಭದಲ್ಲಿ ಆರೋಪಿಗಳು ಕಾನೂನು ಪರಿಹಾರದ ಮೊರೆ ಹೋಗಬಹುದು ಎಂದು ನ್ಯಾಯಾಲಯ ಹೇಳಿದೆ.

Nikita Jacob, Shantanu Muluk, Shubham Kar Chaudhuri

ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ವಿಸ್ತೃತ ವಾದ ಆಲಿಸಿದರು. ಎಕ್ಷ್‌ಟಿಂಕ್ಷನ್‌ ರೆಬೆಲಿಯನ್‌ ಎಂಬ ಪರಿಸರ ಆಂದೋಲನದ ಜೊತೆ ಜೇಕಬ್‌ ಮತ್ತು ಮುಲುಕ್‌ ಗುರುತಿಸಿಕೊಂಡಿದ್ದಾರೆಯೇ ವಿನಾ ಯಾವುದೇ ಪ್ರತ್ಯೇಕತಾವಾದಿ ಸಿದ್ಧಾಂತದ ಜೊತೆ ಸಂಪರ್ಕ ಹೊಂದಿಲ್ಲ. ವಿಶೇಷವಾಗಿ ಖಲಿಸ್ತಾನಿ ಸಮೂಹದ ಜೊತೆ ಗುರುತಿಸಿಕೊಂಡಿಲ್ಲ ಎಂದು ಅವರ ವಕೀಲರು ವಾದಿಸಿದರು. ಚೌಧರಿ ಅವರು ಟೂಲ್‌ಕಿಟ್‌ನಲ್ಲಿರುವ ಪ್ರಶ್ನೆಗಳನ್ನೇ ನೋಡಿಲ್ಲ ಎಂದು ಚೌಧರಿ ಪರ ವಕೀಲರು ಹೇಳಿದ್ದಾರೆ.