ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |19-3-2021

>> ಮುಫ್ತಿ ಸಮನ್ಸ್‌ಗಿಲ್ಲ ತಡೆ >> ಹಿರಿಯ ನ್ಯಾಯವಾದಿಗಳಾಗಿ 55 ವಕೀಲರು >> ಚಂದ್ರಬಾಬು ನಾಯ್ಡು ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದ ಆಂಧ್ರಪ್ರದೇಶ ಹೈಕೋರ್ಟ್‌

Bar & Bench

ಮುಫ್ತಿ ಅವರಿಗೆ ನೀಡಲಾಗಿದ್ದ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್‌ ನಕಾರ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸಮನ್ಸ್‌ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 50 ರ ಸಾಂವಿಧಾನಿಕ ಸಿಂಧುತ್ವವನ್ನು ಕೂಡ ಮುಫ್ತಿ ಪ್ರಶ್ನಿಸಿದ್ದರು.

Mehbooba Mufti, ED

ಮುಫ್ತಿ ಪರ ಹಾಜರಾದ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ಮುಫ್ತಿ ಅವರ ಹಾಜರಾತಿಗೆ ಒತ್ತಾಯಿಸದಂತೆ ತನಿಖಾ ಸಂಸ್ತೆಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಆಗ್ರಹಿಸಿದರು. ಆದರೆ ನೋಟಿಸ್ ನೀಡುವುದನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧಿಸಿದರು, ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದವಿಭಾಗೀಯ ಪೀಠ, ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿದರು. ಪ್ರಕರಣವನ್ನು ಏಪ್ರಿಲ್‌ 16ಕ್ಕೆ ಮುಂದೂಡಲಾಗಿದೆ. ತನಿಖಾ ಸಂಸ್ಥೆ ನೀಡಿರುವ ಸಮನ್ಸ್‌ ಪ್ರಕಾರ ಮಾರ್ಚ್‌ 22ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದೆ. ತನಿಖೆ ವೇಳೆ ಹಾಜರಾಗುವಂತೆ ಮುಫ್ತಿ ಅವರಿಗೆ ಒತ್ತಾಯಿಸುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

55 ವಕೀಲರಿಗೆ ʼಹಿರಿಯ ನ್ಯಾಯವಾದಿʼ  ಸ್ಥಾನಮಾನ ನೀಡಿದ ದೆಹಲಿ ಹೈಕೋರ್ಟ್‌

ದೆಹಲಿ ಹೈಕೋರ್ಟ್ ಐವತ್ತೈದು ವಕೀಲರಿಗೆ ಹಿರಿಯ ನ್ಯಾಯವಾದಿ ಸ್ಥಾನಮಾನವನ್ನು ನೀಡಿದೆ. ಹಿರಿಯ ನ್ಯಾಯವಾದಿ ಸ್ಥಾನ ಪಡೆದವರಲ್ಲಿ ಸಾತ್ವಿಕ್ ವರ್ಮಾ, ಸೌರಭ್ ಕಿರ್ಪಾಲ್, ನಿತ್ಯಾ ರಾಮಕೃಷ್ಣನ್, ಮಾಳವಿಕಾ ತ್ರಿವೇದಿ, ತ್ರಿದೀಪ್ ಪೈಸ್, ಸಂಜೋಯ್ ಘೋಸ್, ರಾಜ್‌ಶೇಖರ್ ರಾವ್, ಜಯಂತ್ ಮೆಹ್ತಾ, ಚಿನ್ಮೊಯ್ ಶರ್ಮಾ, ರಮೇಶ್ ಸಿಂಗ್, ವಿರಾಜ್ ದಾತಾರ್, ಪರ್ಸಿವಲ್ ಬಿಲ್ಲಿಮೊರಿಯಾ, ಪ್ರಮೋದ್ ಕುಮಾರ್ ದುಬೆ, ಸಿದ್ಧಾರ್ಥ್‌ ಅಗರ್ವಾಲ್‌ ಮುಂತಾದವರು ಸೇರಿದ್ದಾರೆ.

