ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-12-2020

>> ಅಮಿತ್‌ ಶಾ ಮನೆ ಎದುರು ಪ್ರತಿಭಟಿಸಲು ಅನುಮತಿ ಕೋರಿಕೆ >> ಪೊಲೀಸ್ ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಅರ್ಜಿ >> ಕಫೀಲ್ ಖಾನ್ ಬಂಧನ ಪ್ರಶ್ನಿಸಿದ ಮನವಿ >> ವಿವಾದಾತ್ಮಕ ವೆಬ್‌ ಸರಣಿ: ಏಕ್ತಾ ಕಪೂರ್‌ ಗೆ ಮಧ್ಯಂತರ ರಕ್ಷಣೆ

Bar & Bench

ರೂ. 2,500 ಕೋಟಿ ಹಗರಣ: ಅಮಿತ್‌ ಶಾ, ಲೆಫ್ಟಿನೆಂಟ್‌ ಗವರ್ನರ್‌ ಮನೆ ಎದುರು ಪ್ರತಿಭಟನೆಗೆ ಅನುಮತಿ ಕೋರಿದ ಆಪ್‌

ಉತ್ತರ ದೆಹಲಿ ಮಹಾನಗರ ಪಾಲಿಕೆಯಲ್ಲಿ ರೂ 2,500 ಕೋಟಿಯಷ್ಟು ಹಣ ದುರುಪಯೋಗವಾಗಿರುವುದನ್ನು ವಿರೋಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಮನೆಗಳೆದರು ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಆಮ್‌ ಆದ್ಮಿ ಪಕ್ಷದ ಶಾಸಕರಾದ ಆತಿಶಿ ಮರ್ಲೆನಾ ಮತ್ತು ರಾಘವ್ ಚಡ್ಡಾ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಹಗರಣದ ವಿರುದ್ಧ ಧ್ವನಿ ಎತ್ತಲು ನಾಲ್ಕು ಮಂದಿ ಆಮ್‌ ಆದ್ಮಿ ಸದಸ್ಯರು ಶಾ ಮತ್ತು ಬೈಜಲ್‌ ಅವರ ಮನೆ ಎದುರು ಪ್ರತಿಭಟನೆ ನಡೆಸಲು ಅರ್ಜಿಯಲ್ಲಿ ಕೋರಲಾಗಿದೆ.

Atishi Marlena, Raghav Chadha

ಕೋವಿಡ್‌ ಕಾರಣಕ್ಕೆ ಮತ್ತು ದೆಹಲಿಯ ಕೆಲವು ಪ್ರದೇಶಗಳಲ್ಲಿ ಸಿಆರ್‌ಪಿಸಿ 144ನೇ ಸೆಕ್ಷನ್ ಜಾರಿಯಲ್ಲಿರುವುದರಿಂದ ದೆಹಲಿ ಪೊಲೀಸರು ಎರಡು ಸ್ಥಳಗಳಲ್ಲಿ ಶಾಂತಿಯುತ ಧರಣಿ ನಡೆಸಲು ಅನುಮತಿ ನೀಡಿಲ್ಲ ಎಂದು ನ್ಯಾ. ನವೀನ್‌ ಚಾವ್ಲಾ ಅವರಿದ್ದ ಏಕಸದಸ್ಯ ಪೀಠಕ್ಕೆ ವಿವರಿಸಲಾಯಿತು. ನಾಲ್ವರು ಮಾತ್ರ ಪ್ರತಿಭಟನೆ ನಡೆಸುವುದರಿಂದ ಪೊಲೀಸರು ಹೇಳಿರುವ ಮೇಲಿನ ನಿಯಮಗಳು ಉಲ್ಲಂಘನೆಯಾಗುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆದರೆ ವಿಚಾರಣೆಯ ಸಮಯ ಮೀರಿದ್ದರಿಂದ ಯಾವುದೇ ನಿರ್ಧಾರ ಪ್ರಕಟಿಸದ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ (ಶುಕ್ರವಾರ) ಮುಂದೂಡಿತು.

ಮುಂಬೈ ಪೊಲೀಸರಿಂದ ಎಫ್‌ಐಆರ್‌: ಹೈಕೋರ್ಟ್ ಮೊರೆಹೋಗಲು ರಿಪಬ್ಲಿಕ್‌ ಟಿವಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌

ಪೊಲೀಸ್‌ ಕಾಯಿದೆ (ಅಸಮಾಧಾನದ ಪ್ರಚೋದನೆ)- 1922ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಿಪಬ್ಲಿಕ್‌ ಟಿವಿ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಗುರುವಾರ ಅದನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು. ಪೊಲೀಸ್‌ ಕಾಯಿದೆಯ ವಿವಿಧ ನಿಬಂಧನೆಗಳ ಅಡಿ ಕಳೆದ ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರು ರಿಪಬ್ಲಿಕ್‌ ಟಿವಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದ್ದರು.

