ಗ್ರಾಹಕ ರಕ್ಷಣಾ ಕಾಯಿದೆ – 2019ರ ಅಡಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ರಚಿಸುವ ಸಂಬಂಧ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಕಾಯಿದೆಯ ಸೆಕ್ಷನ್ 53(1)ರ ಅಡಿಯಲ್ಲಿ ಅಧಿಕಾರ ಬಳಸಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರೀಯ ಆಯೋಗವನ್ನಾಗಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬಹುದು ಎಂದು ಸೆಕ್ಷನ್ 53(1)ರಲ್ಲಿ ಹೇಳಲಾಗಿದೆ.
ಗ್ರಾಹಕ ರಕ್ಷಣಾ ಕಾಯಿದೆ ಆರಂಭಕ್ಕೂ ಮುನ್ನವೇ ಎನ್‌ಸಿಡಿಆರ್‌ಸಿ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಅವರು ಕಾಯಿದೆ ಸೆಕ್ಷನ್ 56ರ ಅಡಿ ಮುಂದುವರಿಯಲಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 3 ವಿವಾದಿತ ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವ ಹಿನ್ನೆಲೆಯಲ್ಲಿ ಶಾಂತಿಪ್ರಿಯ ಶೇ. 90ರಷ್ಟು ರೈತರು ಪ್ರತಿಭಟನೆ ಮುಂದುವರೆಸುವ ಇರಾದೆ ಹೊಂದಿಲ್ಲ. ಪ್ರತಿಭಟನೆ ಮುಂದುವರೆಸದಂತೆ ನಾಗರಿಕರು ರೈತರನ್ನು ಆಗ್ರಹಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸಲಹೆ ನೀಡಿದೆ. ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ಆದೇಶವನ್ನು ಐತಿಹಾಸಿಕ ಎಂದು ಬುಧವಾರ ಬಣ್ಣಿಸಿರುವ ಬಿಸಿಐ, ಪ್ರತಿಭಟನಾನಿರತರ ಪೈಕಿ ಇರುವ ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಜೀವ ಉಳಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಮಹತ್ವದ ಕ್ರಮಕೈಗೊಂಡಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಕೆಲವು ರಾಜಕಾರಣಿಗಳು ಸುಪ್ರೀಂ ಕೋರ್ಟ್ ವಿರುದ್ಧ ಬೇಜವಾಬ್ದಾರಿಯುತ, ಅಸೂಕ್ಷ್ಮ, ಆಧಾರರಹಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ದುರ್ಬಳಕೆ ಮಾಡಿಕೊಳ್ಳುವುದಲ್ಲದೇ ಪ್ರತಿಭಟನಾನಿರತ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. “ಸುಪ್ರೀಂ ಕೋರ್ಟ್ ವಿವಾದಿತ ಕಾಯಿದೆಗಳಿಗೆ ತಡೆ ನೀಡಿದ ಬಳಿಕ ಶೇ. 90ರಷ್ಟು ರೈತರು ಪ್ರತಿಭಟನೆ ಮುಂದುವರೆಸುವುದರ ಪರವಾಗಿಲ್ಲ ದೇಶವನ್ನು ಶಿಥಿಲಗೊಳಿಸುವ ಮೂಲಕ ಸ್ವಹಿತಾಸಕ್ತಿ ಹೊಂದಿರುವ ಕೆಲವರು ತಮ್ಮ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಹವಣಿಸುತ್ತಿದ್ದಾರೆ,” ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಪತ್ರದಲ್ಲಿ ತಿಳಿಸಿದ್ದಾರೆ. “ಮಾಧ್ಯಮಗಳಲ್ಲಿ ವಿವಾದಾತ್ಮಕ ಮತ್ತು ನಿಂದನಾತ್ಮಾಕ ಹೇಳಿಕೆ ನೀಡುವವರು ಏಕೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯ ಹೇಳುವುದಿಲ್ಲ ಎಂದು ನಮಗೆ ಅರ್ಥವಾಗುತ್ತಿಲ್ಲ,” ಎಂದು ಹೇಳಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಲಾಗಿದೆ.
