ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-10-2020

>> ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿ >> ಮುಂಬೈ ಕಟ್ಟಡ ನೆಲಸಮ ಪ್ರಕರಣ >> ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ

Bar & Bench

ವಿಡಿಯೋ ಕಾನ್ಫರೆನ್ಸ್‌ಗೂ ನಿಯಮಗಳಿವೆ: ಕಾರಿನಲ್ಲಿ ಕುಳಿತು ಕಲಾಪದಲ್ಲಿ ಭಾಗವಹಿಸಲಾಗಿದ್ದ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಕಲಾಪದಲ್ಲಿ ಭಾಗವಹಿಸಿದ್ದ ವಕೀಲರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ವಕೀಲರು ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವುದು ಪತ್ತೆಯಾಗಿತ್ತು.

Lawyer sitting in a car, video conference hearing

ವಕೀಲರು ಕಾರಿನಲ್ಲಿರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ಪೀಠವು “ಅಸಾಧಾರಣ ಕಾರಣಗಳ ಹಿನ್ನೆಲೆಯಲ್ಲಿ ನಾವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದೇವೆ. ವಕೀಲ ವೃಂದವು ಕನಿಷ್ಠ ಘನತೆಯನ್ನು ಕಾಪಾಡುತ್ತಾರೆ ಎಂಬ ಭರವಸೆ ಮತ್ತು ನಂಬಿಕೆ ಹೊಂದಿದ್ದೇವೆ. ವಿಡಿಯೋ ಕಾನ್ಫರೆನ್ಸ್ ಗೂ ಕೆಲವು ನಿಯಮಗಳಿವೆ. ನೀವು ಕಾರಿನಲ್ಲಿ ಕುಳಿತು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸುವಂತಿಲ್ಲ” ಎಂದು ಪೀಠ ಹೇಳಿತು.

ಅನಧಿಕೃತ ಕಟ್ಟಡ ನಿರ್ಮಾಣ ವಿಚಾರವಾಗಿ ಬಿಎಂಸಿ ಕುಂಭಕರ್ಣ ನಿದ್ದೆಯಲ್ಲಿತ್ತು: ಸುಪ್ರೀಂ ಕೋರ್ಟ್

2019ರ ಡೋಂಗ್ರಿ ಕಟ್ಟಡ ನೆಲಸಮ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಈಚೆಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕುಂಭಕರ್ಣ ನಿದ್ದೆಯಲ್ಲಿತ್ತು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

ustices Sanjay Kishan Kaul, Dinesh Maheshwari and Hrishikesh Roy

ಕಳೆದ ವರ್ಷ ಡೋಂಗ್ರಿ ಕಟ್ಟಡ ಉರುಳಿಬಿದ್ದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕತ್ವ ಹೊಂದಿದ್ದ ಟ್ರಸ್ಟಿಯೊಬ್ಬರನ್ನು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ಗಳೆರಡೂ ಜಾಮೀನು ಅರ್ಜಿ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಅಲಿ ಅಕ್ಬರ್ ಶ್ರಾಫ್ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಯಾರಾದರೂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ? ಇದಕ್ಕೆ ಯಾರಾದರೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗಿದೆಯೇ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಎಂಸಿ ಕಾರ್ಯವೈಖರಿಯ ಬಗ್ಗೆ ಪೀಠವು ಚಾಟಿ ಬೀಸಿತು.

ನಿರೀಕ್ಷಣಾ ಜಾಮೀನು ಪಡೆಯಲು ನಿರ್ವಹಣಾ ವೆಚ್ಚದ ಷರತ್ತು ವಿಧಿಸಿದ್ದ ಆದೇಶ ಪ್ರಶ್ನಿಸಿದ್ದ ಮನವಿ ವಿಚಾರಣೆಗೆ ಸುಪ್ರೀಂ ನಕಾರ

ನಿರೀಕ್ಷಣಾ ಜಾಮೀನು ಪಡೆಯಲು ಪತ್ನಿಗೆ ನಿರ್ವಹಣಾ ವೆಚ್ಚ ಪಾವತಿಸಬೇಕು ಎಂದು ಮೇಲ್ಮನವಿದಾರರಿಗೆ ಷರತ್ತು ವಿಧಿಸಿದ್ದ ಪಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಈಚೆಗೆ ನಿರಾಕರಿಸಿದೆ.

Supreme Court

ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿತು.

ಪತ್ನಿಗೆ ಮಾಸಿಕ ರೂ. 20 ಸಾವಿರವನ್ನು ನಿರ್ವಹಣಾ ವೆಚ್ಚವಾಗಿ ಪಾವತಿಸುವಂತೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಪಾಟ್ನಾ ಹೈಕೋರ್ಟ್‌ ಷರತ್ತು ವಿಧಿಸಿತ್ತು. ಇದರ ವಿರುದ್ಧ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.