ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 25-12-2020

>> ವಕೀಲರ ಗುಮಾಸ್ತರಿಗೆ ಆರ್ಥಿಕ ನೆರವಿನ ಕೋರಿಕೆ >> ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರು ಮತ್ತು ಪಡೆದವರ ವಿವರ ನೀಡುವಂತಿಲ್ಲ >> ಅತ್ಯಾಚಾರ ಸಂತ್ರಸ್ತೆಯರಿಗೆ ಎರಡು ಬೆರಳಿನ ಪರೀಕ್ಷೆ ನಡೆಸುವಂತಿಲ್ಲ

Bar & Bench

ಕೋವಿಡ್‌ ಪರಿಸ್ಥಿತಿಯಲ್ಲಿ ಸುಧಾರಣೆ: 10 ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ವರ್ಗಾಯಿಸಬಹುದೇ? ವಕೀಲರ ಪರಿಷತ್‌ಗೆ ಹೈಕೋರ್ಟ್‌ ಪ್ರಶ್ನೆ

ಕೋವಿಡ್‌ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ ವಕೀಲರಿಗೆ ನೆರವಾಗುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ಬಿಡುಗಡೆ ಮಾಡಿದ್ದ 5 ಕೋಟಿ ರೂಪಾಯಿಯ ಪೈಕಿ 10 ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ವರ್ಗಾಯಿಸುವ ಇರಾದೆಯನ್ನು ಕೆಎಸ್‌ಬಿಸಿ ಹೊಂದಿದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.

Karnataka High Court

ಕೋವಿಡ್‌ ಹಿನ್ನೆಲೆಯಲ್ಲಿ ವಕೀಲರ ಗುಮಾಸ್ತರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ. ಕೋವಿಡ್‌ನಿಂದಾಗಿ ನ್ಯಾಯಾಲಯಗಳು ಮುಚ್ಚಿದ್ದರಿಂದ ವಕೀಲರು ಮತ್ತು ಅವರ ಗುಮಾಸ್ತರಿಗೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಜುಲೈನಲ್ಲಿ ರಾಜ್ಯ ಸರ್ಕಾರವು 5 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಈ ಪೈಕಿ ನೋಂದಾಯಿತ ವಕೀಲರ ಗುಮಾಸ್ತರಿಗೆ ನೆರವಾಗಲು 10 ಲಕ್ಷ ರೂಪಾಯಿಯನ್ನು ನಿಗದಿಗೊಳಿಸಲಾಗಿತ್ತು.

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿರುವ ದಾನಿಗಳು ಮತ್ತು ಅದನ್ನು ಪಡೆಯುವವರ ಖಾಸಗಿ ಹಕ್ಕನ್ನು ಸಾರ್ವಜನಿಕ ಹಿತಾಸಕ್ತಿ ಅತಿಕ್ರಮಿಸುವಂತಿಲ್ಲ

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ನಾಲ್ಕು ಮೆಟ್ರೊ ಶಾಖೆಗಳ ಲೆಕ್ಕಪುಸ್ತಕಗಳಲ್ಲಿ ದಾಖಲಾಗಿರುವ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿರುವ ದಾನಿಗಳು ಮತ್ತು ಅದನ್ನು ಸ್ವೀಕರಿಸಿರುವವರ ವಿವರ ಕೋರಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಮನವಿಯನ್ನು ಮುಖ್ಯ ಮಾಹಿತಿ ಆಯೋಗ (ಸಿಐಸಿ) ವಜಾಗೊಳಿಸಿದೆ. ಮುಂದುವರೆದು, ಚುನಾವಣಾ ಬಾಂಡ್‌ಗಳನ್ನು ನೀಡಿರುವ ದಾನಿಗಳು ಮತ್ತು ಅದನ್ನು ಸ್ವೀಕರಿಸಿರುವವರ ಖಾಸಗಿ ಹಕ್ಕನ್ನು ಸಾರ್ವಜನಿಕ ಹಿತಾಸಕ್ತಿ ಅತಿಕ್ರಮಿಸುವಂತಿಲ್ಲ ಎಂದು ಹೇಳಿದೆ.