ವಿಶೇಷ ವಿವಾಹ ಕಾಯಿದೆ-1954ರ ಅಡಿ ವಿವಾಹ ಮಾಡಿಕೊಳ್ಳುವುದಕ್ಕೂ ಮುನ್ನ ಆಕ್ಷೇಪಣೆ ಆಹ್ವಾನಿಸುವ ಸಂಬಂಧ ಸಾರ್ವಜನಿಕ ನೋಟಿಸ್ ಪ್ರಕಟಿಸಬೇಕೆ ಅಥವಾ ಬೇಡವೇ ಎಂಬುದು ವಿವಾಹಿತ ದಂಪತಿಯ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಅಲಾಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. 1954ರ ಕಾಯಿದೆಯಡಿ ಕಡ್ಡಾಯವಾಗಿ ಅಂತಹ ನೋಟಿಸ್ ಜಾರಿಗೊಳಿಸಿದಾಗ ಅಂತರಧರ್ಮೀಯ ದಂಪತಿಯ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುವುದರ ಜೊತೆಗೆ ಅನಗತ್ಯ ಸಾಮಾಜಿಕ ಹಸ್ತಕ್ಷೇಪವಾದಂತಾಗುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯವು ತೀರ್ಪು ನೀಡಿದೆ.
ಒಂದೆಡೆ, ಮುಂದೆ ವಿವಾಹಗಳು ಅನೂರ್ಜಿತವಾದರೂ ಕೂಡ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೆ ವಿವಾಹಗಳು ನಡೆಯುತ್ತಲೇ ಇವೆ. ಆದರೆ, ಮತ್ತೊಂದೆಡೆ 1954ರ ಕಾಯಿದೆಯ ಸೆಕ್ಷನ್‌ಗಳಾದ 6 ಮತ್ತು 7ರ ಅಡಿ ವಿಧಿವತ್ತಾಗಿ ವಿವಾಹ ನೆರವೇರಿಸಿಕೊಳ್ಳ ಬಯಸುವವರು ನೋಟಿಸ್ ನೀಡಬೇಕಿದ್ದು, ವಿವಾಹ ಅಧಿಕಾರಿಯು 30 ದಿನಗಳೊಳಗೆ ನೋಟಿಸ್ ಪ್ರಕಟಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಿಲು ಕರ್ತವ್ಯಬದ್ಧರಾಗಿದ್ದಾರೆ, ಎಂದು ನ್ಯಾಯಾಲಯವು ವೈರುಧ್ಯಗಳ ಬಗ್ಗೆ ಟಿಪ್ಪಣಿ ಮಾಡಿತು.
ದೇಶಾದ್ಯಂತ ನದಿಪಾತ್ರದ ಪ್ರದೇಶಗಳಲ್ಲಿ ವ್ಯಾಪಕವಾಗಿ ನದಿಗಳನ್ನು ಮಲಿನಗೊಳಿಸುತ್ತಿರುವುದನ್ನು ಪರಿಶೀಲಿಸುವ ಉದ್ದೇಶದಿಂದ “ಭಾರತದಲ್ಲಿ ಕಲುಷಿತ ನದಿಗಳಿಗೆ ಪರಿಹಾರ” ಎಂಬ ಶಿರೋನಾಮೆಯಡಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಮಲಿನಗೊಂಡಿರುವ ಯಮುನಾ ನದಿಯನ್ನು ಕೇಂದ್ರೀಕರಿಸುವ ಮೂಲಕವೇ ಕೆಲಸ ಆರಂಭವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಹರಿಯಾಣವು ಯಮುನಾ ನದಿಗೆ ತ್ಯಾಜ್ಯ ಸಂಸ್ಕರಣಗೊಳಿಸದ ನೀರನ್ನು ಸೇರಿಸುತ್ತಿರುವುದರಿಂದ ನೀರಿನಲ್ಲಿ ಅಮೋನಿಯಾ ಮಟ್ಟ ಹೆಚ್ಚಾಗಿ ಅದು ಕುಡಿಯಲು ಅಯೋಗ್ಯವಾಗಿದೆ ಎಂಬ ವಿಚಾರವು ದೆಹಲಿ ಜಲ ಮಂಡಳಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೊರಬಿದ್ದಿತ್ತು. ದೆಹಲಿಯ ಜಲಮಂಡಳಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ನೋಟಿಸ್ ಜಾರಿಗೊಳಿಸಿದ್ದು, ನದಿಗಳನ್ನು ಮಲಿನಗೊಳಿಸುವ ಪ್ರಮುಖ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಸಂಬಂಧ ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ, ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ನೋಟಿಸ್ ಜಾರಿಗೊಳಿಸಿದೆ.