ವಸಹಾತುಶಾಹಿ ಕಾಲದ ಅಸ್ತ್ರವನ್ನು ಬಳಸುವ ಮೂಲಕ ವಾಕ್‌ ಸ್ವಾತಂತ್ರ್ಯವನ್ನು ತುಂಡರಿಸಲಾಗುತ್ತಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್‌ ಭಟ್ನಾಗರ್‌ ವಾದಿಸಿದರು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿದರು. “ಬಾಂಬೆ ಹೈಕೋರ್ಟ್‌ 1960ರಲ್ಲಿ ಸೂಕ್ತವಾದ ಕಾನೂನು ಎಂದು ಅದನ್ನು ಎತ್ತಿ ಹಿಡಿದಿದೆ” ಎಂದು ಭಟ್ನಾಗರ್‌ ಪ್ರತಿಕ್ರಿಯಿಸಿದರು. ರಿಪಬ್ಲಿಕ್‌ ಟಿವಿ ವಿರುದ್ಧದ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದ ಮೂಲ ಹೊಂದಿದ್ದು, ಅರ್ಜಿಗಳನ್ನು ವಜಾ ಮಾಡಿದ ನ್ಯಾಯಾಲಯವು ಹೈಕೋರ್ಟ್‌ ಸಂಪರ್ಕಿಸುವ ಸ್ವಾತಂತ್ರ್ಯ ಕಲ್ಪಿಸಿದೆ.

ಎನ್‌ಎಸ್‌ಎ ಅಡಿ ಡಾ. ಕಫೀಲ್‌ ಖಾನ್‌ ಬಂಧನ: ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿ ಡಾ. ಕಫೀಲ್‌ ಖಾನ್‌ ಬಂಧಿಸಿದ್ದನ್ನು ವಜಾಗೊಳಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ಉತ್ತರ ಪ್ರದೇಶ ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಖಾನ್‌ ಅವರ ಬಂಧನವನ್ನು ಬದಿಗೆ ಸರಿಸಿ ಸೆಪ್ಟೆಂಬರ್‌ 1ರಂದು ತೀರ್ಪು ನೀಡಿದ್ದ‌ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣವಿಲ್ಲ ಎಂದಿದೆ. ಖಾನ್‌ ವಿರುದ್ಧದ ಇತರೆ ಕ್ರಿಮಿನಲ್‌ ಪ್ರಕರಣಗಳನ್ನು ಅವುಗಳ ಅರ್ಹತೆಯ ಆಧಾರದಲ್ಲಿ ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಖಾನ್‌ ಅವರ ತಾಯಿ ನುಝಾತ್‌ ಪರ್ವೀನ್‌ ಅವರ ರಿಟ್‌ ಮನವಿಯನ್ನು ಅಂಗೀಕರಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಮತ್ತು ನ್ಯಾ. ಸುಮಿತ್ರಾ ದಯಾಳ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಖಾನ್‌ ಅವರ ಬಂಧನ ವಜಾಗೊಳಿಸಿತ್ತು.

ವೆಬ್‌ ಸೀರಿಸ್‌ ‍‍XXX ವಿವಾದ: ಏಕ್ತಾ ಕಪೂರ್‌ಗೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್‌

ಆಲ್ಟ್‌ ಬಾಲಾಜಿಯಲ್ಲಿ ಪ್ರಸಾರವಾಗುತ್ತಿರುವ ವೆಬ್‌ ಸೀರಿಸ್‌ ‍‍XXX ಎರಡನೇ ಸರಣಿಯು ಆಕ್ಷೇಪಾರ್ಹ ಸಂಗತಿಗಳನ್ನು ಹೊಂದಿದೆ ಎನ್ನುವ ಆರೋಪದಡಿ ದಾಖಲಿಸಲಾಗಿರುವ ಎಫ್‌ಐಆರ್ ಸಂಬಂಧ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್‌ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್‌ ಒದಗಿಸಿದೆ.

ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಏಕ್ತಾ ಕಪೂರ್‌ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ್‌ ಹೈಕೋರ್ಟ್‌ ನ ಇಂದೋರ್‌ ಪೀಠವು ಒಂದು ತಿಂಗಳ ಹಿಂದೆ ವಜಾಗೊಳಿಸಿತ್ತು. “ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ನಾವು ಒಪ್ಪುವುದಿಲ್ಲ”, ಎಂದು ಮಧ್ಯಂತರ ಆದೇಶದ ವೇಳೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಹೇಳಿದರು. ‌