Senior Advocate, Delhi HIgh Court

ದೆಹಲಿಯ ಹೈಕೋರ್ಟ್‌ನ ಹಿರಿಯ ವಕೀಲರ ನಿಯಮಗಳ ಅನುಸಾರವಾಗಿ ಹಿರಿಯ ನ್ಯಾಯವಾದಿಗಳ ಸ್ಥಾನ ನೀಡಲು 2019 ರ ಆರಂಭದಲ್ಲಿ ಆಹ್ವಾನ ನೀಡಲಾಗಿತ್ತು. ಹುದ್ದೆಯ ನಿಯಮಾವಳಿಯೊಂದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಕ್ರಿಯೆ ಕೋರ್ಟ್‌ ಮೆಟ್ಟಿಲೇರಿತ್ತು. ಆ ನಂತರ ಹೈಕೋರ್ಟ್‌ ವಿಭಾಗೀಯ ಪೀಠ ಆಕಾಂಕ್ಷಿಗಳು ನೇರವಾಗಿ ಸಮಿತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.

ಅಮರಾವತಿ ಭೂ ಅವ್ಯವಹಾರ ಪ್ರಕರಣ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದ ಆಂಧ್ರಪ್ರದೇಶ ಹೈಕೋರ್ಟ್‌

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಶುಕ್ರವಾರ ಆಂಧ್ರಪ್ರದೇಶ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆಡಳಿತ ಪಕ್ಷವು ರಾಜಕೀಯ ಪ್ರತಿಕಾರಕ್ಕಾಗಿ ದೂರು ದಾಖಲಿಸಿರುವುದರಿಂದ ನಾಯ್ಡು ವಿರುದ್ಧ ಬಂಧನ ಸೇರಿದಂತೆ ಯಾವುದೇ ಕ್ರಮಕೈಗೊಳ್ಳದಂತೆ ರಾಜ್ಯ ಪೊಲೀಸರಿಗೆ ಸೂಚಿಸುವಂತೆ ನಾಯ್ಡು ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

Chandrababu Naidu

ಇದಕ್ಕೆ ಸಹಮತ ವ್ಯಕ್ತಪಡಿಸಿದ ಹೈಕೋರ್ಟ್‌ ನಾಲ್ಕು ವಾರಗಳ ಕಾಲ ಪ್ರಕ್ರಿಯೆಗೆ ತಡೆ ವಿಧಿಸಿದೆ. ನಾಯ್ಡು ಹಾಗೂ ಆಂಧ್ರಪ್ರದೇಶದ ಮಾಜಿ ನಗರಾಭಿವೃದ್ಧಿ ಸಚಿವ ಪೊಂಗುರು ನಾರಾಯಣ ವಿರುದ್ಧ ಸಾಕ್ಷ್ಯ ಮುಂದಿಡುವಂತೆ ಸಿಐಡಿ ಪೊಲೀಸರಿಗೆ ಸೂಚಿಸಿದೆ. ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಏನೆಲ್ಲಾ ದೊರೆತಿದೆ ಎಂದು ಸಿಐಡಿ ಅಧಿಕಾರಿಗಳನ್ನು ನ್ಯಾಯಾಲಯ ಪ್ರಶ್ನಿಸಿತು. ಸದ್ಯ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಈಗ ಮಾಹಿತಿ ನೀಡಲಾಗದು ಎಂದು ಸಿಐಡಿ ಪರ ವಕೀಲರು ಪ್ರತಿಕ್ರಿಯಿಸಿದರು. ನಾಯ್ಡು ಮತ್ತು ನಾರಾಯಣ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 166, 167, 217 ಮತ್ತು 120ಬಿ ಅಡಿ ಹಾಗೂ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ಮತ್ತು ಆಂಧ್ರಪ್ರದೇಶ ನಿಗದಿತ ಭೂಮಿ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳಗಿರಿ ಶಾಸಕ ಅಲ್ಲಾರಾಮ ಕೃಷ್ಣ ರೆಡ್ಡಿ ನೀಡಿದ ದೂರನ್ನು ಆಧರಿಸಿ ಮಾರ್ಚ್‌ 13ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು. ಮಾರ್ಚ್‌ 15 ರಂದು ವಿಚಾರಣೆಗೆ ಹಾಜರಾಗುವಂತೆ ನಾಯ್ಡು ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ನಾಯ್ಡು ಹೈಕೋರ್ಟ್‌ ಕದ ತಟ್ಟಿದ್ದಾರೆ.