ರಾಜೀವ್ ಗಾಂಧಿ ಹತ್ಯೆ ಅಪರಾಧಿ ಎ ಜಿ ಪೆರರಿವಾಲನ್ ಅವರ ಬಿಡುಗಡೆ ಸಂಬಂಧ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಇನ್ನು ಮೂರ್ನಾಲ್ಕು ದಿನಗಳಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗುರುವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯುಲ್ಲಿ ಪ್ರಕರಣದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್ ಹಾಗೂ ಇಂದು ಮಲ್ಹೋತ್ರಾ ಅವರಿದ್ದ ಪೀಠ ವಿಚಾರಣೆಯನ್ನು ಮುಂದೂಡಿತು.
ಕ್ಷಮಾದಾನಕ್ಕಾಗಿ ಪೆರಾರಿವಾಲನ್ ಅವರು ಡಿಸೆಂಬರ್ 30, 2015 ರಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. 2018ರ ಸೆಪ್ಟೆಂಬರ್ 9ರಂದು ಪೆರರಿವಾಲನ್ ಅವರನ್ನು ಬಿಡುಗಡೆ ಮಾಡಲು ತಮಿಳುನಾಡು ಸಂಪುಟ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಅಲ್ಲದೆ ಪ್ರಕರಣದ ಸಂಬಂಧ ತೀರ್ಮಾನ ಕೈಗೊಳ್ಳುವಂತೆ ಅದೇ ವರ್ಷವೇ ಸುಪ್ರೀಂಕೋರ್ಟ್ ರಾಜ್ಯಪಾಲರಿಗೆ ತಿಳಿಸಿತ್ತು.
ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚಿಸಿದ್ದ ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯ, ಲಘು ವ್ಯವಹಾರಗಳ ನ್ಯಾಯಾಲಯ ಮತ್ತು ರಾಜ್ಯದ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಲ್ಲಿನ ಉಳಿಕೆ ಮೂಲ ವೃಂದದ -494 ಮತ್ತು ಹೈದರಾಬಾದ್ ಕರ್ನಾಟಕ ವೃಂದದ -81 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಟ್‍ಆಫ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವಿವರಗಳನ್ನು ಆಯೋಗದ ಜಾಲತಾಣ http://kpsc.kar.nic.in ನಲ್ಲಿ ಪಡೆಯಬಹುದು. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಏಳು ದಿನಗಳ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು -560 001 ಇವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
ಅಂತರಧರ್ಮೀಯ ವಿವಾಹವಾದ ಕಾರಣಕ್ಕೆ ಬಂಧಿತರಾಗಿದ್ದ ಜೋಡಿಯನ್ನು ಪೊಲೀಸರು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಅವರಿಗೆ ಭದ್ರತೆ ಒದಗಿಸಬೇಕು ಎಂದು ಗುಜರಾತ್ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ಜೋಡಿಯನ್ನು ಬಂಧಿಸುವಲ್ಲಿ ಪೊಲೀಸರು ತೋರಿದ ಅನಗತ್ಯ ಉತ್ಸಾಹದ ಬಗ್ಗೆಯೂ ಸಹ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇಡೀ ಘಟನೆ ಘೋರವಾದದ್ದು ಮತ್ತು ಆಘಾತಕಾರಿಯಾದದ್ದು ಎಂದು ಪೀಠ ಬಣ್ಣಿಸಿದೆ. ನ್ಯಾಯಮೂರ್ತಿಗಳಾದ ಸೋನಿಯಾ ಗೋಕಾನಿ ಮತ್ತು ಸಂಗೀತ ಕೆ ವಿಶೇನ್ ಅವರಿದ್ದ ಪೀಠ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರ ನಡವಳಿಕೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ. ವಲಯ ಐಜಿಯವರು ಪ್ರಕರಣದ ತನಿಖೆ ನಡೆಸಬೇಕು ಹಾಗೂ ಅದರ ವರದಿಯನ್ನು ಡಿಐಜಿ ಅವರಿಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳನ್ನು ಕೂಡ ಪೀಠ ಇದೇ ವೇಳೆ ಉಲ್ಲೇಖಿಸಿದೆ. ಬಂಧನ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅದೇ ದಿನ ಜೋಡಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಉತ್ತರಪ್ರದೇಶದಲ್ಲಿ ಅನೈತಿಕ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಅಂತರಧರ್ಮೀಯ ವಿವಾಹಿತರನ್ನು ಬಂಧಿಸಿರುವ ಸಾಕಷ್ಟು ಘಟನೆಗಳು ನಡೆದಿವೆ.
ಮಿರ್ಜಾಪುರ್ ವೆಬ್‌ಸರಣಿ ಆ ನಗರಕ್ಕೆ ಕೆಟ್ಟ ಹೆಸರು ತರುವಂತಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಆಲಿಸಿದ ಸುಪ್ರೀಂಕೋರ್ಟ್ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್ ವೀಡಿಯೊಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಸುಜಿತ್ ಕುಮಾರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯಲ್ಲಿ ʼವೆಬ್ ಸರಣಿ ತಮ್ಮೂರನ್ನು ಭಯೋತ್ಪಾದನೆ ಅಪರಾಧ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳ ತಾಣವಾಗಿ ಚಿತ್ರಿಸಿದೆ,ʼ ಎಂದು ಆರೋಪಿಸಿದ್ದರು.
“ಮಿರ್ಜಾಪುರದ ಪ್ರತಿಯೊಬ್ಬ ನಿವಾಸಿಗಳನ್ನು ಸಹ ವಿಡಿಯೊ ಸರಣಿಯು ಗೂಂಡಾ, ಅಪ್ರಯೋಜಕ ಹಾಗೂ ವ್ಯಭಿಚಾರಿ ಎಂಬಂತೆ ಚಿತ್ರಿಸುತ್ತದೆ. ಸರಣಿಯು ನಗ್ನತೆ ಅಶ್ಲೀಲತೆ ಹಾಗೂ ನಿಂದನಾತ್ಮಕ ಭಾಷೆಯಿಂದ ತುಂಬಿದೆ,” ಎಂದಿರುವ ಅರ್ಜಿಯಲ್ಲಿ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಯಾವುದೇ ಕಾರ್ಯಕ್ರಮಗಳ ಪರಿಶೀಲನೆಗೆ ಪೂರ್ವ ಸ್ಕ್ರೀನಿಂಗ್ ಸಮಿತಿ ರಚಿಸಬೇಕು ಮತ್ತು ಪ್ರಸಾರ ಸಚಿವಾಲಯದ ಪ್ರಮಾಣಪತ್ರ ಕಡ್ಡಾಯಗೊಳಿಸಬೇಕು ಎಂದು ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠ ಅಮೆಜಾನ್ ಪ್ರೈಮ್ ವಿಡಿಯೋ, ಕೇಂದ್ರ ಸರ್ಕಾರ ಮತ್ತು ಕಾರ್ಯಕ್ರಮದ ನಿರ್ಮಾಪಕ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ನೋಟಿಸ್ ನೀಡಿದೆ.