Electoral bonds

ಆರ್‌ಟಿಐ ಕಾಯಿದೆಯ ಸೆಕ್ಷನ್‌ 8 (1) (ಇ) ಮತ್ತು (ಜೆ) ಅಡಿ ಚುನಾವಣಾ ಬಾಂಡ್‌ಗಳನ್ನು ನೀಡಿರುವ ದಾನಿಗಳು ಮತ್ತು ಅದನ್ನು ಪಡೆದಿರುವವರ ಮಾಹಿತಿ ಬಹಿರಂಗಪಡಿಸುವುದು ನಿಬಂಧನೆಯ ಉಲ್ಲಂಘನೆಯಾಗಲಿದೆ ಎಂದು ಸಿಐಸಿ ಸುರೇಶ್‌ ಚಂದ್ರ ಹೇಳಿದ್ದಾರೆ. ಆರ್‌ಟಿಐ ಕಾರ್ಯಕರ್ತ ವಿಹಾರ್‌ ದುರ್ವೆ ಸಲ್ಲಿಸಿದ್ದ ಮನವಿ ಆಧರಿಸಿ ಸಿಐಸಿ ಆದೇಶ ಹೊರಡಿಸಿದೆ. ಎಸ್‌ಬಿಐ ಮುಂಬೈ ಪ್ರಧಾನ ಶಾಖೆ ಕೋಡ್‌ 00300, ಎಸ್‌ಬಿಐ ಚೆನ್ನೈ ಪ್ರಧಾನ ಶಾಖೆ ಕೋಡ್‌ 00800, ಎಸ್‌ಬಿಐ ಕೋಲ್ಕತ್ತಾ ಪ್ರಧಾನ ಶಾಖೆ ಕೋಡ್‌ 00001, ಎಸ್‌ಬಿಐ ನವದೆಹಲಿ ಪ್ರಧಾನ ಶಾಖೆ ಕೋಡ್‌ 00691 ನಲ್ಲಿ ಚುನಾವಣಾ ಬಾಂಡ್‌ ಪಡೆದುಕೊಂಡಿರುವ ದೇಣಿಗೆ ನೀಡಿದವರು ಮತ್ತು ಅದನ್ನು ಪಡೆದವರ ವಿವರನ್ನು ನೀಡುವಂತೆ ದುರ್ವೆ ಕೋರಿಕೆ ಸಲ್ಲಿಸಿದ್ದರು.

ಅತ್ಯಾಚಾರ ಸಂತ್ರಸ್ತೆ ಗುರುತು ಬಹಿರಂಗ,ಎರಡು ಬೆರಳುಗಳ ಪರೀಕ್ಷೆ ನಡೆಸದಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಕಟ್ಟಪ್ಪಣೆ

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ಎರಡು ಬೆರಳಿನ ಯೋನಿ ಪರೀಕ್ಷೆ ಮಾಡುವುದರಿಂದ ಕಡ್ಡಾಯವಾಗಿ ಹಿಂದೆ ಸರಿಯುವಂತೆ ಆರೋಗ್ಯ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಗುರುವಾರ ಕಟ್ಟಾಜ್ಞೆ ಹೊರಡಿಸಿದೆ. ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ್ದ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಭದರ್‌ವಾ ಅವರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿ ಸಂಜಯ್‌ ಧರ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ಮತ್ತು ತೀರ್ಪಿನಲ್ಲಿ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಉಲ್ಲೇಖಿಸದಂತೆ ಅಧೀನ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

Justices Rajesh Bindal and Sanjay Dhar

ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿರುವ ತೀರ್ಪಿನಲ್ಲಿ ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆಯ ಹೆಸರನ್ನು ಹಲವು ಬಾರಿ ಉಲ್ಲೇಖಿಸಿರುವುದು ಮತ್ತು ಸಂತ್ರಸ್ತೆಯನ್ನು ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸಿರುವುದನ್ನು ಪರಿಗಣಿಸಿ ಹೈಕೋರ್ಟ್‌ ಮೇಲಿನಂತೆ ಹೇಳಿದೆ. ಅತ್ಯಾಚಾರ ಎಂಬುದು ಸಂತ್ರಸ್ತೆಯ ಮೇಲಿನ ದೈಹಿಕ ಹಲ್ಲೆ ಮಾತ್ರವಲ್ಲ ಅದು ಸಂತ್ರಸ್ತೆಯ ವ್ಯಕ್ತಿತ್ವವನ್ನು ನಾಶ ಮಾಡುವ ಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಸೂಕ್ಷ್ಮ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಹೇಳಿದೆ.